ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 18-2-2021

>> ಕೋವಿಡ್‌ ಮಾರ್ಗಸೂಚಿ ಪಾಲನಾ ಮನವಿ >>ವಕೀಲ ದಂಪತಿ ಕಗ್ಗೊಲೆ-ದೂರು ದಾಖಲು‌ >>ಮಾಫಿಯಾ ಕ್ವೀನ್ಸ್‌ ಆಫ್‌ ಮುಂಬೈಗೆ ಪ್ರತಿಬಂಧಕಾಜ್ಞೆ-ಮನವಿ ವಜಾ >> ಇ-ಮತದಾನ ಕುರಿತ ಅರ್ಜಿ >> ʼನ್ಯಾಯ್‌, ದ ಜಸ್ಟೀಸ್‌ʼ ಸಿನಿಮಾ ಬಿಡುಗಡೆಗೆ ತಡೆಯಾಜ್ಞೆ ಮನವಿ
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 18-2-2021

ಸಮಾವೇಶಗಳನ್ನು ನಡೆಸುವಾಗ ರಾಜಕೀಯ ಪಕ್ಷಗಳು ನಿಯಮಾವಳಿ ಪಾಲಿಸಲ್ಲ, ಮಾಸ್ಕ್‌ ಧರಿಸುವುದಿಲ್ಲ: ಹೈಕೋರ್ಟ್

‌ರಾಜಕೀಯ ಪಕ್ಷಗಳು ಸಮಾವೇಶ ನಡೆಸುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್‌ ಧರಿಸುವುದು ಸೇರಿದಂತೆ ಕೋವಿಡ್‌ ನಿಯಮಾವಳಿಗಳನ್ನು ಪಾಲಿಸುತ್ತಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಗುರುವಾರ ಅಸಮಾಧಾನ ವ್ಯಕ್ತಪಡಿಸಿದೆ. ಕೇಂದ್ರ ಗೃಹ ಇಲಾಖೆಯ ಮಾರ್ಗಸೂಚಿಯ ಭಾಗವಾದ ಕೋವಿಡ್‌ ನಿರ್ವಹಣೆಗೆ ರಾಷ್ಟ್ರೀಯ ನಿರ್ದೇಶನಗಳನ್ನು ಕರ್ನಾಟಕದಲ್ಲಿ ಪಾಲಿಸಲಾಗುತ್ತಿಲ್ಲ ಎಂದು ದೂರಿ ಸಲ್ಲಿಸಲಾಗಿದ್ದ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ಎಸ್‌ ಎಸ್‌ ಮಗದುಮ್‌ ಅವರಿದ್ದ ವಿಭಾಗೀಯ ಪೀಠವು ನಡೆಸಿತು.

CJI  A S Oka & Justice S S Magadum
CJI A S Oka & Justice S S Magadum

ಭಾರತೀಯ ಕಮ್ಯುನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿಗಳು) ಹೊರತುಪಡಿಸಿ ಬೇರಾವುದೇ ಪಕ್ಷವು ತನ್ನ ಸದಸ್ಯರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಮಾರ್ಗಸೂಚಿಗಳನ್ನು ಪಾಲಿಸಲು ಸೂಚಿಸಿರುವ ಸಂಬಂಧ ದಾಖಲೆ ಸಲ್ಲಿಸಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನ್ಯಾಯಾಲಯದ ನೋಟಿಸ್‌ಗೆ ರಾಜಕೀಯ ಪಕ್ಷಗಳು ಪ್ರತಿಕ್ರಿಯೆ ಸಲ್ಲಿಸದೇ ಇದ್ದರೆ ಅಗತ್ಯ ಕ್ರಮಕೈಗೊಳ್ಳುವುದು ಪೀಠಕ್ಕೆ ಅನಿವಾರ್ಯವಾಗಲಿದೆ ಎಂದು ನ್ಯಾಯಾಲಯ ಎಚ್ಚರಿಸಿದೆ.

ಹಾಡುಹಗಲೇ ವಕೀಲ ದಂಪತಿಯ ಕಗ್ಗೊಲೆ: ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡ ತೆಲಂಗಾಣ ಹೈಕೋರ್ಟ್‌

ತೆಲಂಗಾಣದಲ್ಲಿ ಹಾಡುಹಗಲೇ ವಕೀಲ ದಂಪತಿಯನ್ನು ಬರ್ಬರವಾಗಿ ಬುಧವಾರ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ತೆಲಂಗಾಣ ಹೈಕೋರ್ಟ್‌ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದೆ. ಮುಖ್ಯ ನ್ಯಾಯಮೂರ್ತಿ ಹಿಮಾ ಕೊಹ್ಲಿ ಮತ್ತು ನ್ಯಾಯಮೂರ್ತಿ ಬಿ ವಿಜಯಸೇನ್‌ ರೆಡ್ಡಿ ಅವರಿದ್ದ ಪೀಠವು ಇಂದು ಪ್ರಕರಣದ ವಿಚಾರಣೆ ನಡೆಸಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಸ್ತೃತ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯವು ನಿರ್ದೇಶಿಸಿದೆ. ಕಾಲಮಿತಿಯೊಳಗೆ ಅಂದರೆ ಮಾರ್ಚ್‌ 1ರೊಳಗೆ ವಿಚಾರಣೆ ಪೂರ್ಣಗೊಳಿಸುವಂತೆ ಪೀಠವು ನಿರ್ದೇಶಿಸಿದೆ.

High court of Telangana
High court of Telangana

ಗತ್ತು ವಾಮನ್‌ ರಾವ್‌ ಮತ್ತು ಅವರ ಪತ್ನಿ ಪಿ ವಿ ನಾಗಮಣಿ ಅವರು ತೆಲಂಗಾಣ ಹೈಕೋರ್ಟ್‌ನಲ್ಲಿ ವಕೀಲಿಕೆ ಮಾಡುತ್ತಿದ್ದು, ಪೆದ್ದಪಲ್ಲಿ ಜಿಲ್ಲೆಯಲ್ಲಿ ಅವರನ್ನು ಬುಧವಾರ ಮೂರು ಗಂಟೆ ವೇಳೆಗೆ ಕೊಲೆ ಮಾಡಲಾಗಿತ್ತು. ಜನಸಂದಣಿಯಿರುವ ರಸ್ತೆಯ ಮಧ್ಯದಲ್ಲಿ ಗುಂಪೊಂದು ಮಾರಕಾಸ್ತ್ರಗಳಿಂದ ದಂಪತಿಯ ಮೇಲೆ ಹಲ್ಲೆ ಮಾಡಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದ್ದು, ಘಟನೆ ನೋಡಿದವರು ಮತ್ತು ವಾಹನಗಳಲ್ಲಿ ಓಡಾಡುತ್ತಿದ್ದವರು ಯಾರೂ ಮಧ್ಯಪ್ರವೇಶಿಸಿರಲಿಲ್ಲ. ಪ್ರಕರಣದ ಕುರಿತು ತನಿಖೆ ಮಾಡುವಂತೆ ಬುಧವಾರ ಪೊಲೀಸರಿಗೆ ಆಗ್ರಹಿಸಿರುವ ತೆಲಂಗಾಣ ವಕೀಲರ ಪರಿಷತ್‌, ವಕೀಲರ ಮೇಲೆ ಆಗಾಗ್ಗೆ ದಾಳಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಕೀಲರ ಸಂರಕ್ಷಣಾ ಕಾಯಿದೆ ಜಾರಿಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಪರಿಷತ್‌ ಆಗ್ರಹಿಸಿದೆ.

ತೆಲಂಗಾಣ ವಕೀಲ ದಂಪತಿಯ ಕೊಲೆ ಖಂಡಿಸಿದ ಎಐಎಲ್‌ಎಯ ಕರ್ನಾಟಕ ಹಾಗೂ ಬೆಂಗಳೂರು ವಕೀಲರ ಸಂಘ

ತೆಲಂಗಾಣದಲ್ಲಿ ವಕೀಲ ದಂಪತಿಗಳಾದ ಗಟ್ಟು ವಾಮನರಾವ್‌ ಮತ್ತು ಪಿ ವಿ ನಾಗಮಣಿ ಅವರ ಬರ್ಬರ ಹತ್ಯೆ ನಡೆದಿರುವುದನ್ನು ಎಐಎಲ್‌ಯು ಕರ್ನಾಟಕ ವಲಯ ಮತ್ತು ಬೆಂಗಳೂರು ವಕೀಲರ ಸಂಘ ತೀವ್ರವಾಗಿ ಖಂಡಿಸಿವೆ. "ದೇಶದೆಲ್ಲೆಡೆ ವಕೀಲರ ಮೇಲೆ ಹಲ್ಲೆ ದೌರ್ಜನ್ಯ ಹಾಗೂ ಕೊಲೆ ನಡೆಯುತ್ತಿದೆ. ವಕೀಲರಿಗೆ ಮತ್ತು ವಕೀಲರ ಕುಟುಂಬಕ್ಕೆ ಸೂಕ್ತ ಭದ್ರತೆ ಇಲ್ಲವಾಗಿದೆ" ಎಂದು ಎರಡೂ ಸಂಘಟನೆಗಳು ಕಳವಳ ವ್ಯಕ್ತಪಡಿಸಿವೆ.

Telangana lawyers murder
Telangana lawyers murder

ಈ ಕೂಡಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಕೀಲರ ರಕ್ಷಣಾ ಕಾಯಿದೆ ರೂಪಿಸಬೇಕು ಎಂದು ಎಐಎಲ್‌ಯು ಕರ್ನಾಟಕ ವಲಯ ಮತ್ತು ಬೆಂಗಳೂರು ವಕೀಲರ ಸಂಘ ಪ್ರತ್ಯೇಕವಾಗಿ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಆಗ್ರಹಿಸಿವೆ. "ದೇಶದೆಲ್ಲೆಡೆಯ ನ್ಯಾಯವಾದಿಗಳು ಹಾಗೂ ಎಲ್ಲಾ ರಾಜ್ಯಗಳ ವಿವಿಧ ವಕೀಲರ ಪರಿಷತ್ತುಗಳು ಮತ್ತು ಸಂಘಟನೆಗಳು ಒಗ್ಗಟ್ಟಿನಿಂದ ವಕೀಲರ ರಕ್ಷಣಾ ಕಾಯಿದರೆ ರೂಪಿಸಲು ಒತ್ತಡ ತರಬೇಕಿದೆ" ಎಂದು ಕರೆ ನೀಡಲಾಗಿದೆ.

ʼಮಾಫಿಯಾ ಕ್ವೀನ್ಸ್‌ ಆಫ್‌ ಮುಂಬೈʼ ಕಾದಂಬರಿಯ ಲೇಖಕರು, ಗಂಗೂಬಾಯಿ ಕಾಥಿಯಾವಾಡಿ ನಿರ್ಮಾಪಕರ ವಿರುದ್ಧ ಪ್ರತಿಬಂಧಕಾದೇಶ ಕೋರಿದ್ದ ಮನವಿ ವಜಾ

'ಮಾಫಿಯಾ ಕ್ವೀನ್ಸ್‌ ಆಫ್‌ ಮುಂಬೈ' ಕಾದಂಬರಿಯ ಲೇಖಕರು ಅದರ ಪ್ರಕಟಣೆ, ಮಾರಾಟ ಅಥವಾ ಕಾದಂಬರಿಯ ಮೇಲೆ ಮೂರನೇ ವ್ಯಕ್ತಿಗಳು ಹಕ್ಕುಗಳನ್ನು ಸೃಷ್ಟಿಸದಂತೆ ಶಾಶ್ವತವಾಗಿ ಪ್ರತಿಬಂಧಕಾದೇಶ ಹೊರಡಿಸುವಂತೆ ಕೋರಿದ್ದ ಮನವಿಯನ್ನು ಬುಧವಾರ ಮುಂಬೈ ನಗರ ಸಿವಿಲ್‌ ನ್ಯಾಯಾಲಯವು ವಜಾಗೊಳಿಸಿದೆ.

Gangubai Kathiawadi
Gangubai Kathiawadi

ಕಾದಂಬರಿ ಆಧರಿಸಿದ ಸಿನಿಮಾ ಪ್ರೊಮೊ ಭಿತ್ತಿರಿಸುವುದು. ನಿರ್ಮಾಣ, ನಿರ್ದೇಶನ ಮಾಡದಂತೆ ಬನ್ಸಾಲಿ ನಿರ್ಮಾಣ ಸಂಸ್ಥೆಯ ವಿರುದ್ಧವೂ ಪ್ರತಿಬಂಧಕಾಜ್ಞೆ ಹೊರಡಿಸುವಂತೆ ಮನವಿಯಲ್ಲಿ ಕೋರಲಾಗಿತ್ತು. ಲೈಂಗಿಕ ಕಾರ್ಯಕರ್ತರ ಹಕ್ಕುಗಳಿಗಾಗಿ ಹೋರಾಟ ಮಾಡಿದ ಸಾಮಾಜಿಕ ಕಾರ್ಯಕರ್ತೆ ದಿವಂಗತ ಗಂಗೂಬಾಯಿ ಕಾಥಿಯಾವಾಡಿ ಅವರ ಕುರಿತು ಎಸ್‌ ಹುಸೇನ್‌ ಜೈದಿ ಮತ್ತು ಜಾನ್‌ ಬೋರ್ಜಸ್‌ ಬರೆದ ಕಾದಂಬರಿಯಲ್ಲಿ ಉಲ್ಲೇಖಿಸಲಾಗಿದೆ. ಕಾದಂಬರಿ ಆಧರಿತ ಗಂಗೂಬಾಯಿ ಕಾಥಿಯಾವಾಡಿ ಬದುಕಿನ ಕುರಿತು ಬನ್ಸಾಲಿ ನಿರ್ಮಾಣ ಸಂಸ್ಥೆಯು ಚಿತ್ರ ನಿರ್ಮಿಸುತ್ತಿದೆ. ಕಾದಂಬರಿ ಹಾಗೂ ಚಿತ್ರ ನಿರ್ಮಾಣಕ್ಕೆ ಮುಂದಾಗದಂತೆ ಕೋರಿ ವಕೀಲ ನರೇಂದ್ರ ದುಬೆ ಅವರ ಮೂಲಕ ಗಂಗೂಬಾಯಿ ಅವರ ಮಲಮಗ ಎಂದು ಹೇಳಿಕೊಂಡಿದ್ದ ಬಾಬುಜಿ ಶಾಹ್‌ ಅವರು ಮನವಿ ಸಲ್ಲಿಸಿದ್ದರು.

ಇ-ಮತದಾನ ಜಾರಿ, ಒಟಿಪಿ ಆಧಾರಿತ ಮತದಾರರ ಗುರುತು ಮುಂತಾದವುಗಳಿಗೆ ಕೋರಿದ್ದ ಮನವಿ; ಚುನಾವಣಾ ಆಯೋಗದ ಪ್ರತಿಕ್ರಿಯೆ ಬಯಸಿದ ಸುಪ್ರೀಂ ಕೋರ್ಟ್‌

ವರ್ಚುವಲ್‌ ರೂಪದಲ್ಲಿ ಸಂರಕ್ಷಿತ ರಿಮೋಟ್‌ ವಿದ್ಯುನ್ಮಾನ ಮತದಾನ ವ್ಯವಸ್ಥೆಯ ಮೂಲಕ ಇ-ಮತದಾನಕ್ಕೆ ಅವಕಾಶ ಕಲ್ಪಿಸುವಂತೆ ಕೋರಿದ್ದ ಮನವಿಗೆ ಸಂಬಂಧಿಸಿದಂತೆ ಗುರುವಾರ ಸುಪ್ರೀಂ ಕೋರ್ಟ್‌ ಕೇಂದ್ರ ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿದ್ದು, ಪ್ರತಿಕ್ರಿಯಿಸುವಂತೆ ಆದೇಶಿಸಿದೆ. ಆಧುನಿಕ ಕಾಲಘಟ್ಟ ಮತ್ತು ತಂತ್ರಜ್ಞಾನಕ್ಕೆ ಪೂರಕವಾಗಿ ಚುನಾವಣಾ ಕಾನೂನುಗಳನ್ನು ರೂಪಿಸಬೇಕಿದೆ ಎಂದು ಕೇರಳ ಮೂಲದ ಕೆ ಸತ್ಯನ್‌ ಮನವಿ ಸಲ್ಲಿಸಿದ್ದು, ವಕೀಲ ಕಲೀಶ್ವರಂ ರಾಜ್‌ ಅವರನ್ನು ಪ್ರತಿನಿಧಿಸಿದ್ದಾರೆ.

finger with indelible ink mark and SC
finger with indelible ink mark and SC

ಕೇಂದ್ರ ಮತ್ತು ಸ್ಥಳೀಯ ದತ್ತಾಂಶ ಎಂದು ಎರಡು ರೀತಿಯಲ್ಲಿ ದತ್ತಾಂಶವನ್ನು ಪೂರೈಸುವ ಮೂಲಕ ದತ್ತಾಂಶ ತಿರುಚುವುದು ಮತ್ತು ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಮೂಲಕ ನಡೆಯಬಹುದಾದ ವಂಚನೆ ತಪ್ಪಿಸಿ ಮುಕ್ತವಾಗಿ ಚುನಾವಣೆ ನಡೆಸಲು ನಿರ್ದೇಶಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ. ಒಟಿಪಿ ವ್ಯವಸ್ಥೆಯ ಜೊತೆಗೆ ದೇಶಾದ್ಯಂತ ಇರುವ ಮತಗಟ್ಟೆಗಳಲ್ಲಿ ಸಿಸಿಟಿವಿ ಅಳವಡಿಸುವ ಮೂಲಕ ದೋಷರಹಿತವಾದ ಚುನಾವಣೆ ನಡೆಸಬೇಕು ಎಂದು ಕೋರಲಾಗಿದೆ.

ದಿವಂಗತ ಸುಶಾಂತ್‌ ಸಿಂಗ್‌ ಬದುಕು ಆಧರಿಸಿದ ʼನ್ಯಾಯ್‌, ದ ಜಸ್ಟೀಸ್ʼ ಸಿನಿಮಾ ಬಿಡುಗಡೆಗೆ ತಡೆ ಕೋರಿ ಬಾಂಬೆ ಹೈಕೋರ್ಟ್‌ನಲ್ಲಿ ಮನವಿ

ಬಾಲಿವುಡ್‌ ನಟ ದಿವಂಗತ ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಕುರಿತಾದ ʼನ್ಯಾಯ್‌, ದ ಜಸ್ಟೀಸ್‌ʼ ಸಿನಿಮಾ ಬಿಡುಗಡೆಗೆ ತಡೆಯಾಜ್ಞೆ ನೀಡುವಂತೆ ಕೋರಿ ಬಾಂಬೆ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಲಾಗಿದೆ. ಸಿನಿಮಾ ಬಿಡುಗಡೆಗೆ ಶಾಶ್ವತ ಪ್ರತಿಬಂಧಕಾಜ್ಞೆ ನೀಡುವುದಕ್ಕೆ ಸಂಬಂಧಿಸಿದಂತೆ ದಿಂಡೋಶಿಯಲ್ಲಿರುವ ಮುಂಬೈನ ನಗರ ಸಿವಿಲ್‌ ನ್ಯಾಯಾಲಯವು ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಮನೀಶ್‌ ಮಿಶ್ರಾ ಎಂಬವರು ಮೇಲ್ಮನವಿ ಸಲ್ಲಿಸಿದ್ದಾರೆ.

High Court of Bombay
High Court of Bombay

ನ್ಯಾಯಮೂರ್ತಿ ಪಿ ಕೆ ಚೌಹಾಣ್‌ ಅವರ ಮುಂದೆ ವಿಚಾರಣೆಗೆ ಪ್ರಕರಣ ನಿಗದಿಪಡಿಸಲಾಗಿತ್ತು. ಆದರೆ, ಅಷ್ಟೇನು ತುರ್ತು ಇಲ್ಲದ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯನ್ನು ಮಾರ್ಚ್‌ ಮೊದಲ ವಾರಕ್ಕೆ ಮುಂದೂಡಲಾಗಿದೆ. ರಜಪೂತ್‌ ಸಾವಿನ ಕುರಿತು ಹಾಲಿ ಇರುವ ಸರ್ಕಾರ ಸರಿಯಾದ ರೀತಿಯಲ್ಲಿ ತನಿಖೆ ನಡೆಸಿಲ್ಲ ಎಂದು ಸರ್ಕಾರದ ವರ್ಚಸ್ಸಿಗೆ ಮಸಿ ಬಳಿಸುವ ಕೆಲಸವನ್ನು ಸಿನಿಮಾದ ಮೂಲಕ ನಿರ್ಮಾಪಕರಾದ ಸರಳ ಸರೋಗಿ ಮಾಡಿದ್ದಾರೆ ಎಂದು ಅರ್ಜಿದಾರರು ದೂರಿದ್ದಾರೆ.

Kannada Bar & Bench
kannada.barandbench.com