
ಪಂಜಾಬಿ ಗಾಯಕ ಸಿದ್ದು ಮೂಸೆವಾಲಾ ಹತ್ಯೆ, ನಟ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಸೇರಿದಂತೆ ವಿವಿಧ ಪ್ರಕರಣಗಳ ಪ್ರಮುಖ ಆರೋಪಿ ಲಾರೆನ್ಸ್ ಬಿಷ್ಣೋಯಿ ಸುದ್ದಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್‌ನ ಮಾಜಿ ಪೊಲೀಸ್ ಉಪ ವರಿಷ್ಠಾಧಿಕಾರಿ (ಡಿಎಸ್‌ಪಿ) ಗುರ್ಷೇರ್ ಸಿಂಗ್ ಸಂಧು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಜೂನ್ 24ರಂದು ಹಿಂಪಡೆಯಲು ಅವಕಾಶ ನೀಡಿ ವಜಾಗೊಳಿಸಿತು [ಗುರ್ಷೇರ್ ಸಿಂಗ್ ಸಂಧು ಮತ್ತು ಪಂಜಾಬ್ ಹಾಗೂ ಮತ್ತು ಉತ್ತರ ಪ್ರದೇಶ ಸರ್ಕಾರಗಳ ನಡುವಣ ಪ್ರಕರಣ]. ರಾಜಕಾರಣಿ ಬಾಬಾ ಸಿದ್ದೀಕ್ ಹತ್ಯೆ, ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಹರ್‌ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣಗಳಲ್ಲಿಯೂ ಲಾರೆನ್ಸ್ ಬಿಷ್ಣೋಯಿ ಹೆಸರು ಪ್ರಮುಖವಾಗಿ ಕೇಳಿಬಂದಿದೆ.
ಎಫ್ಐಆರ್‌ನಲ್ಲಿ ಆರೋಪಿಯಾಗಿ ಹೆಸರಿಸದಿದ್ದರೂ ಸಿಆರ್‌ಪಿಸಿ ಸೆಕ್ಷನ್ 41 ಎ ಅಡಿಯಲ್ಲಿ ತನಗೆ ಸಮನ್ಸ್ ನೋಟಿಸ್ ಜಾರಿ ಮಾಡುವುದನ್ನು ಸಂಧು ಪ್ರಶ್ನಿಸಿದ್ದರು.
ಇದೇ ಘಟನೆಗೆ ಸಂಬಂಧಿಸಿದ ವಿಚಾರಣೆಯನ್ನು ರದ್ದುಗೊಳಿಸುವಂತೆ ಕೋರಿ ಸಂಧು ಸಲ್ಲಿಸಿದ ರಿಟ್ ಅರ್ಜಿಯನ್ನು ಜುಲೈ 3 ರಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮುಂದೆ ವಿಚಾರಣೆಗೆ ಪಟ್ಟಿ ಮಾಡಲಾಗಿದೆ ಎಂದು ನ್ಯಾಯಮೂರ್ತಿಗಳಾದ ಕೆ ವಿ ವಿಶ್ವನಾಥನ್ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರಿದ್ದ ಪೀಠ ತಿಳಿಸಿತು.
ಸಂದರ್ಶನದ ಹಿಂದಿನ ರಾತ್ರಿ ಸಂಧು ಅವರು ಜೈಲಿನ ಕಾರ್ಯನಿರ್ವಹಣಾ ಅಧಿಕಾರಿಯಾಗಿದ್ದುದನ್ನು ಗಮನಿಸಿದ ನ್ಯಾ. ವಿಶ್ವನಾಥನ್ ವರದಿಗಾರ ಜೈಲಿನೊಳಗೆ ಪ್ರವೇಶಿಸಿ ಲಾರೆನ್ಸ್ ಬಿಷ್ಣೋಯ್ ಸಂದರ್ಶನ ಪಡೆಯಲು ಹೇಗೆ ಸಾಧ್ಯವಾಯಿತು ಎಂದು ಪ್ರಶ್ನಿಸಿದರು.
ಸಂದರ್ಶನ ಚಿತ್ರೀಕರಿಸಿದ ಪತ್ರಕರ್ತ ಸುಪ್ರೀಂ ಕೋರ್ಟ್‌ನಿಂದ ಮಧ್ಯಂತರ ರಕ್ಷಣೆ ಪಡೆದಿದ್ದರೂ ಸಹ ತಮ್ಮ ಕಕ್ಷಿದಾರ ಸಂಧು ಅವರಿಗೆ ನೋಟಿಸ್ ನೀಡಲಾಗುತ್ತಿದೆ ಎಂದು ಅವರ ಹಿರಿಯ ವಕೀಲ ವಿಕ್ರಮ್ ಚೌಧರಿ ವಾದಿಸಿದರು. ಸಂಧು ಅವರಿಗೆ ಬಿಷ್ಣೋಯ್ ಅವರನ್ನು ಭೇಟಿ ಮಾಡಲು ಎಂದಿಗೂ ಅವಕಾಶವಿರಲಿಲ್ಲವಾದರೂ ಅವರನ್ನೇ ಗುರಿಯಾಗಿಸಿಕೊಳ್ಳಲಾಗಿದೆ ಎಂದರು.
ಬಿಷ್ಣೋಯ್ ಬಂಧನದಲ್ಲಿದ್ದಾಗ ನಡೆಸಿದ ಟಿವಿ ಸಂದರ್ಶನವನ್ನು ಮಾರ್ಚ್ 2023ರಲ್ಲಿ ಎಬಿಪಿ ಸಂಜಾ ಸುದ್ದಿ ವಾಹಿನಿ ಪ್ರಸಾರ ಮಾಡಿದ್ದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಜೈಲುಗಳಲ್ಲಿ ಮೊಬೈಲ್ ಫೋನ್ ಬಳಕೆಯ ಬಗ್ಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನಂತರ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿತ್ತು. ಸಂದರ್ಶನದ ಸಂದರ್ಭಗಳನ್ನು ತನಿಖೆ ಮಾಡಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿತ್ತು.
ಮೊದಲ ಸಂದರ್ಶನ ಖರಾರ್‌ನ ಅಪರಾಧ ತನಿಖಾ ಸಂಸ್ಥೆಯ ವಶದಲ್ಲಿದ್ದಾಗ ಮತ್ತು ಎರಡನೇ ಸಂದರ್ಶನ ರಾಜಸ್ಥಾನ ಜೈಲಿನಲ್ಲಿದ್ದಾಗ ನಡೆದಿತ್ತು ಎಂದು ಎಸ್‌ಐಟಿ ಪತ್ತೆ ಹಚ್ಚಿತ್ತು. ನಂತರ, ಪಂಜಾಬ್ ಸರ್ಕಾರ ಸಂಧು ಸೇರಿದಂತೆ ಏಳು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿ ಇಲಾಖಾ ಕ್ರಮಕ್ಕೆ ಆದೇಶಿಸಿತ್ತು.
ಮತ್ತೊಂದೆಡೆ ಜೈಲಿನೊಳಗೆ ಎಲೆಕ್ಟ್ರಾನಿಕ್ ಸಾಧನ ಬಳಕೆಗೆ ಅನುಮತಿಸಿದ್ದಲ್ಲದೆ ಸಂದರ್ಶನಕ್ಕಾಗಿ ಸ್ಟುಡಿಯೋ ರೀತಿಯ ವಾತಾವರಣ ಸೃಷ್ಟಿಸಿದ್ದಕ್ಕಾಗಿ ಜೈಲು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದ ಪಂಜಾಬ್ ಹೈಕೋರ್ಟ್ ಘಟನೆಯಲ್ಲಿ ಭಾಗಿಯಾಗಿರುವ ಹಿರಿಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸೂಚಿಸಿತ್ತು. ಕೆಳ ಹಂತದ ಸಿಬ್ಬಂದಿಯನ್ನು ಪ್ರಕರಣದಲ್ಲಿ ಸಿಲುಕಿಸುವುದು ಬೇಡ ಎಂದು ಕೂಡ ಇದೇ ವೇಳೆ ಅದು ತಾಕೀತು ಮಾಡಿತ್ತು.
ತನ್ನನ್ನು ಸೇವೆಯಿಂದ ವಜಾಗೊಳಿಸಿದ್ದನ್ನು ಪ್ರಶ್ನಿಸಿ ಸಂಧು ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್‌ನಲ್ಲಿ ಈ ಅರ್ಜಿಯ ವಿಚಾರಣೆ ಬಾಕಿ ಇರುವುದನ್ನು ಗಮನಿಸಿದ ಸುಪ್ರೀಂ ಕೋರ್ಟ್ ಈ ಹಂತದಲ್ಲಿ ಅವರಿಗೆ ಬಲವಂತದ ಕ್ರಮದಿಂದ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿ ಅರ್ಜಿ ವಜಾಗೊಳಿಸಿತು. ಹೈಕೋರ್ಟ್‌ನಲ್ಲಿ ಪರಿಹಾರ ಪಡೆಯಲು ಅವರಿಗೆ ಸ್ವಾತಂತ್ರ್ಯ ಇದೆ ಎಂದಿತು.
[ಆದೇಶದ ಪ್ರತಿ]