ಅಕ್ರಮ ಹಣ ವರ್ಗಾವಣೆ ಪ್ರಕರಣವೊಂದರಲ್ಲಿ ವಿಚಾರಣಾ ನ್ಯಾಯಾಲಯವು ಆರೋಪಿಗೆ ಜಾಮೀನು ಮಂಜೂರು ಮಾಡಿದ್ದ ಆದೇಶವನ್ನು ಒಂದು ವರ್ಷ ಕಾಲ ತಡೆ ಹಿಡಿದಿರುವ ದೆಹಲಿ ಹೈಕೋರ್ಟ್‌ನ ನಡೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ತೀವ್ರವಾಗಿ ಆಕ್ಷೇಪಿಸಿತು [ಪರ್ವಿಂದರ್ ಸಿಂಗ್ ಖುರಾನಾ ವರ್ಸಸ್ ಜಾರಿ ನಿರ್ದೇಶನಾಲಯ].
ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಸಂದೀಪ್ ಮೆಹ್ತಾ ಅವರ ರಜಾಕಾಲೀನ ಪೀಠವು ಆರೋಪಿ ಪರ್ವಿಂದರ್ ಸಿಂಗ್ ಖುರಾನಾಗೆ ನೀಡಲಾದ ಶಾಸನಬದ್ಧ ಜಾಮೀನನ್ನು ಪುನಃಸ್ಥಾಪಿಸಲು ಮುಂದಾಯಿತು. "ಇದು ಸ್ವಾತಂತ್ರ್ಯದ ವಿಚಾರ; ಒಂದು ವರ್ಷಕ್ಕಿಂತ ಹೆಚ್ಚು ಕಾಲ ಜಾಮೀನು ಹೇಗೆ ತಡೆಹಿಡಿಯಬಹುದು," ಎಂದು ನ್ಯಾಯಮೂರ್ತಿ ಮೆಹ್ತಾ ಇಂದು ವಿಚಾರಣೆಯ ಸಂದರ್ಭದಲ್ಲಿ ದೆಹಲಿ ಹೈಕೋರ್ಟ್ ನಡೆಯನ್ನು ಟೀಕಿಸಿದರು.
ಅಕ್ರಮ ಹಣ ವರ್ಗಾವಣೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ನ ಏಕಸದಸ್ಯ ಪೀಠವು 2023ರ ಜೂನ್‌ನಲ್ಲಿ ಮೊದಲು ಜಾಮೀನಿಗೆ ತಡೆಯಾಜ್ಞೆ ನೀಡಿತ್ತು. ತದನಂತರ 2024ರ ಮೇನಲ್ಲಿ ಪ್ರಕರಣವು ವಿಚಾರಣೆ ಬಂದಾಗ ಅದನ್ನು ಜುಲೈಗೆ ಮುಂದೂಡಲಾಗಿತ್ತು.
ಕ್ರಿಪ್ಟೋಕರೆನ್ಸಿ ಹಗರಣಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದ್ದು ಕಳೆದ ವರ್ಷ ಜೂನ್ 17 ರಂದು ರೌಸ್ ಅವೆನ್ಯೂ ನ್ಯಾಯಾಲಯ ಆರೋಪಿ ಖುರಾನಾಗೆ ಜಾಮೀನು ನೀಡಿತ್ತು. ಇದರ ವಿರುದ್ಧ ಜಾರಿ ನಿರ್ದೇಶನಾಲಯ (ಇ ಡಿ) ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ್ದ ನ್ಯಾ. ಅಮಿತ್ ಮಹಾಜನ್ ಜಾಮೀನು ಅದೇಶಕ್ಕೆ ತಡೆ ನೀಡಿದ್ದರು. ಈ ವರ್ಷ ಮೇ 22 ರಂದು, ನ್ಯಾಯಮೂರ್ತಿ ಸ್ವರಣಾ ಕಾಂತ ಶರ್ಮಾ ಅವರು ಜುಲೈ 9 ರಂದು ಮುಂದಿನ ವಿಚಾರಣೆಗೆ ಕಾಯ್ದಿರಿಸಿದ್ದರು.
ಮಾರ್ಚ್ 18 ರಂದು ನ್ಯಾಯಮೂರ್ತಿ ಮಹಾಜನ್ ಪ್ರಕರಣದಿಂದ ಹಿಂದೆ ಸರಿದ ನಂತರ ನಡೆದ ಈ ಬೆಳವಣಿಗೆ ಗಮನಾರ್ಹವಾಗಿದೆ.
ವಕೀಲ ಮಧುಸ್ಮಿತಾ ಬೋರಾ ಮೂಲಕ ಮೇಲ್ಮನವಿ ಸಲ್ಲಿಕೆಯಾಗಿದೆ. ಇ ಡಿ ಪರ ವಕೀಲ ಜೊಹೆಬ್ ಹೊಸೈನ್ ವಾದ ಮಂಡಿಸಿದ್ದರು.