ನರಬಲಿ ಪ್ರಕರಣ: ಪ್ರಮುಖ ಆರೋಪಿ ಲೈಲಾ ಭಗವಾಲ್ ಸಿಂಗ್‌ಗೆ ಜಾಮೀನು ನೀಡಲು ಕೇರಳ ಹೈಕೋರ್ಟ್ ನಕಾರ

ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ತೀರ್ಪು ನೀಡಿದ್ದಾರೆ.
ನರಬಲಿ ಪ್ರಕರಣ: ಪ್ರಮುಖ ಆರೋಪಿ ಲೈಲಾ ಭಗವಾಲ್ ಸಿಂಗ್‌ಗೆ ಜಾಮೀನು ನೀಡಲು ಕೇರಳ ಹೈಕೋರ್ಟ್ ನಕಾರ
A1

ಕಳೆದ ವರ್ಷ ಕೇರಳವನ್ನು ಬೆಚ್ಚಿಬೀಳಿಸಿದ್ದ, ದೇಶದೆಲ್ಲೆಡೆ ಚರ್ಚೆಗೆ ಗ್ರಾಸವಾಗಿದ್ದ ನರಬಲಿ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಲೈಲಾ ಭಗವಾಲ್ ಸಿಂಗ್‌ಗೆ ಜಾಮೀನು ನೀಡಲು ಕೇರಳ ಹೈಕೋರ್ಟ್ ಬುಧವಾರ ನಿರಾಕರಿಸಿದೆ [ಲೈಲಾ ಭಗವಾಲ್ ಸಿಂಗ್ ಮತ್ತು. ಕೇರಳ ಸರ್ಕಾರ ನಡುವಣ ಪ್ರಕರಣ].

ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಜಾಮೀನು ಮನವಿಯ ಕುರಿತಾದ ವಿಚಾರಣೆಯ ತೀರ್ಪು ನೀಡಿದ್ದಾರೆ. ಅಕ್ಟೋಬರ್‌ 2022ರಲ್ಲಿ ಪಟ್ಟಣಂತಿಟ್ಟ ಜಿಲ್ಲೆಯ ತಿರುವಳ್ಳಾದಲ್ಲಿ ಇಬ್ಬರು ಮಹಿಳೆಯರ ಛಿದ್ರವಾಗಿದ್ದ ದೇಹಗಳು ಪತ್ತೆಯಾಗುವ ಮೂಲಕ ರಾಜ್ಯದಲ್ಲಿ ನರಬಲಿ ಪ್ರಕರಣ ಬೆಳಕಿಗೆ ಬಂದಿತ್ತು. ಎರ್ನಾಕುಲಂನಲ್ಲಿ ಲಾಟರಿ ಟಿಕೆಟ್‌ ಮಾರಾಟ ಮಾಡುತ್ತಿದ್ದ ಇಬ್ಬರು ಮಹಿಳೆಯರನ್ನು ಹತ್ಯೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಮೂವರನ್ನು ಅದೇ ವಾರ ಬಂಧಿಸಲಾಯಿತು.

ಅಪಹರಣ ಮತ್ತು ನರಬಲಿಗೆ ಸಂಬಂಧಿಸಿದಂತೆ ಪೊಲೀಸರು ಮುಹಮ್ಮದ್ ಶಫಿ ಎಂಬಾತನನ್ನು ಬಂಧಿಸಿದ್ದರು. ನರಬಲಿಯಲ್ಲಿ ಭಾಗಿಯಾದ ಆರೋಪಕ್ಕೆ ಸಂಬಂಧಿಸಿದಂತೆ ದಂಪತಿಯಾದ ಭಗವಾಲ್‌ ಸಿಂಗ್‌ ಮತ್ತು ಲೈಲಾ ಅವರನ್ನು ಕೂಡ ಬಂಧಿಸಲಾಗಿತ್ತು. ಮೂವರು ಆರೋಪಿಗಳನ್ನು 12 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿತ್ತು.

ಇದೊಂದು ವ್ಯವಸ್ಥಿತ ರೀತಿಯಲ್ಲಿ ಹೆಣೆದ, ಹಿಂದೆಂದೂ ಕಾಣದಂತಹ ಘೋರ ಅಪರಾಧವಾಗಿದ್ದು ಸಂಪೂರ್ಣ ತನಿಖೆಯ ಅಗತ್ಯವಿದೆ ಎಂಬ ಪ್ರಾಸಿಕ್ಯೂಷನ್‌ ವಾದದಲ್ಲಿ ಹುರುಳಿದೆ ಎಂಬುದಾಗಿ ನವೆಂಬರ್‌ನಲ್ಲಿ ತಿಳಿಸಿದ್ದ ಎರ್ನಾಕುಲಂ ನ್ಯಾಯಾಲಯದ VIIIನೇ ಜ್ಯುಡಿಷಿಯಲ್ ಫಸ್ಟ್ ಕ್ಲಾಸ್ ಮ್ಯಾಜಿಸ್ಟ್ರೇಟ್‌ ಎಲ್ಡೋಸ್‌ ಮ್ಯಾಥ್ಯೂ  ಅವರು ಲೈಲಾಗೆ ಜಾಮೀನು ನೀಡಲು ನಿರಾಕರಿಸಿದ್ದರು.

"ಪ್ರಕರಣದ ತನಿಖೆ ಪ್ರಾಥಮಿಕ ಹಂತದಲ್ಲಿದ್ದು ಆರೋಪಿ ಜಾಮೀನಿನ ಮೇಲೆ ಬಿಡುಗಡೆಗೊಂಡರೆ, ತನಿಖೆಯ ಪ್ರಗತಿ ಮೇಲೆ ಪರಿಣಾಮ ಉಂಟಾಗುತ್ತದೆ. ಸಾಕ್ಷಿಗಳನ್ನು ಬೆದರಿಸುವ, ಸಾಕ್ಷ್ಯ ತಿರುಚುವ ಮತ್ತು ತಲೆಮರೆಸಿಕೊಳ್ಳುವ ಸಾಧ್ಯತೆಗಳೂ ಇವೆ" ಎಂದು ಆದೇಶದಲ್ಲಿ ತಿಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಲೈಲಾ ಜಾಮೀನು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಲೈಲಾ ಪರ ವಾದ ಮಂಡಿಸಿದ್ದ ವಕೀಲ ಬಿ.ಎ.ಆಲೂರ್ ಅವರು, ಘಟನೆಯಲ್ಲಿ ಆಕೆ ಪ್ರೇಕ್ಷಕಿ ಮಾತ್ರ ಆಗಿದ್ದಳು. ನರಬಲಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರಲಿಲ್ಲ. ಅದನ್ನು ಸಾಬೀತುಪಡಿಸುವಂತಹ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಹೇಳಿದ್ದರು.

ಇದಕ್ಕೆ ವ್ಯತಿರಿಕ್ತವಾಗಿ ಪ್ರಾಸಿಕ್ಯೂಷನ್‌ ಮಹಾನಿರ್ದೇಶಕರಾದ ಹಿರಿಯ ನ್ಯಾಯವಾದಿ ಟಿ ಎ ಶಾಜಿ ಅವರು ʼಲೈಲಾ ಪ್ರಕರಣದಲ್ಲಿ ಸಕ್ರಿಯ ಪಾಲುಗಾರ್ತಿ. ಕ್ರೈಂ ವಿಭಾಗ ಸಾಕ್ಷ್ಯಗಳನ್ನು ಕಲೆ ಹಾಕಿದ್ದು ಕೃತ್ಯವನ್ನು ಸಾಬೀತುಪಡಿಸುವಂತಹ ವೈಜ್ಞಾನಿಕ ವಿಶ್ಲೇಷಣೆ ನಡೆಸಿದೆ. ಅದರ ಅಂತಿಮ ವರದಿ ಬಹುತೇಕ ಸಿದ್ಧವಾಗಿದ್ದು ಶಾಸನಬದ್ಧ 90 ದಿನಗಳ ಗಡುವು ಮುಗಿಯುವ ಮೊದಲು ಸಲ್ಲಿಸಲಾಗುವುದು ಎಂದಿದ್ದರು. ಅಲ್ಲದೆ ಅಪರಾಧದ ಭೀಕರ ಮತ್ತು ಆಘಾತಕಾರಿ ಸ್ವರೂಪವನ್ನು ನ್ಯಾಯಾಲಯದ ಮುಂದೆ ಮಂಡಿಸಿದ್ದರು.

ಕಳೆದ ವಿಚಾರಣೆ ವೇಳೆ ವಾದಗಳನ್ನು ಆಲಿಸಿದ್ದ ನ್ಯಾ ಥಾಮಸ್‌ ಅವರು ತಾವು ಆದೇಶ ನೀಡುವುದಕ್ಕೂ ಮುನ್ನ ಪರಿಶೀಲಿಸುವುದಕ್ಕಾಗಿ ಕೇಸ್‌ ಡೈರಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಪ್ರಾಸಿಕ್ಯೂಷನ್‌ಗೆ ಸೂಚಿಸಿದ್ದರು.

Related Stories

No stories found.
Kannada Bar & Bench
kannada.barandbench.com