ನನ್ನ ಪೋಷಕರ ಮುಖದಲ್ಲಿ ನಗು ನೋಡುವುದೇ ಸಂತೋಷ, ಅದು ಎಲ್ಲಕ್ಕಿಂತಲೂ ಮಿಗಿಲು: ಚಿನ್ನದ ಹುಡುಗಿ ಯಮುನಾ ಮೆನನ್

ಎನ್‌ಎಲ್‌ಎಸ್‌ಐಯುನ 28ನೇ ವಾರ್ಷಿಕ ಘಟಿಕೋತ್ಸವದಲ್ಲಿ 18 ಸ್ವರ್ಣ ಪದಕಗಳಿಸಿದ ಐಡಿಐಎ ವಿದ್ಯಾರ್ಥಿನಿಯಾದ ಯಮುನಾ ಮೆನನ್‌ ಅವರು ತಮ್ಮ ಸ್ಫೂರ್ತಿದಾಯಕ ಪಯಣದ ಕುರಿತ ಅನುಭವ ಹಂಚಿಕೊಂಡಿದ್ದಾರೆ.
ನನ್ನ ಪೋಷಕರ ಮುಖದಲ್ಲಿ ನಗು ನೋಡುವುದೇ ಸಂತೋಷ, ಅದು ಎಲ್ಲಕ್ಕಿಂತಲೂ ಮಿಗಿಲು: ಚಿನ್ನದ ಹುಡುಗಿ ಯಮುನಾ ಮೆನನ್
Published on

“ಬಿಎ ಎಲ್‌‌ಎಲ್‌ಬಿ (ಆನರ್ಸ್) ಪದವಿ ಗಳಿಸಿದ ಯಮುನಾ ಮೆನನ್ ಅವರು ಒಟ್ಟು 18 ಸ್ವರ್ಣ ಪದಕ ಗಳಿಸಿದ್ದು, ವಿಶ್ವವಿದ್ಯಾಲಯದ ಇತಿಹಾಸಲ್ಲಿ ಅತಿಹೆಚ್ಚು ಪದಕ ಗಳಿಸಿದ ವಿದ್ಯಾರ್ಥಿನಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ” ಎಂದು ಬೆಂಗಳೂರಿನ ಭಾರತೀಯ ವಿಶ್ವವಿದ್ಯಾಲಯಗಳ ರಾಷ್ಟ್ರೀಯ ಕಾನೂನು ಶಾಲೆಯ (ಎನ್ಎಲ್‌ಎಸ್‌ಐಯು) ಮಾಧ್ಯಮ ಪ್ರಕಟಣೆ ತಿಳಿಸಿದೆ.

ಐಡಿಐಎ ವಿದ್ಯಾರ್ಥಿನಿಯಾದ ಯಮುನಾ ಮೆನನ್ ಅವರು ಎಲ್ಲಾ ಅಡೆತಡೆಗಳನ್ನು ಮೀರಿ ಎನ್‌ಎಲ್ಎಸ್‌ಐಯು 2020ನೇ ಬ್ಯಾಚಿನಲ್ಲಿ ಅಗ್ರ ಶ್ರೇಯಾಂಕಿತರಾಗಿ ಹೊರಹೊಮ್ಮಿದ್ದಾರೆ. ಈ ಪ್ರಕ್ರಿಯೆಯಲ್ಲಿ ಅವರು ಎಲ್ಲಾ ದಾಖಲೆಗಳನ್ನು ಸರಿಗಟ್ಟಿದ್ದಾರೆ. ತನ್ನ ಸಾಧನೆಯಿಂದ ಆನಂದತುಂದಿಲರಾಗಿದ್ದ ಯಮುನಾ ಅವರು “ಬಾರ್ ಅಂಡ್ ಬೆಂಚ್‌” ಜೊತೆ ಮಾತನಾಡುತ್ತಾ ತನ್ನ ಪೋಷಕರ ನಗು ತನ್ನನ್ನು ಸಂತೋಷಗೊಳ್ಳುವಂತೆ ಮಾಡಿದೆ ಎಂದು ಹೇಳಿದ್ದಾರೆ.

ಪ್ರೌಢಶಿಕ್ಷಣ ಹಂತದಲ್ಲಿ ಕೇರಳಾ ಮೂಲದ ಯಮುನಾ ಅವರು ಒಟ್ಟು ಶೇ. 95.8ರಷ್ಟು ಅಂಕಗಳಿಸಿದ್ದರು. ಟ್ರಸ್ಟ್ ಕಾರ್ಯಚಟುವಟಿಕೆಯ ಕುರಿತ ಸುದ್ದಿ ತಿಳಿದು ಪ್ರೌಢಶಾಲೆಯಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾಗಿದ್ದ ಯಮುನಾ ಅವರು ಕೇರಳದಲ್ಲಿನ ಐಡಿಐಎ ಚಾಪ್ಟರ್ ಸಂಪರ್ಕಿಸಿದ್ದರು. 2014ರಲ್ಲಿ ನಡೆದ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆಯಲ್ಲಿ ಮೊದಲ ಬಾರಿಗೆ ಉತ್ತೀರ್ಣರಾಗಲು ಯಮುನಾಗೆ ಸಾಧ್ಯವಾಗಿರಲಿಲ್ಲ. ಐಡಿಐಎ ತರಬೇತಿ ಮತ್ತು ಮಾರ್ಗದರ್ಶನದಿಂದ ಆಕೆ ನಂತರದ ವರ್ಷದಲ್ಲಿ ನಡೆದ ಪ್ರಯತ್ನದಲ್ಲಿ 28ನೇ ರ‌್ಯಾಂಕ್ ಗಳಿಸಿದ್ದರು.

ಚಿನ್ನದ ಪದಕಗಳ ಸಂಭ್ರಮದಲ್ಲಿ ಮೀಯುತ್ತಿದ್ದ ಅವರು ತಮ್ಮ ಭಾವನೆಗಳನ್ನು ಮಾತುಗಳಲ್ಲಿ ಹಿಡಿದಿಟ್ಟಿದ್ದು ಹೀಗೆ:

“... ಸಾಕಷ್ಟು ಫೋನ್ ಕರೆ ಮತ್ತು ಸಂದೇಶಗಳು ಬರುತ್ತಿವೆ. ಕಳೆದ ಕೆಲವು ವರ್ಷಗಳ ಶ್ರಮಕ್ಕೆ ಪ್ರತಿಫಲ ದೊರಕಿರುವುದಕ್ಕೆ ಸಂತೋಷವಾಗುತ್ತಿದೆ” ಎಂದು ಯಮುನಾ ಹರ್ಷ ವ್ಯಕ್ತಪಡಿಸಿದರು. “ಪ್ರತಿಯೊಬ್ಬರೂ ತಮ್ಮದೇ ಹಾದಿ ಹೊಂದಿರುತ್ತಾರೆ. ಅನುಭವಸ್ಥರ ಮಾರ್ಗದರ್ಶನದಿಂದ ಅದು ಮತ್ತಷ್ಟು ಶ್ರೀಮಂತಗೊಳ್ಳುತ್ತದೆ. ಆದರೆ, ಇನ್ನೊಬ್ಬರನ್ನು ನಕಲು ಮಾಡುವುದು ಸರಿಯಲ್ಲ. ಪ್ರತಿಯೊಬ್ಬರೂ ಭಿನ್ನ, ಅದೇ ರೀತಿ ನೀವು” ಎಂದು ಅವರು ಹೇಳುತ್ತಾರೆ.

“ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಆರಂಭದಲ್ಲಿ ಸಾಕಷ್ಟು ಸಮಸ್ಯೆಯಾಗಿತ್ತು. ಇದಕ್ಕೆ ಹೊಂದಿಕೊಳ್ಳಬಹುದು ಎಂದು ನನ್ನನ್ನೇ ಸಮಾಧಾನಪಡಿಸಿಕೊಂಡೆ. ಎನ್‌ಎಲ್‌ಎಸ್‌ನಲ್ಲಿನ ಪಯಣವನ್ನು ಅತ್ಯಂತ ಸಂತೋಷದಿಂದ ಕಳೆದಿದ್ದೇನೆ. ಎನ್‌ಎಲ್‌ಎಸ್‌ ಅನ್ನು ಖಂಡಿತವಾಗಿಯೂ ಮಿಸ್ ಮಾಡಿಕೊಳ್ಳಲಿದ್ದೇನೆ… ಕಳೆದ ಐದು ವರ್ಷಗಳಲ್ಲಿ ಇದು ನನ್ನ ಮನೆಯಾಗಿತ್ತು” ಎಂದು ಭಾವುಕವಾಗಿ ನುಡಿದರು.

“ಎನ್‌ಎಲ್‌ಎಸ್‌ನಲ್ಲಿ ಅತ್ಯುತ್ತಮವಾದ ಬೆಂಬಲ ವ್ಯವಸ್ಥೆ ಇದೆ. ಈ ಕಾನೂನು ಶಾಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ ಹಲವು ಹಿರಿಯರು ಸಹಾಯ ಮಾಡಿದ್ದಾರೆ. ಕಾನೂನು ಶಾಲೆಯಲ್ಲಿನ ನನ್ನ ಸ್ನೇಹಿತರು ನನ್ನ ಬದುಕಿನ ಅವಿಭಾಜ್ಯ ಅಂಗ ಮತ್ತು ಅವರನ್ನು ಪಡೆದಿದ್ದಕ್ಕೆ ಸಂತೋಷವಾಗಿದ್ದು, ಅವರು ಜೀವನಪರ್ಯಂತ ನನ್ನ ಜೊತೆಗಿರಲಿದ್ದಾರೆ.”
ಯಮುನಾ ಮೆನನ್

“ಎನ್‌ಎಲ್‌ಎಸ್‌ಐಯು ಭಾಗವಾಗಿದ್ದು, ಆ ಮೂಲಕ ನನಗೆ ದೊರೆತ ಅತ್ಯುತ್ತಮ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂಬ ದೃಢ ನಿಶ್ಚಯದಿಂದ ಆರಂಭಿಕ ಟ್ರೈಮೆಸ್ಟರ್‌ ಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳತ್ತ ಗಮನಹರಿಸಿದೆ" ಎಂದು ಯಮುನಾ ಮೆನನ್ ಹಿಂದಿನದನ್ನು ನೆನೆಸಿಕೊಂಡರು.

ವಿಶ್ವವಿದ್ಯಾಲಯ ಮತ್ತು ಐಡಿಐಎ ವಿದ್ಯಾರ್ಥಿವೇತನ ನೆರವಿನಿಂದ ಶಿಕ್ಷಣ ಪೂರೈಸಿರುವ ಯಮುನಾ ಅವರು “ಬಾರ್ ಅಂಡ್ ಬೆಂಚ್” ಜೊತೆ ಮಾತನಾಡುತ್ತಾ ಎನ್‌ಎಲ್‌ಎಸ್‌ಐಯು ಮತ್ತು ಐಡಿಐಎ ಕರ್ನಾಟಕ ನೀಡಿದ ಮಾರ್ಗದರ್ಶನದ ಬಗ್ಗೆ ಹೀಗೆ ಹೇಳಿದ್ದಾರೆ:

“ಮೊದಲ ವರ್ಷದ ವಿದ್ಯಾರ್ಥಿಯಾಗಿದ್ದಾಗ ಐಡಿಐಎ ಕರ್ನಾಟಕ ನೀಡಿದ್ದ ಬೆಂಬಲ ನನಗೆ ಚೆನ್ನಾಗಿ ನೆನೆಪಿದೆ. ಚರ್ಚೆ ಮಾಡಲು ಜೊತೆಗೆ ಯಾರಾದರೂ ಒಬ್ಬರು ಇರುತ್ತಿದ್ದರು. ಮೂರನೇ ವರ್ಷಕ್ಕೆ ಕಾಲಿಡುವ ವೇಳೆಗೆ ಐಡಿಐಎ ನೇಮಿಸಿದ್ದ ವೃತ್ತಿಪರ ಮಾರ್ಗದರ್ಶಕರಿಂದ ದೊರೆತ ಮಾರ್ಗದರ್ಶನ ಅತ್ಯಂತ ಅಮೂಲ್ಯ ಮತ್ತು ಸಹಾಯಕಾರಿಯಾಯಿತು. ಇಂಥ ಕಾರ್ಯಕ್ರಮದಿಂದ ವಿವಿಧ ಕಾನೂನು ವೃತ್ತಿ ಆಯ್ಕೆ ಮತ್ತು ಅವಕಾಶಗಳ ಬಗ್ಗೆ ತಿಳಿದುಕೊಳ್ಳಲು ಅನುಕೂಲವಾಯಿತು” ಎಂದರು.

“ಲಂಡನ್ ಮತ್ತು ಸಿಂಗಪೂರ್‌ ನಲ್ಲಿ ನಡೆದಿದ್ದ ಅಂತಾರಾಷ್ಟ್ರೀಯ ಅಣಕು ನ್ಯಾಯಾಲಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೆ. ನೇಪಾಳ ಪ್ರವಾಸ ಕೈಗೊಂಡಿದ್ದ ಯುವ ನಿಯೋಗದ ಭಾಗವಾಗುವ ಮೂಲಕ ಭಾರತವನ್ನು ಪ್ರತಿನಿಧಿಸಿದ್ದೆ. ಆಸ್ಟ್ರೇಲಿಯಾದಲ್ಲಿ ನಡೆದಿದ್ದ ನಾಯಕತ್ವ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದೆ. ವಿಶ್ವವಿದ್ಯಾಲಯದ ನಿಯತಕಾಲಿಕೆ ಮತ್ತು ಶೈಕ್ಷಣಿಕ ಬೆಂಬಲಿತ ಚಟುವಟಿಕೆಗಳ ನೇತೃತ್ವವನ್ನೂ ವಹಿಸಿದ್ದೆ” ಎಂದು ಯಮುನಾ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

Also Read
ಸ್ಥಳೀಯರಿಗೆ ಶೇ 25 ಮೀಸಲಾತಿ ನೀಡುವ ರಾಷ್ಟ್ರೀಯ ಕಾನೂನು ಶಾಲೆ ತಿದ್ದುಪಡಿ ಕಾಯಿದೆ ರದ್ದುಗೊಳಿಸಿದ ಹೈಕೋರ್ಟ್

ಎನ್ಎಲ್‌ಎಸ್‌ಐಯು ಸಂಸ್ಥಾಪಕ ಪ್ರೊಫೆಸರ್ ಮಾಧವ ಮೆನನ್, ಹಿರಿಯ ವಕೀಲ ಇ ಎಕ್ಸ್ ಜೋಸೆಫ್ ಮತ್ತು ಪ್ರೊಫೆಸರ್ ಶಮ್ನಾದ್ ಬಷೀರ್ ಅವರು ತಮ್ಮನ್ನು ಪ್ರಭಾವಿಸಿದ್ದಾರೆ ಎಂದು ಹೇಳಿಕೊಂಡಿರುವ ಯಮುನಾ, ಜೋಸೆಫ್ ಅವರೊಂದಿಗೆ ಪದ್ಯಗಳ ಸಂಕಲನದ ಸಹಾಯ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾಗ ಕಾನೂನು ಶಿಕ್ಷಣದ ಮೇಲೆ ಆಸಕ್ತಿ ಮೂಡಿತ್ತು. ಪ್ರೊ.ಮೆನನ್ ಮತ್ತು ಬಷೀರ್ ಅವರೊಂದಿಗಿನ ಚರ್ಚೆಯ ಸಂದರ್ಭದಲ್ಲಿ ಅವರಲ್ಲಿನ ಚೈತನ್ಯದಿಂದ ಸ್ಫೂರ್ತಿ ಮೂಡಿತ್ತು ಎಂದು ಹೇಳಿಕೊಂಡಿದ್ದಾರೆ.

Late Dr. Shamnad Basheer, Founder of IDIA
Late Dr. Shamnad Basheer, Founder of IDIA
ಪ್ರೊ. ಶಮ್ನಾದ್ ಬಷೀರ್ ಅವರ ಚೈತನ್ಯವೇ ಸ್ಫೂರ್ತಿದಾಯಕ. ಅವರು ಇಂದು ನಮ್ಮೊಂದಿಗೆ ಇಲ್ಲದೇ ಇದ್ದರೂ ತಮ್ಮ ಸಂಪರ್ಕಕ್ಕೆ ಬಂದವರ ಮೇಲೆ ಅವರು ಬೀರಿದ ಪ್ರಭಾವ ಎಂದಿಗೂ ಅಜರಾಮರ.
ಯಮುನಾ ಮೆನನ್

“ಹೊಸ ಆರಂಭಕ್ಕೆ ನಾನು ಉತ್ಸುಕಳಾಗಿದ್ದೇನೆ. ಕೇಂಬ್ರಿಡ್ಜ್ ನಲ್ಲಿ ಕಲಿಯುತ್ತಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೆರೆದುಕೊಳ್ಳುವ ಭರವಸೆ ಹೊಂದಿದ್ದೇನೆ” ಎಂದು ಯಮುನಾ ಭವಿಷ್ಯದತ್ತ ಕೈಚಾಚಿದರು.

Kannada Bar & Bench
kannada.barandbench.com