ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ: ಪರಿಷ್ಕೃತ ಯೋಜನೆ ರೂಪಿಸಲಿರುವ ಹಿನ್ನೆಲೆಯಲ್ಲಿ ಪಿಐಎಲ್‌ ಇತ್ಯರ್ಥಪಡಿಸಿದ ಹೈಕೋರ್ಟ್‌

ರೈಲ್ವೆ ಸಚಿವಾಲಯವನ್ನು ಪ್ರತಿನಿಧಿಸಿದ್ದ ವಕೀಲರು, ನೈರುತ್ಯ ರೈಲ್ವೆ ವಲಯದ ಡೆಪ್ಯೂಟಿ ಚೀಫ್‌ ಎಂಜಿನಿಯರ್‌ ಸಿ ಪಿ ರೆಡ್ಡಿ ಪರವಾಗಿ ಅಫಿಡವಿಟ್‌ ಸಲ್ಲಿಸಿದರು. ಅದನ್ನು ದಾಖಲಿಸಿಕೊಂಡ ಪೀಠವು ಅರ್ಜಿ ಇತ್ಯರ್ಥಪಡಿಸಿತು.
Karnataka HC and Train
Karnataka HC and Train

ಹುಬ್ಬಳ್ಳಿ-ಅಂಕೋಲಾ ನಡುವಿನ ಬ್ರಾಡ್‌ ಗೇಜ್‌ ರೈಲು ಮಾರ್ಗ ಯೋಜನೆಯನ್ನು ಪ್ರಶ್ನಿಸಿ ಪರಿಸರವಾದಿಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ಗುರುವಾರ ಇತ್ಯರ್ಥಪಡಿಸಿದೆ.

ನೈರುತ್ಯ ರೈಲ್ವೆ ವಲಯ ರಾಷ್ಟ್ರೀಯ ವನ್ಯಜೀವಿ ಮಂಡಳಿ ಅಭಿಪ್ರಾಯದಂತೆ ರೈಲು ಮಾರ್ಗದ ಕುರಿತು ಪರಿಷ್ಕೃತ ಯೋಜನೆಯನ್ನು ಸಲ್ಲಿಸಲಾಗುವುದು ಎಂದು ಅಫಿಡವಿಟ್‌ ಸಲ್ಲಿಸಿರುವ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ಪಿ ಬಿ ವರಾಳೆ ಮತ್ತು ನ್ಯಾಯಮೂರ್ತಿ ಎಂ ಜಿ ಎಸ್‌ ಕಮಲ್‌ ಅವರ ನೇತೃತ್ವದ ವಿಭಾಗೀಯ ಪೀಠವು ಅರ್ಜಿ ವಿಲೇವಾರಿ ಮಾಡಿದೆ.

ರೈಲ್ವೆ ಸಚಿವಾಲಯವನ್ನು ಪ್ರತಿನಿಧಿಸಿದ್ದ ವಕೀಲರು, ನೈರುತ್ಯ ರೈಲ್ವೆ ವಲಯದ ಡೆಪ್ಯೂಟಿ ಚೀಫ್‌ ಎಂಜಿನಿಯರ್‌ ಸಿ ಪಿ ರೆಡ್ಡಿ ಪರವಾಗಿ ಅಫಿಡವಿಟ್‌ ಸಲ್ಲಿಸಿದರು. ಅದನ್ನು ದಾಖಲಿಸಿಕೊಂಡ ಪೀಠವು ಅರ್ಜಿಯನ್ನು ಇತ್ಯರ್ಥಪಡಿಸಿತು.

ಹುಬ್ಬಳ್ಳಿ-ಅಂಕೋಲಾ ನಡುವೆ 164.44 ಕಿ.ಮೀ ಉದ್ದದ ರೈಲು ಮಾರ್ಗ ನಿರ್ಮಾಣಕ್ಕೆ ಕರ್ನಾಟಕ ವನ್ಯಜೀವಿ ಮಂಡಳಿ 2020ರ ಮಾರ್ಚ್‌ 20ರಂದು ಅನುಮತಿ ನೀಡಿರುವುದನ್ನು ಆಕ್ಷೇಪಿಸಿ ಪ್ರಾಜೆಕ್ಟ್ ವೃಕ್ಷ  ಫೌಂಡೇಷನ್‌ ಮತ್ತು ಗಿರಿಧರ್‌ ಕುಲಕರ್ಣಿ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಅಫಿಡವಿಟ್‌ನಲ್ಲಿ ಏನಿದೆ: ನೈರುತ್ಯ ರೈಲ್ವೆ ವಲಯ ಹುಬ್ಬಳ್ಳಿಯಿಂದ 34 ಕಿ.ಮೀ. ದೂರದವರೆಗೆ ಅರಣ್ಯ ಪ್ರದೇಶವಿಲ್ಲದ ಜಾಗದಲ್ಲಿ100 ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆಯನ್ನು ಜಾರಿಗೊಳಿಸಿದೆ.  ಉಳಿದ ಮಾರ್ಗ ಅರಣ್ಯದಲ್ಲಿ ಹಾದು ಹೋಗುವುದರಿಂದ ಯೋಜನೆ ಜಾರಿಗೆ ನೈರುತ್ಯ ರೈಲ್ವೆ ವಲಯ ಅಗತ್ಯ ಕಡ್ಡಾಯ ಅನುಮತಿಗಳಿಗಾಗಿ ಕಾಯುತ್ತಿದೆ. ಯೋಜನೆಯನ್ನು 1996-97ರಲ್ಲಿಯೇ ಅನುಮೋದಿಸಲಾಗಿತ್ತು. ಆದರೆ, ಹಲವು ವರ್ಷಗಳು ಕಳೆದರೂ ಅದನ್ನು ಪೂರ್ಣಗೊಳಿಸಲಾಗಿಲ್ಲ, ಇದರಿಂದ ಉತ್ತರ ಕರ್ನಾಟಕ ಭಾಗ ಅಭಿವೃದ್ಧಿಯಾಗುತ್ತಿಲ್ಲ ಮತ್ತು ಯೋಜನಾ ವೆಚ್ಚ ಹೆಚ್ಚಾಗುತ್ತಿದೆ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

ಅಲ್ಲದೇ, ಹೈಕೋರ್ಟ್‌ ಆದೇಶದಂತೆ ರಾಷ್ಟ್ರೀಯ ವನ್ಯಜೀವಿ ಮಂಡಳಿ (ಎನ್‌ ಬಿಡಬ್ಲ್ಯೂಎಲ್‌) ಸಮಿತಿ ರಚನೆ ಮಾಡಿತ್ತು, ಆ ಸಮಿತಿ ಸ್ಥಳ ಪರಿಶೀಲನೆ ನಡೆಸಿ ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸಿದೆ. ಆ ಸಮಿತಿ ನಡೆಸಿದ ಸಭೆಯಲ್ಲಿ ರೈಲ್ವೆ ಸಚಿವಾಲಯದ ಅಧಿಕಾರಿಗಳೂ ಸಹ ಭಾಗವಹಿಸಿದ್ದರು ಮತ್ತು ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗದ ಕುರಿತು ರೈಲ್ವೆ ಪರವಾಗಿ ಪ್ರಸ್ತಾವ ಮಂಡಿಸಲಾಗಿದೆ. ಆ ಸಮಿತಿಯ ಶಿಫಾರಸುಗಳಂತೆ ರೈಲ್ವೆಗೆ ಪರಿಷ್ಕೃತ ಯೋಜನಾ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಲಾಗಿದೆ.

ಹುಬ್ಬಳ್ಳಿಯ ನೈರುತ್ಯ ರೈಲ್ವೆ ವಲಯ, ರಾಷ್ಟ್ರೀಯ ವನ್ಯಜೀವಿ ಮಂಡಳಿಯ ನಿರ್ದೇಶನಗಳನ್ನು ಪಾಲನೆ ಮಾಡಬೇಕಿದೆ ಮತ್ತು ಡೆಹ್ರಾಡೂನ್‌ ನ ಭಾರತೀಯ ವನ್ಯಜೀವಿ ಕೇಂದ್ರದ ಜೊತೆ ಸಮಾಲೋಚನೆ ನಡೆಸಿ ಹುಬ್ಬಳ್ಳಿ-ಆಂಕೋಲಾ ರೈಲ್ವೆ ಯೋಜನೆಯ ಮಿಟಿಗೇಷನ್‌ ಪ್ಲಾನ್‌ ಅನ್ನು ಸಿದ್ಧಪಡಿಸಲಾಗುವುದು. ಎನ್‌ ಬಿಡಬ್ಲ್ಯೂಎಲ್, ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಹಾಗೂ ಹವಾಮಾನ ವೈಪರೀತ್ಯ ಸಚಿವಾಲಯದ ನಿರ್ದೇಶನಗಳನ್ನು ಪಾಲಿಸಲಾಗುವುದು ಮತ್ತು ಅಗತ್ಯ ಅನುಮತಿಗಳನ್ನು ಪಡೆದ ನಂತರವೇ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ರೈಲ್ವೆ ತಿಳಿಸಿದೆ.

Also Read
[ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ] ಹತ್ತು ವಾರಗಳಲ್ಲಿ ತೀರ್ಮಾನಿಸಲು ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಹೈಕೋರ್ಟ್ ಸೂಚನೆ

ಪರಿಷ್ಕೃತ ಯೋಜನೆಯ ಹಿನ್ನೆಲೆಯಲ್ಲಿ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಬೇಕು ಎಂದು ನೈರುತ್ಯ ರೈಲ್ವೆ ವಲಯ ನ್ಯಾಯಾಲಯವನ್ನು ಕೋರಿತ್ತು.

2020ರ ಮಾರ್ಚ್‌ 20ರಂದು ರಾಜ್ಯ ವನ್ಯಜೀವಿ ಮಂಡಳಿ ಕೈಗೊಂಡಿರುವ ನಿರ್ಣಯ ಆಧರಿಸಿ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಯೋಜನೆ ಸಂಬಂಧ ಮುಂದಿನ ಕ್ರಮ ಜರುಗಿಸಬಾರದು ಎಂದು ಸರ್ಕಾರಕ್ಕೆ ಸೂಚಿಸಿ 2020ರ ಜೂನ್‌ 18ರಂದು ಹೈಕೋರ್ಟ್‌ ಮಧ್ಯಂತರ ಆದೇಶ ಮಾಡಿತ್ತು. ನಂತರ ಮಧ್ಯಂತರ ಆದೇಶವನ್ನು ಹೈಕೋರ್ಟ್‌ ವಿಸ್ತರಿಸುತ್ತಾ ಬಂದಿತ್ತು. ಇದೀಗ ಹೈಕೋರ್ಟ್‌ ಪಿಐಎಲ್‌ ವಿಲೇವಾರಿ ಮಾಡಿರುವುದರಿಂದ ಮಧ್ಯಂತರ ಆದೇಶ ತೆರವಾಗಿದೆ.

Related Stories

No stories found.
Kannada Bar & Bench
kannada.barandbench.com