ದೃಷ್ಟಿಹೀನ ಕಾನೂನು ವಿದ್ಯಾರ್ಥಿಗಳಿಗೆ ಐಡಿಐಎ ವಿಶೇಷ ಚೇತನರ ಪ್ರವೇಶ ತರಬೇತಿ ಕಾರ್ಯಕ್ರಮ

ಡಿಸೆಂಬರ್‌ ಮೂರನೇ ವಾರದಲ್ಲಿ ತಾತ್ಕಾಲಿಕವಾಗಿ ಕಾರ್ಯಕ್ರಮದ ಪ್ರಾಯೋಗಿಕ ಸೆಷನ್‌ ಆನ್‌ಲೈನ್‌ನಲ್ಲಿ ಆಡಿಯೋ ಮಾದರಿಯಲ್ಲಿ ನಡೆಯಲಿದೆ.
IDIA
IDIA
Published on

ಐಡಿಐಎ ವಿಶೇಷ ಚೇತನರ ಪ್ರವೇಶ ಕಾರ್ಯಕ್ರಮ ಮತ್ತು ಎನೇಬಲ್‌ ಇಂಡಿಯಾ ಫೌಂಡೇಶನ್‌ ಜಂಟಿಯಾಗಿ ದೃಷ್ಟಿಹೀನ ಕಾನೂನು ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ಕಾರ್ಯಕ್ರಮ ಆಯೋಜಿಸಿವೆ. ಐ-ಡಿಎಪಿ ನೀತಿಯನ್ನು ಗಮನದಲ್ಲಿ ಇಟ್ಟುಕೊಂಡು ಕಾನೂನು ಕ್ಷೇತ್ರದಲ್ಲಿ ಪ್ರವೇಶ ಮತ್ತು ಸೇರ್ಪಡೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಡಿಸೆಂಬರ್‌ ಮೂರನೇ ವಾರದಲ್ಲಿ ತಾತ್ಕಾಲಿಕವಾಗಿ ಕಾರ್ಯಕ್ರಮದ ಪ್ರಾಯೋಗಿಕ ಸೆಷನ್‌ ಆನ್‌ಲೈನ್‌ನಲ್ಲಿ ಆಡಿಯೋ ಮಾದರಿಯಲ್ಲಿ ನಡೆಯಲಿದೆ. ಎನೇಬಲ್‌ ಇಂಡಿಯಾ ಫೌಂಡೇಶನ್‌ನ ತರಬೇತುದಾರರು ವಿದ್ಯಾರ್ಥಿಗಳಿಗೆ ಕೋಚಿಂಗ್‌ ನೀಡಲಿದ್ದಾರೆ ಎಂದು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸಂಪನ್ಮೂಲದ ಸಮಾನ ಲಭ್ಯತೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ದೃಷ್ಟಿಹೀನತೆ ಇರುವ ಕಾನೂನು ವಿದ್ಯಾರ್ಥಿಗಳಿಗೆ ಸಾಫ್ಟ್‌ವೇರ್‌ ತರಬೇತಿಯನ್ನು ಕಾರ್ಯಕ್ರಮದ ಮೂಲಕ ನೀಡಲಾಗುತ್ತದೆ. ಇದು ಅವರಿಗೆ ತಮ್ಮ ಪಠ್ಯಕ್ರಮ, ಕಾನೂನು ದತ್ತಾಂಶಕೋಶ‌ ಮತ್ತು ವಿವಿಧ ಡಿಜಿಟಲ್ ತಂತ್ರಜ್ಞಾನಗಳಿಗೆ ಪ್ರವೇಶ ಕಲ್ಪಿಸಲು ಸಹಾಯಕವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ದೃಷ್ಟಿಹೀನತೆ ಹೊಂದಿರುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಮತ್ತು ವೃತ್ತಿಪರವಾಗಿ ಸಹಾಯ ಮಾಡುವ ಗುರಿಯನ್ನು ತರಬೇತಿ ಕಾರ್ಯಕ್ರಮಗಳು ಹೊಂದಿವೆ. ದೃಷ್ಟಿಹೀನತೆ ಹೊಂದಿರುವ ಎಲ್ಲಾ ಕಾನೂನು ಕಾಲೇಜುಗಳ ವಿದ್ಯಾರ್ಥಿಗಳಿಗೆ (ಪ್ರಸ್ತುತ ವರ್ಚುವಲ್‌ ವಿಧಾನದ ಮೂಲಕ ಮತ್ತು ಮುಂದೆ ಭೌತಿಕವಾಗಿ ಕ್ಯಾಂಪಸ್‌ಗಳು ಮತ್ತೆ ತೆರೆದಾಗ) ಸಮನ್ವಯ ಮತ್ತು ತರಬೇತಿಯನ್ನು ಐಡಿಐಎ ಒದಗಿಸುತ್ತದೆ.

ತರಬೇತಿ ಪಠ್ಯಕ್ರಮವು ಈ ಕೆಳಗಿನ ಮಾಡ್ಯೂಲ್‌ಗಳನ್ನು ಒಳಗೊಳ್ಳುವ ಗುರಿಯನ್ನು ಹೊಂದಿದೆ:

  1. ಮಾಡ್ಯೂಲ್‌ I: ಕಂಪ್ಯೂಟರ್‌ಗಳಿಗೆ ಸ್ಕ್ರೀನ್ ರೀಡರ್‌ಗಳನ್ನು ಬಳಸುವುದು

  2. ಮಾಡ್ಯೂಲ್‌ II: ಮೂಲ ಮತ್ತು ಸುಧಾರಿತ ಎಂಎಸ್‌ ಆಫೀಸ್‌ ವೈಶಿಷ್ಟ್ಯಗಳು (ಎಂಎಸ್‌ ವರ್ಡ್‌, ಎಂಎಸ್‌ ಎಕ್ಸೆಲ್‌, ಎಂಎಸ್‌ ಪವರ್‌ಪಾಯಿಂಟ್‌)

  3. ಮಾಡ್ಯೂಲ್‌ III: ಕಾನೂನು ದತ್ರಾಂಶಕೋಶದ ಬಳಕೆ

  4. ಮಾಡ್ಯೂಲ್‌ IV: ವಿವಿಧ ದಾಖಲೆಗಳ ಕರಡು ರಚನೆಗಾಗಿ ಮೂಲ ಕೌಶಲ್ಯಗಳು (ಫಾರ್ಮ್ಯಾಟಿಂಗ್‌, ವಿಜುವಲ್‌ ಎಫೆಕ್ಟ್‌, ಸಂಘಟನೆ ಮತ್ತು ನಿರೂಪಣೆ, ಪೀಠಿಕೆ ಮತ್ತು ಕೃತಿಚೌರ್ಯ, ಬರವಣಿಗೆಯ ರಚನೆ, ಈಮೇಲ್‌ ಮತ್ತು ದಾಖಲೀಕರಣ).

ಕೋರ್ಸ್‌ನಲ್ಲಿ ಭಾಗವಹಿಸುವವರ ಪ್ರಾಥಮಿಕ ಮೌಲ್ಯಮಾಪನ, ಅವರ ಲಭ್ಯತೆ ಮತ್ತು ವರ್ಗ ವೇಳಾಪಟ್ಟಿ ಮುಂತಾದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕೋರ್ಸ್‌ನ ಅವಧಿ ಮತ್ತು ಬ್ಯಾಚ್‌ನಲ್ಲಿ ಇರುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಶೀಘ್ರದಲ್ಲೇ ನಿರ್ಧರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಆಸಕ್ತರು ಈ ಗೂಗಲ್‌ ಫಾರ್ಮ್‌ ಅನ್ನು ತುಂಬಬಹುದಾಗಿದೆ: https://forms.gle/7TzHZcSgVQgPrfDf6

Kannada Bar & Bench
kannada.barandbench.com