ಪತಿ ಇಲ್ಲವೇ ಆತನ ಸಂಬಂಧಿಕರು ಪತ್ನಿಯ ದೈಹಿಕ ಸ್ವರೂಪದ ಕುರಿತು ಅಪಹಾಸ್ಯ ಮಾಡುವುದು (ಬಾಡಿ ಶೇಮಿಂಗ್) ಐಪಿಸಿ 498ಎ ಅಡಿ ದಂಡ ವಿಧಿಸಬಹುದಾದ ಕ್ರೌರ್ಯ ಎಂದು ಕೇರಳ ಹೈಕೋರ್ಟ್ ಈಚೆಗೆ ಹೇಳಿದೆ.
ಮಹಿಳೆಯನ್ನು ಆತ್ಮಹತ್ಯೆಗೆ ಪ್ರೇರೇಪಿಸುವ ಅಥವಾ ಮಾರಣಾಂತಿಕ ಹಾನಿ ಉಂಟುಮಾಡುವ ಇಲ್ಲವೇ ಮಾನಸಿಕ ಅಥವಾ ದೈಹಿಕ ಆರೋಗ್ಯಕ್ಕೆ ಕುತ್ತು ತರುವ ಯಾವುದೇ ಉದ್ದೇಶಪೂರ್ವಕ ನಡವಳಿಕೆ ಬಗ್ಗೆ ಹೇಳುವ ಐಪಿಸಿ ಸೆಕ್ಷನ್ 498ಎಯ ವಿವರಣೆ (ಎ) ವ್ಯಾಪ್ತಿಗೆ ದೈಹಿಕ ಅಪಹಾಸ್ಯ ಕೂಡ ಬರುತ್ತದೆ ಎಂದು ನ್ಯಾ. ಎ ಬದರುದ್ದೀನ್ ಅವರಿದ್ದ ಪೀಠ ನ. 15ರಂದು ನೀಡಿದ ತೀರ್ಪಿನಲ್ಲಿ ತಿಳಿಸಿದೆ.
ತನ್ನ ಪತಿ, ಮಾವ ಹಾಗೂ ಪತಿಯ ಸಹೋದರನ ಪತ್ನಿ (ಓರಗಿತ್ತಿ) ವಿರುದ್ಧ ಮಹಿಳೆಯೊಬ್ಬರು ವೈವಾಹಿಕ ಕ್ರೌರ್ಯದ ದೂರು ದಾಖಲಿಸಿದ್ದರು. ಆದರೆ ತನ್ನ ವಿರುದ್ಧದ ಆರೋಪ ರದ್ದುಗೊಳಿಸುವಂತೆ ಓರಗಿತ್ತಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ತಾನು ಗಂಡನ ಅಣ್ಣನ ಹೆಂಡತಿಯಾಗಿರುವುದರಿಂದ ಐಪಿಸಿ ಸೆಕ್ಷನ್ 498 ಎ ಅಡಿ ದೂರುದಾರೆಯ ಸಂಬಂಧಿಯಾಗುವುದಿಲ್ಲ. ಈ ಪದವು ಪೋಷಕರು, ಮಕ್ಕಳು, ಸಹೋದರರು, ಸಹೋದರಿಯರು ಮತ್ತು ಸಂಗಾತಿಯನ್ನು ಮಾತ್ರ ಒಳಗೊಂಡಿರುತ್ತದೆ ಎಂಬುದು ಓರಗಿತ್ತಿಯ ವಾದವಾಗಿತ್ತು. ಇದಕ್ಕಾಗಿ ಯು ಸುವೇತಾ ಮತ್ತು ಸರ್ಕಾರ ಇನ್ನಿತರರ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಉಲ್ಲೇಖಿಸಲಾಗಿತ್ತು.
ಆದರೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದ ಪ್ರಕರಣ ಗಂಡನ ಸಹೋದರನ ಹೆಂಡತಿ ಕುರಿತಂತೆ ಏನನ್ನೂ ಹೇಳಿಲ್ಲ. ಪ್ರಸ್ತುತ ಪ್ರಕರಣದಲ್ಲಿ ಗಂಡನ ಸಹೋದರನ ಪತ್ನಿ ದೂರುದಾರೆ ಇದ್ದ ವೈವಾಹಿಕ ಗೃಹದಲ್ಲಿಯೇ ವಾಸವಾಗಿದ್ದರು ಎಂದು ನ್ಯಾಯಾಲಯ ಹೇಳಿದೆ.
ಒಂದೇ ವೈವಾಹಿಕ ಗೃಹದಲ್ಲಿ ವಾಸಿಸುವ ದಂಪತಿಯನ್ನು ಸಂಬಂಧಿ ಎಂಬ ಪದದ ವ್ಯಾಖ್ಯಾನದಡಿ ಬರುವುದಿಲ್ಲ ಎಂದು ಹೇಳಲಾಗದು. ಗಂಡನ ಸಂಬಂಧಿ ಎಂಬುದು ಪತಿಗೆ ಸಂಬಂಧಿಸಿದ ವೈವಾಹಿಕ ಮನೆಯಲ್ಲಿನ ನಿವಾಸಿಗಳನ್ನು ಒಳಗೊಂಡಿದೆ ಎಂದು ಅದು ತಿಳಿಸಿತು.
ದೂರುದಾರೆಯನ್ನು ಆಕೆಯ ಓರಗಿತ್ತಿಯು ತನ್ನ ಬಾಮೈದನಿಗೆ ನಿನಗಿಂತಲೂ ಸುಂದರವಾಗಿರುವ ಹೆಚ್ಚು ಸೂಕ್ತವಾಗಿರುವ ಹುಡುಗಿಯರು ಸಿಗುತ್ತಿದ್ದರು ಎಂದು ಹೇಳುವ ಮೂಲಕ ಮಾನಸಿಕವಾಗಿ ಕುಗ್ಗಿಸುತ್ತಿದ್ದ ಬಗ್ಗೆ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿರುವುದನ್ನು ನ್ಯಾಯಾಲಯವು ಗಮನಿಸಿತು. ದೂರುದಾರೆಯ ವೈದ್ಯಕೀಯ ಪದವಿಯ ಅಸಲಿಯತ್ತಿನ ಬಗ್ಗೆಯೂ ಆಕೆಯ ಓರಗಿತ್ತಿ ಸಂದೇಹ ವ್ಯಕ್ತಪಡಿಸುತ್ತಿದ್ದರು ಎನ್ನುವ ಅಂಶವೂ ದೂರಿನಲ್ಲಿ ದಾಖಲಾಗಿತ್ತು.
ದೂರುದಾರೆಯ ದೈಹಿಕ ಆಕಾರವನ್ನು ಅರ್ಜಿದಾರರು ಅಪಹಾಸ್ಯ ಮಾಡುತ್ತಿದ್ದರು ಎಂಬ ಅಂಶವನ್ನು ಗಮನಿಸಿದ ನ್ಯಾಯಾಲಯ ಈ ರೀತಿ ಮಾಡುವುದು ಐಪಿಸಿ ಸೆಕ್ಷನ್ 498 ಎ ಅಡಿ ವೈವಾಹಿಕ ಕ್ರೌರ್ಯ ಎನಿಸಿಕೊಳ್ಳುತ್ತದೆ ಎಂದು ತೀರ್ಪು ನೀಡಿ ಅರ್ಜಿ ವಜಾಗೊಳಿಸಿತು.