
ಮೊಮ್ಮಗನನ್ನು ತನ್ನ ಸುಪರ್ದಿಗೆ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಮೃತ ಐಟಿ ಉದ್ಯೋಗಿ ಅತುಲ್ ಸುಭಾಷ್ ಅವರ ತಾಯಿಯ ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.
ಸೊಸೆ ನಿಕಿತಾ ಸಿಂಘಾನಿಯಾ ಬಳಿ ಇರುವ ಮೊಮ್ಮಗನನ್ನು ವಶಕ್ಕೆ ನೀಡುವಂತೆ ಕೋರಿ ಅತುಲ್ ತಾಯಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಬಿ ವಿ ನಾಗರತ್ನ ಮತ್ತು ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಅವರನ್ನೊಳಗೊಂಡ ಪೀಠವು ವಜಾಗೊಳಿಸಿತು. ಇದಕ್ಕೂ ಮೊದಲು ಪೀಠವು ಮಗುವಿನೊಂದಿಗೆ ಸಂವಾದ ನಡೆಸಿತು. ಆನಂತರ ಮಗುವಿಗೆ ತನ್ನ ತಾಯಿಯೊಂದಿಗೆ ಇರಲು ಅವಕಾಶ ಕಲ್ಪಿಸಿತು.
ಮಗು ಎಲ್ಲಿದೆ ಎಂಬುದನ್ನು ಸೊಸೆ ಬಹಿರಂಗಪಡಿಸುತ್ತಿಲ್ಲ ಎಂದು ಆರೋಪಿಸಿ ಮಗುವಿನ ಅಜ್ಜಿ ನ್ಯಾಯಾಲಯದ ಮೊರೆ ಹೋಗಿದ್ದರು. ಡಿಸೆಂಬರ್ 20 ರಂದು ನ್ಯಾಯಾಲಯವು ಉತ್ತರ ಪ್ರದೇಶ, ಹರಿಯಾಣ ಮತ್ತು ಕರ್ನಾಟಕ ರಾಜ್ಯಗಳ ಪ್ರತಿಕ್ರಿಯೆಯನ್ನು ಪ್ರಕರಣದಲ್ಲಿ ಕೇಳಿತ್ತು. ಅದೇ ವೇಳೆ, "ಅಪ್ರಾಪ್ತ ಮಗುವಿನ ಸ್ಥಳವನ್ನು ಪತ್ತೆಹಚ್ಚಲು" ರಾಜ್ಯಗಳಿಗೆ ನಿರ್ದೇಶಿಸಿದ್ದನ್ನು ಇಲ್ಲಿ ನೆನೆಯಬಹುದು.
ಆತ್ಮಹತ್ಯೆ ಮಾಡಿಕೊಂಡಿದ್ದ ಮೃತ ಸುಭಾಷ್ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರೆ, ಆತನಿಂದ ದೂರವಾಗಿದ್ದ ನಿಕಿತಾ ಹರಿಯಾಣದ ಗುರುಗ್ರಾಮದಲ್ಲಿ ನೆಲೆಸಿದ್ದರು. ಆಕೆಯ ತಾಯಿ ಮತ್ತು ಸಹೋದರ ಉತ್ತರ ಪ್ರದೇಶದ ನಿವಾಸಿಗಳಾಗಿದ್ದರು.
ಹಿನ್ನೆಲೆ: ಸಾಫ್ಟ್‌ವೇರ್ ಇಂಜಿನಿಯರ್ ಸುಭಾಷ್ (34) ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವೇಳೆ ಅವರು ವಿವರವಾದ ಮರಣಪತ್ರ ಹಾಗೂ ವಿಡಿಯೋವನ್ನು ಬಿಟ್ಟು ಹೋಗಿದ್ದರು. ಅದರಲ್ಲಿ ವಿಚ್ಛೇದಿತ ಪತ್ನಿ ನಿಕಿತಾ ಸಿಂಘಾನಿಯಾ ಮತ್ತು ಅವರ ಕುಟುಂಬವು ತನಗೆ ಕಿರುಕುಳ ನೀಡುತ್ತಿರುವ ಬಗ್ಗೆ ಹಾಗೂ ತನ್ನ ವಿರುದ್ಧ ಸುಳ್ಳು ಪ್ರಕರಣಗಳನ್ನು ಹೂಡಿರುವ ಬಗ್ಗೆ ದಾಖಲಿಸಿದ್ದರು.
ಸುಭಾಷ್ ಮಾಡಿದ್ದ ವಿಡಿಯೋ ಹಾಗೂ ಬರೆದಿಟ್ಟಿದ್ದ ಮರಣಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.
ಪ್ರಕರಣದ ಬಗ್ಗೆ ಬೆಂಗಳೂರಿನ ಮಾರತ್‌ಹಳ್ಳಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 108 (ಆತ್ಮಹತ್ಯೆಗೆ ಪ್ರಚೋದನೆ), 3(5) (ಸಮಾನ ಉದ್ದೇಶದಿಂದ ಕ್ರಿಮಿನಲ್ ಕೃತ್ಯ ಎಸಗುವುದು) ಅಡಿ ನಿಖಿತಾ ಮತ್ತು ಆಕೆಯ ಕುಟುಂಬದ ಮೂವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು.
ತದನಂತರ ನಿಕಿತಾ, ಆಕೆಯ ತಾಯಿ ಮತ್ತು ಸಹೋದರನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದರು. ಮುಂದೆ ಅವರಿಗೆ ಬೆಂಗಳೂರಿನ ಮೆಯೋ ಹಾಲ್‌ನಲ್ಲಿರುವ ಸತ್ರ ನ್ಯಾಯಾಲಯವು ಜಾಮೀನು ಮಂಜೂರು ಮಾಡಿತು.