
ಅಪಾಯಕಾರಿ ಆಯುಧಗಳನ್ನು ಹಿಡಿದು ಗಾಯಗೊಳಿಸುವುದನ್ನು ಅಪರಾಧೀಕರಿಸುವ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 324ರ ಅಡಿಯಲ್ಲಿ ಮಾನವ ಹಲ್ಲುಗಳನ್ನು 'ಅಪಾಯಕಾರಿ' ಆಯುಧವೆಂದು ಪರಿಗಣಿಸಲಾಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ [ತಾನಾಜಿ ಶಿವಾಜಿ ಸೋಲಂಕರ್ ಮತ್ತಿತರರು ಹಾಗೂ ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].
ಶಕೀಲ್ ಅಹ್ಮದ್ ಪ್ರಕರಣದಲ್ಲಿ (2004) ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಆಧರಿಸಿ ನ್ಯಾಯಮೂರ್ತಿಗಳಾದ ವಿಭಾ ಕಂಕಣವಾಡಿ ಮತ್ತು ಸಂಜಯ್ ದೇಶಮುಖ್ ಅವರ ಪೀಠ ಐವರು ಸದಸ್ಯರ ಕುಟುಂಬವೊಂದರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದುಗೊಳಿಸಿತು.
ಶಕೀಲ್ ಅಹಮದ್ ಪ್ರಕರಣದಲ್ಲಿ ಅಪಾಯಕಾರಿ ಆಯುಧಗಳನ್ನು ಹಿಡಿದು ಗಾಯಗೊಳಿಸುವುದನ್ನು ಅಪರಾಧೀಕರಿಸುವ ಐಪಿಸಿ ಸೆಕ್ಷನ್ 324ರ ಅಡಿಯಲ್ಲಿ ಮಾನವ ಹಲ್ಲುಗಳನ್ನು 'ಅಪಾಯಕಾರಿ' ಆಯುಧವೆಂದು ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಈ ಪ್ರಕರಣಕ್ಕೂ ಆ ತೀರ್ಪು ಅನ್ವಯವಾಗುತ್ತದೆ ಎಂದು ಹೈಕೋರ್ಟ್ ಹೇಳಿದೆ.
ಸೋಲಂಕರ್ ಕುಟುಂಬ ಮತ್ತು ಅವರ ಸೊಸೆ ಮಾಯಾ ನಡುವಿನ ಆಸ್ತಿ ವಿವಾದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ತಾನಾಜಿ ಶಿವಾಜಿ ಸೋಲಂಕರ್ ಮತ್ತು ಅವರ ಪತ್ನಿ ವನಮಾಲಾ ಅವರು ತನ್ನ ಹಾಗೂ ತಮ್ಮ ಸಹೋದರ ಲಕ್ಷ್ಮಣನ ಕೈ ಕಚ್ಚಿದ್ದಾರೆ ಎಂದು ಮಾಯಾ ದೂರು ಸಲ್ಲಿಸಿದ್ದರು.
ಮಾಯಾ ಮತ್ತು ಲಕ್ಷ್ಮಣ್ ಇಬ್ಬರಿಗೂ ಆದ ಗಾಯಗಳು ಚಿಕ್ಕದಾಗಿದ್ದವು, ಅವುಗಳನ್ನು ಸರಳವಾದ ಗಾಯಗಳಿಂದ ಕೂಡಿದ ಕಚ್ಚಿದ ಗಾಯಗಳು ಎಂದು ವರ್ಗೀಕರಿಸಲಾಗಿತ್ತು. ಐಪಿಸಿಯ ಸೆಕ್ಷನ್ 324 (ಅಪಾಯಕಾರಿ ಆಯುಧಗಳಿಂದ ಸ್ವಯಂಪ್ರೇರಣೆಯಿಂದ ಗಾಯಗೊಳಿಸುವುದು), 323 (ಸ್ವಯಂಪ್ರೇರಣೆಯಿಂದ ಗಾಯಗೊಳಿಸುವುದು), 504 (ಅವಮಾನ), 506 (ಕ್ರಿಮಿನಲ್ ಬೆದರಿಕೆ) ಮತ್ತು 34 (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಮಾಯಾ ಅವರು ಸೋಲಂಕರ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ಇದನ್ನು ಪ್ರಶ್ನಿಸಿ ಸೋಲಂಕರ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಅರ್ಜಿದಾರರಿಂದ ಉಂಟಾದ ಗಾಯಗಳು ಚಿಕ್ಕದಾಗಿದ್ದವು ಮತ್ತು ಅವುಗಳನ್ನು ಅಪಾಯಕಾರಿ ಆಯುಧದಿಂದ ಉಂಟಾಗಿವೆ ಎಂದು ಪರಿಗಣಿಸಲಾಗುವುದಿಲ್ಲ ಎಂಬುದಾಗಿ ನ್ಯಾಯಾಲಯ ನುಡಿದಿದೆ. ವೈದ್ಯಕೀಯ ವರದಿಗಳು, ಗಾಯಗಳು ಮಾನವ ಹಲ್ಲುಗಳಿಂದಲ್ಲ, "ಗಟ್ಟಿಯಾದ ಮತ್ತು ಮೊಂಡಾದ ವಸ್ತುವಿನಿಂದ ಉಂಟಾಗಿವೆ" ಎಂದು ತಿಳಿಸಿರುವುದನ್ನು ಪರಿಗಣಿಸಿದ ನ್ಯಾಯಾಲಯ ಸೆಕ್ಷನ್ 324ರ ಅಡಿಯಲ್ಲಿ ವಿಚಾರಣೆಯನ್ನು ಮುಂದುವರೆಸುವುದು ಸಮರ್ಥನೀಯವಲ್ಲ ಎಂದು ಅಭಿಪ್ರಾಯಪಟ್ಟಿತು.
[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]