ತಡೆಯಾಜ್ಞೆಗಳು ಈ ನೆಲದ ಕಾನೂನಾಗುವುದು ನಮಗೆ ಇಷ್ಟವಿಲ್ಲ: ನ್ಯಾ. ಡಿ ವೈ ಚಂದ್ರಚೂಡ್

ವಿವಾದಿತ ಸುದರ್ಶನ್ ಟಿವಿಯ “ಯುಪಿಎಸ್‌ ಸಿ ಜಿಹಾದ್” ಪ್ರಕರಣದ ವಿಚಾರಣೆಯನ್ನು ಶುಕ್ರವಾರ ನ್ಯಾ. ಡಿ ವೈ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠ ನಡೆಸಿದ್ದು, ವಿಚಾರಣೆಯ ಸಂದರ್ಭದಲ್ಲಿ ಗಮನಸೆಳೆದ 10 ಪ್ರಮುಖ ಹೇಳಿಕೆಗಳು ಇಂತಿವೆ.
Justices Indu Malhotra, DY Chandrachud and KM Joseph
Justices Indu Malhotra, DY Chandrachud and KM Joseph
Published on

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ನಡೆದ ವಿವಾದಿತ ಸುದರ್ಶನ್ ಟಿವಿಯ “ಯುಪಿಎಸ್‌ಸಿ ಜಿಹಾದ್” ಕಾರ್ಯಕ್ರಮದ ವಿರುದ್ಧದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಮಾಧ್ಯಮ ಸ್ವಾತಂತ್ರ್ಯ, ನಿರ್ದಿಷ್ಟ ಧಾರ್ಮಿಕ ಸಮುದಾಯವನ್ನು ಗುರಿ ಮಾಡುವ ಮೂಲಕ ಬಹುಸಂಸ್ಕೃತಿಯ ಸಾಮಾಜಿಕ ಸಂರಚನೆಗೆ ಧಕ್ಕೆ ಎಸಗುವುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಆಸಕ್ತಿಕರ ವಿಚಾರಣೆ ನಡೆಯಿತು.

ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ಇಂದೂ ಮಲ್ಹೋತ್ರಾ ಮತ್ತು ಕೆ ಎಂ ಜೋಸೆಫ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠದ ಮುಂದೆ ನಡೆದ ವಿಚಾರಣೆಯಲ್ಲಿ ಗಮನಸೆಳೆದ ಪ್ರಮುಖ ಹೇಳಿಕೆಗಳು ಇಂತಿವೆ.

1. “ಇದು ನೈಜ ವಿಷಯ. ಮುಸ್ಲಿಮರು ನಾಗರಿಕ ಸೇವೆ ಸೇರುವುದನ್ನು ತೋರಿಸುವಾಗ ನೀವು ಐಸಿಸ್ ಪ್ರಸ್ತುತಪಡಿಸುತ್ತೀರಿ. ಮುಸ್ಲಿಮರು ನಾಗರಿಕ ಸೇವೆ ಸೇರುವುದು ಆಳದಲ್ಲಿ ಪಿತೂರಿಯ ಭಾಗ ಎಂದು ಹೇಳುವುದು ನಿಮ್ಮ ಉದ್ದೇಶ. ಇಡೀ ಸಮುದಾಯವನ್ನು ಮಾಧ್ಯಮ ಗುರಿಯಾಗಿಸಲು ಅನುಮತಿಸಬಹುದೇ?”.

ನ್ಯಾ. ಡಿ ವೈ ಚಂದ್ರಚೂಡ್

2. ಸುರೇಶ್ ಚವ್ಹಾಣ್ಕೆ ಅವರು ಚಾನೆಲ್‌ಗೆ ಸಾಕಷ್ಟು ಬಂಡವಾಳ ಹೂಡಿದ್ದಾರೆ. ಕಾನೂನು ಉಲ್ಲಂಘಿಸಿದರೆ ಕ್ರಮ ಎದುರಿಸಲು ಸಿದ್ಧವಿರುವುದಾಗಿ ಅವರು ಹೇಳಿದ್ದಾರೆ. ಪ್ರಚೋದನಕಾರಿ ಹೇಳಿಕೆ ನೀಡಿ ನಾಪತ್ತೆಯಾಗುವ ಪ್ರಕರಣ ಇದಲ್ಲ.
ಹಿರಿಯ ವಕೀಲ ಶ್ಯಾಮ್ ದಿವಾನ್

3. “ತಡೆಯಾಜ್ಞೆಯನ್ನು ಹೇಗೆ ನೋಡಬೇಕು ಎಂಬುದು ನಮಗೆ ತಿಳಿದಿದೆ. ಹೇರಳವಾದ ತಡೆಯಾಜ್ಞೆಗಳು ಜಾರಿಯಾಗಬಹುದು ಎಂಬ ಅಳುಕು ನನಗಿದೆ. ಅದು ನೆಲದ ಕಾನೂನಾಗುವುದು ನನಗೆ ಇಷ್ಟವಿಲ್ಲ. ನಿಮ್ಮ ಕಕ್ಷಿದಾರರಿಗೆ ನಾವು ಸದುದ್ದೇಶದ ಆಯ್ಕೆಯನ್ನು ನೀಡಲು ಬಯಸುತ್ತೇವೆ.
ನ್ಯಾ. ಡಿ ವೈ ಚಂದ್ರಚೂಡ್

4. “ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಳ್ಳಬಾರದು ಎಂಬ ಸಂದೇಶ ಮಾಧ್ಯಮಗಳಿಗೆ ರವಾನೆಯಾಗಬೇಕು. ಭವಿಷ್ಯದಲ್ಲಿ ಒಗ್ಗಟ್ಟಿನಿಂದ ಕೂಡಿದ ವೈವಿಧ್ಯಮಯ ರಾಷ್ಟ್ರದತ್ತ ನಾವು ನೋಟ ಬೀರಬೇಕಿದೆ. ರಾಷ್ಟ್ರೀಯ ಭದ್ರತೆಯನ್ನು ನಾವು ಮಾನ್ಯ ಮಾಡುತ್ತೇವೆ. ಆದರೆ, ಒಬ್ಬರನ್ನೊಬ್ಬರು ಗೌರವಿಸುವುದೂ ಮುಖ್ಯ.”
ನ್ಯಾ. ಡಿ ವೈ ಚಂದ್ರಚೂಡ್

5. “ಕಾರ್ಯಕ್ರಮದ ಒಂದು ಕಂತನ್ನು ನಾನು ನೋಡಿದೆ. ಅದನ್ನು ನೋಡಿ ನೋವಾಯಿತು. ಜ್ವಾಲೆ, ಹಸಿರು ಟಿ-ಶರ್ಟ್ ಧರಿಸಿದ ಜನರು ಅದರ ಮೇಲೆ 500 ಕೋಟಿ ಸ್ಟಿಕರ್ ಹಾಕಿಕೊಂಡು ಸಾಗುವುದನ್ನು ನೀವು ತೆಗೆಯಬೇಕು."
ನ್ಯಾ. ಇಂದೂ ಮಲ್ಹೋತ್ರಾ

6. “ಕಾರ್ಯಕ್ರಮದಲ್ಲಿ ಹಲವು ಅರ್ಧ ಸತ್ಯಗಳಿವೆ. ಅದು ಶೇಕಡಾವಾರು ಮಟ್ಟದಲ್ಲಿವೆ. ಮುಸ್ಲಿಮರು ಮೇಲ್ದರ್ಜೆಗೇರುವುದನ್ನು ಕೇಂದ್ರ ಸರ್ಕಾರ ಬಯಸುತ್ತದೆ. ಶೇ. 50ರಷ್ಟು ಮುಸ್ಲಿಮರು ಯುಪಿಎಸ್‌ಸಿ ಮಟ್ಟಕ್ಕೇರಿದ್ದಾರೆ. ನೀವು ಅದನ್ನು ಕೆಳಗಿಳಿಸುತ್ತಿದ್ದೀರಿ.”
ನ್ಯಾ. ಕೆ ಎಂ ಜೋಸೆಫ್

7. “ಎಲ್ಲಾ ಸಮುದಾಯಗಳೂ ಅಧಿಕಾರ ಎಂಬ ಶಕ್ತಿ ಕೇಂದ್ರದ ಭಾಗವಾಗಲು ಬಯಸುತ್ತವೆ. ವಿಭಿನ್ನ ಅಂಶಗಳನ್ನೊಳಗೊಂಡ ಕಾಕ್ ಟೈಲ್ ಅನ್ನು ಸಿದ್ಧಪಡಿಸಿರುವ ನೀವು ತಳದಲ್ಲಿ ಒಂದಡೀ ಸಮುದಾಯದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದೀರಿ.”
ನ್ಯಾ. ಕೆ ಎಂ ಜೋಸೆಫ್

8. “ನಿಯಮ ಉಲ್ಲಂಘಿಸಲಾಗಿದೆಯೇ ಎಂಬುದನ್ನು ಪರಿಶೀಲಿಸುವುದರಲ್ಲಿ ಒಂದು ಅರ್ಥ ಇರಬಹುದು… ಆದರೆ, ನಿಯಮ ಉಲ್ಲಂಘಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನೋಡುವುದೇ ಯಾವುದೇ ಸಾಂವಿಧಾನಿಕ ನ್ಯಾಯಾಲಯದ ಮೊದಲ ಕೆಲಸವಲ್ಲ."
ಶ್ಯಾಮ್ ದಿವಾನ್, ನ್ಯಾ. ಜೋಸೆಫ್ ಅವರ ಆತಂಕಕ್ಕೆ ಪ್ರತಿಕ್ರಿಯೆ

9. “...ಎಲ್ಲಾ ಅಭ್ಯರ್ಥಿಗಳೂ ಒಂದು ರೀತಿಯ ಸಿದ್ಧಾಂತ ಪ್ರತಿನಿಧಿಸುತ್ತಿದ್ದಾರೆ ಎಂಬುದು ದ್ವೇಷದ ಭಾಗದಂತೆ ಕಾಣುತ್ತದೆ. ಇದು ಆತಂಕದ ಒಂದು ಭಾಗ… ಇಲ್ಲಿ ವಾಕ್ ಸ್ವಾತಂತ್ರ್ಯ ದ್ವೇಷವಾಗಿದೆ. ಸಮುದಾಯದ ಎಲ್ಲಾ ಸದಸ್ಯರನ್ನೂ ಬ್ರಾಂಡ್ ಮಾಡಲಾಗದು… ವಿಭಜನಕಾರಿ ಕಾರ್ಯಸೂಚಿಯಿಂದ ಒಳ್ಳೆಯ ಸದಸ್ಯರನ್ನೂ ದೂರ ಮಾಡುತ್ತೀರಿ."
ನ್ಯಾ. ಡಿ ವೈ ಚಂದ್ರಚೂಡ್

10. “ಈ ಎಲ್ಲಾ ಕಂತುಗಳಲ್ಲೂ ದ್ವೇಷ ಭಾಷೆಯಲ್ಲದೇ ಮತ್ತೇನು ಇಲ್ಲ. ನ್ಯಾಯಾಲಯದ ಗಮನಸೆಳೆಯುವ ಕೆಲಸವನ್ನು ನಾವು ಮಾಡುತ್ತೇವೆ. ಈ ಪ್ರಕರಣದಲ್ಲಿ ತಡೆಯಾಜ್ಞೆ ವಿಧಿಸಬೇಕಿರುವು ಸಾಂವಿಧಾನಿಕ ನ್ಯಾಯಾಲಯದ ಕರ್ತವ್ಯ."
ಅರ್ಜಿದಾರರ ಪರ ವಕೀಲ ಶಾದನ್ ಫರಾಸತ್

ತ್ರಿಸದಸ್ಯ ಪೀಠವು ಸೆಪ್ಟೆಂಬರ್ 21ರಂದು ಮಧ್ಯಾಹ್ನ 2 ಗಂಟೆಗೆ ಪ್ರಕರಣದ ವಿಚಾರಣೆ ಮುಂದುವರಿಸಲಿದೆ. ಸದ್ಯಕ್ಕೆ ಯುಪಿಎಸ್‌ಸಿ ಜಿಹಾದ್ ಕಾರ್ಯಕ್ರಮದ ವಿರುದ್ಧದ ತಡೆಯಾಜ್ಞೆ ಮುಂದುವರಿಯಲಿದೆ.

Kannada Bar & Bench
kannada.barandbench.com