ಅರ್ಬಾಜ್‌ ಶೂ ಒಳಗೆ ಏನಿದೆ ಎಂಬುದಕ್ಕೂ ನನಗೂ ಸಂಬಂಧವಿಲ್ಲ: ಬಾಂಬೆ ಹೈಕೋರ್ಟ್‌ಗೆ ಆರ್ಯನ್ ಖಾನ್
Aryan Khan, Bombay HC

ಅರ್ಬಾಜ್‌ ಶೂ ಒಳಗೆ ಏನಿದೆ ಎಂಬುದಕ್ಕೂ ನನಗೂ ಸಂಬಂಧವಿಲ್ಲ: ಬಾಂಬೆ ಹೈಕೋರ್ಟ್‌ಗೆ ಆರ್ಯನ್ ಖಾನ್

ಆರ್ಯನ್ ಖಾನ್ ಪರ ವಾದ ಮಂಡಿಸಿದ ಮುಕುಲ್ ರೋಹಟ್ಗಿ ʼಆರ್ಯನ್ ಅವರಿಂದ ಯಾವುದೇ ಅಕ್ರಮ ವಸ್ತು ವಶಪಡಿಸಿಕೊಂಡಿಲ್ಲ. ಎನ್‌ಡಿಪಿಎಸ್ ಕಾಯಿದೆಯಡಿ ಶಿಕ್ಷಾರ್ಹವಾದ ಯಾವುದೇ ಪಿತೂರಿ ಅಥವಾ ಅಕ್ರಮ ಸಾಗಾಣಿಕೆಗೆ ಪುರಾವೆಗಳಿಲ್ಲʼ ಎಂದು ವಾದಿಸಿದರು.

ಸ್ನೇಹಿತ ಅರ್ಬಾಜ್‌ ಮರ್ಚೆಂಟ್‌ ಬೂಟಿನಿಂದ ವಶಪಡಿಸಿಕೊಂಡ ಚರಸ್‌ಗಾಗಿ ಎನ್‌ಡಿಪಿಎಸ್‌ ಕಾಯಿದೆಯಡಿ ಆರ್ಯನ್‌ ಖಾನ್‌ ಜವಾಬ್ದಾರರಾಗಿರುವುದಿಲ್ಲ ಎಂದು ಆರ್ಯನ್‌ ಪರ ವಕೀಲ ಮುಕುಲ್ ರೋಹಟಗಿ ಮಂಗಳವಾರ ಬಾಂಬೆ ಹೈಕೋರ್ಟ್‌ ಮುಂದೆ ವಾದಿಸಿದರು.

ʼಆರ್ಯನ್‌ ಅವರಿಂದ ಯಾವುದೇ ಅಕ್ರಮ ವಸ್ತು ವಶಪಡಿಸಿಕೊಂಡಿಲ್ಲ. ಎನ್‌ಡಿಪಿಎಸ್‌ ಕಾಯಿದೆಯಡಿ ಶಿಕ್ಷಾರ್ಹವಾದ ಯವುದೇ ಪಿತೂರಿ ಅಥವಾ ಅಕ್ರಮ ಸಾಗಾಣಿಕೆಗೆ ಪುರಾವೆಗಳಿಲ್ಲʼ ಎಂದು ಅವರು ಹೇಳಿದರು. ಆರ್ಯನ್‌ ಖಾನ್‌ ಜಾಮೀನು ಅರ್ಜಿ ವಿಚಾರಣೆಯನ್ನು ಮಂಗಳವಾರ ನಡೆಸಿದ ನ್ಯಾ. ನಿತಿನ್‌ ಸಾಂಬ್ರೆ ಅವರಿದ್ದ ಪೀಠ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು. ನಾಳೆ ಎನ್‌ಸಿಬಿ ಪರವಾಗಿ ಪ್ರಕರಣದಲ್ಲಿ ವಾದ ಮಂಡನೆ ನಡೆಯಲಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ಮತ್ತು ಸೆಷನ್ಸ್ ನ್ಯಾಯಾಲಯದಿಂದ ಪರಿಹಾರ ಪಡೆಯಲು ವಿಫಲರಾದ ಆರ್ಯನ್‌ ಖಾನ್ ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಮುಕುಲ್ ರೋಹಟ್ಗಿ ಅವರ ವಾದದ ಪ್ರಮುಖಾಂಶಗಳು:

 • ಆರ್ಯನ್‌ ಖಾನ್‌ ಪ್ರಜ್ಞಾಪೂರ್ವಕವಾಗಿ ಮಾದಕವಸ್ತುಗಳನ್ನು ಇರಿಸಿಕೊಂಡಿರಲಿಲ್ಲ. ಯಾರದೋ ಬೂಟಿನೊಳಗೋ, ಮತ್ತಿನ್ನೆಲ್ಲೋ ಮಾದಕವಸ್ತು ಇರಿಸಿಕೊಂಡದ್ದಕ್ಕೂ ಅವರಿಗೂ ಸಂಬಂಧವಿಲ್ಲ.

 • ಮರ್ಚೆಂಟ್‌ ಅವರ ಶೂನಲ್ಲಿ ಸಿಕ್ಕಿದ್ದ ವಸ್ತು ಆರ್ಯನ್‌ ನಿಯಂತ್ರಣದಲ್ಲಿ ಇರುವುದಿಲ್ಲ. ಅರ್ಬಾಜ್ ಮರ್ಚೆಂಟ್‌ ಅವರು ಆರ್ಯನ್‌ ಸೇವಕನಲ್ಲ, ಆತ ಆರ್ಯನ್‌ ಹಿಡಿತದಲ್ಲಿಲ್ಲ, ಆದ್ದರಿಂದ ಯಾವುದೇ ಪಿತೂರಿ ನಡೆದಿಲ್ಲ.

 • ಯಾವುದೇ ನಿಷೇಧಿತ ವಸ್ತು ಆರ್ಯನ್‌ ಅವರ ಬಳಿ ಪತ್ತೆಯಾಗಿಲ್ಲ. ಅವರಿಂದ ಅವುಗಳನ್ನು ವಶಪಡಿಸಿಕೊಂಡಿಲ್ಲ. ಆತ ಅವುಗಳನ್ನು ಸೇವಿಸಿಲ್ಲ ಹಾಗೂ ಆ ಕುರಿತು ವೈದ್ಯಕೀಯ ಪರೀಕ್ಷೆ ನಡೆದಿಲ್ಲ.

 • ಮಾದಕವಸ್ತು ಖರೀದಿ, ಸೇವನೆ ಅಥವಾ ಮಾರಾಟದ ಯಾವುದರೊಂದಿಗೂ ಆರ್ಯನ್‌ಗೆ ಸಂಬಂಧವಿಲ್ಲ. ಅರ್ಬಾಜ್‌ ಮರ್ಚೆಂಟ್‌ ಹೊರತಾಗಿ ಶಾರೂಖ್‌ ಖಾನ್‌ ಪುತ್ರನಿಗೆ ಯಾರೂ ಗೊತ್ತಿಲ್ಲ.

 • ಜಾಮೀನು ಮಂಜೂರಾತಿಗೆ ನಿರ್ಬಂಧ ವಿಧಿಸುವ ಎನ್‌ಡಿಪಿಎಸ್‌ ಕಾಯಿದೆಯ ಸೆಕ್ಷನ್‌ 37ರ ಕಠಿಣತೆ ಆರ್ಯನ್‌ ಅವರಿಗೆ ಅನ್ವಯಿಸದು. ಆರ್ಯನ್‌ ತಪ್ಪೆಸಗದೇ ಇರುವುದರಿಂದ ಎನ್‌ಡಿಪಿಎಸ್‌ ಕಾಯಿದೆಯ ಸೆಕ್ಷನ್‌ 27ಎ (ಮಾದಕ ವಸ್ತು ಅಕ್ರಮ ಸಾಗಣೆ) ಕೂಡ ಅನ್ವಯವಾಗದು. ಅವರು ಮಾದಕವಸ್ತು ಕಳ್ಳಸಾಗಣೆಗೆ ಹಣ ಒದಗಿಸಿಲ್ಲ.

 • ಆರ್ಯನ್‌ ಅವರ ಫೋನ್‌ ಅನ್ನು ಜಪ್ತಿ ಮಾಡಿರುವುದಕ್ಕೆ ಪಂಚನಾಮೆ ಇಲ್ಲ.

 • ಇವರೆಲ್ಲಾ ಎಳೆಯ ಹುಡುಗರು. ಅವರನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಬಹುದಾಗಿದ್ದು ವಿಚಾರಣೆಗೆ ಒಳಪಡಿಸಬೇಕಾದ ಅಗತ್ಯವಿರುವುದಿಲ್ಲ.

 • ಮಾದಕವಸ್ತು ವಶಪಡಿಸಿಕೊಂಡ ಬಳಿಕವಷ್ಟೇ ಆರ್ಯನ್‌ ಜೊತೆ ಮರ್ಚೆಂಟ್ ಮತ್ತು ಅಚಿತ್ ಅವರಿಗೆ ನಂಟಿದೆ ಎಂದು ಹೇಳಬಹುದು. ಆದರೆ ಯಾರೊಂದಿಗೂ ಆರ್ಯನ್‌ ಸಂಪರ್ಕದಲ್ಲಿಲ್ಲ. ಎಲ್ಲಾ 20 ಮಂದಿ ಭೇಟಿಯಾಗಿದ್ದಾಗ ಅಥವಾ ಸಂಪರ್ಕ ಹೊಂದಿದ್ದಾಗ ಮಾತ್ರ ಸಂಚಿನ ವಿಚಾರ ಬರುತ್ತದೆ.

 • ಅಕ್ರಮವಾಗಿ ಮಾದಕವಸ್ತು ಸಾಗಣೆ ಮಾಡಲು ಹಣ ನೀಡುತ್ತಿದ್ದೆ ಎಂದು ಸಾಬೀತುಪಡಿಸಲು ಏನೂ ಆಧಾರವಿಲ್ಲ.

 • ಆರ್ಯನ್ ಅಧಿಕಾರಿಗಳ ವಿರುದ್ಧ ಅಥವಾ ಪಂಚರ ವಿರುದ್ಧ ಯಾವುದೇ ಆರೋಪ ಮಾಡಿಲ್ಲ.

 • ಮರ್ಚೆಂಟ್‌ ಜೊತೆಗೂಡಿ ಆರ್ಯನ್‌ ಅಮಲು ಪದಾರ್ಥ ಸೇವಿಸಿದ್ದಾರೆ ಎಂದೇ ಊಹಿಸಿಕೊಂಡರೂ ವಶಪಡಿಸಿಕೊಂಡ ನಿಷೇಧಿತ ಪದಾರ್ಥದ ಪ್ರಮಾಣ ಕೇವಲ 6 ಗ್ರಾಂನಷ್ಟು. ಎನ್‌ಡಿಪಿಎಸ್‌ ಕಾಯಿದೆಯಡಿ ಇದು ಸಣ್ಣ ಪ್ರಮಾಣದ್ದು.

 • ಖಾನ್‌ ಅವರಿಗೆ ಸಂಬಂಧಿಸಿದ ವಾಟ್ಸಾಪ್‌ ಸಂವಹನ ಡ್ರಗ್ಸ್‌ ಪ್ರಕರಣಕ್ಕೂ ಬಹಳ ಹಿಂದೆಯೇ ನಡೆದಿದೆ.

 • ಇದಲ್ಲದೆ ಹಿರಿಯ ವಕೀಲ ಅಮಿತ್‌ ದೇಸಾಯಿ ಅವರು ಆರ್ಯನ್‌ ಖಾನ್‌ ಹಾಗೂ ಅಚಿತ್‌ ಕುಮಾರ್‌ ಆನ್‌ಲೈನ್‌ ರಮ್ಮಿ ಆಡುವ ಸ್ನೇಹಿತರಾಗಿದ್ದರು. ಆ ವಿಚಾರದಲ್ಲಿ ಸಂವಹನ ನಡೆಸಲಾದ ವಾಟ್ಸಪ್‌ ಚಾಟ್‌ಗಳನ್ನು ಎನ್‌ಸಿಬಿ ಸಂಗ್ರಹಿಸಿದೆ ಎಂದು ಹೇಳಿದರು.

 • ಇದಕ್ಕೆ ದನಿಗೂಡಿಸಿದ ರೋಹಟ್ಗಿ, ಆನ್‌ಲೈನ್ ಪೋಕರ್‌ ಆಟವು ಕೌಶಲ ಆಧರಿತ ಆಟವಾಗಿದೆ. ಇದು ಕೌಶಲ್ಯವನ್ನು ಆಧರಿಸಿದ ಆಟವೇ ಹೊರತು ಜೂಜು ಅಲ್ಲ ಎಂದು ಸುಪ್ರೀಂ ಕೋರ್ಟ್‌ ತೀರ್ಪು ಹೇಳಿದೆ ಎಂದು ನ್ಯಾಯಾಲಯದ ಗಮನಸೆಳೆದರು.

ಅರ್ಬಾಜ್‌ ಮರ್ಚೆಂಟ್‌ ಪರವಾಗಿ ವಕೀಲ ಅಮಿತ್‌ ದೇಸಾಯಿ ವಾದ ಮಂಡಿಸಲು ಅನುವಾದರು. ಆ ವೇಳೆಗೆ ನ್ಯಾಯಾಲಯ ವಿಚಾರಣೆಯನ್ನು ನಾಳೆ ಮಧ್ಯಾಹ್ನ 2.30ಕ್ಕೆ ನಿಗದಿಪಡಿಸಿತು.

Related Stories

No stories found.
Kannada Bar & Bench
kannada.barandbench.com