ಪತಿಯು ತನ್ನ ಪತ್ನಿಯನ್ನು ಆಕೆಯ ಮೊಬೈಲ್ ಫೋನ್ ಅಥವಾ ಬ್ಯಾಂಕ್ ಖಾತೆಯ ಪಾಸ್‌ವರ್ಡ್‌ಗಳನ್ನು ಹಂಚಿಕೊಳ್ಳುವಂತೆ ಒತ್ತಾಯಿಸಲಾಗದು, ಹಾಗೆ ಮಾಡುವುದು ಅವಳ ಗೌಪ್ಯತೆಯ ಹಕ್ಕಿನ ಉಲ್ಲಂಘನೆಯಾಗುತ್ತದೆ ಮತ್ತು ಅದನ್ನು ಕೌಟುಂಬಿಕ ಹಿಂಸಾಚಾರದ ಕೃತ್ಯವೆಂದು ಪರಿಗಣಿಸಬಹುದು ಎಂದು ಇತ್ತೀಚೆಗೆ ಛತ್ತೀಸ್‌ಗಢ ಹೈಕೋರ್ಟ್ ತೀರ್ಪು ನೀಡಿದೆ.
ವೈವಾಹಿಕ ಸಂಬಂಧವು ಹಂಚಿಕೊಂಡು ಜೀವನ ನಡೆಸುವುದನ್ನು ಒಳಗೊಂಡಿದ್ದರೂ, ಅದು ವೈಯಕ್ತಿಕ ಗೌಪ್ಯತೆಯ ಹಕ್ಕುಗಳನ್ನು ನಿರಾಕರಿಸುವುದಿಲ್ಲ ಎಂದು ನ್ಯಾಯಮೂರ್ತಿ ರಾಕೇಶ್ ಮೋಹನ್ ಪಾಂಡೆ ಒತ್ತಿ ಹೇಳಿದ್ದಾರೆ.
"ಮದುವೆಯು ಪತಿಗೆ ಪತ್ನಿಯ ಖಾಸಗಿ ಮಾಹಿತಿ, ಸಂವಹನ ಮತ್ತು ವೈಯಕ್ತಿಕ ವಸ್ತುಗಳಿಗೆ ಸ್ವಯಂಚಾಲಿತ ಪ್ರವೇಶಿಕೆಯನ್ನು ನೀಡುವುದಿಲ್ಲ. ಗಂಡನು ಹೆಂಡತಿಯನ್ನು ತನ್ನ ಸೆಲ್‌ಫೋನ್ ಅಥವಾ ಬ್ಯಾಂಕ್ ಖಾತೆಯ ಪಾಸ್‌ವರ್ಡ್‌ಗಳನ್ನು ಹಂಚಿಕೊಳ್ಳಲು ಒತ್ತಾಯಿಸಲಾಗದು. ಅಂತಹ ಕೃತ್ಯವು ಗೌಪ್ಯತೆಯ ಉಲ್ಲಂಘನೆಯಾಗಲಿದ್ದು ಸಂಭಾವ್ಯ ಕೌಟುಂಬಿಕ ಹಿಂಸಾಚಾರವಾಗಲಿದೆ. ವೈವಾಹಿಕ ಗೌಪ್ಯತೆ ಮತ್ತು ಪಾರದರ್ಶಕತೆಯ ಅಗತ್ಯತೆ ಹಾಗೂ ಸಂಬಂಧದ ಮೇಲಿನ ನಂಬಿಕೆಯ ನಡುವೆ ಸಮತೋಲನ ಸಾಧಿಸಬೇಕು" ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಪ್ರಸಕ್ತ ಪ್ರಕರಣದಲ್ಲಿ, ಅರ್ಜಿದಾರರಾದ ಪತಿ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13(1)(i-a) ಅಡಿಯಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಕ್ರೌರ್ಯವನ್ನು ಆಧಾರವಾಗಿ ಉಲ್ಲೇಖಿಸಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಪತ್ನಿ ಆರೋಪಗಳನ್ನು ನಿರಾಕರಿಸುವ ಲಿಖಿತ ಹೇಳಿಕೆಯನ್ನು ಸಲ್ಲಿಸಿದರು.
ವಿಚಾರಣೆಯ ಸಮಯದಲ್ಲಿ ಪತಿಯು ತನಗೆ ಪತ್ನಿಯ ನಡತೆಯ ಮೇಲೆ ಸಂಶಯವಿದ್ದು ಅಕೆಯ ಕರೆ ವಿವರಗಳನ್ನು ನೀಡುವಂತೆ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಅವರಿಗೆ ಕೋರಿದ್ದರು. ಅಲ್ಲದೆ ಕರೆ ದಾಖಲೆಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶನವನ್ನು ನೀಡಲು ಕೋರಿ ಅವರು ಕೌಟುಂಬಿಕ ನ್ಯಾಯಾಲಯದಲ್ಲಿಯೂ ಅರ್ಜಿ ಸಲ್ಲಿಸಿದರು. ಆದರೆ, ಅವರ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಹೈಕೋರ್ಟ್ ತನ್ನ ತೀರ್ಪಿನಲ್ಲಿ ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಗೌಪ್ಯತೆಯ ಹಕ್ಕು ಮೂಲಭೂತ ಹಕ್ಕು ಎಂದು ಪುನರುಚ್ಚರಿಸಲು ಕೆ ಎಸ್ ಪುಟ್ಟಸ್ವಾಮಿ, ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಮತ್ತು ಮಿಸ್ಟರ್ ಎಕ್ಸ್ ವಿ ಹಾಸ್ಪಿಟಲ್ ಝಡ್ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ನೀಡಿದ ಮಹತ್ವದ ತೀರ್ಪುಗಳನ್ನು ಉಲ್ಲೇಖಿಸಿದೆ.
"ಗೌರವಾನ್ವಿತ ಸುಪ್ರೀಂ ಕೋರ್ಟ್ ಹೇಳಿದಂತೆ, ಗೌಪ್ಯತೆಯ ಹಕ್ಕು ಎನ್ನುವುದು ಖಾಸಗಿ ಕ್ಷಣಗಳ ಸಂರಕ್ಷಣೆ, ವೈವಾಹಿಕ ಪಾವಿತ್ರ್ಯತೆ ಮತ್ತು ಲೈಂಗಿಕ ಮನೋಧರ್ಮವನ್ನು ಒಳಗೊಂಡಿದೆ. ಆದ್ದರಿಂದ, ಅರ್ಜಿದಾರರು ಸಲ್ಲಿಸಿದ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯವು ಸೂಕ್ತವಾಗಿಯೇ ತಿರಸ್ಕರಿಸಿದೆ. ಬೇರೆಯವರ ಹಸ್ತಕ್ಷೇಪವಿಲ್ಲದೆ ಮನೆ ಅಥವಾ ಕಚೇರಿಯ ಖಾಸಗಿ ವ್ಯಾಪ್ತಿಯಲ್ಲಿ ಮೊಬೈಲ್ ಸಂಭಾಷಣೆಗಳಲ್ಲಿ ತೊಡಗಿಸಿಕೊಳ್ಳುವ ಹಕ್ಕನ್ನು ಖಂಡಿತವಾಗಿಯೂ ಗೌಪ್ಯತೆಯ ಹಕ್ಕಿನ ಅಡಿಯಲ್ಲಿ ರಕ್ಷಿಸಲಾಗಿದೆ. ಅಂತಹ ಸಂಭಾಷಣೆಗಳು ಸಾಮಾನ್ಯವಾಗಿ ನಿಕಟ ಮತ್ತು ಗೌಪ್ಯ ಸ್ವಭಾವದ್ದಾಗಿರುತ್ತವೆ ಮತ್ತು ವ್ಯಕ್ತಿಯ ಖಾಸಗಿ ಜೀವನದ ಪ್ರಮುಖ ಅಂಶವಾಗಿವೆ" ಎಂದು ನ್ಯಾಯಾಲಯ ತಿಳಿಸಿದೆ.
ಅಂತಿಮವಾಗಿ, ಈ ಅವಲೋಕನಗಳೊಂದಿಗೆ, ಅರ್ಜಿದಾರರು ತಮ್ಮ ಪತ್ನಿಯ ಕರೆ ವಿವರಗಳ ದಾಖಲೆಗಳನ್ನು ಕೋರಿದ್ದನ್ನು ನ್ಯಾಯಾಲಯ ನಿರಾಕರಿಸಿತು.