ಆದಾಯವಿಲ್ಲದಿದ್ದರೂ ಹೆಂಡತಿಯನ್ನು ನೋಡಿಕೊಳ್ಳುವುದು ಪತಿಯ ಕರ್ತವ್ಯ: ಅಲಾಹಾಬಾದ್ ಹೈಕೋರ್ಟ್

ಸುಪ್ರೀಂ ಕೋರ್ಟ್‌ 2022ರಲ್ಲಿ ನೀಡಿದ್ದ ತೀರ್ಪನ್ನು ಹೈಕೋರ್ಟ್ ಅವಲಂಬಿಸಿದೆ. ಪತಿ ದೈಹಿಕ ಶ್ರಮದಲ್ಲಿ ತೊಡಗಿಕೊಂಡಾದರೂ ಸರಿ ತನ್ನ ಹೆಂಡತಿಯನ್ನು ನೋಡಿಕೊಳ್ಳಲು ಬದ್ಧನಾಗಿರಬೇಕು ಎಂದು ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ ಒತ್ತಿ ಹೇಳಿದೆ.
ಅಲಾಹಾಬಾದ್ ಹೈಕೋರ್ಟ್, ಲಖನೌ ಪೀಠ
ಅಲಾಹಾಬಾದ್ ಹೈಕೋರ್ಟ್, ಲಖನೌ ಪೀಠ

ತಾನು ಮಾಡುವ ಉದ್ಯೋಗದಿಂದ ಯಾವುದೇ ಆದಾಯ ದೊರೆಯದಿದ್ದರೂ ಪತ್ನಿಗೆ ಜೀವನಾಂಶ ಒದಗಿಸುವುದು ಪತಿಯ ಕರ್ತವ್ಯ ಎಂದು ಅಲಾಹಾಬಾದ್‌ ಹೈಕೋರ್ಟ್‌ ಈಚೆಗೆ ಅಭಿಪ್ರಾಯಪಟ್ಟಿದೆ.

ಪತಿ ಕೌಶಲ್ಯರಹಿತ ಉದ್ಯೋಗ ಮಾಡುತ್ತಿದ್ದರೂ ಆತ ಕನಿಷ್ಠ ವೇತನದ ರೂಪದಲ್ಲಿ 350ರಿಂದ 400 ರೂಪಾಯಿಗಳನ್ನು ಗಳಿಸಬಹುದಾಗಿದ್ದು ಹೆಂಡತಿಯನ್ನು ನೋಡಿಕೊಳ್ಳಬಹುದು ಎಂದು ನ್ಯಾಯಾಲಯ ಹೇಳಿದೆ.

ವಿಚ್ಛೇದಿತ ಪತ್ನಿಗೆ ಮಾಸಿಕ ಜೀವನಾಂಶವಾಗಿ 2,000 ರೂ ಪಾವತಿಸುವಂತೆ ಆದೇಶಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿ ರೇಣು ಅಗರ್‌ವಾಲ್‌ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜೀವನಾಂಶ ಮೊತ್ತ ಪಾವತಿಸಲು ಸಾಕಷ್ಟು ಆದಾಯವಿಲ್ಲ ಎಂದು ವ್ಯಕ್ತಿ ಹೇಳಿಕೊಂಡಿದ್ದರು.

ಪತಿ ತನ್ನ ಕೆಲಸ ಅಥವಾ ಮಾರುತಿ ವ್ಯಾನ್‌ ಬಾಡಿಗೆಯಿಂದ ಯಾವುದೇ ಆದಾಯ ಪಡೆಯುತ್ತಿಲ್ಲ ಎಂದು ಭಾವಿಸಿದರೂ ಕೂಡ ಅಂಜು ಗರ್ಗ್ ಮತ್ತು ದೀಪಕ್ ಕುಮಾರ್ ಗರ್ಗ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹೇಳಿರುವಂತೆ ಪತಿ ತನ್ನ ಹೆಂಡತಿಗೆ ಜೀವನಾಂಶ ಪಾವತಿಸಲು ಬದ್ಧನಾಗಿರಬೇಕು ಎಂದು ನ್ಯಾಯಾಲಯ ನುಡಿದಿದೆ. ಪತಿ ದೈಹಿಕ ಶ್ರಮದಲ್ಲಿ ತೊಡಗಿಕೊಂಡಾದರೂ ಸರಿ ತನ್ನ ಹೆಂಡತಿಯನ್ನು ನೋಡಿಕೊಳ್ಳಲು ಬದ್ಧನಾಗಿರಬೇಕು ಎಂದು ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ ಒತ್ತಿ ಹೇಳಿದೆ.

ನ್ಯಾಯಮೂರ್ತಿ ರೇಣು ಅಗರ್‌ವಾಲ್‌
ನ್ಯಾಯಮೂರ್ತಿ ರೇಣು ಅಗರ್‌ವಾಲ್‌

ಹೆಂಡತಿ ಮತ್ತು ಅಪ್ರಾಪ್ತ ಮಕ್ಕಳಿಗೆ ಆರ್ಥಿಕ ನೆರವು ನೀಡುವುದು ಗಂಡನ ಪವಿತ್ರ ಕರ್ತವ್ಯವಾಗಿದೆ. ಕಾನೂನುಬದ್ಧವಾಗಿ ಅನುಮತಿಸಲಾದ ಕಾರಣಗಳನ್ನು ಹೊರತುಪಡಿಸಿ ದೈಹಿಕವಾಗಿ ಸಶಕ್ತನಾಗಿರುವ ಪತಿ ದೈಹಿಕ ಶ್ರಮದ ಮೂಲಕವಾದರೂ ಹಣ ಸಂಪಾದಿಸುವ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವಂತಿಲ್ಲ ಎಂದು ಪೀಠ ವಿವರಿಸಿದೆ.

ಸಿಆರ್‌ಪಿಸಿ ಸೆಕ್ಷನ್ 125 (ಹೆಂಡತಿ, ಮಕ್ಕಳು ಮತ್ತು ಪೋಷಕರಿಗೆ ಜೀವನಾಂಶ ನೀಡುವ ಆದೇಶ) ಅಡಿಯಲ್ಲಿ ಜೀವನಾಂಶ ಪಾವತಿಸುವ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್ ಈ ನಿಲುವು ವ್ಯಕ್ತಪಡಿಸಿದೆ.

ತಾನು ಕಾರ್ಮಿಕ, ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದೇನೆ ಎಂಬುದು ಪತಿಯ ಮನವಿಯಾಗಿತ್ತು. ಆದರೆ ತನ್ನ ಕೆಲಸ, ಹಾಲಿನ ವ್ಯವಹಾರ ಮತ್ತು ಕೃಷಿ ಭೂಮಿಯಿಂದ ತಿಂಗಳಿಗೆ ಆತ ಸುಮಾರು 50,000 ರೂಪಾಯಿ ಸಂಪಾದಿಸುತ್ತಾನೆ ಎಂದು ಪತ್ನಿ ವಾದಿಸಿದ್ದರು.

ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನ್ಯಾಯಾಲಯ ಪತಿ ದೈಹಿಕವಾಗಿ ಸದೃಢರಾಗಿದ್ದು ಹೆಂಡತಿಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಪೂರೈಸಲು ಆರ್ಥಿಕವಾಗಿ ಸಮರ್ಥರಾಗಿದ್ದಾರೆ. ಪತ್ನಿ ವ್ಯಭಿಚಾರದಲ್ಲಿ ತೊಡಗಿದ್ದಾಳೆ ಎಂಬ ತನ್ನ ಹೇಳಿಕೆ ಬೆಂಬಲಿಸಲು ಪತಿಯ ಬಳಿ ಯಾವುದೇ ಪುರಾವೆಗಳಿಲ್ಲ ಎಂದು ತೀರ್ಮಾನಿಸಿತು.

ಈ ಅವಲೋಕನಗಳೊಂದಿಗೆ, ಪತಿಯ ಮನವಿಯನ್ನು ವಜಾಗೊಳಿಸಿದ ಹೈಕೋರ್ಟ್‌, ಕೌಟುಂಬಿಕ ನ್ಯಾಯಾಲಯ ನೀಡಿದ್ದ ತೀರ್ಪನ್ನು ಎತ್ತಿಹಿಡಿದಿತು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Attachment
PDF
Kamal v State.pdf
Preview
Kannada Bar & Bench
kannada.barandbench.com