ಐತಿಹಾಸಿಕ ಸ್ಮಾರಕಗಳ ಸಂರಕ್ಷಿಸಲು ಕೆಲವು ಬಾರಿ ಅವುಗಳ ನವೀಕರಣ ಅಗತ್ಯ: ಸುಪ್ರೀಂ ಕೋರ್ಟ್

ದೆಹಲಿಯ ಸುಂದರ್ ನರ್ಸರಿ ಮತ್ತು ಹುಮಾಯೂನ್ ಸಮಾಧಿಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ) ಕೈಗೊಂಡ ನವೀಕರಣ ಕಾರ್ಯಗಳ ಉದಾಹರಣೆಗಳನ್ನು ನ್ಯಾಯಾಲಯ ಉಲ್ಲೇಖಿಸಿದೆ.
ಹುಮಾಯೂನ್ ಸಮಾಧಿ ದೆಹಲಿಯ ಕೇಂದ್ರ ಸಂರಕ್ಷಿತ ಸ್ಮಾರಕವಾಗಿದೆ
ಹುಮಾಯೂನ್ ಸಮಾಧಿ ದೆಹಲಿಯ ಕೇಂದ್ರ ಸಂರಕ್ಷಿತ ಸ್ಮಾರಕವಾಗಿದೆ

ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸಲು ಕೆಲವೊಮ್ಮೆ ಅವುಗಳ ನವೀಕರಣ ಅಗತ್ಯವಾಗಿದ್ದು ಕಟ್ಟಡದ ಮೂಲ ಗುಣಲಕ್ಷಣಗಳನ್ನು ಉಳಿಸಿಕೊಂಡು ನವೀಕರಣ ಮಾಡುವುದರಲ್ಲಿ ತಪ್ಪಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ [ಟಿಆರ್ ರಮೇಶ್ ಮತ್ತು ತಮಿಳುನಾಡು ಸರರ್ಕಾರ ನಡುವಣ ಪ್ರಕರಣ].

ದೆಹಲಿಯ ಹುಮಾಯೂನ್‌ ಗೋರಿ ಹಾಗೂ ಅದಕ್ಕೆ ಹೊಂದಿಕೊಂಡಂತಿರುವ ಮೊಘಲರ ಕಾಲದ ಸುಂದರ್‌ ನರ್ಸರಿಯ ಉದಾಹರಣೆ ನೀಡಿದ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ದೀಪಂಕರ್ ದತ್ತಾ ಹಾಗೂ ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನೊಳಗೊಂಡ ಪೀಠ ಆ ಪಾರಂಪರಿಕ ತಾಣಗಳಲ್ಲಿ ಕೈಗೊಂಡ ನವೀಕರಣ ಕಾರ್ಯಗಳು ಅವುಗಳನ್ನು ಉಳಿಸಲು ಸಹಾಯ ಮಾಡಿತು ಎಂದಿದೆ.

"ಕೆಲವೊಮ್ಮೆ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮಧ್ಯಪ್ರವೇಶಿಸಬೇಕಾಗುತ್ತದೆ. ನವೀಕರಣದಿಂದಾಗಿ ಹುಮಾಯೂನ್ ಸಮಾಧಿ, ಸುಂದರ್ ನರ್ಸರಿ ಇತ್ಯಾದಿ ಪಾರಂಪರಿಕ ಸ್ಥಳಗಳು ಭೇಟಿ ನೀಡಲು ಯೋಗ್ಯವಾಗಿವೆ. ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದರೆ, ಒಳ್ಳೆಯದು" ಎಂದು ನ್ಯಾಯಮೂರ್ತಿ ಖನ್ನಾ ಹೇಳಿದರು. ಕೆಲವೊಮ್ಮೆ ಅದನ್ನು ಉತ್ತಮಗೊಳಿಸಲು ಮಾರ್ಪಾಡುಗಳು ಬೇಕಾಗುತ್ತವೆ ಎಂದು ಅವರು ನುಡಿದರು.

ತಮಿಳುನಾಡಿನ ಕೆಲ ದೇಗುಲಗಳಲ್ಲಿ ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಇಲಾಖೆ ಕೈಗೊಂಡ ನಿರ್ಮಾಣ ಮತ್ತು ನವೀಕರಣ ಕಾರ್ಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿ ದೇವಾಲಯಗಳ ಪರ ಹೋರಾಟಗಾರ ಟಿ ಆರ್‌ ರಮೇಶ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ, ಸಂಜೀವ್ ಖನ್ನಾ ಹಾಗೂ ಪ್ರಶಾಂತ್ ಕುಮಾರ್ ಮಿಶ್ರಾ
ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ, ಸಂಜೀವ್ ಖನ್ನಾ ಹಾಗೂ ಪ್ರಶಾಂತ್ ಕುಮಾರ್ ಮಿಶ್ರಾ

ಧಾರ್ಮಿಕ ಸಂಸ್ಥೆಗಳ ಆಸ್ತಿ ನಿರ್ವಹಣೆ ಮತ್ತು ಸಂರಕ್ಷಣಾ ನಿಯಮಾವಳಿ- 1964ರ ಸಿಂಧುತ್ವ ಪ್ರಶ್ನಿಸಿ ರಮೇಶ್ ನ್ಯಾಯಾಲಯದ ಮೆಟ್ಟಿಲೇರಿದ್ದರು.

ತಮಿಳುನಾಡಿನ ದೇವಾಲಯಗಳಲ್ಲಿನ ಪಾರಂಪರಿಕ ರಚನೆ, ಪ್ರತಿಮೆ, ಶಾಸನ, ಭಿತ್ತಿಚಿತ್ರ, ವರ್ಣಚಿತ್ರ ಇತ್ಯಾದಿಗಳನ್ನು ಕೆಡವಲು, ನಾಶಪಡಿಸಲು ಇಲ್ಲವೇ ಬದಲಾಯಿಸಲು ಮಾನವ ಸಂಪನ್ಮೂಲ ಮತ್ತು ದತ್ತಿ ಇಲಾಖೆ ಈ ನಿಯಮಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ ಎಂದು ರಮೇಶ್ ದೂರಿದ್ದರು. ಮದ್ರಾಸ್‌ ಹೈಕೋರ್ಟ್‌ನಲ್ಲಿ ಅವರು ಈ ಸಂಬಂಧ ಮನವಿ ಸಲ್ಲಿಸಿದ್ದರಾದರೂ ಅದು ಅರ್ಜಿಯನ್ನು ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ರಮೇಶ್‌ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಭವಿಷ್ಯದಲ್ಲಿ ಕಾನೂನು ಉಲ್ಲಂಘನೆಯಾಗುತ್ತದೆ ಎಂಬ ಊಹೆಗಳ ಆಧಾರದಲ್ಲಿ 1964ರ ನಿಯಮಗಳ ಸಿಂಧುತ್ವ ಪ್ರಶ್ನಿಸುವುದು ಆಧಾರವಾಗದು ಎಂದ ಸುಪ್ರೀಂ ಕೋರ್ಟ್‌ ಮೇಲ್ಮನವಿಯನ್ನು ತಿರಸ್ಕರಿಸಿತು.

Related Stories

No stories found.
Kannada Bar & Bench
kannada.barandbench.com