ಮುಲ್ಲಪೆರಿಯಾರ್ ಅಣೆಕಟ್ಟು ಅತಿ ದುರ್ಬಲವಾಗಿದ್ದು ಹೊಸ ಅಣೆಕಟ್ಟು ನಿರ್ಮಿಸಬೇಕಿದೆ: ಸುಪ್ರೀಂ ಕೋರ್ಟ್‌ಗೆ ಕೇರಳ ಸರ್ಕಾರ

ಅಣೆಕಟ್ಟು ಒಡೆದರೆ ಮಾನವ ಕಲ್ಪನೆಯನ್ನೂ ಮೀರಿ 30 ಲಕ್ಷ ಜನರ ಮೇಲೆ ಪರಿಣಾಮ ಬೀರಬಹುದು ಎಂದು ಕೇರಳ ಸರ್ಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.
Mullaperiyar dam and Supreme Court
Mullaperiyar dam and Supreme Court

ಒಂದೂ ಕಾಲು ಶತಮಾನಕ್ಕೂ ಹಳತಾಗಿರುವ ಮತ್ತು ದೊಡ್ಡಪ್ರಮಾಣದ ಜಲಾನಯನ ಪ್ರದೇಶದಿಂದಾಗಿ ಮುಲ್ಲಪೆರಿಯಾರ್ ಅಣೆಕಟ್ಟು ಅತ್ಯಂತ ದುರ್ಬಲವಾಗಿದ್ದು ಅದರ ಕಾರ್ಯಾಚರಣೆ ಸ್ಥಗಿತಗೊಳಿಸಿ ಹೊಸ ಅಣೆಕಟ್ಟು ನಿರ್ಮಿಸಬೇಕು ಎಂದು ಮಹತ್ವದ ಬೆಳವಣಿಗೆಯೊಂದರಲ್ಲಿ ಕೇರಳ ಸರ್ಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ. (ಡಾ. ಜೋ ಜೋಸೆಫ್ ಮತ್ತು ತಮಿಳುನಾಡು ಸರ್ಕಾರ ನಡುವಣ ಪ್ರಕರಣ.)

ಮುಲ್ಲಪೆರಿಯಾರ್ ಅಣೆಕಟ್ಟು 126 ವರ್ಷಗಳಷ್ಟು ಹಳೆಯದಾದ ರಚನೆಯಾಗಿದ್ದು, ತನ್ನ ವಿನ್ಯಾಸದಲ್ಲಿ ಭೂಕಂಪನದ ತರಂಗಗಳನ್ನು ಪರಿಗಣಿಸದ ಸಮಯದಲ್ಲಿ ಸುಣ್ಣ ಮತ್ತು ಗಾರೆಯಿಂದ (ಸುರ್ಕಿ) ಕಟ್ಟಲಾಗಿದೆ. ಅಣೆಕಟ್ಟನ್ನು ಎರಡು ಬಾರಿ ಬಲಪಡಿಸುವ ಕಾರ್ಯ ನಡೆದಿದ್ದರೂ ಇದು ಅತ್ಯಂತ ದುರ್ಬಲವಾಗಿದೆ ಎಂದು ಪಿಣರಾಯಿ ವಿಜಯನ್‌ ನೇತೃತ್ವದ ಸಿಪಿಐ (ಎಂ) ಸರ್ಕಾರ ನ್ಯಾಯಾಲಯಕ್ಕೆ ವಿವರಿಸಿದೆ.

ಕೇರಳ ಸರ್ಕಾರದ ಪ್ರಮುಖ ಪ್ರತಿಪಾದನೆಗಳು

  • ದುರ್ಬಲವಾಗಿರುವುದು ಮಾತ್ರವಲ್ಲದೆ ಅಣೆಕಟ್ಟು ಅತಿದೊಡ್ಡ ಜಲಾನಯನ ಪ್ರದೇಶ ಹೊಂದಿದ್ದು. 142 ಅಡಿಗಳಲ್ಲಿ ಕೇವಲ 12.758 ಟಿಎಂಸಿಯಷ್ಟು ನೀರನ್ನು ಮಾತ್ರ ಅದು ಸಂಗ್ರಹಿಸಿಟ್ಟುಕೊಳ್ಳಬಹುದು. ಅದಕ್ಕೆ ಸೀಮಿತವಾದ ಸಂಗ್ರಹಣಾ ಸಾಮರ್ಥ್ಯವಿದೆ.

  • ಮುಲ್ಲಪೆರಿಯಾರ್ ಅಣೆಕಟ್ಟು ಒಡೆದರೆ ಮಾನವ ಕಲ್ಪನೆಯನ್ನೂ ಮೀರಿ ಅಣೆಕಟ್ಟಿನ ಕೆಳಪ್ರದೇಶಗಳಲ್ಲಿ ವಾಸಿಸುವ ಐದು ಜಿಲ್ಲೆಗಳ 30 ಲಕ್ಷಕ್ಕೂ ಹೆಚ್ಚು ಜನರ ಜೀವನ ಮೇಲೆ ಪರಿಣಾಮ ಬೀರಬಹುದು ಎಂಬ ಕೇರಳ ಸರ್ಕಾರದ ಆತಂಕವನ್ನು ಗಣನೆಗೆ ತೆಗೆದುಕೊಳ್ಳಬೇಕು.

  • ಆದ್ದರಿಂದ ತಮಿಳುನಾಡಿಗೆ ನೀರು ಹರಿಸುವ ಸಲುವಾಗಿ ಮತ್ತು ಅಣೆಕಟ್ಟೆಯ ಕೆಳ ಪ್ರದೇಶಗಳಲ್ಲಿ ವಾಸಿಸುವ ಜನರ ಸುರಕ್ಷತೆಗಾಗಿ ಹೊಸ ಅಣೆಕಟ್ಟನ್ನು ನಿರ್ಮಿಸುವುದು ಮುಂದಿನ ತಾರ್ಕಿಕ ಹೆಜ್ಜೆಯಾಗಿದೆ.

ಅಣೆಕಟ್ಟಿನ ಜಲಾಶಯದಲ್ಲಿ ನೀರಿನ ಮಟ್ಟವು ಸುಪ್ರೀಂ ಕೋರ್ಟ್‌ 2014ರ ತೀರ್ಪಿನಲ್ಲಿ ಸೂಚಿಸಿದ್ದ 142 ಅಡಿ ಮಿತಿಗಿಂತಲೂ ಮೂರು ಅಡಿಗಳಷ್ಟು ಕಡಿಮೆ ಅಂದರೆ 139 ಅಡಿ ಮೀರದಂತೆ ನೋಡಿಕೊಳ್ಳಲು ಕೇರಳ ಸರ್ಕಾರ ಸಲ್ಲಿಸಿರುವ ಮನವಿಯ ವಿಚಾರವಾಗಿ ಈ ಹೇಳಿಕೆ ಸಲ್ಲಿಸಲಾಗಿದೆ.

2018ರಲ್ಲಿ ಕೇರಳ ಪ್ರವಾಹದ ಸಂದರ್ಭದಲ್ಲಿ ತಾತ್ಕಾಲಿಕ ವ್ಯವಸ್ಥೆಯಾಗಿ 139 ಅಡಿಗಳಷ್ಟು ನೀರಿನ ಮಟ್ಟ ಕಾಯ್ದುಕೊಳ್ಳುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಕೇರಳ ಸರ್ಕಾರ ಪ್ರತಿಪಾದಿಸಿರುವಂತೆ ಅಣೆಕಟ್ಟಿನ ನೀರಿನ ಪ್ರಮಾಣವನ್ನು 136 ಅಡಿಯಿಂದ 142 ಅಡಿಗೆ ಏರಿಕೆ ಮಾಡಿದರೆ ನೀರಿನ ಒತ್ತಡ ಘಾತೀಯ ಪ್ರಮಾಣದಲ್ಲಿ ಹೆಚ್ಚಳವಾಗಿ ಅಣೆಕಟ್ಟಿನ ಒತ್ತಡ ವೃದ್ಧಿಸುತ್ತದೆ ಎಂದು ಕೇರಳ ಹೇಳಿದೆ.

ಅಣೆಕಟ್ಟಿನ ಜಲಾನಯನ ಪ್ರದೇಶ ದೊಡ್ಡದಾಗಿದ್ದು ಸಾಮರ್ಥ್ಯ ಕಡಿಮೆಯಿರುವುದರಿಂದ, 650 ಚ.ಕಿ.ಮೀ ಜಲಾನಯನ ಪ್ರದೇಶ ಹೊಂದಿರುವ ಮತ್ತು 70.5 ಟಿಎಂಸಿ ಅಡಿ ಸಾಮರ್ಥ್ಯದ ಇಡುಕ್ಕಿ ಅಣೆಕಟ್ಟಿನ ಕೆಳಪ್ರದೇಶಕ್ಕೆ ಹೋಲಿಸಿದರೆ ಮುಲ್ಲಪೆರಿಯಾರ್ ಜಲಾಶಯದಲ್ಲಿ ನೀರಿನ ಮಟ್ಟ ತೀವ್ರವಾಗಿ ಹೆಚ್ಚಾಗುತ್ತಿದೆ ಎಂದು ಅದು ವಾದಿಸಿದೆ.

ಸದ್ಯ ಕೇರಳದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು, ಹೀಗಾಗಿ ಕೇರಳ ಸರ್ಕಾರವು ಜಲಾಶಯದ ನೀರಿನ ಮಟ್ಟವನ್ನು 139 ಅಡಿ ಮೀರದಂತೆ ನೋಡಿಕೊಳ್ಳಬೇಕು ಎಂದಿದೆ. ಕೇರಳದಲ್ಲಿ ಪ್ರವಾಹದ ಸಂದರ್ಭದಲ್ಲಿ ಜಲಾಶಯದ ನೀರಿನ ಮಟ್ಟವನ್ನು 139 ಅಡಿಗೆ ಸೀಮಿತಗೊಳಿಸಬೇಕು ಎಂದು 2018ರಲ್ಲಿ ಸುಪ್ರೀಂ ಕೋರ್ಟ್‌ ಆದೇಶಿಸಿತ್ತು.

Related Stories

No stories found.
Kannada Bar & Bench
kannada.barandbench.com