ಮಾನವ-ವನ್ಯಜೀವಿ ಸಂಘರ್ಷ: ವೈದ್ಯಕೀಯ ನೆರವು ಕಲ್ಪಿಸಲು ನಿಯಂತ್ರಣ ಕೊಠಡಿ ಸ್ಥಾಪನೆಗೆ ಸರ್ಕಾರಕ್ಕೆ ಹೈಕೋರ್ಟ್‌ ಆದೇಶ

ಆನೆ-ಮಾನವ ಸಂಘರ್ಷ ಪ್ರಕರಣಗಳು ಹೆಚ್ಚು ಸಂಭವಿಸುವ ಹಾಸನ ಜಿಲ್ಲೆಯಲ್ಲಿ ತಾಲ್ಲೂಕು ಮಟ್ಟದಲ್ಲಿ ಕುಂದು ಕೊರತೆ ಪರಿಹಾರ ಘಟಕವನ್ನು ಸ್ಥಾಪಿಸಬೇಕು ಎಂದಿರುವ ನ್ಯಾಯಾಲಯ.
High Court of Karnataka
High Court of Karnataka

ರಾಜ್ಯದಲ್ಲಿ ವನ್ಯಜೀವಿ-ಮಾನವ ಸಂಘರ್ಷದಲ್ಲಿ ಗಾಯಗೊಂಡವರಿಗೆ ಹತ್ತಿರದ ತಾಲ್ಲೂಕು, ಜಿಲ್ಲಾ ಆಸ್ಪತ್ರೆ ಮತ್ತು ಪ್ರಾಥಮಿಕ ಕೇಂದ್ರಗಳಿಗೆ ಮಾಹಿತಿ ರವಾನಿಸಿ ಅಗತ್ಯ ವೈದ್ಯಕೀಯ ನೆರವು ಮತ್ತು ಚಿಕಿತ್ಸೆ ಕಲ್ಪಿಸಲು ದಿನದ 24 ಗಂಟೆ ಕಾರ್ಯ ನಿರ್ವಹಿಸುವಂತಹ ನಿಯಂತ್ರಣ ಕೊಠಡಿ ಸ್ಥಾಪನೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಮಂಗಳವಾರ ಆದೇಶಿಸಿದೆ.

ಹಾಸನದಲ್ಲಿ ಮಾನವ-ಆನೆ ಸಂಘರ್ಷ ತಡೆಯಲು 2023ರಲ್ಲಿ ಹೈಕೋರ್ಟ್ ಹೊರಡಿಸಿರುವ ಆದೇಶವನ್ನು ಸಮರ್ಪಕವಾಗಿ ಜಾರಿಗೊಳಿಸಲು ನಿರ್ದೇಶಿಸುವಂತೆ ಕೋರಿ ಕರ್ನಾಟಕ ಬೆಳಗಾರರ ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂಜಿಎಸ್‌ ಕಮಲ್ ಅವರ ನೇತೃತ್ವದ ವಿಭಾಗೀಯ ಪೀಠವು ಇತ್ಯರ್ಥಪಡಿಸಿದೆ.

ರಾಜ್ಯದಲ್ಲಿ ಅರಣ್ಯ ಸುತ್ತುವರಿದ ಪ್ರದೇಶದಲ್ಲಿ ವನ್ಯಜೀವಿ-ಮಾನವ ಸಂಘರ್ಷದಲ್ಲಿ ಗಾಯಗೊಂಡವರಿಗೆ ತುರ್ತು ಚಿಕಿತ್ಸೆ ಕಲ್ಪಿಸುವ ಅಗತ್ಯವಿದೆ. ಇದರಿಂದ ಘಟನೆ ಕುರಿತು ಸಮೀಪದ ತಾಲ್ಲೂಕು, ಜಿಲ್ಲಾ ಮತ್ತು ಪ್ರಾಥಮಿಕ ಕೇಂದ್ರಗಳಿಗೆ ಮಾಹಿತಿ ರವಾನಿಸಲು ಅನುಕೂಲವಾಗುವಂತೆ ದಿನದ 24 ಗಂಟೆ ಕಾಲ ಕಾರ್ಯ ನಿರ್ವಹಿಸುವ ನಿಯಂತ್ರಣ ಕೊಠಡಿ ಆರಂಭಿಸಬೇಕು. ಘಟನೆಯ ಮಾಹಿತಿ ದೊರೆತ ಕೂಡಲೇ ನಿಯಂತ್ರಣ ಕೊಠಡಿ, ಆಸ್ಪತ್ರೆಗೆ ರವಾನಿಸಬೇಕು. ಹೀಗೆ ಮಾಹಿತಿ ಪಡೆದ ತಕ್ಷಣವೇ ಆಸ್ಪತ್ರೆಯ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡವರಿಗೆ ಅಗತ್ಯ ವೈದ್ಯಕೀಯ ನೆರವು ಅಥವಾ ಪ್ರಥಮ ಚಿಕಿತ್ಸೆ ಕಲ್ಪಿಸಬೇಕು ಪೀಠ ನಿರ್ದೇಶಿಸಿದೆ.

ಅಲ್ಲದೆ, ಆನೆ-ಮಾನವ ಸಂಘರ್ಷ ಪ್ರಕರಣಗಳು ಹೆಚ್ಚು ಸಂಭವಿಸುವ ಹಾಸನ ಜಿಲ್ಲೆಯಲ್ಲಿ ತಾಲ್ಲೂಕು ಮಟ್ಟದಲ್ಲಿ ಕುಂದು ಕೊರತೆ ಪರಿಹಾರ ಘಟಕವನ್ನು ಸ್ಥಾಪಿಸಬೇಕು. ಅದರಲ್ಲಿ ವಲಯ ಅರಣ್ಯಾಧಿಕಾರಿ ಹಾಗೂ ತಹಶೀಲ್ದಾರ್ ಇರಬೇಕು. ಈ ಘಟಕವು ಪ್ರತಿ ಎರಡು ತಿಂಗಳಿಗೊಮ್ಮೆ ಸಭೆ ನಡೆಸಬೇಕು. ಸ್ವೀಕರಿಸಿದ ಕುಂದು ಕೊರತೆಗಳ ಬಗ್ಗೆ ದಾಖಲೆ ನಿರ್ವಹಿಸಬೇಕು. ಅವುಗಳನ್ನು ವಲಯ ಅರಣ್ಯಾಧಿಕಾರಿಯ ಮಟ್ಟದಲ್ಲಿ ಪರಿಹಾರ ಕೊಡಬಹುದಾದರೆ ಅವರು ದೂರು ಸ್ವೀಕರಿಸಿದ 24 ಗಂಟೆಯೊಳಗೆ ಕ್ರಮ ಕೈಗೊಳ್ಳಬೇಕು ಮತ್ತು ಆ ಸಂಬಂಧ ದಾಖಲೆಗಳನ್ನೂ ನಿರ್ವಹಣೆ ಮಾಡಬೇಕು ಎಂದು ಪೀಠ ಹೇಳಿದೆ.

ಒಂದೊಮ್ಮೆ ಇಂತಹ ಪ್ರಕರಣದಲ್ಲಿ ಹಿರಿಯ ಅಧಿಕಾರಿಗಳ ಮಧ್ಯಪ್ರವೇಶ ಅಗತ್ಯವಿದ್ದರೆ, ವರದಿಯೊಂದಿಗೆ ಕುಂದು ಕೊರತೆಯನ್ನು ಹಿರಿಯ ಅಧಿಕಾರಿಗಳಿಗೆ ರವಾನಿಸಬೇಕು. ವಲಯದ ಮಟ್ಟದ ಹಿರಿಯ ಅಧಿಕಾರಿ ಅಥವಾ ಪ್ರಾದೇಶಿಕ ಮಟ್ಟದ ಹಿರಿಯ ಅಧಿಕಾರಿಗಳು, ಆ ದೂರಗಳ ಸಂಬಂಧ ಕ್ರಮ ಕೈಗೊಂಡು ದಾಖಲೆಗಳನ್ನು ನಿರ್ವಹಣೆ ಮಾಡಬೇಕು ಎಂದು ಪೀಠ ಸೂಚಿಸಿದೆ.

ಅಲ್ಲದೆ, ಕುಂದು-ಕೊರತೆ ಪರಿಹಾರ ಘಟಕದ ಕುರಿತು ಪತ್ರಿಕೆಗಳು ಮತ್ತು ಸುದ್ದಿವಾಹಿನಿಯಲ್ಲಿ ವ್ಯಾಪಕ ಪ್ರಚಾರ ನೀಡಬೇಕು. ಸ್ಥಾಪನೆ ಮಾಡಿದ ಘಟಕದ ಮಾಹಿತಿಯನ್ನು ಪ್ರತಿ ಗ್ರಾಮ ಪಂಚಾಯತಿಗಳ ನೋಟಿಸ್ ಬೋರ್ಡ್‌ನಲ್ಲಿ ಪ್ರಕಟಿಸಬೇಕು. ಆನೆ-ಮಾನವ ಸಂಘರ್ಷ ಪ್ರಕರಣಗಳನ್ನು ತಪ್ಪಿಸಲು ಸುರಕ್ಷಿತ ಆನೆ ಕಾರಿಡಾರ್ ನಿರ್ಮಿಸಬೇಕು ಎಂದು ಸರ್ಕಾರಕ್ಕೆ ಪೀಠ ನಿರ್ದೇಶಿಸಿತು.

ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ವಕೀಲರು ಅಫಿಡವಿಟ್‌ ಸಲ್ಲಿಸಿ, ಹಾಸನ ಜಿಲ್ಲಾದ್ಯಂತ ಆನೆ-ಮಾನವ ನಡುವಿನ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಆನೆ ಕಾರ್ಯ ಪಡೆಗೆ (ಇಟಿಫ್) ಅಗತ್ಯ ಸಿಬ್ಬಂದಿ, ವಾಹನ ಹಾಗೂ ಸಾಮಗ್ರಿ ಪೂರೈಸಲಾಗಿದೆ. ಆನೆ-ಮಾನವ ಸಂಘರ್ಷ ಕುರಿತು ಮಾಹಿತಿ ಸ್ವೀಕರಿಸಲು ವಾರದ 24 ತಾಸು ಕರ್ತವ್ಯ ನಿರ್ವಹಿಸುವ ನಿಯಂತ್ರಣ ಕೊಠಡಿ ಸಹ ಸ್ಥಾಪಿಸಲಾಗಿದೆ. ಆನೆಗಳ ಸಂಚಾರ ಬಗ್ಗೆ ಎಚ್ಚರಿಕೆ ನೀಡಲು ಎಲ್‌ಇಡಿ ಡಿಸ್‌ಪ್ಲೇ ಬೋರ್ಡ್ ಮತ್ತು ಸೈರನ್ ಒಳಗೊಂಡ ಸುಧಾರಿತ ಎಚ್ಚರಿಕೆ ವ್ಯವಸ್ಥೆ ಮತ್ತು ಬಲ್ಕ್ ಎಸ್‌ಎಂಎಸ್ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.

ಇದನ್ನು ಪರಿಗಣಿಸಿದ ಹೈಕೋರ್ಟ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಮುಖ್ಯ ವನ್ಯಜೀವಿ ಪಾಲಕರು ವನ್ಯಜೀವಿ-ಮಾನವ ಸಂಘರ್ಷ ಪ್ರಕರಣಗಳ ಮೇಲ್ವಿಚಾರಣೆ ವಹಿಸಲು ಕಾಲ ಕಾಲಕ್ಕೆ ಸಭೆ ನಡೆಸಬೇಕು. ಇದು ಸಾಧ್ಯವಾಗಬೇಕಾದರೆ ವರ್ಷಕ್ಕೆ ನಾಲ್ಕು ಬಾರಿ ಅಧಿಕಾರಿಗಳು ಸಭೆ ನಡೆಸಿ ಚರ್ಚಿಸಬೇಕು ಮತ್ತು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿದೆ.

Related Stories

No stories found.
Kannada Bar & Bench
kannada.barandbench.com