ನ್ಯಾಯಮೂರ್ತಿಯಾಗಿ ಪೂನಿವಾಲಾ ನೇಮಕಕ್ಕೆ ಆಕ್ಷೇಪ: ಸೀರ್ವಯ್ ಅವರ ಲೇಖನಗಳತ್ತ ಬೆರಳು ಮಾಡಿದ್ದ ಕೇಂದ್ರ ಗುಪ್ತಚರ ಇಲಾಖೆ

ವೆಬಿನಾರ್ ಒಂದರಲ್ಲಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿಗೆ ಎದುರಾಗಿರುವ ಭೀತಿ ಕುರಿತು ಸೀರ್ವಯ್ ಮಾತನಾಡಿದ್ದರು. ಅಲ್ಲದೆ ವಾಕ್ ಸ್ವಾತಂತ್ರ್ಯಕ್ಕೆ ಅನಿಯಂತ್ರಿತ ಹಕ್ಕು ಇರಬೇಕೆ ಎಂಬ ಕುರಿತು ಅಂಕಣವನ್ನೂ ಅವರು ಬರೆದಿದ್ದರು.
Senior Advocate Navroz Seervai
Senior Advocate Navroz Seervai

ವಕೀಲ ಫಿರ್ದೋಶ್ ಫಿರೋಜ್ ಪೂನಿವಾಲಾ ಅವರನ್ನು ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡುವಂತೆ ಶಿಫಾರಸು ಮಾಡುವ ನಿರ್ಣಯವನ್ನು ಸುಪ್ರೀಂ ಕೋರ್ಟ್‌ ಮೇ 2ರಂದು ಪ್ರಕಟಿಸಿದೆ.

ಕುತೂಹಲದ ಸಂಗತಿ ಎಂದರೆ ಪೂನಿವಾಲಾ ಅವರು ಕಿರಿಯ ವಕೀಲರಾಗಿ ಕೆಲಸ ಮಾಡುತ್ತಿದ್ದ ಕಚೇರಿಯ ಮುಖ್ಯಸ್ಥರಾಗಿದ್ದ ಹಿರಿಯ ನ್ಯಾಯವಾದಿಯೊಬ್ಬರು ಬರೆದ ಲೇಖನದತ್ತ ಬೊಟ್ಟು ಮಾಡುವ ಮೂಲಕ ಗುಪ್ತಚರ ಇಲಾಖೆ ಪೂನಿವಾಲಾ ಅವರನ್ನು ನ್ಯಾಯಮೂರ್ತಿಯಾಗಿ ಪರಿಗಣಿಸುವ ಬಗ್ಗೆ ತನ್ನ ಆಕ್ಷೇಪ ವ್ಯಕ್ತಪಡಿಸಿತ್ತು.

ಇತ್ತೀಚಿನ ದಿನಗಳಲ್ಲಿ ಗುಪ್ತಚರ ಇಲಾಖೆ ನ್ಯಾಯಮೂರ್ತಿ ಹುದ್ದೆ ಆಕಾಂಕ್ಷಿಗಳ ಲೇಖನ/ ಅಭಿಪ್ರಾಯಗಳ ಬಗ್ಗೆ ಆಕ್ಷೇಪಿಸುತ್ತಿತ್ತು. ಆದರೆ ಅಭ್ಯರ್ಥಿಗೆ ಸಂಬಂಧಿಸಿದ ಬೇರೊಬ್ಬರು ಬರೆದ ಲೇಖನವನ್ನು ಆಧಾರವಾಗಿಟ್ಟುಕೊಂಡು ಆ ಅಭ್ಯರ್ಥಿ ನ್ಯಾಯಮೂರ್ತಿ ಹುದ್ದೆಗೆ ನೇಮಕವಾಗುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮೊದಲ ನಿರ್ದೇಶನ ಪೂನಿವಾಲಾ ಅವರದ್ದೇ ಆಗಿರಬಹುದು.  

“ಕಳೆದ 5-6 ವರ್ಷಗಳಿಂದ ದೇಶದಲ್ಲಿ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಕೊರತೆ ಎದುರಾಗಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ (ಹಿರಿಯ) ವಕೀಲರು 2020ರಲ್ಲಿ ಲೇಖನ ಪ್ರಕಟಿಸಿದ್ದಾರೆ ಎಂದು ವರದಿ ಮಾಡಲಾಗಿದೆ” ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.

ಕೊಲಿಜಿಯಂ ನಿರ್ಣಯದಲ್ಲಿ ಹೆಸರು ಉಲ್ಲೇಖಿಸದೇ ಇರುವ ಪೂನಿವಾಲಾ ಅವರ ಹಿರಿಯ ವಕೀಲರೆಂದರೆ ನವರೋಜ್‌ ಸೀರ್ವಯ್‌. ಏಪ್ರಿಲ್ 2020ರಲ್ಲಿ ನಡೆದಿದ್ದ ವೆಬಿನಾರ್‌ ಒಂದರಲ್ಲಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿಗೆ ಎದುರಾಗಿರುವ ಬೆದರಿಕೆಗಳ ಕುರಿತು ಸೀರ್ವಯ್ ಮಾತನಾಡಿದ್ದರು. ಅಲ್ಲದೆ ಜೂನ್ 2020ರಲ್ಲಿ ವಾಕ್ ಸ್ವಾತಂತ್ರ್ಯಕ್ಕೆ ಅನಿಯಂತ್ರಿತ ಹಕ್ಕು ಇರಬೇಕೆ ಎಂಬ ಕುರಿತು ಅಂಕಣವನ್ನೂ ಬರೆದಿದ್ದರು.

ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ವಕೀಲ ಪ್ರಶಾಂತ್ ಭೂಷಣ್ ಅವರನ್ನು ದೋಷಿ ಎಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಕುರಿತು ಸೀರ್ವಯ್‌ ಅವರು ಆಗಸ್ಟ್ 2020 ರಲ್ಲಿ ಸಾರ್ವಜನಿಕ ಹೇಳಿಕೆ ನೀಡಿದ್ದರು. ಸರ್ವೋಚ್ಚ ನ್ಯಾಯಾಲಯದ ತೀರ್ಪು ನಾಗರಿಕ ಸಮಾಜದ ಮೇಲಿನ ಹಲ್ಲೆ ಎಂದು ಆಗ ಅವರು ಆಕ್ಷೇಪಿಸಿದ್ದರು.

ಪೂನಿವಾಲಾ ಅವರು ಸೀರ್ವಯ್‌ ಅವರ ಕಛೇರಿಯಲ್ಲಿ ಕಿರಿಯ ವಕೀಲರಾಗಿ ಕೆಲಸ ಮಾಡುತ್ತಿದ್ದು  2012ರವರೆಗೂ ಅವರೊಂದಿಗೆ ಸಂಪರ್ಕದಲ್ಲಿದ್ದರು. ನಂತರ ಸ್ವತಂತ್ರ ವಕೀಲರಾಗಿ ಪ್ರಾಕ್ಟೀಸ್‌ ಆರಂಭಿಸಿದ್ದರು. ಈ ವರ್ಷದ ಫೆಬ್ರವರಿ 16 ರಂದು ಬಾಂಬೆ ಹೈಕೋರ್ಟ್‌ನ ಹಿರಿಯ ನ್ಯಾಯವಾದಿಯಾಗಿ ಅವರು ನೇಮಕಗೊಂಡಿದ್ದರು.

Related Stories

No stories found.
Kannada Bar & Bench
kannada.barandbench.com