ಮದುವೆಯಾದ ಕೆಲ ದಿನಗಳಲ್ಲೇ ಗಂಡನ ದಾಂಪತ್ಯ ದ್ರೋಹ ಮತ್ತು ಆತನ ಕೆಟ್ಟ ನಡವಳಿಕೆ ಗೊತ್ತಾದರೆ ಅದು ಮಹಿಳೆಯ ಆತ್ಮಹತ್ಯೆಗೆ ಪ್ರೇರೇಪಣೆ ನೀಡುತ್ತದೆ ಎಂದು ದೆಹಲಿ ಹೈಕೋರ್ಟ್ ಈಚೆಗೆ ಹೇಳಿದೆ.
ಸಂಗಾತಿಯ ದಾಂಪತ್ಯ ದ್ರೋಹವು ವ್ಯಕ್ತಿಯ ಮಾನಸಿಕ ಮತ್ತು ಭಾವನಾತ್ಮಕ ಸ್ವಾಸ್ಥ್ಯದ ಮೇಲೆ ಆಳವಾದ ಮತ್ತು ವಿನಾಶಕಾರಿ ಪರಿಣಾಮ ಬೀರುತ್ತದೆ ಎಂದು ನ್ಯಾಯಮೂರ್ತಿ ಸ್ವರಣಾ ಕಾಂತ ಶರ್ಮಾ ಹೇಳಿದ್ದಾರೆ.
ಈ ಆಘಾತ ಅಗಾಧವಾದುದಾಗಿರಬಹುದು ಏಕೆಂದರೆ ಮಹಿಳೆಯು ನಂಬಿಕೆ ಮತ್ತು ಭರವಸೆಯೊಂದಿಗೆ ಮದುವೆಗೆ ಒಪ್ಪಿರುವ ಸಾಧ್ಯತೆಗಳಿದ್ದು ಅದು ಗಂಡನ ವಿವಾಹೇತರ ಸಂಬಂಧ ಬಹಿರಂಗಗೊಂಡಾಗ ಛಿದ್ರವಾಗಬಹುದು ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.
ದ್ರೋಹ ಬಗೆದಿರುವುದು ಗೊತ್ತಾದ ಉಂಟಾಗುವ ಭಾವನಾತ್ಮಕ ಆಘಾತ ಮತ್ತು ಸಂಗಾತಿಯ ಆನಂತರದ ಕೆಟ್ಟ ನಡವಳಿಕೆ ಮಹಿಳೆಯನ್ನು ಆತ್ಮಹತ್ಯೆಯಂತಹ ಅತಿರೇಕದ ಕ್ರಮಗಳನ್ನು ತೆಗೆದುಕೊಳ್ಳಲು ಪ್ರೇರೇಪಿಸುತ್ತದೆ ಎಂದು ನ್ಯಾಯಾಲಯ ನುಡಿಯಿತು.
ಐಪಿಸಿ ಸೆಕ್ಷನ್ 498 ಎ (ಕ್ರೌರ್ಯ) ಮತ್ತು 306 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ತನ್ನ ಪತ್ನಿಯ ಸಾವಿಗೆ ಕಾರಣವಾದ ವ್ಯಕ್ತಿಗೆ ಜಾಮೀನು ನಿರಾಕರಿಸುವ ಸಂದರ್ಭದಲ್ಲಿ ನ್ಯಾಯಮೂರ್ತಿ ಶರ್ಮಾ ಅವರು ಈ ಅವಲೋಕನಗಳನ್ನು ಮಾಡಿದರು. .