ಪತ್ನಿಯ ಸುಳ್ಳು ಕೊಲೆ ಪ್ರಕರಣದಲ್ಲಿ ಸಿಲುಕಿಸಿದ್ದಕ್ಕಾಗಿ ₹5 ಕೋಟಿ ಪರಿಹಾರ ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ ಪತಿ

ತನ್ನದಲ್ಲದ ತಪ್ಪಿಗೆ ಒಂದೂವರೆ ವರ್ಷ ಜೈಲುವಾಸ ಅನುಭವಿಸಿದ್ದು, ಸಮಾಜದಲ್ಲಿ ಘನತೆ ಕಳೆದುಕೊಂಡಿದ್ದೇನೆ. ಸತ್ರ ನ್ಯಾಯಾಲಯದ ತೀರ್ಪಿನಲ್ಲಿ ಆರೋಪಿ ಪದ ತೆಗೆದು, ಸಂತ್ರಸ್ತ ಎಂದು ಸೇರ್ಪಡೆ ಮಾಡಬೇಕು ಎಂದು ಸುರೇಶ್‌ ಕೋರಿದ್ದಾರೆ.
Karnataka High Court
Karnataka High Court
Published on

ಪತ್ನಿ ಜೀವಂತವಾಗಿದ್ದರೂ ಆಕೆಯ ಸುಳ್ಳು ಕೊಲೆ ಪ್ರಕರಣದಲ್ಲಿ ತನ್ನನ್ನು ವಿನಾಕಾರಣ ಸಿಲುಕಿಸಿ ಜೈಲು ವಾಸ ಅನುಭವಿಸುವಂತೆ ಮಾಡಿದ್ದಲ್ಲದೇ, ಘನತೆಗೆ ಹಾನಿ ಮಾಡಿರುವುದಕ್ಕಾಗಿ ₹5 ಕೋಟಿ ಪರಿಹಾರ ನೀಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ವ್ಯಕ್ತಿಯೊಬ್ಬರು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯು ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ.

ಪತ್ನಿ ಮಲ್ಲಿಗೆಯನ್ನು ಕೊಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಬುಡಕಟ್ಟು ಸಮುದಾಯದ ಅರ್ಜಿದಾರ ಸುರೇಶ್‌ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 498ಎ (ಕ್ರೌರ್ಯ), 302 (ಕೊಲೆ) ಮತ್ತು 201 (ಸಾಕ್ಷಿಗಳ ತಿರುಚುವಿಕೆ) ಅಡಿ ಸಕ್ಷಮ ನ್ಯಾಯಾಲಯಕ್ಕೆ ಮೈಸೂರಿನ ಬೆಟ್ಟದಪುರ ಪೊಲೀಸರು ಆರೋಪ ಪಟ್ಟಿ ಸಲ್ಲಿಕೆ ಮಾಡಿದ್ದರು.

ಪತ್ನಿಯ ಶೀಲ ಶಂಕಿಸಿ ಆಕೆಯ ಮೇಲೆ ಮಾನಸಿಕ ಮತ್ತು ದೈಹಿಕ ದೌರ್ಜನ್ಯ ಎಸಗಿದ್ದಲ್ಲದೇ 2020ರ ಅಕ್ಟೋಬರ್‌ 19ರಂದು ಕೊಲೆ ಮಾಡಲಾಗಿದೆ. ಆನಂತರ ಶವ ಮತ್ತು ಕೊಲೆಗೆ ಬಳಸಿದ ಶಸ್ತ್ರಾಸ್ತ್ರಗಳನ್ನು ಬಚ್ಚಿಡಲಾಗಿತ್ತು ಎಂದು ಎಫ್‌ಐಆರ್‌ನಲ್ಲಿ ಸುರೇಶ್‌ ವಿರುದ್ಧ ಆರೋಪಿಸಲಾಗಿತ್ತು.

ಆದರೆ, 2025ರ ಏಪ್ರಿಲ್‌ 2ರಂದು ಸತ್ರ ನ್ಯಾಯಾಲಯದಲ್ಲಿ ನಡೆದಿದ್ದ ವಿಚಾರಣೆಯಲ್ಲಿ ಪತ್ನಿ ಜೀವಂತವಾಗಿದ್ದು, ಆಕೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಆದೇಶಿಸಬೇಕು ಎಂದು ಸುರೇಶ್ ಕೋರಿದ್ದರು. ಇದರಂತೆ ಆಕೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿ, ಆಕೆ ಮತ್ತು ಆಕೆಯ ತಾಯಿ ಮತ್ತು ಇತರ ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಳ್ಳಲಾಗಿತ್ತು. ಇದರಿಂದ ನ್ಯಾಯಾಲಯವು ಪತ್ನಿ ಜೀವಂತವಾಗಿದ್ದಾಳೆ ಎಂದು ಖಾತರಿಪಡಿಸಿತ್ತು.

ಇದರ ಬೆನ್ನಿಗೇ, ಪ್ರಕರಣದಲ್ಲಿ ತನಿಖಾಧಿಕಾರಿಗಳ ಪಾತ್ರದ ಕುರಿತು ತನಿಖೆಗೆ ಆದೇಶಿಸಿದ್ದ ಸತ್ರ ನ್ಯಾಯಾಲಯವು ಮೈಸೂರಿನ ಪೊಲೀಸ್‌ ವರಿಷ್ಠಾಧಿಕಾರಿಗೆ ವರದಿ ಸಲ್ಲಿಸಲು ಆದೇಶಿಸಿತ್ತು. ವರದಿ ಆಧರಿಸಿ, ಸುರೇಶ್‌ ವಿರುದ್ಧ ನಕಲಿ ಪ್ರಕರಣ ದಾಖಲಿಸಲು ಪೊಲೀಸರು ಕಾರಣ ಎಂದಿದ್ದ ಸತ್ರ ನ್ಯಾಯಾಲಯವು ಆರೋಪಿಯನ್ನು ಖುಲಾಸೆಗೊಳಿಸಿ, ₹1 ಲಕ್ಷ ಪರಿಹಾರ ಪಾವತಿಸಲು ಗೃಹ ಇಲಾಖೆಗೆ ಆದೇಶಿಸಿತ್ತು.

ಈಗ ಸುರೇಶ್‌ ಅವರು ಪರಿಹಾರ ಕಡಿಮೆಯಾಗಿದೆ ಎಂದು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಆಧಾರರಹಿತವಾದ ನಕಲಿ ಆರೋಪ ಪಟ್ಟಿ ಸಲ್ಲಿಸಿದ ಬಳಿಕವೂ ವಿಚಾರಣಾಧೀನ ನ್ಯಾಯಾಲಯವು ತನ್ನನ್ನು ಸಂತ್ರಸ್ತ ಎಂದು ಪರಿಗಣಿಸಲು ವಿಫಲವಾಗಿದೆ ಎಂದು ಅರ್ಜಿದಾರ ಸುರೇಶ್‌ ಆಕ್ಷೇಪಿಸಿದ್ದಾರೆ.

ತನ್ನ ವಿರುದ್ಧ ಆರೋಪ ನಿಗದಿ ಮಾಡಿರುವುದಕ್ಕೆ ಅನ್ವಯವಾಗಿ ವಿಚಾರಣೆ ಪೂರ್ಣಗೊಳಿಸದೇ ವಿಚಾರಣಾಧೀನ ನ್ಯಾಯಾಲಯವು 2025ರ ಏಪ್ರಿಲ್‌ 23ರಂದು ತನ್ನನ್ನು ಖುಲಾಸೆಗೊಳಿಸಿದ್ದು, ಇದು ಕಾನೂನಿನ ಅಡಿ ಊರ್ಜಿತವಾಗುವುದಿಲ್ಲ ಎಂದು ಆಕ್ಷೇಪಿಸಿದ್ದಾರೆ.

ತನ್ನದಲ್ಲದ ತಪ್ಪಿಗೆ 1.5 ವರ್ಷ ಜೈಲುವಾಸ ಅನುಭವಿಸಿದ್ದು, ಸಮಾಜದಲ್ಲಿ ಘನತೆ ಕಳೆದುಕೊಂಡಿದ್ದೇನೆ. ಹೀಗಾಗಿ, ₹5 ಕೋಟಿ ಪರಿಹಾರ ಪಾವತಿಸಬೇಕು ಮತ್ತು ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮಕೈಗೊಳ್ಳಬೇಕು. ಸತ್ರ ನ್ಯಾಯಾಲಯದ ತೀರ್ಪಿನಲ್ಲಿ ಆರೋಪಿ ಪದ ತೆಗೆದು, ಸಂತ್ರಸ್ತ ಎಂದು ಸೇರ್ಪಡೆ ಮಾಡಬೇಕು ಎಂದು ಕೋರಿದ್ದಾರೆ.

ಈ ನಡುವೆ, ಪ್ರಕರಣದಲ್ಲಿ ಸಾಕ್ಷಿ ತಿರುಚಿದ್ದಕ್ಕಾಗಿ ಬೆಟ್ಟದಪುರ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಬಿ ಜಿ ಪ್ರಕಾಶ್‌ ವಿರುದ್ಧ ಪ್ರಕರಣ ದಾಖಲಿಸಲು ಮೈಸೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ.

ಮಡಿಕೇರಿಯ ಕುಶಾಲನಗರದ ಗ್ರಾಮೀಣ ಠಾಣೆಯ ವ್ಯಾಪ್ತಿಗೆ ಬರುವ ಬಸವನಹಳ್ಳಿಯಿಂದ ಪತ್ನಿ ಮಲ್ಲಿಗೆ ನಾಪತ್ತೆಯಾಗಿದ್ದಾರೆ ಎಂದು ಸುರೇಶ್‌ ದೂರು ನೀಡಿದ್ದರು. ಆದರೆ, ಮಹಿಳೆಯ ಮೂಳೆಗಳ ಪತ್ತೆಯಾಗಿರುವುದನ್ನು ಆಧರಿಸಿ ನೆರೆಯ ಬೆಟ್ಟದಪುರ ಠಾಣೆಯ ಪೊಲೀಸರು ಸುರೇಶ್‌ ವಿರುದ್ಧ ಪ್ರಕರಣ ದಾಖಲಿಸಿದ್ದರು. ವಂಶವಾಹಿ ವರದಿಯಲ್ಲಿ ಮಲ್ಲಿಗೆಗೂ ಮತ್ತು ಪೊಲೀಸರು ಜಫ್ತಿ ಮಾಡಿದ್ದ ಮೂಳೆಗೂ ಯಾವುದೇ ಸಾಮ್ಯತೆ ಕಂಡುಬಂದಿರಲಿಲ್ಲ. ಮಡಿಕೇರಿಯಲ್ಲಿ ಪರ ಪುರುಷನೊಂದಿಗೆ ರೆಸ್ಟೋರೆಂಟ್‌ನಲ್ಲಿ ತಿಂಡಿ ತಿನ್ನುವಾಗ ಮಲ್ಲಿಗೆ ಜೀವಂತವಾಗಿದ್ದಾಳೆ ಎನ್ನುವ ವಿಚಾರ ಆನಂತರ ಬಹಿರಂಗವಾಗಿತ್ತು.

ಇದನ್ನು ಆಧರಿಸಿ, ಕೊಲೆ ಪ್ರಕರಣದಲ್ಲಿ ಸುರೇಶ್‌ರನ್ನು ಗೌರವಯುತವಾಗಿ ಖುಲಾಸೆಗೊಳಿಸಿದ್ದ ವಿಚಾರಣಾಧೀನ ನ್ಯಾಯಾಲಯವು ಪೊಲೀಸ್‌ ದಾಖಲೆಯಿಂದ ಸುರೇಶ್‌ ಹೆಸರು ತೆಗೆಯುವಂತೆ ಬೆಟ್ಟದಪುರ ಪೊಲೀಸರಿಗೆ ನಿರ್ದೇಶಿಸಿತ್ತು. ಅಲ್ಲದೇ, ಸುರೇಶ್‌ಗೆ ಒಂದು ಲಕ್ಷ ರೂಪಾಯಿ ಪರಿಹಾರ ಪಾವತಿಸುವಂತೆ ಗೃಹ ಇಲಾಖೆಗೆ ಆದೇಶಿಸಿತ್ತು.

ಅಲ್ಲದೇ, ದಾಖಲೆಗಳು ಮತ್ತು ಸಾಕ್ಷ್ಯ ತಿರುಚಿದ್ದಕ್ಕಾಗಿ ಬೆಟ್ಟದಪುರ ಠಾಣೆಯ ಇನ್‌ಸ್ಪೆಕ್ಟರ್‌ ಬಿ ಜಿ ಪ್ರಕಾಶ್‌ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲು ಆದೇಶಿಸಿತ್ತು. ಇದರ ಜೊತೆಗೆ ಡಿವೈಎಸ್‌ಪಿ ಜಿತೇಂದ್ರ ಕುಮಾರ್‌, ಪೊಲೀಸ್‌ ಇನ್‌ಸ್ಪೆಕ್ಟರ್‌ಗಳಾದ ಪ್ರಕಾಶ್‌ ಯಟ್ಟಿಮಣಿ ಮತ್ತು ಬಿ ಜಿ ಮಹೇಶ್‌ ಹಾಗೂ ಪ್ರಕಾಶ್‌ ಬಿ ಜಿ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಿತ್ತು.

ಇದೇವೇಳೆ, ಗುರುತು ಪತ್ತೆಯಾಗದ ಮೃತದೇಹಕ್ಕೆ ಸಂಬಂಧಿಸಿದಂತೆ ಅಸಹಜ ಸಾವು ಪ್ರಕರಣ ದಾಖಲಿಸಿ, ತನಿಖೆ ನಡೆಸಬೇಕು ಎಂದೂ ಆದೇಶಿಸಿತ್ತು.

Kannada Bar & Bench
kannada.barandbench.com