ಡಾ. ಬಿ ಆರ್ ಅಂಬೇಡ್ಕರ್ ಅವರಿಂದಾಗಿಯೇ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿದ್ದೇನೆ: ಜಸ್ಟಿಸ್‌ ಬಿ ಆರ್ ಗವಾಯಿ

ಸುಪ್ರೀಂ ಕೋರ್ಟ್‌ನ 52 ನೇ ಮುಖ್ಯ ನ್ಯಾಯಮೂರ್ತಿಯಾಗಲಿರುವ ನ್ಯಾ. ಗವಾಯಿ ಅವರ ತಂದೆ ಆರ್ ಎಸ್ ಗವಾಯಿ ಅವರು ಸಂಸದರು ಹಾಗೂ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು.
Justice BR Gavai pays homage to Dr. Ambedkar at Columbia University
Justice BR Gavai pays homage to Dr. Ambedkar at Columbia University

ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರನ್ನು ಸುಪ್ರಿಂಕೋರ್ಟ್ ನ್ಯಾಯಮೂರ್ತಿ ಬಿ ಆರ್ ಗವಾಯಿ ಶ್ಲಾಘಿಸಿದ್ದಾರೆ.

ಸೊಸೈಟಿ ಫಾರ್‌ ಕಾನ್‌ಸ್ಟಿಟ್ಯೂಷನ್‌ ಅಂಡ್‌ ಸೋಷಿಯಲ್‌ ಡೆಮಾಕ್ರಸಿ ಹಾಗೂ ದ ಲೀಫ್‌ಲೆಟ್‌ ಜಾಲತಾಣ ಜಂಟಿಯಾಗಿ ನವದೆಹಲಿಯ ಇಂಡಿಯನ್‌ ಸೊಸೈಟಿ ಆಫ್‌ ಇಂಟರ್‌ನ್ಯಾಷನಲ್‌ ಲಾ ಕೇಂದ್ರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಂವಿಧಾನದ ʼ32ನೇ ವಿಧಿ: ಇತಿಹಾಸ ಮತ್ತು ಭವಿಷ್ಯʼ ಎಂಬ ಅಂಬೇಡ್ಕರ್‌ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೊಳೆಗೇರಿಯ ಶಾಲೆಗಳಲ್ಲಿ ಓದಿದ ವ್ಯಕ್ತಿ ಕೂಡ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಹುದ್ದೆಗೆ ಏರಬಹುದು ಎಂಬುದು ಡಾ. ಅಂಬೇಡ್ಕರ್ ಅವರು ದೇಶಕ್ಕೆ ನೀಡಿದ ಕೊಡುಗೆಯಾಗಿದೆ ಎಂದರು.

“ಸಂವಿಧಾನ ರೂಪುಗೊಂಡ ಶ್ರೇಯಸ್ಸು ಡಾ. ಬಿ ಆರ್ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಅರೆ ಕೊಳೆಗೇರಿ ಪ್ರದೇಶದ ಮುನ್ಸಿಪಲ್ ಶಾಲೆಯಲ್ಲಿ ಓದಿದ ನನ್ನಂತಹವರು ಈ ಸ್ಥಾನಕ್ಕೇರಲು ಅಂಬೇಡ್ಕರ್‌ ಅವರೇ ಕಾರಣ” ಎಂದರು.

ಸುಪ್ರೀಂ ಕೋರ್ಟ್‌ನ 52 ನೇ ಮುಖ್ಯ ನ್ಯಾಯಮೂರ್ತಿಯಾಗಲಿರುವ ನ್ಯಾ. ಗವಾಯಿ ದಲಿತ ಸಮುದಾಯದಿಂದ ಈ ಹುದ್ದೆಯನ್ನು ಅಲಂಕರಿಸಿದ ಎರಡನೇ ವ್ಯಕ್ತಿ ಎನಿಸಿಕೊಳ್ಳಲಿದ್ದಾರೆ. ಅವರ ತಂದೆ ಆರ್‌ ಎಸ್‌ ಗವಾಯಿ ಅವರು ಸಂಸದರು ಹಾಗೂ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು.

ಪರಿವರ್ತನಾ ನ್ಯಾಯಕ್ಕಾಗಿ ಸಂವಿಧಾನದ 32ನೇ ವಿಧಿಯನ್ನು ಸಾಧನವಾಗಿ ಬಳಸಲಾಗುತ್ತಿದೆ ಎಂದು ಅವರು ತಮ್ಮ ಭಾಷಣದಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಸಂವಿಧಾನ ಎಂಬುದು ವಕೀಲರ ಪುಸ್ತಕವಲ್ಲ ಬದಲಿಗೆ ಜೀವನ ವಿಧಾನ ಎಂಬ ಅಂಬೇಡ್ಕರ್‌ ಅವರ ಮಾತುಗಳನ್ನು ಅವರು ಇದೇ ಸಂದರ್ಭದಲ್ಲಿ ನೆನೆದರು.  

ಇದೇ ವೇಳೆ ಮಾತನಾಡಿದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಅಭಯ್‌ ಎಸ್‌ ಓಕಾ ಅವರು ಸಂವಿಧಾನದ 32ನೇ ವಿಧಿಯಡಿ ಸಲ್ಲಿಸುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ಎಂತಹ ಸಂದರ್ಭಗಳಲ್ಲಿ ಪರಿಗಣಿಸಬೇಕು ಎಂಬುದನ್ನು ನಿರ್ಧರಿಸಲು ಮಾನದಂಡ ಪರೀಕ್ಷೆ ನಿಗದಿಪಡಿಸುವ ಅಗತ್ಯವಿದೆಯೇ ಎಂಬುದನ್ನು ನಿರ್ಧರಿಸಬೇಕಿದೆ ಎಂದರು.

ಸಂವಿಧಾನದಲ್ಲಿ ಕಲ್ಪಿಸಲಾಗಿರುವ ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸುವಂತೆ ಕೋರಿ ಜನ ನೇರವಾಗಿ ಸುಪ್ರೀಂ ಕೋರ್ಟ್ ಕದ ತಟ್ಟಲು ಈ ವಿಧಿ ಅವಕಾಶ ಮಾಡಿಕೊಡುತ್ತದೆ.

ಉದ್ಯಮಿಗಳು 32ನೇ ವಿಧಿಯಡಿ ಹೂಡುವ ತಮ್ಮ ಪ್ರಕರಣಗಳಿಗೆ ವಕೀಲರ ಪಡೆಯನ್ನೇ ನಿಯೋಜಿಸುತ್ತಿದ್ದು ನ್ಯಾಯಾಂಗದ ಸಮಯ ಹಾಳುಗೆಡವುತ್ತಿರುವ ವಿಚಾರವನ್ನು ಪ್ರಸ್ತಾಪಿಸಿದರು., ಹಾಗಾಗಿ 32ನೇ ವಿಧಿಯಡಿ ಪರಿಗಣಿಸಲು ನಿರ್ದಿಷ್ಟ ಮಾನದಂಡಗಳ ಪರೀಕ್ಷೆ ಇರಬೇಕೇ ಎನ್ನುವುದರ ಬಗ್ಗೆ ಚರ್ಚೆಯಾಗಬೇಕು ಎಂದರು.

ಹಿರಿಯ ವಕೀಲೆ ಇಂದಿರಾ ಜೈಸಿಂಗ್‌ ಅವರು ಮಾತನಾಡಿ ಸಂವಿಧಾನದ ಮಹತ್ವ ತಿಳಿಸಿದರು.

Related Stories

No stories found.
Kannada Bar & Bench
kannada.barandbench.com