ಸಾಂಕೇತಿಕ ಪ್ರಾತಿನಿಧಿಕತೆಯಲ್ಲಿ, ಅರ್ಹತೆರಹಿತ ನೇಮಕಾತಿಯಲ್ಲಿ ನನಗೆ ನಂಬಿಕೆಯಿಲ್ಲ: ನ್ಯಾ. ಇಂದೂ ಮಲ್ಹೋತ್ರಾ

“ನನ್ನ ಕಚೇರಿಯಲ್ಲಿ ಅತ್ಯಂತ ತೃಪ್ತಿದಾಯಕವಾಗಿ ಕಾರ್ಯನಿರ್ವಹಿಸಿ ನಿರ್ಗಮಿಸುತ್ತಿದ್ದೇನೆ. ನ್ಯಾಯದ ಅಂತಿಮತಾಣವಾದ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸಿದ ತೃಪ್ತಿ ನನ್ನದು” ಎಂದು ನ್ಯಾ. ಇಂದೂ ಹೇಳಿದರು.
Justice Indu Malhotra
Justice Indu Malhotra
Published on

ನ್ಯಾಯಾಂಗದಲ್ಲಿ ಲಿಂಗ ತಾರತಮ್ಯ ಬಗೆಹರಿಸುವ ನಿಟ್ಟಿನಲ್ಲಿ ಸಾಂಕೇತಿಕ ಮಹಿಳಾ ಪ್ರಾತಿನಿಧೀಕರಣದಲ್ಲಾಗಲಿ, ಅರ್ಹತೆರಹಿತ ನೇಮಕಾತಿಗಳಲ್ಲಾಗಲಿ ನನಗೆ ನಂಬಿಕೆಯಿಲ್ಲ ಎಂದು ಸುಪ್ರೀಂಕೋರ್ಟ್‌ನ‌ ಏಳನೇ ಮಹಿಳಾ ನ್ಯಾಯಮೂರ್ತಿ ಇಂದೂ ಮಲ್ಹೋತ್ರಾ ಹೇಳಿದ್ದಾರೆ.

ನ್ಯಾ. ಇಂದೂ ಮಲ್ಹೋತ್ರ ಅವರಿಗೆ ಸುಪ್ರೀಂಕೋರ್ಟ್‌ ವಕೀಲರ ಸಂಘದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂದು (ಶನಿವಾರ) ಅವರು ನಿವೃತ್ತರಾಗಲಿದ್ದಾರೆ.

Also Read
65 ವರ್ಷಕ್ಕೆ ನ್ಯಾಯಮೂರ್ತಿಗಳ ನಿವೃತ್ತಿ ಬೇಸರದ ಸಂಗತಿ: ನ್ಯಾ. ಮಲ್ಹೋತ್ರಾ ನಿವೃತ್ತಿಗೆ ವೇಣುಗೋಪಾಲ್‌ ಪ್ರತಿಕ್ರಿಯೆ

"ಲಿಂಗ ಪ್ರಾತಿನಿಧ್ಯದ ವಿಚಾರದಲ್ಲಿ, ಪುರುಷ ಮತ್ತು ಮಹಿಳಾ ನ್ಯಾಯಾಧೀಶರ ನಡುವಿನ ವ್ಯತ್ಯಾಸ ಮುಂದೊಂದು ದಿನ ಅಸ್ತಿತ್ವದಲ್ಲಿರುವುದಿಲ್ಲ. ಕೇವಲ ಸಾಂಕೇತಿಕ ಪ್ರಾತಿನಿಧ್ಯದಲ್ಲಿ ನನಗೆ ನಂಬಿಕೆಯಿಲ್ಲ. ಸಾಂಕೇತಿಕ ಪ್ರಾತಿನಿಧೀಕರಣದಲ್ಲಾಗಲಿ, ಅರ್ಹತೆರಹಿತ ನೇಮಕಾತಿಗಳಲ್ಲಾಗಲಿ ನನಗೆ ನಂಬಿಕೆ ಇಲ್ಲ. ಮುಂದಿನ ದಿನಗಳಲ್ಲಿ (ನ್ಯಾಯಾಂಗದಲ್ಲಿ ಮಹಿಳೆಯರ) ಸಂಖ್ಯೆ ವೃದ್ಧಿಸುತ್ತದೆ ಎಂಬ ವಿಶ್ವಾಸ ನನಗಿದೆ. ನ್ಯಾಯಪೀಠದಲ್ಲಿ ಲಿಂಗ ವೈವಿಧ್ಯತೆ ಕಂಡುಬಂದಾಗ ಸಮಾಜ ಅದರ ಪ್ರಯೋಜನ ಪಡೆಯುತ್ತದೆ "ಎಂದು ಅವರು ಹೇಳಿದರು.

ಆದರೆ ಮಹಿಳೆ ಆಗಿರುವುದರಿಂದ ವೃತ್ತಿಯಲ್ಲಿ ತನ್ನದೇ ಆದ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂದ ಅವರು “ ವಿಶೇಷವಾಗಿ ಮಕ್ಕಳ ಲಾಲನೆ ಪಾಲನೆ ಅವಧಿಯಲ್ಲಿ ವೃತ್ತಿ ಜೀವನದ ಸಮತೋಲನ ಸಾಧಿಸುವುದು ದೊಡ್ಡ ಸವಾಲು. ಅವರಿಗೆ ಕಾನೂನು ವೃತ್ತಿ ಅಪಾರ ಬೆಂಬಲ ನೀಡಬೇಕಾಗುತ್ತದೆ. ನನ್ನ ಪೋಷಕರು ತಮ್ಮ ಕಾಲಕ್ಕೆ ಬಹಳ ಪ್ರಗತಿಪರರಾಗಿದ್ದರು" ಎಂದು ಅವರು ನೆನೆದರು.

Also Read
ನಿವೃತ್ತರಾಗಲಿರುವ ನ್ಯಾ. ಇಂದೂ ಮಲ್ಹೋತ್ರಾ ಕುರಿತು ಹೃದಯಸ್ಪರ್ಶಿ ಮಾತುಗಳನ್ನಾಡಿದ ನ್ಯಾ. ಚಂದ್ರಚೂಡ್‌

ಪರಸ್ಪರ ಒಪ್ಪಿಗೆಯ ಸಲಿಂಗ ಸಂಬಂಧ ಕುರಿತು ಗುರುತರ ತೀರ್ಪು ನೀಡುವ ಸಂದರ್ಭದಲ್ಲಿ ನ್ಯಾಯಪೀಠದಲ್ಲಿ ಕಂಡುಬಂದ ಹೃದಯ ಸ್ಪರ್ಶಿ ಕ್ಷಣಗಳನ್ನು ಅವರು ಸ್ಮರಿಸಿದರು. “ಸೆಕ್ಷನ್ 377 ರ ತೀರ್ಪನ್ನು ಓದುತ್ತಿದ್ದಂತೆ ಭಾವುಕತೆಯ ಅಲೆ ಎದ್ದಿತು. ತಮ್ಮ ಸಂಬಂಧಗಳಿಗೆ ಕಾನೂನಿನ ಮುದ್ರೆಯೊತ್ತುತ್ತಿದ್ದಂತೆ ಪಕ್ಷಗಳು ಭಾವುಕವಾದವು” ಎಂದು ಮೆಲುಕು ಹಾಕಿದರು.

“ನನ್ನ ಕಚೇರಿಯಲ್ಲಿ ಅತ್ಯಂತ ತೃಪ್ತಿದಾಯಕವಾಗಿ ಕಾರ್ಯನಿರ್ವಹಿಸಿ ನಿರ್ಗಮಿಸುತ್ತಿದ್ದೇನೆ. ನ್ಯಾಯದ ಅಂತಿಮತಾಣವಾದ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸಿದ ತೃಪ್ತಿ ನನ್ನದು” ಎಂದು ನ್ಯಾ. ಇಂದೂ ಹೇಳಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನ್ಯಾ ರೋಹಿಂಟನ್‌ ಫಾಲಿ ನಾರಿಮನ್‌ ಅವರು ಮಧ್ಯಸ್ಥಿಕೆ ಕಾನೂನು ಕುರಿತು ನ್ಯಾ. ಇಂದು ಅವರಿಗಿರುವ ಪರಿಣತಿಯನ್ನು ಶ್ಲಾಘಿಸಿದರು. ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು “ನ್ಯಾ. ಇಂದೂ ಅವರಿಗೆ ಒರಟಾಗಿ ವರ್ತಿಸದೇ ದೃಢವಾಗಿ ಹೇಗಿರಬೇಕೆಂದು ತಿಳಿದಿತ್ತು. ಹಮ್ಮು ತೋರದೆಯೂ ಖಡಾಖಂಡಿತವಾಗಿವುದು ಗೊತ್ತಿತ್ತು” ಎಂದರು.

Kannada Bar & Bench
kannada.barandbench.com