ಸಂಪಾದನೆ ಮಾಡುವ ಸಾಮರ್ಥ್ಯವಿರುವ ಪುರುಷ ಪತ್ನಿಯಿಂದ ಶಾಶ್ವತ ಜೀವನಾಂಶ ಕೇಳಲಾಗದು: ಹೈಕೋರ್ಟ್‌

ಶಾಶ್ವತ ಜೀವನಾಂಶ ಕೋರಿ ಪತಿ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಲು ಕೌಟುಂಬಿಕ ನ್ಯಾಯಾಲಯ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಪತಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
High Court of Karnataka
High Court of Karnataka

ಸಂಪಾದನೆ ಮಾಡುವ ಸಾಮರ್ಥ್ಯವಿರುವ ಪುರುಷ ತನ್ನ ಪತ್ನಿಯಿಂದ ಶಾಶ್ವತ ಜೀವನಾಂಶ ಕೇಳಲು ಅವಕಾಶವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶಿಸಿದೆ. ಅಲ್ಲದೇ, ಹಿಂದೂ ವಿವಾಹ ಕಾಯಿದೆಯ ಸೆಕ್ಷನ್ 25ರ ಅಡಿ ಪತ್ನಿಯಿಂದ ಜೀವನಾಂಶ ಕೋರಿ ಪತಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದೆ.

ಉಡುಪಿ ತಾಲ್ಲೂಕಿನ ಬಡನಿಡಿಯೂರು ಗ್ರಾಮದ 57 ವರ್ಷದ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ಅಲೋಕ್ ಅರಾಧೆ ಮತ್ತು ಜೆ ಎಂ ಖಾಜಿ ಅವರ ನೇತೃತ್ವದ ವಿಭಾಗೀಯ ಪೀಠವು ಈ ಆದೇಶ ಮಾಡಿದೆ.

“ಶಾಶ್ವತ ಜೀವನಾಂಶ ಕೋರಿ ಅರ್ಜಿ ಸಲ್ಲಿಕೆಯಾದಾಗ ಎರಡೂ ಕಡೆಯವರ ಸ್ಥಿತಿಗತಿ, ಸತಿ ಅಥವಾ ಪತಿಯ ಅಗತ್ಯತೆ ಹಾಗೂ ಜೀವನಾಂಶ ಕೋರಿದವರ ಆದಾಯ ಮತ್ತು ಆಸ್ತಿಯನ್ನು ಪರಿಗಣಿಸಬೇಕಾಗುತ್ತದೆ. ಈ ಪ್ರಕರಣದಲ್ಲಿ ಪಾಟಿ ಸವಾಲಿನ ಸಂದರ್ಭದಲ್ಲಿ ಪಿತ್ರಾರ್ಜಿತ ಜಮೀನು ಹಾಗೂ ಸದ್ಯ ವಾಸವಿರುವ ಮನೆಯಲ್ಲಿ ತಾವು ಪಾಲು ಹೊಂದಿರುವುದಾಗಿ ಮೇಲ್ಮನವಿದಾರರೇ ಒಪ್ಪಿಕೊಂಡಿದ್ದಾರೆ. ಮೇಲಾಗಿ ಈ ಎಲ್ಲ ಆಸ್ತಿಗಳೂ ಉತ್ತಮ ಮೌಲ್ಯ ಹೊಂದಿದೆ. ಆದರೆ, ಸಹಕಾರ ಸಂಘವೊಂದರಲ್ಲಿ ಕೆಲಸ ಮಾಡುತ್ತಿರುವ ಮಹಿಳೆ ತಮ್ಮ 15 ವರ್ಷದ ಮಗನನ್ನು ನೋಡಿಕೊಳ್ಳುತ್ತಿದ್ದಾರೆ. ತಂದೆಯಾಗಿರುವ ಮೇಲ್ಮನವಿದಾರರು ಮಗನ ಜವಾಬ್ದಾರಿ ತೆಗೆದುಕೊಂಡಿಲ್ಲ. ಮಗನ ವಿದ್ಯಾಭ್ಯಾಸಕ್ಕೆ ಸಾಕಷ್ಟು ಹಣದ ಅಗತ್ಯವಿದ್ದು, ಈ ಹೊರೆ ತಾಯಿಯ ಮೇಲಿದೆ. ಇನ್ನು ಜೀವನಾಂಶ ಕೋರಿ ಅರ್ಜಿ ಸಲ್ಲಿಸಿರುವ ಮೇಲ್ಮನವಿದಾರರು ಸಂಪಾದನೆಯ ಸಾಮರ್ಥ್ಯವಿರುವ ಸಶಕ್ತ ವ್ಯಕ್ತಿಯಾಗಿದ್ದಾರೆ. ಆದ್ದರಿಂದ, ಅವರಿಗೆ ಶಾಶ್ವತ ಜೀವನಾಂಶ ನಿರಾಕರಿಸಿರುವ ಕೌಟುಂಬಿಕ ನ್ಯಾಯಾಲಯದ ಕ್ರಮ ಸರಿಯಾಗಿಯೇ ಇದೆ” ಎಂದು ನ್ಯಾಯಾಲಯ ಹೇಳಿದೆ.

ಮೇಲ್ಮನವಿದಾರರನ್ನು ಪ್ರತಿನಿಧಿಸಿದ್ದ ವಕೀಲ ನಾಗರಾಜ ಹೆಗ್ಡೆ ಅವರು “ಪ್ರತಿವಾದಿ ಮಹಿಳೆ ಸಹಕಾರ ಸಂಘವೊಂದರಲ್ಲಿ ಸಹಾಯಕ ವ್ಯವಸ್ಥಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ದೇವಸ್ಥಾನವೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದ ಮೇಲ್ಮನವಿದಾರರು ಈಗ ಕೆಲಸ ಕಳೆದುಕೊಂಡಿದ್ದು, ಯಾವುದೇ ಆದಾಯವಿಲ್ಲದಂತಾಗಿದೆ. ಸಂಪಾದನೆಯಿಲ್ಲದ ಮೇಲ್ಮನವಿದಾರರ ಜೀವನ ನಿರ್ವಹಣೆಗೆ ಜೀವನಾಂಶ ನೀಡುವುದು ಪ್ರತಿವಾದಿ ಮಹಿಳೆಯ ಹೊಣೆಯಾಗಿದೆ” ಎಂದು ವಾದಿಸಿದ್ದರು.

ಇದಕ್ಕೆ ಪ್ರತಿಯಾಗಿ ಮಹಿಳೆ ಪರ ವಕೀಲ ನಿಶಿತ್‌ ಕುಮಾರ್‌ ಶೆಟ್ಟಿ ಅವರು “ಬ್ರಹ್ಮಾವರದ ಸಹಕಾರ ಸಂಘದಲ್ಲಿ ಸಹಾಯಕ ವ್ಯವಸ್ಥಾಪಕಿಯಾಗಿ ಕೆಲಸ ಮಾಡುತ್ತಿರುವ ಮಹಿಳೆ ಮಾಸಿಕ ಕೇವಲ 8 ಸಾವಿರ ವೇತನ ಪಡೆಯುತ್ತಿದ್ದಾರೆ. ಜತೆಗೆ, ತಮ್ಮ 15 ವರ್ಷದ ಮಗನನ್ನೂ ನೋಡಿಕೊಳ್ಳುತ್ತಿದ್ದಾರೆ. ಆದ್ದರಿಂದ, ಜೀವನಾಂಶ ನೀಡಲು ಸಾಧ್ಯವಿಲ್ಲ” ಎಂದು ನ್ಯಾಯಾಲಯಕ್ಕೆ ವಿವರಿಸಿದ್ದರು.

ಪ್ರಕರಣದ ಹಿನ್ನೆಲೆ: ದಂಪತಿ 1993ರ ಮಾರ್ಚ್‌ 25ರಂದು ಮದುವೆಯಾಗಿದ್ದರು. ಗರ್ಭವತಿಯಾಗಿದ್ದ ಪತ್ನಿ ಮಗುವಿಗೆ ಜನ್ಮ ನೀಡುವ ಮೊದಲೇ 1994ರ ಫೆಬ್ರವರಿಯಲ್ಲಿ ಪತಿಯ ಮನೆ ತೊರೆದಿದ್ದರು. ಮಗು ಹುಟ್ಟಿದ ನಂತರವೂ ಆಕೆ ಪತಿ ಮನೆಗೆ ತೆರಳಿರಲಿಲ್ಲ. ಇದರಿಂದ, ಪತಿ ವೈವಾಹಿಕ ಜೀವನ ಮರುಸ್ಥಾಪಿಸುವಂತೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. 2005ರ ಜನವರಿ 4ರಂದು ನ್ಯಾಯಾಲಯವು ಪತಿಯ ಪರವಾಗಿ ಆದೇಶ ಮಾಡಿತ್ತು. ಅದನ್ನು ಪ್ರಶ್ನಿಸಿ ಪತ್ನಿ ಸಲ್ಲಿಸಿದ್ದ ಮೇಲ್ಮನವಿಯನ್ನು 2009ರ ಏಪ್ರಿಲ್‌ 20ರಂದು ಹೈಕೋರ್ಟ್ ವಜಾಗೊಳಿಸಿತ್ತು.

ಅದಾದ ಬಳಿಕವೂ ಪತ್ನಿ ತನ್ನ ಪತಿಯ ಜತೆ ತೆರಳಿರಲಿಲ್ಲ. ಇದರಿಂದ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಪತಿಯು ಆ ಅರ್ಜಿ ವಿಚಾರಣಾ ಹಂತದಲ್ಲಿದ್ದಾಗಲೇ ಹಿಂದೂ ವಿವಾಹ ಕಾಯಿದೆ ಸೆಕ್ಷನ್ 25ರ ಅಡಿ ಶಾಶ್ವತ ಜೀವನಾಂಶ ಕೋರಿ ಮತ್ತೊಂದು ಅರ್ಜಿ ಸಲ್ಲಿಸಿದ್ದರು. ಎರಡೂ ಅರ್ಜಿಗಳ ವಿಚಾರಣೆ ನಡೆಸಿದ್ದ ಕೌಟುಂಬಿಕ ನ್ಯಾಯಾಲಯವು ದಂಪತಿಗೆ ವಿಚ್ಛೇದನ ನೀಡಿ 2015ರ ಆಗಸ್ಟ್‌ 19ರಂದು ಆದೇಶಿಸಿತ್ತು. ಆದರೆ, ಶಾಶ್ವತ ಜೀವನಾಂಶ ಕೋರಿ ಪತಿ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಲು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.

Related Stories

No stories found.
Kannada Bar & Bench
kannada.barandbench.com