'ಒಂದು ಪ್ರಕರಣದ ವಿಚಾರಣೆ ಮುಗಿಯಲು ಎಷ್ಟು ಸಮಯ ಬೇಕು?' ವಿದ್ಯಾರ್ಥಿಗಳ ಪ್ರಶ್ನೆಗೆ ಸಿ ಜೆ ಅಸಮಾಧಾನ

ಆನ್‌ಲೈನ್‌ನಲ್ಲಿ ಪ್ರಕರಣ ವೀಕ್ಷಿಸುತ್ತಿದ್ದ ಆರ್‌ಜಿಯುಎಚ್‌ಎಸ್‌ಗೆ ಸೇರಿದ ವಿದ್ಯಾರ್ಥಿಗಳಿಂದ ಕಲಾಪಕ್ಕೆ ಕಿರಿಕಿರಿ. ಆಡಿಯೊ ನಿರ್ಬಂಧಿಸದೆ ಮಾತನಾಡುತ್ತಿದ್ದ ವಿದ್ಯಾರ್ಥಿಗಳು. ಶಿಷ್ಟಾಚಾರದ ಪರಿವೆ ಇಲ್ಲದೆ ಚಾಟ್‌ ಮಾಡಿದ ವಿದ್ಯಾರ್ಥಿಗಳು.
Virtual Hearing
Virtual Hearing

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (ಆರ್‌ಜಿಯುಎಚ್‌ಎಸ್) ವೈದ್ಯಕೀಯ ಪದವಿ ವಿದ್ಯಾರ್ಥಿಗಳು ಕರ್ನಾಟಕ ಹೈಕೋರ್ಟ್ ಕಲಾಪವನ್ನು ಆನ್‌ಲೈನ್‌ನಲ್ಲಿ ವೀಕ್ಷಿಸುವಾಗ ಅನಗತ್ಯ ಚಾಟ್‌ ಮಾಡುವುದಲ್ಲದೇ, ಪ್ರಕರಣಗಳ ವಿಚಾರಣೆಯ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ವಿದ್ಯಾರ್ಥಿಗಳ ನಡೆಗೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

2022ನೇ ಸಾಲಿನಲ್ಲಿ ನಡೆದ ಎಂಬಿಬಿಎಸ್ ಪದವಿ ಪರೀಕ್ಷೆಯ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಆರ್‌ಜಿಯುಎಚ್‌ಎಸ್ ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್.‌ ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಇದಕ್ಕೂ ಮುನ್ನ, ಜೂಮ್ ತಂತ್ರಾಂಶದ ಮೂಲಕ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಕಲಾಪ ವೀಕ್ಷಿಸುತ್ತಿದ್ದ ವಿದ್ಯಾರ್ಥಿಗಳು (ಮೇಲ್ಮನವಿಯಲ್ಲಿ ಪಕ್ಷಕಾರರು ಆಗಿರುವ) ಅತ್ಯಂತ ಕಾತುರದಿಂದ ತಮ್ಮ ಅರ್ಜಿ ವಿಚಾರಣೆಗೆ ಕಾಯುತ್ತಿದ್ದರು.

ಈ ವೇಳೆ ಆಡಿಯೊ ನಿರ್ಬಂಧಿಸದೆ ಮಾತನಾಡುತ್ತಿದ್ದರು. ಆಗ ನ್ಯಾಯಾಲಯದ ಅಧಿಕಾರಿಯು ಆಡಿಯೊ ನಿರ್ಬಂಧ ಮಾಡಿಕೊಳ್ಳುವಂತೆ ಹಲವು ಬಾರಿ ವಿದ್ಯಾರ್ಥಿಗಳ ಗಮನಕ್ಕೆ ತಂದರು. ನಂತರ ವಿದ್ಯಾರ್ಥಿಗಳು, ‘ಯಾವಾಗ ನಮ್ಮ ಪ್ರಕರಣ ವಿಚಾರಣೆಗೆ ಬರುತ್ತದೆ’, ‘ಸದ್ಯ ಯಾವ ಪ್ರಕರಣ ವಿಚಾರಣೆ ನಡೆಯುತ್ತಿದೆ’, ‘ಒಂದು ಪ್ರಕರಣದ ವಿಚಾರಣೆ ಮುಗಿಸಲು ಎಷ್ಟು ಸಮಯ ಬೇಕಾಗುತ್ತದೆ?’ ಎಂದು ಕೆಲ ವಿದ್ಯಾರ್ಥಿಗಳೂ ಚಾಟ್ ಭಾಗದಲ್ಲಿ ಸಂದೇಶ ಕಳಿಹಿಸುತ್ತಿದ್ದರು. ಅದಕ್ಕೆ ಮತ್ತೊಂದಷ್ಟು ಮಂದಿ ಕಮೆಂಟ್ ಮಾಡುತ್ತಿದ್ದರು.

ಇದರಿಂದ ಬೇಸತ್ತ ನ್ಯಾಯಾಲಯದ ಅಧಿಕಾರಿಯು, ‘ವಿದ್ಯಾರ್ಥಿಗಳೇ, ನ್ಯಾಯಾಲಯದ ಕುರಿತು ಕಾಮೆಂಟ್ ಮಾಡುವ ಮುನ್ನ ಯೋಚನೆ ಮಾಡಬೇಕು. ನೀವು ನ್ಯಾಯಾಲಯದ ಮುಂದೆ ಇದ್ದೀರ ಹೊರತು ನಿಮ್ಮ ಕಾಲೇಜಿನಲ್ಲಿ ಅಲ್ಲ’ ಎಂದು ಕಟುವಾಗಿ ಉತ್ತರಿಸಿ, ಎಚ್ಚರಿಸಿದರು.

ಮಧ್ಯಾಹ್ನದ ಕಲಾಪದ ವೇಳೆ ಪೀಠದ ಮುಂದೆ ಆರ್‌ಜಿಯುಎಚ್‌ಎಸ್ ಮೇಲ್ಮನವಿ ವಿಚಾರಣೆಗೆ ಬಂದಿತ್ತು. ಈ ವೇಳೆ ವಿದ್ಯಾರ್ಥಿಗಳು ವಿಡಿಯೊ ಕಾನ್ಫರೆನ್ಸ್‌ನ ಚಾಟ್‌ ವಿಭಾಗದಲ್ಲಿ ಸಂದೇಶ ಕಳುಹಿಸಿದ ವಿಚಾರವನ್ನು ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೆ ನ್ಯಾಯಾಲಯದ ಅಧಿಕಾರಿ ತಂದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿಗಳು, ವಿದ್ಯಾರ್ಥಿಗಳ ಪರ ಹಾಜರಿದ್ದ ಹಿರಿಯ ವಕೀಲ ಡಿ ಆರ್‌ ರವಿಶಂಕರ್‌ ಅವರಿಗೆ ವಿಚಾರ ತಿಳಿಸಿ ಬೇಸರ ವ್ಯಕ್ತಪಡಿಸಿದರು.

‘ಸಾಕಷ್ಟು ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಕಲಾಪಕ್ಕೆ ಹಾಜರಾಗುತ್ತಿದ್ದಾರೆ. ವಿದ್ಯಾರ್ಥಿಗಳು ಹೀಗೆ ಪದೇ ಪದೇ ಸಂದೇಶ ಕಳುಹಿಸುತ್ತಲೇ ಇದ್ದರೆ ನ್ಯಾಯಾಲಯದ ಅಧಿಕಾರಿಯು ಹೇಗೆ ಮತ್ತು ಎಷ್ಟು ಜನರಿಗೆ ಉತ್ತರಿಸಲು ಸಾಧ್ಯ. ನೀವೇ ನೋಡಿ ವಿದ್ಯಾರ್ಥಿಗಳು ಹೇಗೆಲ್ಲಾ ಸಂದೇಶ ಕಳುಹಿಸಿದ್ದಾರೆ. ವಿದ್ಯಾರ್ಥಿಗಳ ಕಾತರ ಹಾಗೂ ಕಳವಳವನ್ನು ನ್ಯಾಯಾಲಯ ಅರ್ಥ ಮಾಡಿಕೊಳ್ಳುತ್ತದೆ. ಒಂದು ಪ್ರಕರಣದ ವಿಚಾರಣೆ ಮುಗಿಯಲು ಎಷ್ಟು ಸಮಯ ಬೇಕು ಎಂದು ಕೇಳುತ್ತಿದ್ದಾರೆ? ಅಂದ ಮಾತ್ರಕ್ಕೆ ಇತರೆ ಪ್ರಕರಣಗಳನ್ನು ಪಟ್ಟಕ್ಕಿಡಲಾಗುತ್ತದೆಯೇ? ಎಂದು ವಕೀಲರನ್ನು ಪ್ರಶ್ನಿಸಿದರು.

ಅಲ್ಲದೆ, ನ್ಯಾಯಾಲಯದ ಕಲಾಪ ವೀಕ್ಷಣೆ ಮಾಡುತ್ತಿರುವಾಗ ವಿದ್ಯಾರ್ಥಿಗಳು ಸಭ್ಯತೆಯಿಂದ ನಡೆದುಕೊಳ್ಳಬೇಕಾಗುತ್ತದೆ. ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆ ಹೇಗಿರುತ್ತದೆ? ನ್ಯಾಯಾಲಯದ ಶಿಷ್ಟಾಚಾರವೇನು? ನ್ಯಾಯಾಲಯದ ಮುಂದೆ ಇರುವಾಗ ಹೇಗೆ ವರ್ತಿಸಬೇಕು? ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸಬೇಕು. ಕಾಲೇಜಿನಲ್ಲಿ ವರ್ತಿಸಿದಂತೆ ನ್ಯಾಯಾಲಯದ ಮುಂದೆ ನಡೆದುಕೊಳ್ಳಬಾರದು. ಬಹಳ ಎಚ್ಚರದಿಂದ ಇರಬೇಕಾಗುತ್ತದೆ” ಎಂದು ಮೌಖಿಕವಾಗಿ ಸೂಚಿಸಿದರು.

ಈ ವೇಳೆ ವಿದ್ಯಾರ್ಥಿಗಳ ಸಂದೇಶ ಮತ್ತು ಅವರ ಹೆಸರು ಪರಿಶೀಲಿಸಿದ ಹಿರಿಯ ವಕೀಲ ಡಿ ಆರ್‌ ರವಿಶಂಕರ್‌ ಅವರು “ಹೊರಗಿನವರು ಅಭಿಪ್ರಾಯ ವ್ಯಕ್ತಪಡಿಸಿರಬೇಕು. ಅವರು ನಮ್ಮ ಪಕ್ಷಕಾರರು ಅಲ್ಲ. ಆದರೂ, ನ್ಯಾಯಾಲಯದ ಸೂಚನೆಯನ್ನು ತಮ್ಮ ಪಕ್ಷಕಾರರ ಗಮನಕ್ಕೆ ತರಲಾಗುವುದು. ಕಲಾಪದ ಸಂದರ್ಭದಲ್ಲಿ ಹೇಗೆ ನಡೆದುಕೊಳ್ಳಬೇಕು ಮತ್ತು ಸಭ್ಯತೆ ರೂಢಿಸಿಕೊಳ್ಳಬೇಕಾದ ಕುರಿತು ನಮ್ಮ ಪಕ್ಷಕಾರರಿಗೆ ತಿಳಿಸುವುದು ನನ್ನ ಜವಾಬ್ದಾರಿಯಾಗಿದ್ದು, ಅದನ್ನು ನಾನು ಮಾಡುತ್ತೇನೆ” ಎಂದು ಭರವಸೆ ನೀಡಿದರು.

ಅಂತಿಮವಾಗಿ, ಸುದೀರ್ಘವಾಗಿ ವಿಚಾರಣೆ ನಡೆಸಿದ ಪೀಠವು ಬುಧವಾರ ಮಧ್ಯಾಹ್ನ 2.30ಕ್ಕೆ ಪ್ರಕರಣದ ವಿಚಾರಣೆ ಮುಂದೂಡಿತು.

Related Stories

No stories found.
Kannada Bar & Bench
kannada.barandbench.com