ಮಲಗುಂಡಿ ಶುಚಿಗೊಳಿಸುವಾಗ ಸಾವು: ನಿವೇಶನ ಹಿಂಪಡೆದ ಪಂಚಾಯಿತಿ, ಅಧಿಕಾರಿಗಳಿಗೆ ₹1 ಲಕ್ಷ ದಂಡ ವಿಧಿಸಿದ ಹೈಕೋರ್ಟ್‌

ಉಳ್ಳವರು ಮತ್ತು ಉಳ್ಳದವರ ನಡುವಿನ ಹಕ್ಕುಗಳ ಕುರಿತು ಪ್ರಸ್ತಾಪಿಸಿದ ನ್ಯಾಯಾಲಯವು ಉಳ್ಳವರು ಉಳ್ಳದವರ ಹಕ್ಕುಗಳನ್ನು ದಮನ ಮಾಡುವುದನ್ನು ಕೈಬಿಡಬೇಕು ಎಂದು ಆದೇಶಿಸಿದೆ.
ಮಲಗುಂಡಿ ಶುಚಿಗೊಳಿಸುವಾಗ ಸಾವು: ನಿವೇಶನ ಹಿಂಪಡೆದ ಪಂಚಾಯಿತಿ, ಅಧಿಕಾರಿಗಳಿಗೆ ₹1 ಲಕ್ಷ ದಂಡ ವಿಧಿಸಿದ ಹೈಕೋರ್ಟ್‌

ಮಲಗುಂಡಿ (ಮ್ಯಾನ್ ಹೋಲ್) ಶುಚಿಗೊಳಿಸುವಾಗ ಕಾರ್ಮಿಕರೊಬ್ಬರು ಸಾವನ್ನಪ್ಪಿದ ಪ್ರಕರಣದಲ್ಲಿ ಮೃತನ ಪತ್ನಿಗೆ ನೀಡಿದ್ದ ನಿವೇಶನ ಹಿಂಪಡೆದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬೆಳವಂಗಲ ಪಂಚಾಯಿತಿಗೆ ಕರ್ನಾಟಕ ಹೈಕೋರ್ಟ್ ಈಚೆಗೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ. ಅಲ್ಲದೆ, ಮೃತರ ಪತ್ನಿಗೆ ಮನೆಸಹಿತ ನಿವೇಶನ ನೀಡುವಂತೆ ಆದೇಶಿಸಿದೆ.

ಮೃತ ಕಾರ್ಮಿಕ ನರಸಿಂಹಯ್ಯನ ಪತ್ನಿ ನಾಗಮ್ಮ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಮಾನ್ಯ ಮಾಡಿದೆ.

ಉಳ್ಳವರು ಮತ್ತು ಉಳ್ಳವರ ನಡುವಿನ ಹಕ್ಕುಗಳ ಕುರಿತು ಪ್ರಸ್ತಾಪಿಸಿ, ಉಳ್ಳವರು ಉಳ್ಳದವರ ಹಕ್ಕುಗಳನ್ನು ದಮನ ಮಾಡುವುದನ್ನು ಕೈಬಿಡಬೇಕು ಎಂದು ಆದೇಶಿಸಿದೆ.

ಅರ್ಜಿದಾರರಿಗೆ ಕಟ್ಟಿದ ಮನೆಯನ್ನೇ ನೀಡಬೇಕು. ಅಲ್ಲದೆ, ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೂವರು ಸೇರಿ 50 ಸಾವಿರ ರೂಪಾಯಿ ಮತ್ತು ಗ್ರಾಮ ಪಂಚಾಯಿತಿ 50 ಸಾವಿರ ರೂಪಾಯಿ ಸೇರಿಸಿ ಒಟ್ಟು ಒಂದು ಲಕ್ಷ ರೂಪಾಯಿಗಳನ್ನು ಅರ್ಜಿದಾರರಾದ ನಾಗಮ್ಮಗೆ ವಿತರಣೆ ಮಾಡಬೇಕು ಎಂದು ನ್ಯಾಯಾಲಯ ಆದೇಶ ನೀಡಿದೆ.

ನಿವೇಶನದಲ್ಲಿ ಮನೆ ಕಟ್ಟಿಲ್ಲ ಎಂದು ಹಂಚಿಕೆ ರದ್ದುಪಡಿಸಿದ್ದ ಪಂಚಾಯಿತಿ ಕ್ರಮಕ್ಕೆ ಪೀಠವು ಅಸಮಾಧಾನ ವ್ಯಕ್ತಪಡಿಸಿ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲುಎಸ್‌ಎಸ್‌ಬಿ) ನಿರ್ಲಕ್ಷ್ಯದಿಂದ ನರಸಿಂಹಯ್ಯ ಸಾವನ್ನಪ್ಪಿದ್ದಾರೆ ಎಂದಿತು. ಅವರಿಗೆ ನೀಡಿರುವ ನಿವೇಶನ ರದ್ದುಗೊಳಿಸಿದ ಪಂಚಾಯಿತಿ ಧೋರಣೆಯನ್ನು ಕಟುವಾಗಿ ಖಂಡಿಸಿತು.

ಅರ್ಜಿದಾರರನ್ನು ಅವರ ಸ್ವತ್ತಿನಿಂದ (ನಿವೇಶನ) ಒಕ್ಕಲೆಬ್ಬಿಸಬಾರದು ಮತ್ತ ಅವರಿಗೆ ಮ್ಯಾನ್ಯುಯಲ್ ಸ್ಕ್ಯಾವೇಂಜರ್ಸ್‌ (ಮಲಹೊರುವ ಕಾರ್ಮಿಕರ) ಪುನರ್ ವಸತಿ ಕಾಯಿದೆ ಸೆಕ್ಷನ್ 13ರ ಪ್ರಕಾರ ಮಲದಗುಂಡಿ ಶುಚಿಗೊಳಿಸಲು ಕಾರ್ಮಿಕರನ್ನು ನೇಮಕ ಮಾಡಿಕೊಳ್ಳುವುದಕ್ಕೆ ನಿಷೇಧವಿದೆ. ಆದರೂ ನೇಮಕ ಮಾಡಿಕೊಂಡಿದ್ದಕ್ಕಾಗಿ ಅರ್ಜಿದಾರರಿಗೆ ಆರ್ಥಿಕ ನೆರವನ್ನು ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

2008ರ ನವೆಂಬರ್‌ 14ರಂದು ಬೆಂಗಳೂರಿನ ಯಲಹಂಕದಲ್ಲಿ ಜಲಮಂಡಳಿಯ ಯೋಜನೆಯೊಂದರಲ್ಲಿ ಮಲದಗುಂಡಿ ಸ್ವಚ್ಛಪಡಿಸುವ ಕೆಲಸದಲ್ಲಿ ತೊಡಗಿದ್ದಾಗ ಅರ್ಜಿದಾದರರ ಪತಿ ಉಸಿರುಕಟ್ಟಿ ಸಾವನ್ನಪ್ಪಿದ್ದರು. ಹೀಗಾಗಿ, ಮೃತರ ಪತ್ನಿಗೆ ನಿವೇಶನ ಹಂಚಿಕೆ ಮಾಡುವುದಲ್ಲದೆ, ಆಕೆಗೆ ಮನೆ ಕಟ್ಟಿಸಿಕೊಳ್ಳಲು ಆರ್ಥಿಕ ನೆರವು ನೀಡುವುದೂ ಸಹ ಸಂಬಂಧಿಸಿದ ಸಂಸ್ಥೆಗಳ ಆದ್ಯ ಕರ್ತವ್ಯವಾಗಿದೆ. ಆ ಕುರಿತು ಸೆಕ್ಷನ್ 13ರಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಅದನ್ನು ಪಾಲನೆ ಮಾಡಲೇಬೇಕು ಎಂದು ಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ: 2008ರಲ್ಲಿ ನರಸಿಂಹಯ್ಯ ಮೃತಪಟ್ಟ ನಂತರ ಹೈಕೋರ್ಟ್ ನಿರ್ದೇಶನದಂತೆ ಅವರ ಪತ್ನಿ ನಾಗಮ್ಮಗೆ 2012ರಲ್ಲಿ ದೊಡ್ಡಬೆಳವಂಗಲ ಗ್ರಾಮ ಪಂಚಾಯಿತಿ 1,200 ಚದರ ಅಡಿಯ ನಿವೇಶನವನ್ನು ಮಂಜೂರು ಮಾಡಿತ್ತು. ಆದರೆ, ಅವರು ಮನೆ ಕಟ್ಟಲಿಲ್ಲ ಎಂಬ ಕಾರಣಕ್ಕೆ ಅವರಿಗೆ ನೀಡಿದ್ದ ನಿವೇಶನವನ್ನು ಗ್ರಾಮ ಪಂಚಾಯಿತಿ ರದ್ದುಗೊಳಿಸಿತ್ತು. ಅದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.

Related Stories

No stories found.
Kannada Bar & Bench
kannada.barandbench.com