ನ್ಯಾಯಾಲಯದ ಗಮನಕ್ಕೆ ತರುವ ಮುನ್ನವೇ ದೆಹಲಿ ಗಲಭೆ ಪ್ರಕರಣದ ಪೂರಕ ಆರೋಪಪಟ್ಟಿ ಮಾಧ್ಯಮಗಳಿಗೆ ಲಭ್ಯವಾಗಿದ್ದು ಹೇಗೆ ಎಂಬ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ದೆಹಲಿ ಹೈಕೋರ್ಟ್, ಸೋರಿಕೆಗೆ ಕಾರಣವಾದ ವ್ಯಕ್ತಿಯನ್ನು ಹೊಣೆಗಾರನನ್ನಾಗಿ ಮಾಡಿ ಹೆಚ್ಚುವರಿ ಅಫಿಡವಿಟ್ ಸಲ್ಲಿಸುವಂತೆ ಸೂಚಿಸಿದೆ.
ಅಂತಹ ಯಾವುದೇ ಸೋರಿಕೆಯಾಗಿಲ್ಲ ಎಂದು ದೆಹಲಿ ಪೊಲೀಸರ ಪರ ವಕೀಲ ಅಮಿತ್ ಮಹಾಜನ್ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು. ಆದರೆ ನ್ಯಾಯಮೂರ್ತಿ ಮುಕ್ತಾ ಗುಪ್ತ ಅವರು “ಆರೋಪಪಟ್ಟಿ ಎಂಬುದು ಪೊಲೀಸರ ಸ್ವತ್ತಾಗಿದ್ದು ಸೋರಿಕೆಗೆ ಯಾರು ಕಾರಣ ಎಂದು ಕಂಡುಹಿಡಿಯುವುದು ಇಲಾಖೆಯ ಜವಾಬ್ದಾರಿ” ಎಂದರು. ಅಲ್ಲದೆ ಸೋರಿಕೆ ಎಂಬುದು ಅಪರಾಧ ಸ್ವರೂಪದ ಉಲ್ಲಂಘನೆ ಅಥವಾ ಕಳ್ಳತನ ಎಂದು ಹೇಳಿದರು.
ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿ ತನ್ನ ವಿರುದ್ಧ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತಾನು ನೀಡಿದ್ದ ಹೇಳಿಕೆಯನ್ನು ಆರೋಪಪಟ್ಟಿ ಸಲ್ಲಿಸುವ ಮೊದಲೇ ಬಹಿರಂಗಪಡಿಸಲಾಗಿತ್ತು ಎಂದು ಆರೋಪಿಸಿ ದೆಹಲಿ ಗಲಭೆ ಆರೋಪಿ ಆಸಿಫ್ ಇಕ್ಬಾಲ್ ತನ್ಹಾ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ತನ್ಹಾ ಪರ ವಕೀಲ ಸಿದ್ಧಾರ್ಥ್ ಅಗರ್ವಾಲ್ ಅವರು ಪ್ರಕರಣದ ಇತ್ತೀಚಿನ ಆರೋಪಪಟ್ಟಿ ಕೂಡ ಇದೇ ರೀತಿ ಸೋರಿಕೆಯಾಗಿದೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.
ಆರೋಪಪಟ್ಟಿಯಲ್ಲಿದ್ದ ನಿರ್ದಿಷ್ಟ ಮಾಹಿತಿ ಮಾಧ್ಯಮಗಳಿಗೆ ಸೋರಿಕೆಯಾಗು 'ಪ್ರಕ್ಷುಬ್ಧಗೊಳಿಸುವ ಬೆಳವಣಿಗೆ' ಬಗ್ಗೆ ವಿಚಾರಣಾ ನ್ಯಾಯಾಲಯದ ಆದೇಶವನ್ನು ಸಹ ಇದೇ ವೇಳೆ ನ್ಯಾಯಾಲಯದ ಗಮನಕ್ಕೆ ತರಲಾಯಿತು. ಈ ವಾರದ ಆರಂಭದಲ್ಲಿ ಮಾಹಿತಿ ಸೋರಿಕೆಯ ಕುರಿತಾದ ತನಿಖೆಯ 'ಅರೆಬೆಂದ'ದ್ದಾಗಿದೆ ಎಂದು ಬಗ್ಗೆ ದೆಹಲಿ ಪೊಲಿಸರನ್ನು ಪೀಠ ತರಾಟೆಗೆ ತೆಗೆದುಕೊಂಡಿದ್ದನ್ನು ಇಲ್ಲಿ ನೆನೆಯಬಹುದು. ಇದಕ್ಕಾಗಿ ದೆಹಲಿ ಪೊಲೀಸ್ ವಿಚಕ್ಷಣಾ ದಳದ ವಿಶೇಷ ಕಮಿಷನರ್ ನ್ಯಾಯಾಲಯಕ್ಕೆ ಹಾಜರಾಗುವಂತೆ ಪೀಠ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿ ಸುಂದರಿ ನಂದಾ ವರ್ಚುವಲ್ ವಿಧಾನದಲ್ಲಿ ವಿಚಾರಣೆಗೆ ಇಂದು ಹಾಜರಾಗಿದ್ದರು.
ಪ್ರಕರಣದ ಮುಂದಿನ ವಿಚಾರಣೆ ಮಾರ್ಚ್ 25ಕ್ಕೆ ನಿಗದಿಯಾಗಿದೆ.