ರೂಪಾ ವಿರುದ್ಧ ರೋಹಿಣಿ ಮಾನನಷ್ಟ ದಾವೆ: ರಾಜೀ ಕುರಿತು ಯೋಚಿಸಲು ನ್ಯಾಯಾಲಯದ ಸಲಹೆ

ರೂಪಾ ಮತ್ತು ರೋಹಿಣಿ ಅವರಿಗೆ ಒನ್ ಮಿನಿಟ್ ಅಪಾಲಜಿ ಪುಸ್ತಕವನ್ನು ಓದಲು ಸಲಹೆ ನೀಡಿದ ನ್ಯಾಯಾಲಯ.
ರೂಪಾ ವಿರುದ್ಧ ರೋಹಿಣಿ ಮಾನನಷ್ಟ ದಾವೆ: ರಾಜೀ ಕುರಿತು ಯೋಚಿಸಲು ನ್ಯಾಯಾಲಯದ ಸಲಹೆ
Published on

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಪರಸ್ಪರ ನ್ಯಾಯಾಂಗ ಹೋರಾಟ ನಡೆಸುವ ಬದಲಿಗೆ ರಾಜಿಯಾಗುವ ಬಗ್ಗೆ ಪರಿಶೀಲಿಸುವುದು ಸೂಕ್ತ ಎಂದು ಬೆಂಗಳೂರಿನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಬುಧವಾರ ಅಭಿಪ್ರಾಯಪಟ್ಟಿದೆ.

ರೋಹಿಣಿ ಸಿಂಧೂರಿ ಅವರು ರೂಪಾ ವಿರುದ್ಧ ದಾಖಲಿಸಿರುವ ಮಾನನಷ್ಟ ಪ್ರಕರಣದ ವಿಚಾರಣೆಯನ್ನು ಬೆಂಗಳೂರಿನ 5ನೇ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ ವಿಜಯ್‌ಕುಮಾರ್‌ ಎಸ್‌. ಜಾಟ್ಲಾ ವಿಚಾರಣೆ ನಡೆಸಿದರು.

ದೂರುದಾರೆ ರೋಹಿಣಿ ಸಿಂಧೂರಿ ಮತ್ತು ಆರೋಪಿ ರೂಪಾ‌ ಮೌದ್ಗಿಲ್ ಇಬ್ಬರೂ ನ್ಯಾಯಾಲಯಕ್ಕೆ ಹಾಜರಾಗಿದ್ದರು. ರೂಪಾ ಮೌದ್ಗಿಲ್ ಪರ ಹಾಜರಿದ್ದ ವಕೀಲ ಪಿ ಪ್ರಸನ್ನ ಕುಮಾರ್ ಅವರು ಸಾಕ್ಷಿಯ ಪಾಟೀ ಸವಾಲು ನಡೆಸಿದರು.

ವಿಚಾರಣೆ ಆಲಿಸಿದ ಮ್ಯಾಜಿಸ್ಟ್ರೇಟ್‌ “ಇಬ್ಬರೂ ಉತ್ತಮ ಹೆಸರು ಗಳಿಸಿದ ಹಿರಿಯ ಅಧಿಕಾರಿಗಳು. ನಿಮ್ಮ ಸಮಯವನ್ನು ಸಮಾಜಕ್ಕಾಗಿ ಮೀಸಲಿಡಬೇಕು. ಹೀಗೆ ನ್ಯಾಯಾಲಯದ ಕಲಾಪದಲ್ಲಿ ವ್ಯಯಿಸುವ ಬದಲು ರಾಜಿಯಾಗಲು ಸಾಧ್ಯವೇ ಯೋಚಿಸಿ” ಎಂದು ಸಲಹೆ ನೀಡಿದರು.

ಅಲ್ಲದೇ, “ಒನ್ ಮಿನಿಟ್ ಅಪಾಲಜಿ ಪುಸ್ತಕವನ್ನು ಇಬ್ಬರೂ ಓದಿ” ಎಂದು ಸಲಹೆ ನೀಡಿ, ವಿಚಾರಣೆಯನ್ನು ಫೆಬ್ರವರಿ 12ಕ್ಕೆ ಮುಂದೂಡಿದರು.

ಇದಕ್ಕೂ ಮುನ್ನ, ರೋಹಿಣಿ ಪರ ವಕೀಲರು ಗೌಪ್ಯ ವಿಚಾರಣೆಗೆ ಕೋರಿದರು. ಆ ಮನವಿಯನ್ನು ರೂಪಾ ಪರ ವಕೀಲರು ಆಕ್ಷೇಪಿಸಿದರು. ನಂತರ ಇಬ್ಬರ ಒಪ್ಪಿಗೆ ಮೇರೆಗೆ ಗೌಪ್ಯ ವಿಚಾರಣೆ ನಡೆಸಲಾಯಿತು. ಅದಕ್ಕಾಗಿ ಕೋರ್ಟ್‌ ಹಾಲ್‌ ಒಳಗಿದ್ದ ವಕೀಲರು, ಕೋರ್ಟ್‌ ಸಿಬ್ಬಂದಿ, ಪೊಲೀಸರು, ಇತರೆ ಅಧಿಕಾರಿಗಳು ಮತ್ತು ಮಾಧ್ಯಮ ಪ್ರತಿನಿಧಿಗಳನ್ನು ಹೊರಗೆ ಕಳುಹಿಸಲಾಯಿತು. ವಿಚಾರಣೆಗೆ ಹಾಜರಾಗಿದ್ದ ಸಿಂಧೂರಿ ಪತಿ ಸುಧೀರ್‌ ರೆಡ್ಡಿ ಮತ್ತು ರೂಪಾ ಪತಿ ಮನೀಷ್‌ ಮೌದ್ದಿಲ್‌ ಅವರನ್ನು ಸಹ ಹೊರ ಕಳುಹಿಸಿ ಬಾಗಿಲು ಮುಚ್ಚಲಾಯಿತು. ರೂಪಾ, ರೋಹಿಣಿ ಮತ್ತು ಅವರಿಬ್ಬರ ಪರ ಓರ್ವ ವಕೀಲರಿಗೆ ಮಾತ್ರ ಕೋರ್ಟ್‌ ಒಳಗೆ ಇರಲು ನ್ಯಾಯಾಧೀಶರು ಅನುಮತಿಸಿ, ಪಾಟಿ ಸವಾಲು ಪ್ರಕ್ರಿಯೆ ನಡೆಸಲಾಯಿತು.

ಪ್ರಕರಣದ ಹಿನ್ನೆಲೆ: ರೂಪಾ ಮೌದ್ಗಿಲ್ 2023ರ ಫೆಬ್ರವರಿ 18 ಮತ್ತು 19ರಂದು ಫೇಸ್‌ಬುಕ್ ಖಾತೆಯಲ್ಲಿ ನನ್ನ ವಿರುದ್ಧ ಕೀಳು ಅಭಿರುಚಿಯ ಪೋಸ್ಟ್‌ ಪ್ರಕಟಿಸಿ ತೇಜೋವಧೆ ಮಾಡಿದ್ದಾರೆ. ಅದು ನನ್ನ ಖಾಸಗಿ, ಸಾಮಾಜಿಕ ಮತ್ತು ವೃತ್ತಿ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಿದೆ. ನನಗೆ ಮಾನಸಿಕ ಯಾತನೆ ಉಂಟು ಮಾಡಿವೆ. ಆದ್ದರಿಂದ ರೂಪಾ ಅವರಿಂದ ರೂ. ಒಂದು ಕೋಟಿ ಹಣವನ್ನು ಪರಿಹಾರವಾಗಿ ಪಾವತಿಸಲು ನಿರ್ದೇಶಿಸಬೇಕು ಹಾಗೂ ಅವರ ವಿರುದ್ಧ ಸೂಕ್ತ ದಂಡನೀಯ ಕ್ರಮ ಕೈಗೊಳ್ಳಬೇಕು ಎಂದು ಕೋರಿ ರೋಹಿಣಿ 2023ರ ಮಾರ್ಚ್‌ 3ರಂದು, ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿದ್ದಾರೆ.

Kannada Bar & Bench
kannada.barandbench.com