“ನಾವು ಭಾರತದ ಸುಪ್ರೀಂ ಕೋರ್ಟ್‌, ನಮ್ಮ ಕೆಲಸ ನಾವು ಮಾಡುತ್ತೇವೆ;" ಕೃಷಿ ಕಾಯಿದೆಗಳ ತಡೆಗೆ ಒಲವು ತೋರಿದ ಸುಪ್ರೀಂ

ದೆಹಲಿ ಗಡಿಗಳಲ್ಲಿನ ರೈತರ ಪ್ರತಿಭಟನೆ ವಿಚಾರಣೆ ವೇಳೆ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ, “ನೀವೇನು ಸಮಸ್ಯೆಗೆ ಪರಿಹಾರವೋ ಅಥವಾ ಸಮಸ್ಯೆಯ ಭಾಗವೋ?” ಎಂದು ಕಿಡಿಕಾರಿದರು.
Justice AS Bopanna, CJI Bobde and Justice V Ramasubramanian
Justice AS Bopanna, CJI Bobde and Justice V Ramasubramanian

ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ಬಿಕ್ಕಟ್ಟಿನ ಉಲ್ಬಣಕ್ಕೆ ಕಾರಣವಾಗಿರುವ ನೂತನ ಕೃಷಿ ಕಾಯಿದೆಗಳನ್ನು ಸೂಕ್ತ ಪರಿಹಾರ ದೊರೆಯುವವರೆಗೆ ತಡೆ ಹಿಡಿಯುವ ಇಂಗಿತವನ್ನು ಸುಪ್ರೀಂ ಕೋರ್ಟ್‌ ಸೋಮವಾರ ವ್ಯಕ್ತಪಡಿಸಿದೆ.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಅವರ ನೇತೃತ್ವದ ಎ ಎಸ್‌ ಬೋಪಣ್ಣ, ವಿ ರಾಮಸುಬ್ರಮಣಿಯಂ ನೇತೃತ್ವದ ಪೀಠವು ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ತೆರವುಗೊಳಿಸುವಂತೆ ಕೋರಿರುವ ಅರ್ಜಿಗಳ ವಿಚಾರಣೆಯನ್ನು ನಡೆಸಿದ ವೇಳೆ ಈ ಇಂಗಿತ ವ್ಯಕ್ತಪಡಿಸಿತು. ಕೆಂದ್ರ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಸಿಜೆಐ ನೇತೃತ್ವದ ಪೀಠವು ಸಮಸ್ಯೆಯನ್ನು ಪರಿಹರಿಸಲು ಕೇಂದ್ರವು ವಿಫಲವಾಗಿರುವ ಬಗ್ಗೆ ಗಂಭೀರ ಅಸಮಾಧಾನ ವ್ಯಕ್ತಪಡಿಸಿತು.

“ನಾವು ಸಮಿತಿಯೊಂದನ್ನು ರಚಿಸುವ ಬಗ್ಗೆ ಪ್ರಸ್ತಾಪಿಸುತ್ತೇವೆ. ಸರ್ಕಾರವು (ಕಾಯಿದೆಗಳ ತಡೆಗೆ) ಮುಂದಾಗದೆ ಹೋದಲ್ಲಿ, ನಾವು ಕೃಷಿ ಕಾಯಿದೆಗಳ ಅನುಷ್ಠಾನಕ್ಕೆ ತಡೆ ನೀಡುತ್ತೇವೆ. ಕೆಂದ್ರ ಸರ್ಕಾರವು ಪ್ರಕರಣವನ್ನು ನಿಭಾಯಿಸುತ್ತಿರುವ ರೀತಿಯ ಬಗ್ಗೆ ನಮ್ಮ ತೀವ್ರ ನಿರಾಸೆಯಾಗಿದೆ. ನೀವು ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗದೆ ಇರುವ ಕಾರಣಕ್ಕೆ ನಾವು ಈ ಕ್ರಮಕ್ಕೆ ಮುಂದಾಗಬೇಕಿದೆ. ಭಾರತ ಸರ್ಕಾರವು ಜವಾಬ್ದಾರಿಯನ್ನು ಹೊರಬೇಕಿದೆ. ಕಾಯಿದೆಗಳು ಪ್ರತಿಭಟನೆಗೆ ಕಾರಣವಾಗಿದ್ದು, ನೀವು ಈಗ ಪ್ರತಿಭಟನೆಯನ್ನು ಪರಿಹರಿಸಬೇಕಿದೆ,” ಎಂದು ಸಿಜೆಐ ನೇತೃತ್ವದ ಪೀಠವು ಖಚಿತವಾಗಿ ಹೇಳಿತು.

ಪ್ರಕರಣದ ಸಂಬಂಧ ನ್ಯಾಯಾಲಯವು ತಕ್ಷಣಕ್ಕೆ ಆದೇಶವನ್ನು ನೀಡದೆ ಹೋದರೂ, ಇಂದು ಅಥವಾ ನಾಳೆ ಭಾಗಶಃ ಆದೇಶವನ್ನು ನೀಡುವ ಬಗ್ಗೆ ಸೂಚನೆ ನೀಡಿತು. “ಭಾಗಶಃ ಆದೇಶವನ್ನು ಇಂದು ಮತ್ತು ನಾಳೆ ನಾವು ನೀಡಬಹುದಾಗಿದೆ,” ಎಂದು ಸಿಜೆಐ ಹೇಳಿದರು. ವಿಚಾರಣೆಯ ಒಂದು ಹಂತದಲ್ಲಿ ಸಿಜೆಐ ಅವರು, “ನಾವು ಭಾರತದ ಸುಪ್ರೀಂ ಕೋರ್ಟ್‌ ಆಗಿದ್ದು, ನಮ್ಮ ಕೆಲಸವನ್ನು ನಾವು ಮಾಡುತ್ತೇವೆ,” ಎಂದರು.

"ಸಮಸ್ಯೆಗೆ ಸೌಹಾರ್ದಯುತ ಪರಿಹಾರ ಕಂಡುಹಿಡಿಯಬಹುದು ನಮ್ಮ ಉದ್ದೇಶವಾಗಿದೆ. ಆ ಕಾರಣಕ್ಕಾಗಿಯೇ ಕೃಷಿ ಕಾಯಿದೆಗಳನ್ನು ತಡೆ ಹಿಡಿಯುವಂತೆ ನಿಮಗೆ ಹೇಳಿದೆವು. ಸಂದಾನ ನಡೆಸಲು ನಿಮಗೆ ಸಮಯಾವಕಾಶದ ಅಗತ್ಯವಿದೆ. ಕಾಯಿದೆಗಳನ್ನು ಅನುಷ್ಠಾನಗೊಳಿಸಲು ಮುಂದಾಗುವುದಿಲ್ಲ ಎಂದು ತೋರುವ ಜವಾಬ್ದಾರಿ ನಿಮ್ಮದಾಗಿದ್ದು, ಹಾಗೆ ಮಾಡಿದರೆ ನಾವು ಭಾರತೀಯ ಕೃಷಿ ಅನುಸಂಧಾನ ಪರಿಷತ್ತನ್ನು ಒಳಗೊಂಡ ಸಮಿತಿಯೊಂದನ್ನು ಸಮಸ್ಯೆಯನ್ನು ಪರಿಶೀಲಿಸಲು ರಚಿಸಬಹುದು. ಅಲ್ಲಿಯವರೆಗೆ, ಕಾಯಿದೆಗಳನ್ನು ತಡೆಹಿಡಿಯಬಹುದು. ಕಾಯಿದೆಗಳನ್ನು ಮುಂದುವರೆಸುವ ಬಗ್ಗೆ ನೀವೇಕೆ ಹಠ ಹಿಡಿದಿದ್ದೀರಿ,” ಎಂದು ಸಿಜೆಐ ಬೊಬ್ಡೆ ಪ್ರಶ್ನಿಸಿದರು.

ಕಾನೂನನ್ನು ತಡೆ ಹಿಡಿಯುವುದು ಅಸಮರ್ಥನೀಯ ಎನ್ನುವ ನಿಲುವನ್ನು ವ್ಯಕ್ತಪಡಿಸಿದ ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ಅವರು, “ಶಾಸಕಾಂಗದ ವ್ಯಾಪ್ತಿಗೆ ಹೊರತಾಗದೆ ಅಥವಾ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸದ ಹೊರತು ಕಾನೂನುಗಳನ್ನು ತಡೆಯಲಾಗದು. ಅಲ್ಲದೆ, ಈ ಬಗ್ಗೆ ಯಾವುದೇ ಅರ್ಜಿದಾರರು ವಾದಿಸಿಲ್ಲ. ಈ ಕಾಯಿದೆಗಳು ರೈತರ ಪರವಾಗಿ, ಅನುಕೂಲಕ್ಕಾಗಿ ಇವೆ,” ಎಂದರು. ಮುಂದುವರೆದು, “ಕಾಯಿದೆಗಳ ವಿರುದ್ಧ ದಕ್ಷಿಣ ಭಾರತದ ರೈತರು ಪ್ರತಿಭಟನೆ ನಡೆಸಿಲ್ಲ ಏಕೆ? ಏಕೆಂದರೆ, ಅವು ರೈತರ ಪರವಾಗಿವೆ. ಈ ಕಾರಣಕ್ಕಾಗಿಯೇ ರೈತರು ಕಾಯಿದೆಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂದು ನಾವು ಬಯಸುತ್ತೇವೆ,” ಎಂದು ವಾದಿಸಿದರು. ಕಾಯಿದೆಗಳನ್ನು ತಡೆಹಿಡಿಯಲು ಮುಂದಾಗುವುದು ತೀಕ್ಷ್ಣ ಕ್ರಮ ಎಂದರು.

ನಾವೇಕೆ ಕಾಯಿದೆಗಳನ್ನು ತಡೆಹಿಡಿಯುವ ಬಗ್ಗೆ ಧಾವಂತ ತೋರಿಸಬಾರದು ನೀವೇ ಹೇಳಿ? ಅಟಾರ್ನಿಯವರೇ, ದಯವಿಟ್ಟು ನಮಗೆ ತಾಳ್ಮೆಯ ಬಗ್ಗೆ ಪ್ರವಚನ ನೀಡಬೇಡಿ
ಸಿಜೆಐ ಎಸ್ ಎ ಬೊಬ್ಡೆ

ಈ ಹಂತದಲ್ಲಿ ಮುಖ್ಯ ನ್ಯಾಯಮೂರ್ತಿಯವರು, “ನಾವೇಕೆ ಕಾಯಿದೆಗಳನ್ನು ತಡೆಹಿಡಿಯುವ ಬಗ್ಗೆ ಧಾವಂತ ತೋರಿಸಬಾರದು ನೀವೇ ಹೇಳಿ? ಅಟಾರ್ನಿಯವರೇ, ದಯವಿಟ್ಟು ನಮಗೆ ತಾಳ್ಮೆಯ ಬಗ್ಗೆ ಪ್ರವಚನ ನೀಡಬೇಡಿ,” ಎನ್ನುವ ಮೂಲಕ ಸಮಸ್ಯೆಯನ್ನು ಪರಿಹರಿಸುವಲ್ಲಿ ಸುದೀರ್ಘ ವಿಳಂಬವಾಗಿರುವ, ಸಂಧಾನ ವಿಫಲವಾಗಿರುವುದರೆಡೆಗೆ ಬೆರಳು ತೋರಿದರು.

ಇದಕ್ಕೂ ಮುನ್ನ ಆರಂಭದಲ್ಲಿ ಸಿಜೆಐ ಅವರು, “ನೀವೇನು ಸಮಸ್ಯೆಗೆ ಪರಿಹಾರವೋ ಅಥವಾ ಸಮಸ್ಯೆಯ ಭಾಗವೋ?” ಎಂದು ಕಿಡಿಕಾರಿದ್ದರು. “ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಚಳಿಯಲ್ಲಿ ಥರಗುಟ್ಟುತ್ತಿದ್ದಾರೆ. ಅವರ ಊಟೋಪಚಾರವನ್ನು ಯಾರು ನೋಡಿಕೊಳ್ಳುತ್ತಿದ್ದಾರೆ? ವೃದ್ಧರು, ಮಹಿಳೆಯರು ಬಯಲಿನಲ್ಲಿದ್ದಾರೆ. ರೈತರ ಪ್ರತಿಭಟನೆಯಲ್ಲಿ ಇವರೆಲ್ಲಾ ಏಕಿದ್ದಾರೆ?” ಎಂದು ಸಂಧಾನ ಮಾತುಕತೆಗಲು ವಿಫಲವಾಗಿರುವುದರ ಪರಿಣಾಮಗಳ ಬಗ್ಗೆ ತಮ್ಮ ಅಭಿಪ್ರಾಯ ದಾಖಲಿಸಿದ್ದರು.

Related Stories

No stories found.
Kannada Bar & Bench
kannada.barandbench.com