

ಯಾವುದೇ ಮಹಿಳಾ ನ್ಯಾಯಮೂರ್ತಿಗಳನ್ನು ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ನೀಡಲಾಗಲಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯದ ನಿರ್ಗಮಿತ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ವಿಷಾದ ವ್ಯಕ್ತಪಡಿಸಿದರು.
ಅವರ ಅಧಿಕಾರಾವಧಿಯಲ್ಲಿ ಐವರು ನ್ಯಾಯಮೂರ್ತಿಗಳಿಗೆ ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ನೀಡಲಾಗಿದ್ದು ಅವರೆಲ್ಲರೂ ಪುರುಷರಾಗಿದ್ದಾರೆ.
ಸುಪ್ರೀಂ ಕೋರ್ಟ್ ಮಹಿಳಾ ವಕೀಲರ ವಿಭಾಗ ನವೆಂಬರ್ 18 ರಂದು ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಸರ್ವೋಚ್ಚ ನ್ಯಾಯಾಲಯಕ್ಕೆ ಮಹಿಳಾ ನ್ಯಾಯಮೂರ್ತಿಗಳನ್ನು ನೇಮಿಸಲು ಸಾಧ್ಯವಾಗದೇ ಹೋದದ್ದು ವಿಷಾದದ ಸಂಗತಿ. ಆದರೆ ನಾವು ಮಹಿಳಾ ನ್ಯಾಯಮೂರ್ತಿಗಳ ಹೆಸರನ್ನು ಶಿಫಾರಸ್ಸು ಮಾಡಿದ್ದೆವು. ಅದರಲ್ಲಿ ಸುಪ್ರೀಂ ಕೋರ್ಟ್ ಮಹಿಳಾ ವಕೀಲರೂ ಸೇರಿದ್ದರು ಎಂದರು. ಕಾರ್ಯಕ್ರಮದಲ್ಲಿ ಹಾಜರಿರುವವರಲ್ಲಿ ಮೊದಲ ಮಹಿಳಾ ಸಿಜೆಐ ಆಗಲಿರುವ ನ್ಯಾ. ಬಿ.ವಿ. ನಾಗರತ್ನ ಇದ್ದಾರೆ ಎಂದು ಅವರು ಪ್ರಸ್ತಾಪಿಸಿದರು.
ಸಾಮಾನ್ಯವಾಗಿ ನಾನು ನ್ಯಾಯಾಲಯದಲ್ಲಿ ಸಮತೋಲನ ಕಳೆದುಕೊಳ್ಳುವುದಿಲ್ಲ ಆದರೆ ಗೊತ್ತಿಲ್ಲದೆಯೇ ಯಾರಿಗಾದರೂ ನೋವುಂಟು ಮಾಡಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದು ಸಿಜೆಐ ಗವಾಯಿ ಈ ವೇಳೆ ಹೇಳಿದರು.
ನಿಯೋಜಿತ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮಾತನಾಡಿ ಸಂಸ್ಥೆಯನ್ನು ಸಿಜೆಐ ಗವಾಯಿ ಕ್ರಿಯಾತ್ಮಕವಾಗಿ ಮುನ್ನಡೆಸಿದರು ಎಂದರು. ಮಹಿಳಾ ಸದಸ್ಯರು ವಕೀಲ ವೃತ್ತಿಗೆ ನೀಡುತ್ತಿರುವ ಕೊಡುಗೆಗಳನ್ನು ಶ್ಲಾಘಿಸಿದರು.
ಹಿರಿಯ ವಕೀಲೆ ಅನಿತಾ ಶೆಣೈ ಅವರು ತಂದಿದ್ದ ಕೇಕ್ ಅನ್ನು ಸಿಜೆಐ ಗವಾಯಿ ಮತ್ತು ನ್ಯಾ. ಕಾಂತ್ ಜಂಟಿಯಾಗಿ ಕತ್ತರಿಸಿದರು. ವಕೀಲೆ ಭಕ್ತಿ ಪಸ್ರಿಜಾ ಅವರು ಧನ್ಯವಾದ ಅರ್ಪಿಸಿದರು.