ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಮೊಬೈಲ್‌ನಲ್ಲಿ ವಿಡಿಯೊ ರೆಕಾರ್ಡ್ ಮಾಡುವಂತೆ ಪತ್ರಕರ್ತರಿಗೆ ಗುರುವಾರ ಕಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಅವರಿಗೆ ಸೂಚಿಸಿದ್ದು ವಿಲಕ್ಷಣ ಘಟನೆಗೆ ಸಾಕ್ಷಿಯಾಯಿತು.
ಇದರಿಂದ ನ್ಯಾ. ಗಂಗೋಪಾಧ್ಯಾಯ ಮತ್ತು ಕಲ್ಕತ್ತಾ ಹೈಕೋರ್ಟ್ ವಕೀಲರ ಸಂಘದ ಅಧ್ಯಕ್ಷ ಅರುಣವ ಘೋಷ್ ನಡುವೆ ಮಾತಿನ ವಾಗ್ವಾದ ನಡೆದು, ಒಂದು ಹಂತದಲ್ಲಿ ನ್ಯಾ. ಗಂಗೋಪಾಧ್ಯಾಯ ಅವರು "ನ್ಯಾಯಾಂಗ ನಿಂದನೆ ನಿಯಮದ ಅಡಿ ನಿಮ್ಮನ್ನು ಜೈಲಿಗೆ ಕಳುಹಿಸುತ್ತೇನೆ" ಎಂಬ ಎಚ್ಚರಿಕೆ ನೀಡಿದ ಹೊರತಾಗಿಯೂ ಈ ಬೆದರಿಕೆಗೆ ಘೋಷ್ ಜಗ್ಗದೆ ಪ್ರತ್ಯುತ್ತರ ನೀಡುತ್ತಿದ್ದರು.
ಪ್ರಕರಣದ ವಿಚಾರಣೆಯನ್ನು ವರದಿಗಾರರು ವಿಡಿಯೊ ರೆಕಾರ್ಡ್ ಮಾಡಬಹುದು. ಆದರೆ, ಅದನ್ನು ನೇರ ಪ್ರಸಾರ ಮಾಡುವಂತಿಲ್ಲ ಎಂದು ಪೀಠವು ಎಚ್ಚರಿಸಿತ್ತು ಎಂದು ಮಾಧ್ಯಮವೊಂದು ವರದಿ ಮಾಡಿದೆ. ಇದಕ್ಕೆ ಘೋಷ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದು, ಹೀಗೆ ಮಾಡುವುದರಿಂದ ನ್ಯಾಯಮೂರ್ತಿಗಳ ಘನತೆಗೆ ಕುಂದು ಉಂಟು ಮಾಡುತ್ತದೆ ಎಂದರು. ಇದಕ್ಕೆ ನ್ಯಾ. ಗಂಗೋಪಾಧ್ಯಾಯ ಅವರು ಒಪ್ಪದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳು ಮತ್ತು ಘೋಷ್ ಅವರ ನಡುವಿನ ಬಿರುಸಿನ ವಾಗ್ವಾದ ನಡೆಯಿತು. ಅಂತಿಮವಾಗಿ ಪ್ರಕರಣದ ವಿಚಾರಣೆಯನ್ನು ಪೀಠವು ಸೆಪ್ಟೆಂಬರ್ 1ಕ್ಕೆ ಮುಂದೂಡಿದೆ.
ಶಾಲಾ ಸೇವಾ ಆಯೋಗದಲ್ಲಿನ ಭ್ರಷ್ಟಾಚಾರದ ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ ವಿಚಾರಣೆ ನಡೆಸಲು ನ್ಯಾ. ಗಂಗೋಪಾಧ್ಯಾಯ ಆದೇಶಿಸಿದ್ದ ಹಿನ್ನೆಲೆಯಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷದ ಜೊತೆ ಗುರುತಿಸಿಕೊಂಡಿರುವ ವಕೀಲರು ನ್ಯಾ. ಗಂಗೋಪಾಧ್ಯಾಯ ಪೀಠದ ಮುಂದೆ ಹಾಜರಾಗದಂತೆ ವಕೀಲರಿಗೆ ಕೋರಿದ್ದರಿಂದ ವರ್ಷದ ಆರಂಭದಲ್ಲಿ ವಿವಾದ ಸೃಷ್ಟಿಯಾಗಿತ್ತು.
ಹಗರಣದಲ್ಲಿನ ಪಕ್ಷಕಾರರಿಗೆ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸುವಂತೆ ಕಲ್ಕತ್ತಾ ಹೈಕೋರ್ಟ್‌ನ ವಿಭಾಗೀಯ ಪೀಠವು ಆದೇಶಿಸುವ ಮೂಲಕ ನ್ಯಾ. ಗಂಗೋಪಾಧ್ಯಾಯ ಅವರ ಕೈ ಕಟ್ಟಿಹಾಕಿದ್ದಕ್ಕೆ ಮಾರ್ಚ್ 30ರ ಆದೇಶದಲ್ಲಿ ನ್ಯಾ. ಗಂಗೋಪಾಧ್ಯಾಯ ಅವರು “ಇದನ್ನು ದ್ವಂದ್ವ ನಿಲುವು” ಎಂದು ಬಣ್ಣಿಸಿದ್ದರು.