ಕೋಮ ಸ್ಥಿತಿ ತಲುಪಿದ ಪತಿ: ಪತ್ನಿಗೆ ಬ್ಯಾಂಕ್‌ ಖಾತೆ ನಿರ್ವಹಿಸಲು ಅನುಮತಿಸಿದ ಹೈಕೋರ್ಟ್‌

ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ನರ ವಿಜ್ಞಾನ ವಿಭಾಗವು ಅರ್ಜಿದಾರೆಯ ಪತಿಯು ಗ್ವಿಯೆನ್ ಬ್ಯಾರೆ ಸಿಂಡ್ರೋಮ್ ಸಮಸ್ಯೆಯಿಂದ ಬಳಲುತ್ತಿದ್ದು, ಅವರು ವೆಂಟಿಲಿಟೇರ್‌ನಲ್ಲಿ ಮುಂದುವರಿಯಬೇಕಿದೆ ಎಂದು ವರದಿ ನೀಡಿದೆ.
ನ್ಯಾಯಮೂರ್ತಿ ಎಂ.ನಾಗಪ್ರಸನ್ನ
ನ್ಯಾಯಮೂರ್ತಿ ಎಂ.ನಾಗಪ್ರಸನ್ನ
Published on

ಪತಿಯು ಅಪರೂಪದ ನರ ಸಮಸ್ಯೆಯಿಂದಾಗಿ ಕಳೆದ ಒಂಬತ್ತು ತಿಂಗಳಿಂದ ಕೋಮ ಸ್ಥಿತಿಯಲ್ಲಿರುವುದರಿಂದ ಚಿಕಿತ್ಸೆ ಮತ್ತು ಕುಟುಂಬ ನಿರ್ವಹಣೆಗೆ ಅವರ ಬ್ಯಾಂಕ್‌ ಖಾತೆಗಳನ್ನು ನಿರ್ವಹಿಸಲು ಪತ್ನಿಯನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ಪೋಷಕಿಯನ್ನಾಗಿ ನೇಮಕ ಮಾಡಿದೆ.

ಅನಾರೋಗ್ಯ ಪೀಡಿತರಾಗಿರುವ ಪತಿಯ ಬ್ಯಾಂಕ್‌ ಖಾತೆಗಳ ನಿರ್ವಹಣೆ ಕೋರಿ ಅವರ ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಪುರಸ್ಕರಿಸಿದೆ.

“ಅರ್ಜಿದಾರೆಯ ಪತಿಯ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಅವರು ನಿರ್ವಹಿಸುತ್ತಿದ್ದ ರೀತಿಯಲ್ಲಿಯೇ ಅವರ ಪತ್ನಿ ಬ್ಯಾಂಕ್‌ ಖಾತೆ ನಿರ್ವಹಣೆ ಮುಂದುವರಿಸಲು ಅನುಮತಿಸಲಾಗಿದೆ. ಪತ್ನಿಯನ್ನು ಪತಿಗೆ ಪೋಷಕಿಯನ್ನಾಗಿ ನೇಮಕ ಮಾಡಲಾಗಿದೆ. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಬೆಂಗಳೂರು ಮತ್ತು ಶಿವಮೊಗ್ಗದಲ್ಲಿನ ಶಾಖೆ) ಮತ್ತು ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ಗಳು ಪತಿಯ ಚಿಕಿತ್ಸೆ ಮತ್ತು ಕುಟುಂಬದ ನಿರ್ವಹಣೆಗೆ ಖಾತೆಯಿಂದ ಹಣ ತೆಗೆದುಕೊಳ್ಳಲು ಪತ್ನಿಗೆ ಅನುಮತಿಸಬೇಕು. ಪ್ರತಿವಾದಿ ಬ್ಯಾಂಕ್‌ಗಳು ವಿಳಂಬ ಮಾಡದೇ ಪತ್ನಿಯನ್ನು ಸಾಮಾನ್ಯವಾಗಿ ಬ್ಯಾಂಕ್‌ ಜೊತೆ ವ್ಯವಹರಿಸಲು ಅನುಮತಿಸಬೇಕು” ಎಂದು ನ್ಯಾಯಾಲಯ ಆದೇಶಿಸಿದೆ.

23.06.2024ರಿಂದ ಪತಿಯು ತುರ್ತು ನಿಗಾ ಘಟಕದಲ್ಲಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾರೆ. 29.11.2024ರಂದು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ನರ ವಿಜ್ಞಾನ ವಿಭಾಗವು ಅರ್ಜಿದಾರರ ಪತಿಯು ಗ್ವಿಯೆನ್ ಬ್ಯಾರೆ ಸಿಂಡ್ರೋಮ್ (Guillain Barre Syndrome) ಸಮಸ್ಯೆಯಿಂದ ಬಳಲುತ್ತಿದ್ದು, ಅವರು ವೆಂಟಿಲಿಟೇರ್‌ನಲ್ಲಿ ಮುಂದುವರಿಯಬೇಕಿದೆ ಎಂದು ವರದಿ ನೀಡಿದೆ. 22.02.2025 ರಿಂದ 18.03.2025ರವರೆಗೆ ಪತಿಯನ್ನು ಐಸಿಯುನಲ್ಲಿ ಇರಿಸಲಾಗಿದ್ದು, ಅವರಿಗೆ ವೆಂಟಿಲೇಟರ್‌ ಅಳವಡಿಕೆ ಶಾಶ್ವತವಾಗಿದೆ. ಇದರಿಂದ ಚಿಕಿತ್ಸೆ ಮತ್ತು ಕುಟುಂಬ ನಿರ್ವಹಣೆಗೆ ಸಮಸ್ಯೆಯಾಗಿರುವುದರಿಂದ ಪತಿಯ ಬ್ಯಾಂಕ್‌ ಖಾತೆಗಳನ್ನು ನಿರ್ವಹಿಸಲು ಅನುಮತಿಸುವಂತೆ ಪತ್ನಿ ಸಂಬಂಧಿತ ಬ್ಯಾಂಕ್‌ಗಳಿಗೆ ಮನವಿ ಸಲ್ಲಿಸಿದ್ದರು. ಈ ಕುರಿತು ಬ್ಯಾಂಕ್‌ಗಳು ಪ್ರತಿಕ್ರಿಯಿಸದ ಹಿನ್ನೆಲೆಯಲ್ಲಿ ಅವರು ನಿರ್ದೇಶನ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಇದಕ್ಕೆ ಸರ್ಕಾರ ಮತ್ತು ಸಂಬಂಧಿತ ಬ್ಯಾಂಕ್‌ಗಳು ನ್ಯಾಯಾಲಯದ ನಿರ್ದೇಶನಕ್ಕೆ ತಲೆಬಾಗುವುದಾಗಿ ತಿಳಿಸಿವೆ. ವೈದ್ಯಕೀಯ ವರದಿಗಳನ್ನು ಪರಿಗಣಿಸಿ ನ್ಯಾಯಾಲಯವು ಪತ್ನಿಗೆ ಬ್ಯಾಂಕ್‌ ಖಾತೆ ನಿರ್ವಹಿಸಲು ಅನುಮತಿಸಿ ಆದೇಶಿಸಿದೆ.

Kannada Bar & Bench
kannada.barandbench.com