ಹುಬ್ಬಳ್ಳಿ ಗಲಭೆ: 40 ಆರೋಪಿಗಳಿಗೆ ಜಾಮೀನು ನಿರಾಕರಣೆ; ಬೆಳಗಾವಿ, ಕಲಬುರಗಿ, ಮೈಸೂರಲ್ಲಿ ಎನ್‌ಐಎ ಕೋರ್ಟ್‌ಗೆ ಶಿಫಾರಸು

ಘಟನೆಗೆ ಸಂಬಂಧಿಸಿದಂತೆ ಪೊಲೀಸರು, ಸಾರ್ವಜನಿಕ ಆಸ್ತಿ ಹಾನಿಗೆ ತಡೆ ಕಾಯಿದೆ–1984 ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ–1967ರ ವಿವಿಧ ಸೆಕ್ಷನ್‌ಗಳ ಅಡಿ 140 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
Justices B Veerappa and T Venkatesh Naik
Justices B Veerappa and T Venkatesh Naik

ಮಸೀದಿಯ ಗುಮ್ಮಟದ ಮೇಲೆ ಭಗವಾಧ್ವಜ ಹಾರಾಡುತ್ತಿರುವಂತಹ ಚಿತ್ರವೊಂದನ್ನು ತಮ್ಮ ವಾಟ್ಸ್‌ ಆ್ಯಪ್‌ ಸ್ಟೇಟಸ್‌ನಲ್ಲಿ ಹಾಕಿಕೊಂಡ ವ್ಯಕ್ತಿಯೊಬ್ಬರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪೊಲೀಸ್‌ ಠಾಣೆಯ ಮುಂದೆ ಜಮಾಯಿಸಿದ ವೇಳೆ ನಡೆದ ಗಲಭೆ ಪ್ರಕರಣದಲ್ಲಿನ 40 ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್‌ ಜಾಮೀನು ನಿರಾಕರಿಸಿದೆ.

ಹಳೆ ಹುಬ್ಬಳ್ಳಿ ಪೊಲೀಸ್‌ ಠಾಣೆ ಮೇಲೆ 2022ರ ಏಪ್ರಿಲ್‌ ಮಧ್ಯಭಾಗದಲ್ಲಿ ನಡೆದಿದ್ದ ದಾಳಿಗೆ ಸಂಬಂಧಿಸಿದಂತೆ ಹಳೆ ಹುಬ್ಬಳ್ಳಿಯ ಶೋಯೆಬ್‌ ಅಲಿ ಅಲಿಯಾಸ್‌ ಶಾಜಿದ್ ಅಲಿ ಎಂಬುವರೂ ಸೇರಿದಂತೆ ಒಟ್ಟು 40 ಆರೋಪಿಗಳು ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ ವೀರಪ್ಪ ಮತ್ತು ಟಿ ವೆಂಕಟೇಶ್‌ ನಾಯ್ಕ್‌ ಅವರ ನೇತೃತ್ವದ ವಿಭಾಗೀಯ ಪೀಠವು ವಜಾಗೊಳಿಸಿದೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು, ಸಾರ್ವಜನಿಕ ಆಸ್ತಿ ಹಾನಿಗೆ ತಡೆ ಕಾಯಿದೆ–1984 ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ–1967ರ ವಿವಿಧ ಸೆಕ್ಷನ್‌ಗಳ ಅಡಿ 140 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದರಲ್ಲಿ 40 ಆರೋಪಿಗಳು ಕೋರಿದ್ದ ಜಾಮೀನು ಅರ್ಜಿಯನ್ನು ಬೆಂಗಳೂರಿನ ಎನ್‌ಐಎ (ರಾಷ್ಟ್ರೀಯ ತನಿಖಾ ದಳದ) ವಿಶೇಷ ನ್ಯಾಯಾಲಯ ತಿರಸ್ಕರಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ವಿಶೇಷ ಸರ್ಕಾರಿ ಅಭಿಯೋಜಕ ವಿಜಯಕುಮಾರ ಎಂ.ಶೀಲವಂತ ಅವರು, ಘಟನೆ ನಡೆಯುವ ಮುನ್ನ ಪೊಲೀಸರು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರೂ ಆರೋಪಿಗಳು ಅದನ್ನು ಲೆಕ್ಕಿಸದೆ, ಸಾವಿರಾರು ಸಂಖ್ಯೆಯಲ್ಲಿ ಠಾಣೆಯ ಮುಂದೆ ಜಮಾಯಿಸಿ ಪೊಲೀಸರ ಮೇಲೆ ಚಪ್ಪಲಿ ಹಾಗೂ ಕಲ್ಲುಗಳನ್ನು ಎಸೆದಿದ್ದಾರೆ. ಸರ್ಕಾರಿ ವಾಹನಗಳನ್ನು ಕಲ್ಲು ಹಾಗೂ ದೊಣ್ಣೆಗಳಿಂದ ಜಖಂಗೊಳಿಸಿದ್ದಾರೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಗುರುತರ ಅಪರಾಧ ಎಸಗಿದ್ದಾರೆ. ಆದಕಾರಣ ಜಾಮೀನು ಮಂಜೂರು ಮಾಡಬಾರದು ಎಂದು ಪ್ರತಿಪಾದಿಸಿದ್ದರು. ಇದನ್ನು ನ್ಯಾಯಾಲಯ ಪುರಸ್ಕರಿಸಿದೆ.

Also Read
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅಸ್ತು; ಮುಸ್ಲಿಮ್‌ ಪಕ್ಷಕಾರರ ಕೋರಿಕೆ ತಿರಸ್ಕರಿಸಿದ ಹೈಕೋರ್ಟ್‌

ಎನ್‌ಐಎ ನ್ಯಾಯಾಲಯ ಸ್ಥಾಪನೆಗೆ ಶಿಫಾರಸು: ಇದೇ ವೇಳೆ ನ್ಯಾಯಾಲಯವು ಬೆಂಗಳೂರಿನಲ್ಲಿರುವ ವಿಶೇಷ ನ್ಯಾಯಾಲಯವು ಎನ್‌ಐಎ ಪ್ರಕರಣಗಳ ಜೊತೆಗೆ ಇತರೆ ಪ್ರಕರಣಗಳನ್ನೂ ವಿಚಾರಣೆ ನಡೆಸುತ್ತಿದ್ದು, ಇದರಿಂದ ಎನ್‌ಐಎ ಪ್ರಕರಣಗಳ ವಿಚಾರಣೆಯ ವಿಳಂಬಕ್ಕೆ ಕಾರಣವಾಗುತ್ತಿದೆ. ಹೀಗಾಗಿ, ಎನ್‌ಐಎ ದಾಖಲಿಸುವ ಪ್ರಕರಣಗಳ ಶೀಘ್ರ ವಿಚಾರಣೆಗಾಗಿ ಬೆಳಗಾವಿ, ಕಲಬುರಗಿ ಮತ್ತು ಮೈಸೂರು ವಿಭಾಗಗಳಲ್ಲಿ ಎನ್‌ಐಎ ವಿಶೇಷ ನ್ಯಾಯಾಲಯಗಳನ್ನು ಮುಂದಿನ ಆರು ತಿಂಗಳಲ್ಲಿ ರಚಿಸಿ ಎಂದು ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.

ವಿಶೇಷ ನ್ಯಾಯಾಲಯಗಳ ರಚನೆ ಮಾಡದೇ ಹೋದಲ್ಲಿ ಬೆಂಗಳೂರಿನ ವಿಶೇಷ ನ್ಯಾಯಾಲಯದ ಮೇಲಿರುವ ಹೊರೆ ಹೆಚ್ಚಾಗಲಿದೆ. ಇದು ಸಂವಿಧಾನದ 14 ಮತ್ತು 21ನೇ ವಿಧಿಗಳಲ್ಲಿ ಕೊಡಮಾಡಲಾಗಿರುವ ಸಮಾನತೆ ಮತ್ತು ತ್ವರಿತ ವಿಚಾರಣೆಯ ಹಕ್ಕುಗಳಿಗೆ ವಿರುದ್ಧವಾಗಲಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

Attachment
PDF
Shoheb Ali and others Vs State of Karnataka.pdf
Preview

Related Stories

No stories found.
Kannada Bar & Bench
kannada.barandbench.com