“ದೂರು ಮತ್ತು ಪ್ರತಿದೂರನ್ನು ಒಬ್ಬರೇ ಅಧಿಕಾರಿ ತನಿಖೆ ನಡೆಸಬೇಕು” ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಸಿರುವ ಕರ್ನಾಟಕ ಹೈಕೋರ್ಟ್, “ಇದು ಮರುಳಿಸಿದರೆ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲಾಗುವುದು” ಎಂದು ಮಂಗಳವಾರ ಎಚ್ಚರಿಸಿದೆ.
ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಉಂಟಾದ ಕಲಹದ ಸಂಬಂಧ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಗ್ರಾಮೀಣ ಠಾಣೆಯಲ್ಲಿ ದಾಖಲಾಗಿರುವ ಕೊಲೆ ಯತ್ನ ಪ್ರಕರಣ ರದ್ದತಿ ಕೋರಿ ಕಲ್ಮನೆ ಗ್ರಾಮದ ಸಿದ್ದಪ್ಪ ಮತ್ತಿತರರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.
ಅರ್ಜಿದಾರರ ಪರ ವಕೀಲೆಯು “ದೂರು ಮತ್ತು ಪ್ರತಿದೂರಿನ ತನಿಖೆಗೆ ಇಬ್ಬರು ತನಿಖಾಧಿಕಾರಿಗಳನ್ನು ನೇಮಿಸಲಾಗಿದೆ” ಎಂದರು.
ಆಗ ಪೀಠವು ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರನ್ನು ಕುರಿತು “ದೂರು ಮತ್ತು ಪ್ರತಿದೂರಿನ ತನಿಖೆಯನ್ನು ಒಬ್ಬರೇ ತನಿಖಾಧಿಕಾರಿ ನಡೆಸಬೇಕು ಎಂದು ಎಷ್ಟು ಬಾರಿ ಹೇಳಬೇಕು?” ಎಂದು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತು.
ಇದಕ್ಕೆ ಜಗದೀಶ್ ಅವರು “ಪ್ರಕರಣವನ್ನು ಹೊಸದಾಗಿ ತನಿಖೆ ನಡೆಸಲು ಆದೇಶಿಸಬೇಕು” ಎಂದರು.
ಇದನ್ನು ಆಲಿಸಿದ ಪೀಠವು “ಒಂದೇ ಘಟನೆಗೆ ಸಂಬಂಧಿಸಿದ ದೂರು ಪ್ರತಿದೂರಿನ ತನಿಖೆ ರಾಜ್ಯ ಸರ್ಕಾರವು ಇಬ್ಬರು ತನಿಖಾಧಿಕಾರಿಗಳನ್ನು ನೇಮಿಸುತ್ತಿರುವುದು ಆಘಾತಕಾರಿ. ಆದರೆ, ದೂರು-ಪ್ರತಿದೂರಿಗೆ ಒಬ್ಬರೇ ತನಿಖಾಧಿಕಾರಿ ಇರಬೇಕು ಎಂಬುದರಲ್ಲಿ ಕಾನೂನು ಸ್ಪಷ್ಟವಾಗಿದೆ. ಈ ಸಂಬಂಧ ರಾಜ್ಯ ಸರ್ಕಾರವು ಸುತ್ತೋಲೆ ಹೊರಡಿಸಿದ್ದು, ಅದು ಕಾಗದದಲ್ಲಿ ಮಾತ್ರ ಉಳಿದಿದೆ. ದೂರು-ಪ್ರತಿದೂರಿನಲ್ಲಿ ವಿಭಿನ್ನ ತನಿಖಾಧಿಕಾರಿ ನೇಮಿಸಿರುವ ಪ್ರಕರಣಗಳು ಈ ನ್ಯಾಯಾಲಯದ ಮುಂದೆ ಬರುತ್ತಿದ್ದು, ತನಿಖಾಧಿಕಾರಿಗಳು ವಿಭಿನ್ನ ಅಭಿಪ್ರಾಯ ನೀಡುತ್ತಾರೆ. ಒಬ್ಬರು ಬಿ ರಿಪೋರ್ಟ್ ಸಲ್ಲಿಸಿದರೆ ಮತ್ತೊಬ್ಬರು ಆರೋಪ ಪಟ್ಟಿ ಸಲ್ಲಿಸುತ್ತಾರೆ” ಎಂದು ನ್ಯಾಯಾಲಯ ಹೇಳಿದೆ.
“ಹಾಲಿ ಪ್ರಕರಣದಲ್ಲಿ ಎರಡೂ ದೂರಿನ ಸಂಬಂಧ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಆದರೆ, ದೂರು-ಪ್ರತಿದೂರಿಗೆ ಒಬ್ಬರೇ ತನಿಖಾಧಿಕಾರಿ ನೇಮಕ ಮಾಡದೇ ಇರುವುದು ಕಾನೂನಿನ ಅಗತ್ಯತೆ ಪೂರೈಸುವುದಿಲ್ಲ. ಹೀಗಾಗಿ, ಇಡೀ ಪ್ರಕರಣದಲ್ಲಿ ಹೊಸದಾಗಿ ತನಿಖೆ ನಡೆಯುವ ಅಗತ್ಯವಿದೆ. ಸರ್ಕಾರವು ಒಂದೇ ಪ್ರಕರಣದ ದೂರು-ಪ್ರತಿದೂರಿನಲ್ಲಿ ಇಬ್ಬರು ತನಿಖಾಧಿಕಾರಿಗಳನ್ನು ನೇಮಿಸುವುದರಿಂದ ಹೀಗಾಗುತ್ತಿದೆ. ಇದು ಮರುಳಿಸಿದರೆ ಸೂಕ್ತ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಸಕ್ಷಮ ಪ್ರಾಧಿಕಾರವನ್ನು ಎಚ್ಚರಿಸಲಾಗುತ್ತಿದೆ. ಸುತ್ತೋಲೆ ಹೊರಡಿಸಿದಾಗಿಯೂ ಇದು ಮರುಕಳಿಸಿದರೆ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಬೇಕಾಗುತ್ತದೆ” ಎಂದಿರುವ ನ್ಯಾಯಾಲಯವು ಪ್ರಕರಣವನ್ನು “ಒಬ್ಬರೇ ತನಿಖಾಧಿಕಾರಿ ಒಂದು ತಿಂಗಳಲ್ಲಿ ತನಿಖೆ ನಡೆಸಿ, ಸಕ್ಷಮ ನ್ಯಾಯಾಲಯ ಆರೋಪ ಪಟ್ಟಿ ಸಲ್ಲಿಸಬೇಕು” ಎಂದು ಮರಳಿಸಿದೆ.