ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ವಸ್ತುಗಳನ್ನು ಮಾರುವ 886 ದುರ್ಬಲ ವರ್ಗದ ಮಕ್ಕಳ ಗುರುತು: ಕರ್ನಾಟಕ ಹೈಕೋರ್ಟ್‌ಗೆ ಮಾಹಿತಿ

ದುರ್ಬಲ ವರ್ಗದ ಮಕ್ಕಳನ್ನು ಗುರುತಿಸುವ ಪ್ರಕ್ರಿಯೆ ವೇಳೆ ಎದುರಾದ ಪ್ರಮುಖ ಸವಾಲುಗಳಲ್ಲಿ ಸರ್ಕಾರಿ ಇಲಾಖೆಗಳ ನಡುವಣ ಸಮನ್ವಯದ ಕೊರತೆಯೂ ಒಂದು ಎಂದು ಪ್ರಾಧಿಕಾರ ಗಮನ ಸೆಳೆದಿದೆ.
children begging
children beggingZeenews
Published on

ಬೆಂಗಳೂರಿನ ಪ್ರಮುಖ ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ವಿವಿಧ ವಸ್ತುಗಳನ್ನು ಮಾರಾಟ ಮಾಡುವ 886 ನಿರ್ಗತಿಕ ವರ್ಗದ ಮಕ್ಕಳನ್ನು ಗುರುತಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (ಕೆಎಸ್‌ಎಲ್‌ಎಸ್‌ಎ) ಶುಕ್ರವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ. ಮಕ್ಕಳು ವಸ್ತುಗಳನ್ನು ಮಾರಾಟ ಮಾಡುವ ಇಂತಹ 432 ಪ್ರಮುಖ ತಾಣಗಳಲ್ಲಿನ ಸಿಗ್ನಲ್‌ಗಳನ್ನು ಗುರುತಿಸಿರುವುದಾಗಿ ಪ್ರಾಧಿಕಾರವು ತಿಳಿಸಿದೆ. ಇತ್ತೀಚೆಗೆ ನಡೆದಿದ್ದ ದುರ್ಬಲ ವರ್ಗದ ಮಕ್ಕಳನ್ನು ಗುರುತಿಸುವ ದತ್ತಾಂಶ ಸಂಗ್ರಹ ಕಾರ್ಯದಿಂದ ಈ ಮಾಹಿತಿ ಬಯಲಾಗಿದೆ.

ಈ ರೀತಿಯ ಮಕ್ಕಳನ್ನು ಗುರುತಿಸುವ ಪ್ರಕ್ರಿಯೆಯಲ್ಲಿ ಅನೇಕ ಸರ್ಕಾರಿ ಅಧಿಕಾರಿಗಳು ಗೈರುಹಾಜರಾಗಿದ್ದರೂ ಕೂಡ ವಿವಿಧ ಸ್ವಯಂಸೇವಕರು ಸೇರಿದಂತೆ 112 ಸದಸ್ಯರು ಭಾಗವಹಿಸಿದ್ದರು. ನಿರ್ಗತಿಕ ಮಕ್ಕಳನ್ನು ಪತ್ತೆಹಚ್ಚಲು ʼವಿ ಆರ್‌ ಫಾರ್‌ ಚೈಲ್ಡ್‌ʼ ಹೆಸರಿನ ಮೊಬೈಲ್‌ ಅಪ್ಲಿಕೇಷನ್‌ ಬಳಸಲಾಗಿದ್ದು ಅದರ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ನಿರ್ಗತಿಕ ಮಕ್ಕಳನ್ನು ಪತ್ತೆಹಚ್ಚಲು ಶ್ರಮಿಸಿದ ಪ್ರಾಧಿಕಾರದ ಶ್ರಮವನ್ನು ಮುಖ್ಯ ನ್ಯಾಯಮೂರ್ತಿ ಅಭಯ ಶ್ರೀನಿವಾಸ್‌ ಓಕಾ ಶ್ಲಾಘಿಸಿದ್ದಾರೆ.

ಬೆಂಗಳೂರಿನ ಸಂಚಾರ ಕೂಡುದಾಣಗಳಲ್ಲಿ ಮಕ್ಕಳು ವಿವಿಧ ಉತ್ಪನ್ನಗಳನ್ನು ಮಾರಾಟ ಮಾಡದಂತೆ ನಿಷೇಧ ವಿಧಿಸಬೇಕೆಂದು ಕೋರಿ ಸರ್ಕಾರೇತರ ಸಂಸ್ಥೆ 'ಲೆಟ್ಜ್‌ಕಿಟ್' ಪ್ರತಿಷ್ಠಾನ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಅರ್ಜಿದಾರರ ಪರವಾಗಿ ನ್ಯಾಯವಾದಿ ಪುತ್ತಿಗೆ ರಮೇಶ್‌ ವಾದ ಮಂಡಿಸಿದ್ದರು.

Also Read
ಉಡುಪಿ ಜಿಲ್ಲೆಯಲ್ಲಿ ಮೆಗಾ ಲೋಕ ಅದಾಲತ್: ಒಂದೇ ದಿನ 2546 ಪ್ರಕರಣಗಳು ಇತ್ಯರ್ಥ

ಮಕ್ಕಳನ್ನು ಗುರುತಿಸುವ ʼವಾಸ್ತವ ಸಮೀಕ್ಷೆʼ ಶೀಘ್ರದಲ್ಲಿಯೇ ಆರಂಭವಾಗಲಿದೆ ಎಂದು ವಿಚಾರಣೆ ವೇಳೆ ಪ್ರಾಧಿಕಾರ ತಿಳಿಸಿತು. ಸಮೀಕ್ಷೆಯ ಕೆಲಸ ಪ್ರಾರಂಭವಾಗುವ ಮೊದಲು ಕೆಎಸ್‌ಎಲ್‌ಎಸ್‌ಎ ದತ್ತಾಂಶ ಸಂಗ್ರಹ ತಂಡಗಳಿಗೆ (ಡಿಸಿಟಿ) ವಿವಿಧ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿದೆ ಎಂದು ಮಾಹಿತಿ ನೀಡಲಾಯಿತು. ಮಕ್ಕಳನ್ನು ಗುರುತಿಸುವ ಪ್ರಕ್ರಿಯೆ ವೇಳೆ ಎದುರಾದ ಪ್ರಮುಖ ಸವಾಲುಗಳಲ್ಲಿ ಸರ್ಕಾರಿ ಇಲಾಖೆಗಳ ನಡುವಣ ಸಮನ್ವಯದ ಕೊರತೆಯೂ ಒಂದು ಎಂದು ಪ್ರಾಧಿಕಾರ ತಿಳಿಸಿದೆ.

ವಾದ ಆಲಿಸಿದ ನ್ಯಾಯಾಲಯ ವಸತಿ ರಹಿತ ಮತ್ತು ನಿರ್ಗತಿಕ ಮಕ್ಕಳನ್ನು ಗುರುತಿಸುವ ಸಲುವಾಗಿ ಸಮೀಕ್ಷೆ ನಡೆಸುವಾಗ ಭಾಗೀದಾರರಾದ ಸಂಚಾರಿ ಪೊಲೀಸರು, ಎಸ್‌ಎಪಿಒ, ಬಿಬಿಎಂಪಿ ಅಧಿಕಾರಿಗಳಂತಹ ಎಲ್ಲ ಭಾಗೀದಾರರ ಸಹಕಾರ ಪಡೆದುಕೊಳ್ಳುವುದು ಅಗತ್ಯ ಎಂದು ಅಭಿಪ್ರಾಯಪಟ್ಟಿದೆ. ಸಮೀಕ್ಷೆಯನ್ನು ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ಎಲ್ಲಾ ಭಾಗೀದಾರರಿಗೆ ಲಿಖಿತ ಸೂಚನೆ ನೀಡುವಂತೆ ಕೆಎಸ್‌ಎಲ್‌ಎಸ್‌ಎ ಸದಸ್ಯ ಕಾರ್ಯದರ್ಶಿ ಅವರಿಗೆ ನ್ಯಾಯಾಲಯ ತಿಳಿಸಿತು.

“ವಿವಿಧ ಕಾನೂನು ವಿದ್ಯಾರ್ಥಿಗಳು, ವಕೀಲರು ಮತ್ತು ಅರೆ ಕಾನೂನು ಸೇವಕರು ಸ್ವಯಂಸೇವಕರಾಗಿದ್ದು ಅವರ ಕಾರ್ಯ ವ್ಯರ್ಥವಾಗಬಾರದು ಎಂಬ ಕಾರಣಕ್ಕೆ ಸಮೀಕ್ಷೆಯನ್ನು ಪರಿಣಾಮಕಾರಿಯಾಗಿ ನಡೆಸಲಾಗಿದೆಯೆ ಎಂದು ನಾವು ಖಚಿತಪಡಿಸಿಕೊಳ್ಳಲು ಬಯಸುತ್ತೇವೆ,” ಎಂದು ಪೀಠ ಹೇಳಿದೆ.

Also Read
ಶೈಕ್ಷಣಿಕ ಅರ್ಹತೆ ಇದ್ದ ಮಾತ್ರಕ್ಕೆ ಹೆಂಡತಿ ಸ್ವಾವಲಂಬಿ ಎಂದರ್ಥವಲ್ಲ: ಕರ್ನಾಟಕ ಹೈಕೋರ್ಟ್

ಕೆಎಸ್‌ಎಲ್‌ಎಸ್‌ಎ ಮತ್ತು ಡಿಸಿಟಿಗೆ ಉತ್ತಮ ರೀತಿಯಲ್ಲಿ ನೆರವಾಗಲು ಎಲ್ಲಾ ಭಾಗೀದಾರರು ಮುಂದಾಗುತ್ತಾರೆ ಎಂದು ನ್ಯಾಯಾಲಯ ಭರವಸೆ ವ್ಯಕ್ತಪಡಿಸಿತು. ಜೊತೆಗೆ ಸಮಸ್ಯೆಯ ಗಂಭೀರತೆ ಅರಿತು ಸಮೀಕ್ಷಾ ಯೋಜನೆಯನ್ನು ಚರ್ಚಿಸಲು ಮುಂದಿನ ವಿಚಾರಣೆ ವೇಳೆಗೆ ಎಲ್ಲಾ ಭಾಗೀದಾರರು ಖುದ್ದು ಹಾಜರಾಗುವಂತೆ ನಿರ್ದೇಶಿಸಿದ ನ್ಯಾಯಾಲಯ, ವಿಚಾರಣೆ ಮುಕ್ತ ನ್ಯಾಯಾಲಯದಲ್ಲಿ ನಡೆಯದೆ ಸಭಾಂಗಣದಲ್ಲಿ ಜರುಗಲಿದೆ ಎಂದು ಸ್ಪಷ್ಟಪಡಿಸಿತು.

ಕೆಲವು ತಿಂಗಳ ಹಿಂದೆ, ನಗರದ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಒತ್ತಾಯದಿಂದ ವಿವಿಧ ವಸ್ತುಗಳನ್ನು ಮಾರಾಟ ಮಾಡುತ್ತಿರುವ ವಸತಿ ರಹಿತ ಮತ್ತು ನಿರ್ಗತಿಕ ಮಕ್ಕಳನ್ನು ಗುರುತಿಸುವಂತೆ ನ್ಯಾಯಾಲಯ ಕೆಎಸ್‌ಎಲ್‌ಎಸ್‌ಎಗೆ ನಿರ್ದೇಶನ ನೀಡಿತ್ತು.

ಮಕ್ಕಳನ್ನು ಗುರುತಿಸುವ ಯೋಜನೆ ರೂಪಿಸುವಲ್ಲಿ ರಾಜ್ಯ ಸರ್ಕಾರ ಮತ್ತು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ನಿಷ್ಕ್ರಿಯತೆಯನ್ನು ಗಮನಿಸಿದ ಮುಖ್ಯ ನ್ಯಾಯಮೂರ್ತಿಗಳಾದ ಓಕಾ ಮತ್ತು ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ಪೀಠ ಈ ನಿರ್ದೇಶನಕ್ಕೆ ಮುಂದಾಗಿತ್ತು. ಹಿಂದಿನ ವಿಚಾರಣೆಯೊಂದರಲ್ಲಿ, ಮಕ್ಕಳು ಭಿಕ್ಷಾಟನೆ ಮಾಡುವುದು ಅಥವಾ ಒತ್ತಾಯಪೂರ್ವಕವಾಗಿ ವಸ್ತುಗಳ ಮಾರಾಟದಲ್ಲಿ ತೊಡಗುವುದು ಗಂಭೀರ ವಿಷಯ ಎಂದು ನ್ಯಾಯಾಲಯ ಹೇಳಿತ್ತು.

" ಭಿಕ್ಷಾಟನೆ ಅಥವಾ ವಸ್ತುಗಳನ್ನು ಮಾರಾಟ ಮಾಡಲು ಮಕ್ಕಳನ್ನು ಒತ್ತಾಯಿಸುವುದು ಗಂಭೀರ ವಿಷಯ, ಅವರು (ಸಂವಿಧಾನದ) 21 ಎ ವಿಧಿ ಅಡಿಯಲ್ಲಿ ಖಾತರಿಪಡಿಸಿದ ಮೂಲಭೂತ ಹಕ್ಕಿನಿಂದ ವಂಚಿತರಾಗಿದ್ದಾರೆ. ಅವರ ಸಂದರ್ಭಗಳು ಹಾಗೆ ಮಾಡಲು ಒತ್ತಾಯಿಸುತ್ತಿದ್ದರೆ, ಅದು 21ನೇ ವಿಧಿಯಡಿಯಲ್ಲಿ ಅವರ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ" ಎಂದು ನ್ಯಾಯಾಲಯ ಹೇಳಿದೆ. ಪ್ರಕರಣದ ಮುಂದಿನ ವಿಚಾರಣೆ ಫೆಬ್ರವರಿ 18 ರಂದು ನಡೆಯಲಿದೆ.

Kannada Bar & Bench
kannada.barandbench.com