[ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ] ಸಮೀಕ್ಷೆಗೂ ಮುನ್ನ ಹುಲಿ ಸಂರಕ್ಷಣಾ ಪ್ರಾಧಿಕಾರದ ಅನುಮತಿಗೆ ಹೈಕೋರ್ಟ್ ನಿರ್ದೇಶನ

ರಾಷ್ಟ್ರೀಯ ವನ್ಯಜೀವಿ ಮಂಡಳಿಯಷ್ಟೇ ಮಾತ್ರ ನಿರ್ಧಾರ ಕೈಗೊಳ್ಳುವುದಲ್ಲ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವೂ ನಿರ್ಧಾರ ಮಾಡಬೇಕಿದೆ. ಆದರೆ, ಅದನ್ನು ಮಾಡಲಾಗಿಲ್ಲ ಎಂದ ಹಿರಿಯ ವಕೀಲೆ ಅನುಚೆಂಗಪ್ಪ.
Karnataka HC and Train
Karnataka HC and Train
Published on

ಹುಬ್ಬಳ್ಳಿ - ಅಂಕೋಲಾ ನಡುವಿನ ರೈಲು ಮಾರ್ಗದಿಂದ ವನ್ಯಜೀವಿಗಳ ಮೇಲೆ ದುಷ್ಪರಿಣಾಮ ಉಂಟಾಗುವುದರ ಕುರಿತು ಸಮೀಕ್ಷೆ ಹಾಗೂ ಮೌಲ್ಯಮಾಪನಕ್ಕೂ ಮುನ್ನ ಅರಣ್ಯ ಸಂರಕ್ಷಣಾ ಕಾಯಿದೆ ಅಡಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದಿಂದ ಅಗತ್ಯ ಅನುಮತಿ ಪಡೆಯುವಂತೆ ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಬುಧವಾರ ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದೆ.

14ನೇ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ 168 ಕಿ.ಮೀ. ಉದ್ದದ ಹುಬ್ಬಳ್ಳಿ - ಅಂಕೋಲಾ ನೂತನ ಬ್ರಾಡ್‌ಗೇಜ್‌ ರೈಲು ಮಾರ್ಗ ನಿರ್ಮಿಸಲು ವಿವೇಚನಾರಹಿತವಾಗಿ ಒಪ್ಪಿಗೆ ನೀಡಿ ಶಿಫಾರಸ್ಸುಗಳನ್ನು ಮಾಡಿರುವುದನ್ನು ಪ್ರಶ್ನಿಸಿ ಪ್ರಾಜೆಕ್ಟ್‌ ವೃಕ್ಷ ಒಕ್ಕೂಟ ಸೇರಿದಂತೆ ಹಲವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

2021ರ ಡಿಸೆಂಬರ್‌ 1ರ ನ್ಯಾಯಾಲಯದ ಆದೇಶಕ್ಕೆ ಸಂಬಂಧಿಸಿದಂತೆ ಸೂಕ್ತ ನಿರ್ಧಾರ ಕೈಗೊಳ್ಳುವುದಕ್ಕೂ ಮುನ್ನ ರಾಷ್ಟ್ರೀಯ ವನ್ಯಜೀವಿ ಮಂಡಳಿಯು ವನ್ಯಜೀವಿಗಳ ಮೇಲೆ ದುಷ್ಪರಿಣಾಮ ಉಂಟಾಗುವುದರ ಕುರಿತು ಸಮೀಕ್ಷೆ ಹಾಗೂ ವಿಶ್ಲೇಷಣೆ ನಡೆಸಲು ಅರಣ್ಯ ಸಂರಕ್ಷಣಾ ಕಾಯಿದೆ ಅಡಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದಿಂದ ಅಗತ್ಯ ಅನುಮತಿ ಪಡೆಯಬೇಕು. ನಿರ್ಧಾರ ಕೈಗೊಳ್ಳುವುದಕ್ಕೆ ಸಂಬಂಧಿಸಿದಂತೆ 2020ರ ಜೂನ್‌ 18ರ ಆದೇಶ ಪ್ರತಿವಾದಿಗಳಿಗೆ ಸಮಸ್ಯೆ ಉಂಟು ಮಾಡುವುದಿಲ್ಲ. ಈ ಕುರಿತು ಕೈಗೊಳ್ಳುವ ನಿರ್ಧಾರವನ್ನು ಮುಂದಿನ ವಿಚಾರಣೆಯಲ್ಲಿ ನ್ಯಾಯಾಲಯದ ಮುಂದಿಡಬೇಕು” ಎಂದು ಆದೇಶದಲ್ಲಿ ಹೇಳಿದೆ.

ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಂ ಬಿ ನರಗುಂದ್‌ ಅವರು “2020ರ ಜೂನ್‌ 18ರ ಆದೇಶ ಹಿನ್ನೆಲೆಯಲ್ಲಿ ಇಡೀ ಯೋಜನೆ ಬಾಕಿ ಉಳಿದಿದೆ. ಹೀಗಾಗಿ, 2021ರ ಡಿಸೆಂಬರ್‌ 1ರ ಆದೇಶದ ಕುರಿತು ಯಾವುದೇ ತೆರನಾದ ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತಿಲ್ಲ” ಎಂದರು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲೆ ಅನು ಚೆಂಗಪ್ಪ ಅವರು “ರಾಷ್ಟ್ರೀಯ ವನ್ಯಜೀವಿ ಮಂಡಳಿಯಷ್ಟೇ ಮಾತ್ರ ನಿರ್ಧಾರ ಕೈಗೊಳ್ಳುವುದಲ್ಲ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವೂ ನಿರ್ಧಾರ ಮಾಡಬೇಕಿದ್ದು, ಅರಣ್ಯ ಸಂರಕ್ಷಣಾ ಕಾಯಿದೆ ಅಡಿ ಅನುಮತಿ ಪಡೆದು ಯೋಜನೆ ಜಾರಿ ಮಾಡಬೇಕು. ಆದರೆ, ಅದನ್ನು ಮಾಡಲಾಗಿಲ್ಲ. ಹೀಗಾಗಿ, ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ನ್ಯಾಯಾಲಯ ನಿರ್ದೇಶನಗಳನ್ನು ನೀಡಿದೆ” ಎಂದರು.

ಕಳೆದ ವಿಚಾರಣೆಯಲ್ಲಿ “ಅರಣ್ಯ ಪ್ರದೇಶದಲ್ಲಿ ಹುಬ್ಬಳ್ಳಿ - ಅಂಕೋಲಾ ರೈಲು ಮಾರ್ಗ ನಿರ್ಮಿಸುವುದರಿಂದ ವನ್ಯಜೀವಿಗಳ ಮೇಲೆ ಉಂಟಾಗಬಹುದಾದ ದುಷ್ಪರಿಣಾಮದ ಕುರಿತು ವಿಶ್ಲೇಷಣೆ ನಡೆಸುವಂತೆ ಹಾಗೂ ಆಕ್ಷೇಪಾರ್ಹ ಪ್ರದೇಶದಲ್ಲಿ ರಾಷ್ಟ್ರೀಯ ವನ್ಯಜೀವಿ ಮಂಡಳಿ ಸಮೀಕ್ಷೆ ನಡೆಸಬೇಕು. ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆಯಿಂದ ವನ್ಯಜೀವಿಗಳ ಮೇಲೆ ಆಗಬಹುದಾದ ಪರಿಣಾಮಗಳ ಕುರಿತು ಹಲವು ಮಂಡಳಿಗಳು ಮತ್ತು ಪ್ರಾಧಿಕಾರಗಳು ಸಲ್ಲಿಸಿರುವ ವರದಿಗಳನ್ನು ಪರಿಶೀಲಿಸಿ ರಾಷ್ಟ್ರೀಯ ವನ್ಯಜೀವಿ ಮಂಡಳಿಯು ಸ್ವತಂತ್ರ ವಿಶ್ಲೇಷಣಾ ವರದಿ ಸಿದ್ಧಪಡಿಸಬಹುದು. ಇದಕ್ಕೆ ತಜ್ಞರ ಅಗತ್ಯ ಉದ್ಭವಿಸಿದರೆ ಅವರನ್ನೂ ರಾಷ್ಟ್ರೀಯ ವನ್ಯಜೀವಿ ಮಂಡಳಿ ಒಳಗೊಳ್ಳಬಹುದಾಗಿದೆ” ಎಂದು ಪೀಠ ಹೇಳಿತ್ತು.

“ಅಭಿವೃದ್ಧಿ ಕೆಲಸಗಳು ನಡೆಯಬೇಕು ಎಂಬುದು ನಮಗೂ ಅರ್ಥವಾಗುತ್ತದೆ. ಅದಾಗ್ಯೂ, ಈ ಅಭಿವೃದ್ಧಿ ಯೋಜನೆಯಿಂದ ವನ್ಯಜೀವಿಗಳು ಹಾಗೂ ಪರಿಸರದ ಮೇಲೆ ಉಂಟಾಗಬಹುದಾದ ಪರಿಣಾಮವನ್ನು ಪರಿಶೀಲಿಸಬೇಕಿದೆ. ನಮ್ಮೆಲ್ಲಾ ಪ್ರಯತ್ನಗಳು ವನ್ಯಜೀವಿಗಳನ್ನು ರಕ್ಷಿಸುವ ನಿಟ್ಟಿನಲ್ಲಿರಬೇಕು” ಎಂದು ನ್ಯಾಯಾಲಯ ಹೇಳಿತ್ತು.

Also Read
ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ: ಸಮೀಕ್ಷೆ ನಡೆಸಲು ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ನಿರ್ದೇಶಿಸಿದ ಹೈಕೋರ್ಟ್‌

ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಹುಬ್ಬಳ್ಳಿ-ಅಂಕೋಲಾ ನೂತನ ಬ್ರಾಡ್‌ಗೇಜ್‌ ರೈಲು ಮಾರ್ಗ ನಿರ್ಮಿಸುವ ಸಂಬಂಧದ ವನ್ಯಜೀವಿ ಮಂಡಳಿ ಶಿಫಾರಸ್ಸುಗಳನ್ನು ವಜಾ ಮಾಡಬೇಕು. ಕರ್ನಾಟಕ ವನ್ಯಜೀವಿ ಮಂಡಳಿಯು ಸಭೆಯ ಬಳಿಕ ಮಾಡಿರುವ ಶಿಫಾರಸ್ಸುಗಳನ್ನು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯು ಪರಿಗಣಿಸದಂತೆ ಆದೇಶಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

ಹುಬ್ಬಳ್ಳಿ ಮತ್ತು ಅಂಕೋಲಾ ರೈಲು ಮಾರ್ಗ ನಿರ್ಮಿಸಲು 595.64 ಹೆಕ್ಟೇರ್ ಅರಣ್ಯ ಪ್ರದೇಶದ ಮಾರ್ಗ ಬದಲಾವಣೆಗೆ ಸಂಬಂಧಿಸಿದಂತೆ ರಾಜ್ಯ ವನ್ಯಜೀವಿ ಮಂಡಳಿ ತೆಗೆದುಕೊಂಡ ನಿರ್ಧಾರದ ಕುರಿತು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ನ್ಯಾಯಾಲಯವು ಕಳೆದ ವರ್ಷ ಮಧ್ಯಂತರ ಆದೇಶ ಹೊರಡಿಸಿತ್ತು.

Kannada Bar & Bench
kannada.barandbench.com