ಪ್ರಕರಣಗಳ ಪಟ್ಟಿ ಮಾಡುವ ವ್ಯವಸ್ಥೆಯಲ್ಲಿನ ಲೋಪಗಳನ್ನು ನಿಭಾಯಿಸಲು ಸಾಧ್ಯವಾಗದ ಬಗ್ಗೆ ಸಿಜೆಐ ಎನ್‌ ವಿ ರಮಣ ವಿಷಾದ

ಪ್ರಕರಣಗಳ ಬಾಕಿ ಉಳಿದಿರುವಿಕೆಯು ದೇಶದ ನ್ಯಾಯಾಲಯಗಳು ಎದುರಿಸುತ್ತಿರುವ ಸಮಸ್ಯೆಯಾಗಿದೆ ಎಂದು ಅಭಿಪ್ರಾಯಪಟ್ಟ ಸಿಜೆಐ ಅವರು, ಯಾವುದೇ ಒಂದು ಆದೇಶ ಅಥವಾ ತೀರ್ಪಿನಿಂದ ಮಾತ್ರವೇ ದೇಶದ ನ್ಯಾಯಾಂಗವನ್ನು ವಿವರಿಸಲಾಗದು ಎಂದರು.
CJI NV Ramana
CJI NV Ramana

ಪ್ರಕರಣಗಳ ಪಟ್ಟಿ ಮಾಡುವ ವ್ಯವಸ್ಥೆಯಲ್ಲಿ ಇರುವ ವ್ಯಾಪಕ ಸಮಸ್ಯೆಗಳನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯವಾಗದೆ ಹೋದ ಬಗ್ಗೆ ನಿವೃತ್ತಿಯ ಹೊಸ್ತಿಲಿನಲ್ಲಿ ನಿಂತಿರುವ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ(ಸಿಜೆಐ) ಎನ್‌ ವಿ ರಮಣ ಅವರು ಶುಕ್ರವಾರ ವಿಷಾದಿಸಿದರು.

ಪ್ರಕರಣಗಳ ಬಾಕಿ ಉಳಿದಿರುವಿಕೆಯು ದೇಶದ ನ್ಯಾಯಾಲಯಗಳು ಎದುರಿಸುತ್ತಿರುವ ಸಮಸ್ಯೆಯಾಗಿದೆ ಎಂದು ಅಭಿಪ್ರಾಯಪಟ್ಟ ಸಿಜೆಐ ಎನ್‌ ವಿ ರಮಣ ಅವರು, ಆದರೆ, ಯಾವುದೇ ಒಂದು ಆದೇಶ ಅಥವಾ ತೀರ್ಪಿನಿಂದ ಮಾತ್ರವೇ ದೇಶದ ನ್ಯಾಯಾಂಗವನ್ನು ವಿವರಿಸಲಾಗದು ಎಂದು ಹೇಳಿದರು.

ನಾನು ಸೂಕ್ತವಾಗಿ ಗಮನಹರಿಸಲಾಗದ ವಿಷಯಗಳಲ್ಲಿ ಪ್ರಕರಣಗಳ ಪಟ್ಟಿ ಮಾಡುವ (ಲಿಸ್ಟಿಂಗ್‌), ಆಲಿಸಲು ಗೊತ್ತುಪಡಿಸುವ (ಪೋಸ್ಟಿಂಗ್) ವಿಷಯವೂ ಒಂದಾಗಿದೆ ಎನ್ನುವುದನ್ನು ಒಪ್ಪಿಕೊಳ್ಳುತ್ತೇನೆ. ಅದಕ್ಕಾಗಿ ನಾನು ವಿಷಾದಿಸುತ್ತೇನೆ. ನಾವು ಪ್ರತಿದಿನವೂ ನಮ್ಮ ಮುಂದಿದ್ದ ಸಮಸ್ಯೆಗಳನ್ನು ಎದುರಿಸುವಲ್ಲಿಯೇ ಮಗ್ನರಾಗಿದ್ದೆವು,” ಎಂದು ಅವರು ಹೇಳಿದರು.

ಮುಂದುವರೆದು, “ಸಂಸ್ಥೆಯ ವಿಶ್ವಾಸಾರ್ಹತೆಯನ್ನು ನ್ಯಾಯಾಲಯದ ಅಧಿಕಾರಿಗಳು ರಕ್ಷಿಸಬೇಕಿದೆ. ಸಂಸ್ಥೆಯ ವಿಶ್ವಾಸಾರ್ಹತೆಯು ಭದ್ರವಾಗಿರದೆ ಅದು ಸಮಾಜದಲ್ಲಿನ ಜನತೆಯಲ್ಲಿ ಗೌರವವನ್ನು ಮೂಡಿಸಲು ಸಾಧ್ಯವಿಲ್ಲ,” ಎಂದರು.

“ಭಾರತದ ನ್ಯಾಯಾಂಗವು ಸಮಯ ಸರಿದಂತೆ ತಾನೂ ಬೆಳೆದಿದೆ. ಯಾವುದೇ ಒಂದು ಏಕೈಕ ಆದೇಶ ಅಥವಾ ತೀರ್ಪಿನಿಂದ ಅದನ್ನು ವಿವರಿಸಲಾಗದು. ಎಲ್ಲ ಸಮಯದಲ್ಲಿಯೂ ಸಂಸ್ಥೆಯ ಘನತೆಯನ್ನು ಪೀಠ (ನ್ಯಾಯಮೂರ್ತಿಗಳ ಸಮುದಾಯ) ಹಾಗೂ ಪರಿಷತ್ತು (ವಕೀಲ ಸಮುದಾಯ) ರಕ್ಷಿಸಲಿವೆ, ಕಾಪಾಡಲಿವೆ,” ಎಂದರು.

ಪ್ರಕರಣಗಳ ಬಾಕಿ ಉಳಿಯುವಿಕೆಯ ಸಮಸ್ಯೆಯನ್ನು ಎದುರಿಸಲು ವ್ಯವಸ್ಥೆಯನ್ನು ಸುಧಾರಿಸಬೇಕಿದ್ದು, ಆಧುನಿಕ ತಂತ್ರಜ್ಞಾನವನ್ನು ದುಡಿಸಿಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು. ಇದೇ ವೇಳೆ ವಾಣಿಜ್ಯ ಸಂಸ್ಥೆಗಳ ರೀತಿಯಲ್ಲಿ ನಾವು ಮಾರುಕಟ್ಟೆಯಿಂದ ತಾಂತ್ರಿಕ ಉತ್ಪನ್ನಗಳನ್ನು ಪಡೆಯಲಾಗದು ಎಂದೂ ತಮ್ಮ ಮುಂದಿರುವ ಸವಾಲನ್ನು ವಿವರಿಸಿದರು. ಇದೇ ವೇಳೆ ವಕೀಲರ ಸಮುದಾಯವು ಹೃದಯಪೂರ್ವಕವಾಗಿ ತನ್ನ ಸಹಕಾರವನ್ನು ನೀಡದ ಹೊರತು ಅಗತ್ಯ ಬದಲಾವಣೆಗಳನ್ನು ನ್ಯಾಯಾಂಗದಲ್ಲಿ ತರಲು ಸಾಧ್ಯವಿಲ್ಲ ಎಂದರು. ಅಲ್ಲದೆ ಕಿರಿಯ ವಕೀಲರಿಗೆ ಸರಿಯಾದ ಹಾದಿಯ ಸೂಕ್ತ ಮಾರ್ಗದರ್ಶನವನ್ನು ತೋರುವಂತೆ ಕೋರಿದರು.

”ಕಳೆದ 16 ತಿಂಗಳಲ್ಲಿ ಕೇವಲ 50 ದಿನಗಳು ಮಾತ್ರವೇ ನಾವು ಪೂರ್ಣ ಪ್ರಮಾಣದ ವಿಚಾರಣೆಯನ್ನು ನಡೆಸಲು ಸಾಧ್ಯವಾಗಿದೆ. ನಮ್ಮದೇ ಆದ ರೀತಿಯಲ್ಲಿ ನಾವೆಲ್ಲರೂ ವ್ಯವಸ್ಥೆಯನ್ನು ಬಲಪಡಿಸಲು ಕೊಡುಗೆಯನ್ನು ನೀಡಬೇಕಿದೆ. ನನ್ನ ಸಾಮರ್ಥ್ಯದ ಮಿತಿಯಲ್ಲಿ ಎಷ್ಟು ಉತ್ತಮವಾಗಿ ಮಾಡುವುದು ಸಾಧ್ಯವೋ ಅಷ್ಟನ್ನು ನಾನು ಮಾಡಿದ್ದೇನೆ. ವಕೀಲ ಸಮುದಾಯಕ್ಕೆ ಅಗತ್ಯವಿರುವ ಅನುಕೂಲಗಳನ್ನು ಮಾಡಲು ಶ್ರಮಿಸಿದ್ದೇನೆ,” ಎಂದರು.

Related Stories

No stories found.
Kannada Bar & Bench
kannada.barandbench.com