ಸುಳ್ಳು ಮಾಹಿತಿ ನೀಡಿ ದಿಕ್ಕುತಪ್ಪಿಸಿದ ತಾಯಿ; ನಾಸಿಕ್ ಪೊಲೀಸರ ಸಹಾಯದಿಂದ ಮಗುವನ್ನು ಹಾಜರುಪಡಿಸಲು ಹೈಕೋರ್ಟ್‌ ಆದೇಶ

ನ್ಯಾಯಾಲಯಕ್ಕೆ ಹಾಜರುಪಡಿಸುವ ಪ್ರಕ್ರಿಯೆಯಲ್ಲಿ ಮಗುವಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಪೊಲೀಸರು ಮಫ್ತಿಯಲ್ಲಿ ಹೋಗಬೇಕು. ಮಗು ಮತ್ತು ತಾಯಿಯನ್ನು ಅಪರಾಧಿಗಳಂತೆ ಕಾಣಬಾರದು. ಮಗುವಿನ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರದಂತೆ ಕರೆತರಬೇಕು.
Karntaka HC and Justices B Verappa and K S Hemalekha
Karntaka HC and Justices B Verappa and K S Hemalekha
Published on

ಬೆಂಗಳೂರಿನಿಂದ ಮಗುವನ್ನು ಕರೆದೊಯ್ದು ಮಹಾರಾಷ್ಟ್ರದ ನಾಸಿಕ್‌ನಲ್ಲಿ ನೆಲೆಸಿರುವ ಪತ್ನಿ ವಿರುದ್ಧ ಪತಿ ಸಲ್ಲಿಸಿರುವ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಗುರುವಾರ ಪರಿಗಣಿಸಿರುವ ಕರ್ನಾಟಕ ಹೈಕೋರ್ಟ್, ನಾಸಿಕ್ ಪೊಲೀಸ್ ಆಯುಕ್ತರ ಸಹಾಯದಿಂದ ಮಗು ಮತ್ತು ತಾಯಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆಗೆ ನಿರ್ದೇಶಿಸಿದೆ.

ಪತ್ನಿಯು ತನ್ನ ಮಗುವನ್ನು ಅಕ್ರಮವಾಗಿ ಕರೆದೊಯ್ದು ನಾಸಿಕ್‌ನಲ್ಲಿ ನೆಲೆಸಿದ್ದಾರೆ ಎಂದು ಆರೋಪಿಸಿ ಬೆಂಗಳೂರಿನ ಕರಿಯಮ್ಮನ ಅಗ್ರಹಾರ ಬಡಾವಣೆಯ ನಿವಾಸಿಯಾದ ಪತಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ ವೀರಪ್ಪ ಮತ್ತು ಕೆ ಎಸ್‌ ಹೇಮಲೇಖಾ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಮಗುವನ್ನು ಹಾಜರುಪಡಿಸಲು ಸೂಕ್ತ ಕಾಲಾವಕಾಶ ನೀಡಿದ ಹೊರತಾಗಿಯೂ ತಾನು ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದೇನೆ ಎಂದು ತಾಯಿ ಸುಳ್ಳು ಮಾಹಿತಿ ನೀಡಿ ಹೈಕೋರ್ಟ್‌ಗೆ ದಿಕ್ಕು ತಪ್ಪಿಸಿದ್ದರು. ಇದಲ್ಲದೇ ಶಾಲೆಯ ಸಭೆಗೆ ಹಾಜರಾಗಬೇಕಾದ ಕಾರಣ ನ್ಯಾಯಾಲಯಕ್ಕೆ ಬರಲಾಗದು ಎಂದು ವಾಟ್ಸ್ ಆ್ಯಪ್ ಸಂದೇಶ ಕಳುಹಿಸಿ ನ್ಯಾಯಾಲಯದ ಆದೇಶ ಅಲಕ್ಷಿಸಿದ್ದಾರೆ. ಸಾಕಷ್ಟು ಕಾಲಾವಕಾಶ ನೀಡಿದ್ದರೂ ನ್ಯಾಯಾಲಯ ಆದೇಶವನ್ನು ಪಾಲಿಸದೆ ಅರ್ಜಿದಾರರ ಪತ್ನಿಯು ಮಗುವನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿಲ್ಲ. ಜುಲೈ 28ರಂದು ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಾನು ಅನಾರೋಗ್ಯದಿಂದ ಬಳಲುತ್ತಿದ್ದೇನೆ. ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಹಾಸಿಗೆ ಹಿಡಿದಿದ್ದೇನೆ ಎಂದು ಸುಳ್ಳು ಮಾಹಿತಿ ನೀಡಿ ಪೊಲೀಸರು ಮಗುವನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವುದನ್ನು ತಪ್ಪಿಸಿದ್ದಾರೆ ಎಂದು ಪೀಠವು ಅಸಮಾಧಾನ ವ್ಯಕ್ತಪಡಿಸಿದೆ.

ಅಲ್ಲದೆ, ಇಂದು ಅರ್ಜಿ ವಿಚಾರಣೆ ಬಂದಾಗ ನ್ಯಾಯಾಲಯ ಸೂಚನೆ ನೀಡಿದ್ದರೂ ಮಗುವನ್ನು ಹಾಜರುಪಡಿಸಿಲ್ಲ. ಮೇಲಾಗಿ ಮಗುವಿನ ಶಾಲೆಯಲ್ಲಿ ಪೋಷಕರಿಗೆ ಸಭೆಯಿದ್ದು, ಅದಕ್ಕೆ ಹಾಜರಾಗಬೇಕಿದೆ. ಹೀಗಾಗಿ, ನ್ಯಾಯಾಲಯಕ್ಕೆ ಹಾಜರಾಗಲು ಕಷ್ಟ. 15 ದಿನ ಕಾಲಾವಕಾಶ ಪಡೆಯಬೇಕು ಎಂದು ವಾಟ್ಸ್ ಆ್ಯಪ್ ಸಂದೇಶ ಕಳುಹಿಸಿರುವುದನ್ನು ಸರ್ಕಾರಿ ಅಭಿಯೋಜಕರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಅಂದರೆ ಅರ್ಜಿದಾರರ ಪತ್ನಿಗೆ ನ್ಯಾಯಾಲಯದ ಆದೇಶಕ್ಕಿಂತ ಶಾಲೆಯ ಪೋಷಕರ ಸಭೆಗೆ ಹಾಜರಾಗುವುದೇ ಮುಖ್ಯವಾಗಿದೆ. ಈ ಧೋರಣೆ ಸರಿಯಲ್ಲ. ಆದ್ದರಿಂದ ಪ್ರತಿವಾದಿಗಳಾದ ರಾಜ್ಯ ಗೃಹ ಇಲಾಖೆ, ನಗರ ಪೊಲೀಸ್ ಆಯುಕ್ತರು, ಮಾರತಹಳ್ಳಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮತ್ತು ವೈಟ್ ಫೀಲ್ಡ್ ವಿಭಾಗದ ಆಯುಕ್ತರು ನಾಸಿಕ್ ಪೊಲೀಸ್ ಆಯುಕ್ತರ ಮೂಲಕ ಮಗು ಮತ್ತು ತಾಯಿಯನ್ನು ಆಗಸ್ಟ್‌ 18ರಂದು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು ಎಂದು ಪೀಠ ಆದೇಶಿಸಿದೆ.

ನ್ಯಾಯಾಲಯಕ್ಕೆ ಹಾಜರುಪಡಿಸುವ ಪ್ರಕ್ರಿಯೆಯಲ್ಲಿ ಮಗುವಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಪೊಲೀಸರು ಮಫ್ತಿಯಲ್ಲಿ ಹೋಗಬೇಕು. ಮಹಿಳಾ ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ಕರೆದೊಯ್ಯಬೇಕು. ಮಗುವಿನೊಂದಿಗೆ ಸೌಮ್ಯವಾಗಿ ಮಾತನಾಡಬೇಕು. ಮಗು ಮತ್ತು ತಾಯಿಯನ್ನು ಅಪರಾಧಿಗಳಂತೆ ಪರಿಗಣಿಸಬಾರದು. ಮಗುವಿನ ಮನಸ್ಸಿನ ಮೇಲೆ ಯಾವುದೇ ದುಷ್ಪರಿಣಾಮ ಬೀರದಂತೆ ನಡೆದುಕೊಂಡು ಪ್ರಶಾಂತ ಮನಸ್ಥಿತಿಯಲ್ಲಿ ನ್ಯಾಯಾಲಯಕ್ಕೆ ಕರೆತರಬೇಕು. ಈ ವೇಳೆ ಎಲ್ಲಾ ಆರೈಕೆ ಮಾಡಬೇಕು. ಬಹಳ ವಿಚಿತ್ರ ಪರಿಸ್ಥಿತಿಯಲ್ಲಿ ಮಗುವಿನ ಕ್ಷೇಮಾಭಿವೃದ್ಧಿ ದೃಷ್ಟಿಯಲ್ಲಿಕೊಟ್ಟುಕೊಂಡು ಈ ಆದೇಶ ಮಾಡಲಾಗುತ್ತದೆ ಎಂದು ಪೀಠ ಆದೇಶದಲ್ಲಿ ಹೇಳಿದೆ.

ಮಕ್ಕಳ ಮನಸ್ಸು ತುಂಬಾ ಸೂಕ್ಷ್ಮವಾಗಿರುತ್ತದೆ. ಮಕ್ಕಳ ದೃಷ್ಟಿಯಿಂದಾದರೂ ಭಿನ್ನಾಭಿಪ್ರಾಯ ಮರೆತು ತಂದೆ-ತಾಯಿ ರಾಜಿಯಾಗಿ ಜೀವನ ನಡೆಸಬೇಕು. ಒಂದೊಮ್ಮೆ ಮಕ್ಕಳು ಆಕ್ರಮಣಕಾರಿಯಾದರೆ ಅವರನ್ನು ಪೋಷಕರಾಗಲಿ, ನ್ಯಾಯಾಲಯವಾಗಲಿ ನಿಯಂತ್ರಿಸಲಾಗದು ಎಂದು ನ್ಯಾ.ಬಿ ವೀರಪ್ಪ ಅವರು ಮೌಖಿಕವಾಗಿ ಆತಂಕ ವ್ಯಕ್ತಪಡಿಸಿದರು.

Kannada Bar & Bench
kannada.barandbench.com