ಸಲಿಂಗ ವಿವಾಹ ಕಲ್ಪನೆಗೆ ನನ್ನ ಸಂಪೂರ್ಣ ವಿರೋಧವಿದೆ ಎಂದಿರುವ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಅವರು ಒಂದೇ ಲಿಂಗಕ್ಕೆ ಸಂಬಂಧಿಸಿದ ಇಬ್ಬರು ವ್ಯಕ್ತಿಗಳ ಸಮಾಗಮವು ಅತ್ಯುತ್ತಮ ಒಡನಾಟ/ಕೂಟವಾಗಬಹುದೇ ಹೊರತು ಮದುವೆಯ ಪರಧಿಯೊಳಗೆ ಅದನ್ನು ತರಲಾಗದು ಎಂದು ಹೇಳಿದ್ದಾರೆ.
ಕೇರಳದ ಕೋವಲಂನಲ್ಲಿ ಶುಕ್ರವಾರ ನಡೆದ ಇಂಡಿಯಾ ಟುಡೇ ಕಾನ್‌ಕ್ಲೇವ್ ಸೌತ್ 2023 ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸುಪ್ರೀಂ ಕೋರ್ಟ್‌ನ ಮತ್ತೊಬ್ಬ ನಿವೃತ್ತ ನ್ಯಾಯಮೂರ್ತಿಗಳಾದ ಜಸ್ತಿ ಚಲಮೇಶ್ವರ್ ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸರ್ವೋಚ್ಚ ನ್ಯಾಯಾಲಯ ಸಲಿಂಗ ವಿವಾಹ ಪ್ರಕರಣವನ್ನು ಆಲಿಸಬೇಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು “ನಾನು ನೂರಕ್ಕೆ ನೂರರಷ್ಟು ಸಲಿಂಗ ವಿವಾಹ ಕಲ್ಪನೆಗೆ ವಿರುದ್ಧವಾಗಿದ್ದೇನೆ” ಎಂದು ನ್ಯಾ. ಜೋಸೆಫ್ ತಿಳಿಸಿದರು.
“ಮದುವೆ ಎಂಬುದು ಪುರುಷ ಮತ್ತು ಮಹಿಳೆಯ ನಡುವಿನ ಸಮಾಗಮ. ಮತ್ತೊಂದು (ಸಲಿಂಗ ವಿವಾಹ) ಒಡನಾಟ/ಕೂಟವಾಗಿದೆ. ಮದುವೆ ಎಂಬುದು ಸಂತಾನವೃದ್ಧಿ ಮತ್ತು ರಂಜನೆಗಾಗಿ ಇದೆ. ಮತ್ತೊಂದು ಒಡನಾಟ, ಕೂಟವಾಗಿದೆ. ನಾನು ಸಲಿಂಗ ವಿವಾಹ ಕಲ್ಪನೆಗೆ ನೂರಕ್ಕೆ ನೂರರಷ್ಟು ವಿರುದ್ಧ ಇದ್ದೇನೆ. ಅದು (ಸಲಿಂಗ ಸಂಬಂಧಗಳು) ಸ್ನೇಹಿತರು, ಆತ್ಮೀಯರೊಂದಿಗೆ ಒಟ್ಟಿಗೆ ವಾಸಿಸುವ ಸ್ವಂತ ಆಯ್ಕೆಯಾಗಿದೆ. ಆದರೆ ಮದುವೆಯ ವಿಚಾರಕ್ಕೆ ಬಂದ ತಕ್ಷಣ ಅದು ಬೇರೆಯಾಗಿಬಿಡುತ್ತದೆ. ಇದು ಸಮಾಜದ ಮೂಲ ಘಟಕ. ಇದು ಸಮಸ್ಯೆಯ ಮೂಲದ ಮೇಲೆ ಪರಿಣಾಮ ಬೀರುತ್ತದೆ” ಎಂದು ಅವರು ಹೇಳಿದರು. ಮದುವೆ ಮೂಲಭೂತ ಹಕ್ಕಲ್ಲ ಎಂದು ಕೂಡ ಅವರು ಹೇಳಿದರು.
ಸಲಿಂಗ ವಿವಾಹ ವಿಚಾರಣೆ ನಡೆಸುವ ಸುಪ್ರೀಂ ಕೋರ್ಟ್ ನ್ಯಾಯವ್ಯಾಪ್ತಿ ಕುರಿತಂತೆ ಮಾತನಾಡಿದ ಅವರು ಪ್ರಕರಣ ಆಲಿಸಲು ಸುಪ್ರೀಂ ಕೋರ್ಟ್‌ಗೆ ಅಧಿಕಾರ ವ್ಯಾಪ್ತಿ ಇದ್ದರೂ ನ್ಯಾಯಾಲಯದ ಪ್ರಾಥಮಿಕ ಕರ್ತವ್ಯವು ಕಾನೂನು ಹಾಗೂ ಕಾರ್ಯಾಂಗ ಕ್ರಮಗಳ ಸಿಂಧುತ್ವ ಪರಿಶೀಲಿಸುವುದು ಮತ್ತು ಅವು ಸಂವಿಧಾನಕ್ಕೆ ಅನುಗುಣವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳುವುದಾಗಿದೆ ಎಂದರು.
ಪ್ರಸ್ತುತ, ಸಲಿಂಗ ವಿವಾಹವನ್ನು ನಿಷೇಧಿಸುವ ಅಥವಾ ಅಧಕ್ಕೆ ಮಾನ್ಯತೆ ನೀಡುವ ಯಾವುದೇ ಕಾನೂನು ಇಲ್ಲ. ಹೀಗಾಗಿ ಸುಪ್ರೀಂ ಕೋರ್ಟ್ ಸಲಿಂಗ ವಿವಾಹ ಮಾನ್ಯತೆ ಕುರಿತು ವಿಚಾರಣೆ ನಡೆಸಿದಾಗ ಅನೇಕರು ಟೀಕಿಸಿದರು. ನ್ಯಾಯಾಲಯ ಹೊರಡಿಸುವ ಯಾವುದೇ ಆದೇಶದಿಂದಾಗಿ ನ್ಯಾಯಾಂಗ ಎಂಬುದು ಶಾಸಕಾಂಗದಲ್ಲಿ ಹಸ್ತಕ್ಷೇಪ ಮಾಡುತ್ತದೆ ಎಂದು ದೂರಿದರು.