ನಿವೃತ್ತ ನ್ಯಾಯಾಧೀಶರ ಬಿಗಿಮುಷ್ಠಿಯಲ್ಲಿ ಭಾರತದ ಮಧ್ಯಸ್ಥಿಕೆ ಕ್ಷೇತ್ರ: ಉಪರಾಷ್ಟ್ರಪತಿ ಜಗದೀಪ್ ಧನಕರ್‌ ಆತಂಕ

"ಭೂಮಿಯ ಮೇಲೆ ಬೇರಾವುದೇ ದೇಶದಲ್ಲಿ, ಬೇರಾವುದೇ ವ್ಯವಸ್ಥೆಯಲ್ಲಿ, ನಿವೃತ್ತ ನ್ಯಾಯಾಧೀಶರು ಮಧ್ಯಸ್ಥಿಕೆ ವ್ಯವಸ್ಥೆಯ ಮೇಲೆ ಇಷ್ಟು ಬಿಗಿ ಹಿಡಿತ ಸಾಧಿಸಿಲ್ಲ" ಎಂದು ಉಪರಾಷ್ಟ್ರಪತಿ ಹೇಳಿದರು.
ವಿಪಿ ಜಗದೀಪ್ ಧನ್ಕರ್
ವಿಪಿ ಜಗದೀಪ್ ಧನ್ಕರ್
Published on

ಭಾರತದಲ್ಲಿ ಮಧ್ಯಸ್ಥಿಕೆ ಕ್ಷೇತ್ರದ ಮೇಲೆ ನಿವೃತ್ತ ನ್ಯಾಯಾಧೀಶರು ಬಿಗಿ ಹಿಡಿತ ಹೊಂದಿದ್ದಾರೆ ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್‌ ಹೇಳಿದ್ದಾರೆ.

ಅಂತರರಾಷ್ಟ್ರೀಯ ವಾಣಿಜ್ಯ ಮಂಡಳಿ (ಐಸಿಸಿ) ಶುಕ್ರವಾರ ಆಯೋಜಿಸಿದ್ದ ಆರನೇ ಭಾರತೀಯ ಮಧ್ಯಸ್ಥಿಕೆ ದಿನ ಉದ್ಘಾಟನಾ ಸಮಾರಂಭದಲ್ಲಿ ಭಾರತದಲ್ಲಿ ಮಧ್ಯಸ್ಥಿಕೆದಾರರ ನೇಮಕಾತಿಯಲ್ಲಿ ವೈವಿಧ್ಯತೆಯ ಕೊರತೆ ಬಗ್ಗೆ ಪ್ರತಿಕ್ರಿಯಿಸುತ್ತಾ ಅವರು ಈ ವಿಚಾರ ತಿಳಿಸಿದರು.

"ಸ್ನೇಹಿತರೇ, ನಾನು ನನ್ನ ಆಲೋಚನೆಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಈ ಗ್ರಹದಲ್ಲೆಲ್ಲೂ, ಬೇರಾವುದೇ ದೇಶದಲ್ಲೂ, ಬೇರೆ ಯಾವುದೇ ವ್ಯವಸ್ಥೆಯಲ್ಲೂ, ನಿವೃತ್ತ ನ್ಯಾಯಾಧೀಶರು ಮಧ್ಯಸ್ಥಿಕೆ ವ್ಯವಸ್ಥೆಯ ಮೇಲೆ ಇಷ್ಟು ಬಿಗಿಯಾದ ಹಿಡಿತ ಹೊಂದಿಲ್ಲ. ನಮ್ಮ ದೇಶದಲ್ಲಿ, ಇದು ದೊಡ್ಡ ಪ್ರಮಾಣದಲ್ಲಿದೆ" ಎಂದರು.

ಫೆಬ್ರವರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಇದೇ ರೀತಿಯ ಹೇಳಿಕೆ ನೀಡಿದ್ದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಅವರನ್ನು ಧನಕರ್‌ ಶ್ಲಾಘಿಸಿದರು.

"ತಮ್ಮದೇ ವರ್ಗದ ಬಗ್ಗೆ ವಸ್ತುನಿಷ್ಠವಾಗಿ ಮಾತನಾಡಲು ಸಾಕಷ್ಟು ಧೈರ್ಯ ಬೇಕು. ನಿವೃತ್ತ ನ್ಯಾಯಾಧೀಶರು ಈ ಕ್ಷೇತ್ರದಲ್ಲಿ ಪ್ರಾಬಲ್ಯ ಹೊಂದಿದ್ದಾರೆ ಎಂದು ಅವರು ಹೇಳಿದರು. ಇದಕ್ಕಾಗಿ ನಾನು ಅವರಿಗೆ ನಮಸ್ಕರಿಸುತ್ತೇನೆ. ಇದರಿಂದ ಉಳಿದ ಅರ್ಹ ಅಭ್ಯರ್ಥಿಗಳನ್ನು ಕಡೆಗಣಿಸಲಾಗುತ್ತದೆ... ಇದು ಮಧ್ಯಸ್ಥಿಕೆ ಕ್ಷೇತ್ರದಲ್ಲಿ ಹಳೆಯ ತಲೆಗಳ ಮನಸ್ಥಿತಿಯನ್ನು ಬಿಂಬಿಸುತ್ತದೆ ಎಂದು ಅವರು ಸೂಚ್ಯವಾಗಿ ಹೇಳಿದ್ದರು. ಸಿಜೆಐ ಅವರ ಹೇಳಿಕೆ ದೇಶದಲ್ಲಿ ಮಧ್ಯಸ್ಥಿಕೆ ಪ್ರಕ್ರಿಯೆಯನ್ನು ಬಲಪಡಿಸುವಲ್ಲಿ ಮಹತ್ತರ ಹೆಜ್ಜೆಯಾಗುತ್ತದೆ" ಎಂಬುದಾಗಿ ತಿಳಿಸಿದರು.

ಅಂತರರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಾಲಯದ ಅಧ್ಯಕ್ಷೆ ಕ್ಲೌಡಿಯಾ ಸಾಲೋಮನ್ ಅವರನ್ನು ಸ್ವಾಗತಿಸಿದ ಧನಕರ್‌ ಅವರು, ವಿಶ್ವದಲ್ಲಿ ಮಹಿಳೆಯರ ಉಗಮ ಕಷ್ಟಕರವಾಗಿದೆ ಎಂದು ಅಭಿಪ್ರಾಯಪಟ್ಟರು. 

Kannada Bar & Bench
kannada.barandbench.com