

ಚೀನಾ ಮೂಲದ ಕೃತಕ ಬುದ್ಧಿಮತ್ತೆ ಚಾಟ್‌ಬಾಟ್ ಆಗಿರುವ ಡೀಪ್‌ಸೀಕ್ ಬಗ್ಗೆ ಎದ್ದಿರುವ ಕಳವಳಗಳನ್ನು ಕೇಂದ್ರ ಪರಿಹರಿಸಲಿದೆಯೇ ಎಂದು ದೆಹಲಿ ಹೈಕೋರ್ಟ್ ಬುಧವಾರ ಪ್ರಶ್ನಿಸಿದೆ [ಭಾವನಾ ಶರ್ಮಾ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ಕೇಂದ್ರ ಸರ್ಕಾರದ ಸ್ಥಾಯಿ ವಕೀಲ (ಸಿಜಿಎಸ್‌ಸಿ) ಇಷ್ಕರನ್ ಭಂಡಾರಿ ಅವರಿಗೆ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿದ್ದ ವಿಭಾಗೀಯ ಪೀಠ ಈ ಪ್ರಶ್ನೆ ಕೇಳಿತು.
ಚಾಟ್‌ಬಾಟ್‌ಗೆ ಸಂಬಂಧಿಸಿದ ಆತಂಕಗಳನ್ನು ಆರಂಭಿಕ ಹಂತದಲ್ಲಿಯೇ ಪರಿಹರಿಸಬೇಕಿದೆ ಎಂದ ನ್ಯಾಯಾಲಯ ಕೇಂದ್ರ ಸರ್ಕಾರದ ಪರ ವಕೀಲರು ಕೇಂದ್ರದಿಂದ ಸೂಚನೆಗಳನ್ನು ಪಡೆಯಬೇಕು ಎಂದಿತು. ಸಂಬಂಧಪಟ್ಟ ಸಚಿವಾಲಯ ಈ ವಿಚಾರವನ್ನು ಹೇಗೆ ನಿಭಾಯಿಸಲಿದೆ ಎಂಬ ಕುರಿತು ಸೂಚನೆಗಳನ್ನು ಪಡೆದುಕೊಳ್ಳುವಂತೆ ಅವರಿಗೆ ತಿಳಿಸಿತು.
ಅದಕ್ಕೆ ಸಂಬಂಧಿಸಿದಂತೆ ಭಂಡಾರಿ ಅವರಿಗೆ ಕಾಲಾವಕಾಶ ನೀಡಿದ ನ್ಯಾಯಾಲಯ ಇದೇ ವಿಚಾರಕ್ಕೆ ಸಂಬಂಧಿಸಿದ ಉಳಿದ ಪ್ರಕರಣಗಳನ್ನೂ ಮುಂದೆ ವಿಚಾರಣೆ ನಡೆಸಲಾಗುವುದು ಎಂದಿತು.
ಇಂತಹ ಡಿಜಿಟಲ್ ವೇದಿಕೆಗಳು ವ್ಯಕ್ತಿಗಳ ಗೌಪ್ಯತೆ ಮತ್ತು ಭದ್ರತೆಯನ್ನು ಉಲ್ಲಂಘಿಸುತ್ತವೆ ಮತ್ತು ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಹಾನಿಕಾರಕವಾಗಿವೆ ಎಂದು ದೂರಿ ವಕೀಲೆ ಭಾವನಾ ಶರ್ಮಾ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಸಲ್ಲಿಸಿದ್ದರು.
ಅಂತಹ ಎಐ ಪರಿಕರಗಳ ಬಳಕೆ ನಿರ್ಬಂಧಿಸುವಂತಹ ಮಾರ್ಗಸೂಚಿಗಳನ್ನು ರೂಪಿಸಲು ನಿರ್ದೇಶಿಸಬೇಕು ಎಂದು ಶರ್ಮಾ ಕೋರಿದ್ದರು. ಕೇಂದ್ರ ಸರ್ಕಾರದಿಂದ ಈ ಸಂಬಂಧ ಸೂಚನೆಗಳನ್ನು ಪಡೆಯುವಂತೆ ಹೈಕೋರ್ಟ್ ಕೇಂದ್ರ ಸರ್ಕಾರದ ಪರ ವಕೀಲರಿಗೆ ಕಳೆದ ಫೆಬ್ರವರಿಯಲ್ಲಿ ಸೂಚಿಸಿತ್ತು.