ವಿಡಿಯೊಕಾನ್ ಸಾಲ ಪ್ರಕರಣದಲ್ಲಿ ಐಸಿಐಸಿಐ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಚಂದಾ ಕೊಚ್ಚಾರ್ ಮತ್ತು ಅವರ ಪತಿ ದೀಪಕ್ ಕೊಚ್ಚಾರ್ ಅವರನ್ನು ಡಿಸೆಂಬರ್ 26ರವರೆಗೆ ಕೇಂದ್ರೀಯ ತನಿಖಾ ದಳದ (ಸಿಬಿಐ) ವಶಕ್ಕೆ ಶನಿವಾರ ಮುಂಬೈ ನ್ಯಾಯಾಲಯ ನೀಡಿದೆ.
ನವದೆಹಲಿಯಲ್ಲಿ ಶುಕ್ರವಾರ ತಡರಾತ್ರಿ ದಂಪತಿಯನ್ನು ಸಿಬಿಐ ಬಂಧಿಸಿದ್ದು, ಇಂದು ಸಿಬಿಐ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು.
2012ರಲ್ಲಿ ವಿಡಿಯೊಕಾನ್ ಗ್ರೂಪ್‌ಗೆ ₹3,250 ಕೋಟಿ ಸಾಲ ನೀಡುವಾಗ ವಂಚನೆ ಮತ್ತು ಅಕ್ರಮದ ಆರೋಪ ಚಂದಾ ಕೊಚ್ಚಾರ್ ಮೇಲಿದ್ದು, ಇದು ಐಸಿಐಸಿಐ ಬ್ಯಾಂಕ್‌ಗೆ ವಸೂಲಾಗದ ಸಾಲವಾಗಿ ಪರಿಣಮಿಸಿದೆ. ಇಬ್ಬರೂ ಆರೋಪಿಗಳು ಮೂರು ದಿನಗಳ ಕಾಲ ಸಿಬಿಐ ವಶದಲ್ಲಿರಲಿದ್ದಾರೆ.
ವಿಡಿಯೊಕಾನ್‌ಗೆ ಸಾಲ ನೀಡುವ ವಿಚಾರದಲ್ಲಿ ಕೊಚ್ಚಾರ್ ಅವರ ಪತಿ ಮತ್ತು ಕುಟುಂಬ ಸದಸ್ಯರು ಫಲಾನುಭವಿಗಳಾಗಿದ್ದಾರೆ ಎಂದು ಶಿಳ್ಳೆಗಾರರು ದೂರಿನಲ್ಲಿ ಆರೋಪಿಸಿದ್ದರು. ಐಸಿಐಸಿಐ ಬ್ಯಾಂಕ್‌ನ ಪ್ರಮುಖ ಸ್ಥಾನದಲ್ಲಿದ್ದಾಗ ಚಂದಾ ಕೊಚ್ಚಾರ್ ಅವರು ವಿಡಿಯೊಕಾನ್ ಸಮೂಹದ ಕಂಪೆನಿಗಳಿಗೆ ಸಾಲ ಮಂಜೂರು ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಕೊಚ್ಚಾರ್ ಅವರ ಪತಿ ಮಾಲೀಕತ್ವದ ನ್ಯೂ ರಿನಿವಬಲ್ ಕಂಪೆನಿಯು ವಿಡಿಯೊಕಾನ್ ಸಂಸ್ಥೆಯಿಂದ ಹೂಡಿಕೆ ಪಡೆದಿತ್ತು. ಈ ಸಾಲವು ವಸೂಲಾಗಾದ ಸಾಲವಾಗಿದ್ದು, ಅದನ್ನು ಬ್ಯಾಂಕ್ ವಂಚನೆ ಎಂದು ಹೇಳಲಾಗಿತ್ತು.