ಆತ್ಮಹತ್ಯೆಗೆ ಪ್ರಚೋದನೆ ಆರೋಪ: ಪಾದ್ರಿ ಸಾವಿಗೆ ಕಾರಣರಾದ ಆರೋಪ ಎದುರಿಸಿದ್ದ ವ್ಯಕ್ತಿಯ ವಿರುದ್ಧದ ಪ್ರಕರಣ ರದ್ದು

ಅರ್ಜಿದಾರರ ಪತ್ನಿಯ ಜೊತೆಗೆ ಮೃತರು ಸಂಬಂಧ ಹೊಂದಿದ್ದರು. ಈ ವಿಚಾರ ಅರ್ಜಿದಾರರ ಗಮನಕ್ಕೆ ಬಂದಿದ್ದು, ಕೋಪದಲ್ಲಿ ಹೋಗಿ ‘ನೇಣಿಗೆ ಶರಣಾಗಿ ’ಎಂದಿದ್ದಾರೆ. ಇದು ಆತ್ಮಹತ್ಯೆಗೆ ಪ್ರಚೋದನೆ ನೀಡದಂತಾಗುವುದಿಲ್ಲ ಎಂದ ನ್ಯಾಯಾಲಯ.
Justice M Nagaprasanna
Justice M Nagaprasanna

“ಮನುಷ್ಯನ ಮನಸ್ಸು ಅತ್ಯಂತ ನಿಗೂಢ, ಮನಸಿನ ರಹಸ್ಯ ಬಿಚ್ಚಿಡುವುದು ಅಸಾಧ್ಯ” ಎಂದು ಈಚೆಗೆ ಅಭಿಪ್ರಾಯಪಟ್ಟಿರುವ ಕರ್ನಾಟಕ ಹೈಕೋರ್ಟ್, ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಚರ್ಚ್‌ವೊಂದರ ಕಿರಿಯ ಪಾದ್ರಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ವ್ಯಕ್ತಿಯೊಬ್ಬರ ವಿರುದ್ದ ದಾಖಲಾಗಿದ್ದ ಪ್ರಕರಣ ರದ್ದುಗೊಳಿಸಿದೆ.

ಉಡುಪಿ ಮೂಲದ ವ್ಯಕ್ತಿಯು ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

“ದಾಖಲೆಗಳನ್ನು ಪರಿಶೀಲಿಸಿದಾಗ ಅರ್ಜಿದಾರರ ಪತ್ನಿಯ ಜೊತೆಗೆ ಮೃತರು ಸಂಬಂಧ ಹೊಂದಿದ್ದರು. ಈ ವಿಚಾರ ಅರ್ಜಿದಾರರ ಗಮನಕ್ಕೆ ಬಂದಿದ್ದು, ಕೋಪದಲ್ಲಿ ಹೋಗಿ ‘ನೇಣಿಗೆ ಶರಣಾಗಿ ’ಎಂದಿದ್ದಾರೆ. ಇದು ಆತ್ಮಹತ್ಯೆಗೆ ಪ್ರಚೋದನೆ ನೀಡದಂತಾಗುವುದಿಲ್ಲ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

“ಪಾದ್ರಿ 2019ರ ಅಕ್ಟೋಬರ್‌ 11ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, 2020ರ ಫೆಬ್ರವರಿ 26ರಂದು ಅರ್ಜಿದಾರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ದೂರಿನಲ್ಲಿ ಆರೋಪಿ ಹಾಗೂ ಮೃತ ಪಾದ್ರಿ ದೂರವಾಣಿ ಮೂಲಕ ಸಂಭಾಷಣೆ ನಡೆಸಿದ್ದಾರೆ. ಬಳಿಕ ಕೆಲ ಹೊತ್ತಿನಲ್ಲಿ ಪಾದ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ. ಆದರೆ, ಆರೋಪಿ ಆತ್ಮಹತ್ಯೆ ಮಾಡಿಕೊಳ್ಳಲು ಅಸಂಖ್ಯ ಕಾರಣ ಇರಬಹುದು. ಅದರಲ್ಲಿ ಚರ್ಚ್‌ನ ಪಾದ್ರಿಯಾಗಿ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿರುವುದೂ ಸೇರಿರಬಹುದು. ಮನುಷ್ಯನ ಮನಸ್ಸು ಅತ್ಯಂತ ನಿಗೂಢ, ಮನಸ್ಸಿನ ರಹಸ್ಯ ಬಿಚ್ಚಿಡುವುದು ಅಸಾಧ್ಯ” ಎಂದು ನ್ಯಾಯಾಲಯ ಹೇಳಿದೆ.

“ಅರ್ಜಿದಾರರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದ್ದರೂ ಮುಂದಿನ ಪ್ರಕ್ರಿಯೆಗಳಿಗೆ ಅನುಮತಿ ನೀಡುವುದು ನಿಸ್ಸಂದೇಹವಾಗಿ ಕಾನೂನು ಪ್ರಕ್ರಿಯೆಯ ವಿರುದ್ಧ ನಡೆದಂತಾಗುತ್ತದೆ” ಎಂದು ನ್ಯಾಯಾಲಯ ಹೇಳಿದ್ದು, ಪ್ರಕರಣ ರದ್ದುಪಡಿಸಿದೆ.

ಅರ್ಜಿದಾರರ ಪರ ಹಿರಿಯ ವಕೀಲ ಸಂದೇಶ್‌ ಚೌಟ ಅವರು, ಅರ್ಜಿದಾರರು ಮೃತ ಪಾದ್ರಿ ತನ್ನ ಪತ್ನಿಯ ಜತೆಗೆ ಅಕ್ರಮ ಸಂಬಂಧ ಹೊಂದಿರುವುದನ್ನು ತಿಳಿದ ಕೂಡಲೇ ಪಾದ್ರಿಗೆ ಕರೆಮಾಡಿ ವಿಚಾರದ ಕುರಿತು ತನ್ನ ಸಂಕಟವನ್ನು ಹೊರಹಾಕಿದ್ದು, ಅದೇ ವೇಳೆ ‘ನೇಣು ಹಾಕಿಕೊಳ್ಳಿ ’ಎಂದು ಹೇಳಿದ್ದಾರೆ. ಇದು ಆತ್ಮಹತ್ಯೆಗೆ ಪ್ರಚೋದನೆ ನೀಡಿದಂತಾಗದು. ಇಲ್ಲಿ ಪಾದ್ರಿಯೂ ತನ್ನ ಅಕ್ರಮ ಸಂಬಂಧ ವಿಷಯ ಮೂರನೆಯವರಿಗೆ ತಿಳಿದಿದೆ ಎಂದು ಗಾಬರಿಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ಅರ್ಜಿದಾರರು ಆತ್ಮಹತ್ಯೆಗೆ ಪ್ರಚೋದನೆಗೆ ನೀಡಿದ್ದಾರೆ ಎಂದು ಆರೋಪಿಸಲಾಗದು ಎಂದು ವಾದಿಸಿದ್ದರು.

ಸರ್ಕಾರದ ಪರ ವಕೀಲೆ ಕೆ ಪಿ ಯಶೋಧಾ ಅವರು, “ಅರ್ಜಿದಾರರು ಪಾದ್ರಿಗೆ ಕರೆ ಮಾಡಿ ತನ್ನ ಪತ್ನಿಯ ಜತೆಗೆ ಅಕ್ರಮ ಸಂಬಂಧ ಹೊಂದಿರುವ ಬಗ್ಗೆ ಪ್ರಶ್ನಿಸಿ ಅವರನ್ನು ತೀವ್ರವಾಗಿ ನಿಂದಿಸಿದ್ದಾರೆ. ಈ ವಿಷಯ ಬಹಿರಂಗಪಡಿಸುವ ಬೆದರಿಕೆಯೊಡ್ಡಿದ್ದರು. ಇದರಿಂದಾಗಿ ಪಾದ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂದು ವಾದಿಸಿದ್ದರು.

ಪ್ರಕರಣದ ವಿವರ: ಚರ್ಚ್‌ವೊಂದರ ಕಿರಿಯ ಫಾದರ್ ಹಾಗೂ ಶಿರ್ವ ಡಾನ್‌ ಬಾಸ್ಕೊ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕರಾಗಿದ್ದ ಪಾದ್ರಿಯು 2019ರ ನವೆಂಬರ್‌ 10ರಂದು ರಾತ್ರಿ  ಶಾಲೆಯ ಮುಖ್ಯ ಶಿಕ್ಷಕರ ಕೊಠಡಿಯ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಬಳಿಕ ಸಾವಿನ ಬಗ್ಗೆ ಅನುಮಾನ ಮೂಡಿ ಪ್ರಕರಣವನ್ನು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಹೆಚ್ಚಿನ ತನಿಖೆಗಾಗಿ ಕಾಪು ವೃತ್ತ ನಿರೀಕ್ಷಕರಿಗೆ ವಹಿಸಿದ್ದರು.

ಪಾದ್ರಿ ಅವರು ಆತ್ಮಹತ್ಯೆಗೆ ಶರಣಾಗುವ ಕೆಲ ಹೊತ್ತಿಗೂ ಮುನ್ನ ಅವರ ಮೊಬೈಲ್‌ಗೆ ಮೂರು ಕರೆಗಳು ಬಂದಿರುವುದು ಸಿಡಿಆರ್ ಪರಿಶೀಲನೆಯಿಂದ ತಿಳಿದುಬಂದಿತ್ತು. ಆ ಕರೆಯ ಕಾಲ್ ರೆಕಾರ್ಡಿಂಗ್‌ನಲ್ಲಿ ಆರೋಪಿ ಮತ್ತು ಮೃತರು ಕೊಂಕಣಿ ಭಾಷೆಯಲ್ಲಿ ಸಂಭಾಷಣೆ ನಡೆಸಿರುವುದು ತಿಳಿದು ಬಂದಿತ್ತು. ಪಾದ್ರಿಗೆ ಅರ್ಜಿದಾರರು ಅವಾಚ್ಯ ಶಬ್ದಗಳಲ್ಲಿ ನಿಂದಿಸಿದ್ದಾರೆ. ಇದರಿಂದ ನೊಂದ ಪಾದ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಇದೆಲ್ಲವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅರ್ಜಿದಾರರ ಕರೆ ಬಂದ 30 ನಿಮಿಷದೊಳಗೆ ಪಾದ್ರಿ ಸಾವಿಗೀಡಾಗಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಖಚಿತವಾಗಿತ್ತು. ಇದರಿಂದ ಅರ್ಜಿದಾರರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಾಗಿತ್ತು.

Kannada Bar & Bench
kannada.barandbench.com