ಪತ್ನಿಯ ದೂರವಾಣಿ ಸಂಭಾಷಣೆಗಳನ್ನು ಕದ್ದು ರೆಕಾರ್ಡ್ ಮಾಡಿಕೊಳ್ಳುವಂತಿಲ್ಲ ಎಂದಿದ್ದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಆದೇಶವನ್ನು ಪತಿಯೊಬ್ಬರು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. [ವಿಭೋರ್ ಗರ್ಗ್ ಮತ್ತು ನೇಹಾ ನಡುವಣ ಪ್ರಕರಣ].
ಈ ಸಂಬಂಧ ಮೇಲ್ಮನವಿದಾರರ ಪತ್ನಿಗೆ ನೋಟಿಸ್ ನೀಡಿರುವ ನ್ಯಾಯಮೂರ್ತಿಗಳಾದ ವಿನೀತ್ ಸರಣ್ ಮತ್ತು ಬಿ ವಿ ನಾಗರತ್ನ ಅವರಿದ್ದ ಪೀಠ ಮೂರು ವಾರದೊಳಗೆ ಪ್ರತಿಕ್ರಿಯಿಸುವಂತೆ ತಿಳಿಸಿದೆ.
ಪತ್ನಿಯ ಅರಿವಿಗೆ ಬಾರದಂತೆ ಆಕೆಯ ದೂರವಾಣಿ ಸಂಭಾಷಣೆಗಳನ್ನು ರೆಕಾರ್ಡ್ ಮಾಡುವುದು ಆಕೆಯ ಖಾಸಗಿಹಕ್ಕುಗಳನ್ನು ಉಲ್ಲಂಘಿಸಿದಂತೆ. ಅಂತಹ ಸಂಭಾಷಣೆ ಪ್ರತಿಯನ್ನು ಪುರಾವೆಯಾಗಿ ಸ್ವೀಕರಿಸಲಾಗದು ಎಂದು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ನ್ಯಾಯಮೂರ್ತಿ ಲಿಸಾ ಗಿಲ್ ಅವರಿದ್ದ ಪೀಠ ಇತ್ತೀಚೆಗೆ ಆದೇಶಿಸಿತ್ತು.
ಸಾಕ್ಷ್ಯ ಅಧಿನಿಯಮದ (ಎವಿಡೆನ್ಸ್ ಆಕ್ಟ್) ಸೆಕ್ಷನ್ 122ನ್ನು ಆಧರಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿರುವ ಅರ್ಜಿದಾರ ಪತಿ “ವಿಚ್ಛೇದನ ಪ್ರಕ್ರಿಯೆಯಲ್ಲಿ ವಿವಾಹಿತ ವ್ಯಕ್ತಿಗಳ ನಡುವಿನ ಮಾತುಕತೆಯನ್ನು ಬಹಿರಂಗಪಡಿಸಬಹುದು. ಜೊತೆಗೆ ಮಾನಸಿಕ ಕ್ರೌರ್ಯದ ಆರೋಪ ಒಳಗೊಂಡಿರುವ ವೈವಾಹಿಕ ಪ್ರಕರಣಗಳಲ್ಲಿ, "ವೈವಾಹಿಕ ಮನೆ ಮತ್ತು ಮಲಗುವ ಕೋಣೆಗೆ ಸೀಮಿತವಾಗಿರುವ ಮತ್ತು ಸಾರ್ವಜನಿಕರ ದೃಷ್ಟಿಯಿಂದ ದೂರವಿರುವ ಸಮಸ್ಯೆಗಳು ಮತ್ತು ಘಟನೆಗಳನ್ನು ಮರು-ಸೃಷ್ಟಿಸಲು ಪಕ್ಷಗಳು ಬದ್ಧವಾಗಿರುತ್ತವೆ” ಎಂದಿದ್ದಾರೆ.
ತಂತ್ರಜ್ಞಾನ ಮತ್ತು ಆಧುನಿಕ ಸಾಧನ ಬಳಸಿಕೊಂಡು ಪುರಾವೆಗಳನ್ನು ದಾಖಲೆಯಲ್ಲಿ ನೀಡಬಹುದು. ಆದರೆ ಅಂತಹ ಸಾಕ್ಷಿಗಳನ್ನು ಪರಿಗಣಿಸುವುದು ನ್ಯಾಯಾಲಯಕ್ಕೆ ಬಿಟ್ಟ ವಿಚಾರ ಎಂದು ಅವರು ಹೇಳಿದ್ದಾರೆ. ಅಡ್ವೊಕೇಟ್-ಆನ್-ರೆಕಾರ್ಡ್ ಅಂಕಿತ್ ಸ್ವರೂಪ್ ಮೂಲಕ ಸಲ್ಲಿಸಲಾದ ಮೇಲ್ಮನವಿಯಲ್ಲಿ “ಕಕ್ಷಿದಾರರ ನಡುವೆ ನಡೆದ ಮಾತುಕತೆಯ ವಿವರಗಳನ್ನು ಹಂಚಿಕೊಳ್ಳುವುದು ಇನ್ನೊಂದು ಬಗೆಯಲ್ಲಿ ಸಾಕ್ಷ್ಯದ ಸೇರ್ಪಡೆಯಾಗಿದೆ. ಇದು ಕಕ್ಷಿದಾರರು ನ್ಯಾಯಾಲಯಕ್ಕೆ ಸಲ್ಲಿಸುವ ಮೌಖಿಕ ಪುರಾವೆಯಂತೆಯೇ ಮತ್ತೊಂದು ವಿಧಾನವಾಗಿದೆ. ಕ್ರೌರ್ಯದ ಅಂಶವನ್ನು ಸಾಬೀತುಪಡಿಸದೆ ಹೋದರೆ ಅರ್ಜಿದಾರರು ಕೌಟುಂಬಿಕ ನ್ಯಾಯಾಲಯದಿಂದ ವಿಚ್ಚೇದನ ಪಡೆಯಲು ವಿಫಲರಾಗುತ್ತಾರೆ” ಎಂದು ವಾದಿಸಲಾಗಿದೆ.