ನರಬಲಿ ಪ್ರಕರಣ: ಆರೋಪಿ ಲೈಲಾ ಭಗವಾಲ್ ಸಿಂಗ್ ಜಾಮೀನು ಅರ್ಜಿ ವಜಾಗೊಳಿಸಿದ ಕೇರಳ ಹೈಕೋರ್ಟ್‌

ನ್ಯಾಯಮೂರ್ತಿ ಸೋಫಿ ಥಾಮಸ್ ಈ ತೀರ್ಪು ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಲೈಲಾ ಸಲ್ಲಿಸಿದ ಎರಡನೇ ಜಾಮೀನು ಅರ್ಜಿ ಇದಾಗಿದೆ.
ಕೇರಳ ಹೈಕೋರ್ಟ್
ಕೇರಳ ಹೈಕೋರ್ಟ್

ದೇಶದೆಲ್ಲೆಡೆ ತಲ್ಲಣ ಸೃಷ್ಟಿಸಿದ್ದ 2022ರ ಕೇರಳ ನರಬಲಿ ಪ್ರಕರಣದ ಆರೋಪಿಗಳಲ್ಲಿ ಒಬ್ಬಳಾದ ಲೈಲಾ ಭಗವಾಲ್ ಸಿಂಗ್‌ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕೇರಳ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.

ಅಪರಾಧದ ಗಂಭೀರತೆ ಮತ್ತು ಅರ್ಜಿದಾರೆ ನಿರ್ವಹಿಸಿದ ಸಕ್ರಿಯ ಪಾತ್ರದಿಂದಾಗಿ ಲಿಂಗ ಮತ್ತು ವಯಸ್ಸಿನ ಕಾರಣದ ಹೊರತಾಗಿಯೂ ಜಾಮೀನು ಪಡೆಯಲು ಆಕೆಯನ್ನು ಅನರ್ಹರನ್ನಾಗಿ ಮಾಡಿದೆ ಎಂದು ನ್ಯಾಯಮೂರ್ತಿ ಸೋಫಿ ಥಾಮಸ್ ಆದೇಶದಲ್ಲಿ ತಿಳಿಸಿದ್ದಾರೆ.

ಸಾಮಾಜಿಕ ಶಾಂತಿ ಮತ್ತು ನೆಮ್ಮದಿಯ ಮೇಲೆ ಇಂತಹ ಪ್ರಕರಣಗಳು ಬೀರುವ ಪರಿಣಾಮವನ್ನು ಒತ್ತಿ ಹೇಳಿದ ನ್ಯಾಯಾಲಯ ಆಕೆಯನ್ನು ಬಿಡುಗಡೆ ಮಾಡುವುದರಿಂದ ಸಮಾನ ಮನಸ್ಕ ಅಪರಾಧಿಗಳಿಗೆ ತಪ್ಪು ಸಂದೇಶ ರವಾನೆಯಾಗಬಹುದು ಎಂದಿತು.

ಹೀಗಾಗಿ ಮನವಿ ವಜಾಗೊಳಿಸಿದ ಅದು ವಿಳಂಬವಿಲ್ಲದೆ ತ್ವರಿತ ವಿಚಾರಣೆ ನಡೆಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಿತು.

ಈ ಅಪರಾಧದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ನ್ಯಾಯಾಲಯ, ಇದು ಮಾನವೀಯತೆಗೆ ಮಾಡಿದ ಅಪಮಾನವಾಗಿದ್ದು ಕೇರಳದ ಸಾಂಸ್ಕೃತಿಕ ಪರಂಪರೆಗೆ ನೀಡಿದ ಹೊಡೆತವಾಗಿದೆ ಎಂದಿತು.

ಅಕ್ಟೋಬರ್ 2022ರಲ್ಲಿ ಪಟ್ಟಣಂತಿಟ್ಟ ಜಿಲ್ಲೆಯ ತಿರುವಳ್ಳದಲ್ಲಿ ಇಬ್ಬರು ಮಹಿಳೆಯರ ದೇಹಗಳು ಛಿದ್ರಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ರಾಜ್ಯದಲ್ಲಿ ನರಬಲಿ ನಡೆದ ಸುದ್ದಿ ಬೆಳಕಿಗೆ ಬಂದಿತ್ತು. ನಾಪತ್ತೆಯಾದ ಇಬ್ಬರು ಮಹಿಳೆಯರ ಕುರಿತು ಪೊಲೀಸರು ಕೈಗೊಂಡ ತನಿಖೆಯಿಂದಾಗಿ ನರಬಲಿ ಘಟನೆ ಪತ್ತೆಯಾಗಿತ್ತು. ಎರ್ನಾಕುಲಂ ಜಿಲ್ಲೆಯಲ್ಲಿ ಲಾಟರಿ ಟಿಕೆಟ್ ಮಾರಾಟಗಾರರಾಗಿದ್ದ ಮಹಿಳೆಯರನ್ನು ಹತ್ಯೆಗೈದ ಆರೋಪದಲ್ಲಿ ಮೂವರನ್ನು ಅದೇ ವಾರ ಬಂಧಿಸಲಾಗಿತ್ತು.

ಅಪಹರಣಕ್ಕೆ ವ್ಯವಸ್ಥೆ ಮಾಡಿದ ಮತ್ತು ನರಬಲಿ ಕೃತ್ಯ ಎಸಗಿದ ಆರೋಪದ ಮೇಲೆ ಪೊಲೀಸರು, ಮಹಮ್ಮದ್ ಶಫಿ ಎಂಬಾತನನ್ನು ಬಂಧಿಸಿದ್ದರು. ಜೊತೆಗೆ ನರಬಲಿಗೆ ಸಂಚು ರೂಪಿಸಿ ಕೃತ್ಯದಲ್ಲಿ ಭಾಗಿಯಾದ ಶಂಕೆ ಮೇರೆಗೆ ದಂಪತಿ ಭಗವಾಲ್ ಸಿಂಗ್ ಮತ್ತು ಲೈಲಾ ಭಗವಾಲ್ ಸಿಂಗ್ ಅವರನ್ನು ಬಂಧಿಸಲಾಗಿತ್ತು. ಮೂವರು ಆರೋಪಿಗಳನ್ನು ಮೊದಲು ನ್ಯಾಯಾಂಗ ಬಂಧನಕ್ಕೆ ಮತ್ತು ನಂತರ 12 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿತ್ತು.

ಎರ್ನಾಕುಲಂ ನ್ಯಾಯಾಲಯ ಜಾಮೀನು ನಿರಾಕರಿಸಿದ್ದರಿಂದ ಈ ಹಿಂದೆ ಲೈಲಾ ಹೈಕೋರ್ಟ್‌ ಮೆಟ್ಟಿಲೇರಿದ್ದಳು. ಅಲ್ಲಿಯೂ ಜಾಮೀನು ತಿರಸ್ಕೃತವಾಗಿತ್ತು. ಇದೀಗ ಆಕೆ ಎರಡನೇ ಬಾರಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನೂ ಉಚ್ಚ ನ್ಯಾಯಾಲಯ ತಿರಸ್ಕರಿಸಿದೆ.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Attachment
PDF
Laila Bhagawal Singh v. State of Kerala.pdf
Preview

Related Stories

No stories found.
Kannada Bar & Bench
kannada.barandbench.com