ಮುಖಗವಸು ಧರಿಸದ ಕಾರಣಕ್ಕೆ ಎಫ್ಐಆರ್: ಪಾಸ್‌ಪೋರ್ಟ್‌ ಪಡೆಯಲಾಗದ ವ್ಯಕ್ತಿ ಪರ ಮದ್ರಾಸ್ ಹೈಕೋರ್ಟ್ ಆದೇಶ

ಎಫ್ಐಆರ್ ಖುದ್ದು ಅಂತಿಮ ವರದಿಯಾಗಿ ಬದಲಾಗದ ಹೊರತು ಅದನ್ನು ಕ್ರಿಮಿನಲ್ ಮೊಕದ್ದಮೆ ಎಂದು ಭಾವಿಸಲಾಗದು ಎಂಬುದಾಗಿ ಪೀಠ ತಿಳಿಸಿದೆ.
ಮುಖಗವಸು ಧರಿಸದ ಕಾರಣಕ್ಕೆ ಎಫ್ಐಆರ್: ಪಾಸ್‌ಪೋರ್ಟ್‌ ಪಡೆಯಲಾಗದ ವ್ಯಕ್ತಿ ಪರ ಮದ್ರಾಸ್ ಹೈಕೋರ್ಟ್ ಆದೇಶ
Published on

ಕೋವಿಡ್‌ ಮಾರ್ಗಸೂಚಿ ಅನ್ವಯ ಮುಖಗವಸು ಧರಿಸದ ಕಾರಣಕ್ಕೆ ಎಫ್‌ಐಆರ್‌ ದಾಖಲಾಗಿ ಅದರಿಂದ ಪಾಸ್‌ಪೋರ್ಟ್‌ ಪಡೆಯಲಾಗದೆ ತೊಂದರೆ ಅನುಭವಿಸುತ್ತಿದ್ದ ವ್ಯಕ್ತಿಯೊಬ್ಬರ ನೆರವಿಗೆ ಮದ್ರಾಸ್‌ ಹೈಕೋರ್ಟ್‌ ಧಾವಿಸಿದೆ. ಪಾಸ್‌ಪೋರ್ಟ್‌ ಒದಗಿಸುವಂತೆ ಅದು ಮಧುರೈನ ಪ್ರಾದೇಶಿಕ ಪಾಸ್‌ಪೋರ್ಟ್‌ ಅಧಿಕಾರಿಗಳಿಗೆ ನಿರ್ದೇಶಿಸಿದೆ.

ಪ್ರಸ್ತುತ ಪ್ರಕರಣದಲ್ಲಿ ದಾಖಲಿಸಲಾಗಿರುವ ಎಫ್‌ಐಆರ್‌ ಅನ್ನು ಕ್ರಿಮಿನಲ್‌ ಮೊಕದ್ದಮೆ ಎಂದು ಪರಿಗಣಿಸಲಾಗದು ಎಂದು ನ್ಯಾಯಾಲಯ ಹೇಳಿದೆ. ಇತರೆ ಎಲ್ಲಾ ಅವಶ್ಯಕತೆಗಳನ್ನು ಪೂರೈಸಿದರೆ ಅರ್ಜಿದಾರರಿಗೆ ಪಾಸ್‌ಪೋರ್ಟ್‌ ನೀಡುವಂತೆ ಅದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದೆ.

“ರೋಗ ವ್ಯಾಪಿಸಿರುವಾಗ ದ್ವಿಚಕ್ರ ವಾಹನದಲ್ಲಿ ಪಯಣಿಸುತ್ತಿದ್ದ ವೇಳೆ ಮುಖಗವಸು ಧರಿಸಿಲ್ಲ ಎಂಬ ಕಾರಣಕ್ಕೆ ಮಾತ್ರ ಅರ್ಜಿದಾರರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ ಎಂಬುದು ದಾಖಲೆಗಳಿಂದ ತಿಳಿದುಬಂದಿದೆ. ಆದರೆ ಎಫ್‌ಐಆರ್‌ ಖುದ್ದು ಅಂತಿಮ ವರದಿಯಾಗಿ ಬದಲಾಗದ ಹೊರತು ಅದನ್ನು ಕ್ರಿಮಿನಲ್‌ ಮೊಕದ್ದಮೆ ಎಂದು ಭಾವಿಸಲಾಗದು” ಎಂಬುದಾಗಿ ನ್ಯಾಯಮೂರ್ತಿ ಎನ್‌ ಆನಂದ್‌ ವೆಂಕಟೇಶ್‌ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.

Also Read
ಪಾಸ್‌ಪೋರ್ಟ್‌ ಕೋರಿ ಮೆಹಬೂಬಾ ಮುಫ್ತಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್

ಅರ್ಜಿದಾರ‌ ವಿ ನಾಗಲಿಂಗಂ ಅವರು 2021ರ ಮಾರ್ಚ್ 29 ರಂದು ಪಾಸ್‌ಪೋರ್ಟ್‌ಗಾಗಿ ಮನವಿ ಸಲ್ಲಿಸಿದ್ದರು. ಆದರೆ ಮಧುರೈ ಪ್ರಾದೇಶಿಕ ಪಾಸ್‌ಪೋರ್ಟ್‌ ಕಚೇರಿ ತಮ್ಮ ವಿರುದ್ಧ ಎಫ್‌ಐಆರ್‌ ಬಾಕಿ ಇರುವುದಾಗಿ ಸೂಚಿಸಿ ಕ್ರಿಮಿನಲ್‌ ಪ್ರಕರಣದ ಬಾಕಿ ಇರುವ ಬಗ್ಗೆ ಏಕೆ ಬಹಿರಂಗಪಡಿಸಿಲ್ಲ ಎಂದು ಅರ್ಜಿದಾರರನ್ನು ಪ್ರಶ್ನಿಸಿತ್ತು. ಇದಕ್ಕೆ ಅರ್ಜಿದಾರರು ಸೂಕ್ತ ಉತ್ತರ ನೀಡಿದ್ದರೂ ಕಚೇರಿ ಸ್ಪಂದಿಸಿರಲಿಲ್ಲ. ಹೀಗಾಗಿ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಅರ್ಜಿದಾರರು ಇತರೆ ಅವಶ್ಯಕತೆಗಳನ್ನು ಪೂರೈಸಿದರೆ ನ್ಯಾಯಾಲಯದ ಆದೇಶದ ಪ್ರತಿ ದೊರೆತ 4 ವಾರಗಳಲ್ಲಿ ಪಾಸ್‌ಪೋರ್ಟ್‌ ನೀಡಿಕೆ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ನ್ಯಾಯಾಲಯ ಸೂಚಿಸಿತು. ಅಲ್ಲದೆ ನ್ಯಾಯಾಲಯದ ಆದೇಶ ಲಗತ್ತಿಸಿ ಕಚೇರಿಗೆ ಹೊಸದಾಗಿ ಅರ್ಜಿ ಸಲ್ಲಿಸುವಂತೆ ಅರ್ಜಿದಾರರಿಗೆ ನಿರ್ದೇಶಿಸಿತು. ಅರ್ಜಿದಾರರ ಪರವಾಗಿ ವಕೀಲ ಟಿ ಬಾಲಾಜಿ ಹಾಗೂ ಪ್ರಾದೇಶಿಕ ಪಾಸ್‌ಪೊರ್ಟ್‌ ಕಚೇರಿ ಪರವಾಗಿ ನ್ಯಾಯವಾದಿ ವಿ ಬಿ ಸುಂದರೇಶ್ವರ ಹಾಜರಿದ್ದರು.

Kannada Bar & Bench
kannada.barandbench.com