ಕಳೆದ ವರ್ಷ ಪೊಲೀಸರು ಮತ್ತು ಭದ್ರತಾ ಪಡೆಗಳ ಜಂಟಿ ಕಾರ್ಯಾಚರಣೆ ವೇಳೆ ಕಾಶ್ಮೀರದ ಹೈದರ್‌ಪೋರ್‌ನಲ್ಲಿ ನಡೆದ ವಿವಾದಿತ ಎನ್‌ಕೌಂಟರ್‌ನಲ್ಲಿ ಮೃತಪಟ್ಟ ನಾಲ್ವರಲ್ಲಿ ಒಬ್ಬರಾದ ಅಮೀರ್ ಮಗ್ರೆ ಅವರ ಮೃತ ದೇಹವನ್ನು ಹೊರತೆಗೆಯಲು ತಡೆ ನೀಡಿರುವ ಜಮ್ಮು ಮತ್ತು ಕಾಶ್ಮೀರ್ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಅವರ ತಂದೆ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ [ಮೊಹಮ್ಮದ್ ಲತೀಪ್ ಮಗ್ರೆ ವರ್ಸಸ್ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ].
ಪ್ರಕರಣವನ್ನು ಇಂದು ನ್ಯಾಯಮೂರ್ತಿಗಳಾದ ಸಿ ಟಿ ರವಿಕುಮಾರ್ ಮತ್ತು ಸುಧಾಂಶು ಧುಲಿಯಾ ಅವರ ರಜಾಕಾಲೀನ ಪೀಠದ ಮುಂದೆ ಹಿರಿಯ ವಕೀಲ ಆನಂದ್ ಗ್ರೋವರ್ ಉಲ್ಲೇಖಿಸಿದರು. ಆಗ ಪೀಠವು ಪ್ರಕರಣವನ್ನು ಜೂ. 27ರಂದು ಪಟ್ಟಿ ಮಾಡುವಂತೆ ಉಲ್ಲೇಖಿಸಿತು.
ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನ ಏಕಸದಸ್ಯ ಪೀಠವು ಅಮೀರ್ ಮಗ್ರೆ ದೇಹವನ್ನು ಹೊರತೆಗೆದು ಪೋಷಕರಿಗೆ ಒಪ್ಪಿಸುವಂತೆ ಮೇ. 27ರಂದು ಆದೇಶಿಸಿತ್ತು. ಆದರೆ ಈ ಆದೇಶಕ್ಕೆ ಜೂನ್ 3ರಂದು ವಿಭಾಗೀಯ ಪೀಠವು ತಡೆ ನೀಡಿತ್ತು.
ಧಾರ್ಮಿಕ ವಿಧಿವಿಧಾನಗಳಿಗೆ ಅನುಗುಣವಾಗಿ ಸ್ಥಳೀಯ ಸ್ಮಶಾನದಲ್ಲಿ ಅಮೀರ್ ಮಗ್ರೆ ಅಂತ್ಯಕ್ರಿಯೆ ನಡೆಸುವ ಸಲುವಾಗಿ ಮೃತದೇಹವನ್ನು ಗ್ರಾಮಕ್ಕೆ ಸಾಗಿಸಲು ಸರ್ಕಾರಿ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಿ ಅಮೀರ್ ತಂದೆ ಮೊಹಮ್ಮದ್ ಲತೀಫ್ ಮಗ್ರೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸಂಜೀವ್ ಕುಮಾರ್ ಅವರಿದ್ದ ಏಕಸದಸ್ಯ ಪೀಠವು ಪುರಸ್ಕರಿಸಿತ್ತು.
ಸಂವಿಧಾನದ 21ನೇ ವಿಧಿ ಒದಗಿಸುವ ಜೀವಿಸುವ ಹಕ್ಕು ಘನತೆ ಮತ್ತು ಸಭ್ಯತೆಯಿಂದ ಜೀವಿಸುವ ಹಕ್ಕನ್ನೂ ಒಳಗೊಂಡಿದೆ ಇದು ಮೃತದೇಹವನ್ನು ಗೌರವದಿಂದ ಕಾಣುವುದಕ್ಕೂ ಅನ್ವಯವಾಗುತ್ತದೆ ಎಂದು ನ್ಯಾಯಾಲಯ ಹೇಳಿತ್ತು.
"ದೇಹ ಬಹಳಷ್ಟು ಕೊಳೆತಿದ್ದು ಹಸ್ತಾಂತರಿಸುವ ಸ್ಥಿತಿಯಲ್ಲಿ ಇಲ್ಲದಿದ್ದರೆ ಅಥವಾ ಸಾರ್ವಜನಿಕ ಆರೋಗ್ಯ ಮತ್ತು ನೈರ್ಮಲ್ಯಕ್ಕೆ ಅಪಾಯ ಉಂಟುಮಾಡುವ ಸಾಧ್ಯತೆಯಿದ್ದರೆ, ವಡ್ಡರ್ ಪಯೀನ್ (ಪ್ರಸಕ್ತ ಮಗ್ರೆ ಶವವನ್ನು ಹೂಳಿರುವ ಸ್ಥಳ) ಸ್ಮಶಾನದಲ್ಲೇ ಅರ್ಜಿದಾರರು ಮತ್ತು ಅವರ ಸಂಬಂಧಿಗಳು ಅಂತಿಮ ವಿಧಿ ವಿಧಾನವನ್ನು ನೆರವೇರಿಸಲು ಅವಕಾಶಮಾಡಿಕೊಡಬೇಕು” ಎಂದು ನ್ಯಾಯಾಲಯ ಹೇಳಿತ್ತು.
ದೇಹ ಕೊಳೆತಿದ್ದು ಹಸ್ತಾಂತರಿಸುವ ಸ್ಥಿತಿಯಲ್ಲಿ ಇಲ್ಲದಿದ್ದರೆ ಮಗನ ಮೃತದೇಹ ಪಡೆಯುವ ಹಕ್ಕನ್ನು ಕಸಿದುಕೊಂಡಿದ್ದಕ್ಕಾಗಿ ಸರ್ಕಾರ ಅರ್ಜಿದಾರರಿಗೆ ₹ 5 ಲಕ್ಷ ಪರಿಹಾರ ನೀಡಬೇಕು ಎಂದು ಸಹ ನ್ಯಾಯಾಲಯ ನಿರ್ದೇಶಿಸಿತ್ತು.