ಐಡಿಐಎ ಸ್ಫೂರ್ತಿಯ ಲೀಗಲೈಟ್: ಕಾನೂನು ಕಲಿಯುವ ಬಿಹಾರದ ಹಳ್ಳಿಮಕ್ಕಳ ಪಾಲಿನ ‘ಬೆಳಕು’
ಹೆಚ್ಚು ಸ್ಪರ್ಧಾತ್ಮಕವಾಗಿರುವ ಕಾನೂನು ಪ್ರವೇಶ ಪರೀಕ್ಷೆಗಳಿಗೆ ಲೀಗಲೈಟ್ ಎಂಬ ಸಂಸ್ಥೆ ಮೂಲಕ ತರಬೇತಿ ನೀಡುತ್ತಿದ್ದಾರೆ ಪಾಟ್ನಾದ ಚಾಣಕ್ಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ (ಸಿಎನ್‌ಎಲ್‌ಯು) ವಿದ್ಯಾರ್ಥಿಗಳಾದ ವಿವೇಕ್ ಮಿಶ್ರಾ ಮತ್ತು ಆಯುಷ್ ಕುಮಾರ್.
ಪ್ರಸಕ್ತ ಶೈಕ್ಷಣಿಕ ಸಾಲಿನ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆಯಲ್ಲಿ (ಕ್ಲಾಟ್ 2020) ಅಗ್ರ 200 ರ‌್ಯಾಂಕ್ ಗಳಿಸಿದವರಲ್ಲಿ ಲೀಗಲೈಟ್ ಸಂಸ್ಥೆಯ ಐವರು ವಿದ್ಯಾರ್ಥಿಗಳು ಕೂಡ ಸೇರಿದ್ದಾರೆ. ಅವರಲ್ಲಿ ಇಬ್ಬರು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಅಖಿಲ ಭಾರತ ಕಾನೂನು ಪ್ರವೇಶ ಪರೀಕ್ಷೆಯಲ್ಲಿ (ಎಐಎಲ್ಇಟಿ 2020) ಅಗ್ರ ಶ್ರೇಯಾಂಕ ಗಳಿಸಿದ್ದಾರೆ.
ಲೀಗಲೈಟ್ ಸಂಸ್ಥಾಪಕ ಮತ್ತು ಬಿಹಾರ ಐಡಿಐಎ ತಂಡದ ನಾಯಕ ವಿವೇಕ್ ಮಿಶ್ರಾ ಅವರು " ಪ್ರವೇಶಾತಿ ಎಂದರೆ ಕೇವಲ ಅರ್ಹತೆ ಪಡೆಯುವುದಷ್ಟೇ ಅಲ್ಲ, ಬದಲಿಗೆ ದೊಡ್ಡ ನಗರಗಳ ಮಂದಿ ಮಾತ್ರ ಅತ್ಯುತ್ತಮ ರಾಷ್ಟ್ರೀಯ ಕಾನೂನು ವಿವಿಗಳಲ್ಲಿ ಕಲಿಯಲು ಯೋಗ್ಯರೆಂಬ ಏಕತಾನತೆಯನ್ನು ಮುರಿಯುವುದಾಗಿದೆ” ಎನ್ನುತ್ತಾರೆ.
‘ಪ್ರಾಧ್ಯಾಪಕರಾದ ಡಾ. ಶಮ್ನಾದ್ ಬಶೀರ್ ಅವರ ಒಡನಾಟ ಮತ್ತು ಐಡಿಐಎ ಬೋಧಕನಾಗಿ ಕೆಲಸ ಮಾಡಿದ ನಂತರ ಲೀಗಲೈಟ್ ಕನಸು ಚಿಗುರಿತು’ ಎಂದು ಹೇಳುತ್ತಾರೆ ಅವರು.
ಈ ಶೈಕ್ಷಣಿಕ ಸಾಲಿನಲ್ಲಿ ಲೀಗಲೈಟ್ 38 ವಿದ್ಯಾರ್ಥಿಗಳಿಗೆ ಕಾನೂನು ಪರೀಕ್ಷೆ ಬರೆಯಲು ತರಬೇತಿ ನೀಡಿದ್ದು ಅದರಲ್ಲಿ 17 ಮಂದಿ ಐಡಿಐಎ ಟ್ರೈನಿಗಳಾಗಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಕೂಡ ಝೂಮ್, ವಿವೇಕ್ ಇನ್ಫಾರ್ಮ್ಸ್ ಮೂಲಕ ತರಗತಿಗಳನ್ನು ಏರ್ಪಡಿಸಲಾಗಿತ್ತು.
ಕೆಲವೇ ಕೆಲವು ಸೌಲಭ್ಯ ಹೊಂದಿರುವ ಮನೆಯ ವಾತಾವರಣದಲ್ಲಿಯೇ ಬೆಳೆದ ಮಕ್ಕಳು ಹೀಗೆ ಆನ್ ಲೈನ್ ಶಿಕ್ಷಣ ಪಡೆಯುವ ಆರಂಭಿಕ ಘಟ್ಟದಲ್ಲಿ ತೊಂದರೆ ಅನುಭವಿಸಿದರು. ಆಗ ಐಡಿಐಎ ಅಖಾಡಕ್ಕಿಳಿಯಿತು. ವಿದ್ಯಾರ್ಥಿಗಳು ಡೇಟಾ ಪ್ಯಾಕ್ ಸೌಲಭ್ಯ ಪಡೆಯಲು ಧನಸಹಾಯ ಕಲ್ಪಿಸಿತು.
‘ನೆಟ್ ವರ್ಕ್ ಹೆಚ್ಚು ಲಭಿಸುತ್ತಿದ್ದ ರಾತ್ರಿ ಹೊತ್ತನ್ನೇ ಕಲಿಕೆಯ ಅವಧಿಯನ್ನಾಗಿ ಬದಲಿಸಲಾಗಿತ್ತು. ಸಂಜೆ 7 ಗಂಟೆ ಅಥವಾ ರಾತ್ರಿ 11 ಗಂಟೆಯಿಂದ ಬೆಳಗಿನಜಾವ 4 ಗಂಟೆಯವರೆಗೆ ತರಗತಿಗಳನ್ನು ತೆಗೆದುಕೊಳ್ಳಲಾಗುತ್ತಿತ್ತು ಎನ್ನುತ್ತಾರೆ ಲೀಗಲೈಟ್ ತಂಡದ ಸಂಸ್ಥಾಪಕರು.
ವಿವೇಕ್ ಕೂಡ ಸ್ವತಃ ವಿದ್ಯಾರ್ಥಿಯಾಗಿದ್ದು ಕೋರ್ಸ್‌ವರ್ಕಿಗೆ ಅಗತ್ಯವಾದ ಅಧ್ಯಯನದಲ್ಲಿ ತೊಡಗಿದ್ದಾರೆ. ಮಧ್ಯಾಹ್ನ 2.15ರವರೆಗೂ ವಿವಿಯಲ್ಲಿ ಕಲಿಯುವ ಅವರು ನಂತರ ಒಂದಷ್ಟು ತಿಂದು, ಬೈಕ್ ಏರಿ ಲೀಗಲೈಟ್ ಕೋಚಿಂಗ್ ಕೇಂದ್ರ ತಲುಪುತ್ತಾರೆ. ಅಲ್ಲಿ ಅವರು ರಾತ್ರಿ 7ರಿಂದ 8ರವರೆಗೂ ತರಬೇತಿ ನೀಡುತ್ತಾರೆ.
ಲೀಗಲೈಟ್‌ನಲ್ಲಿ ತರಗತಿಗಳನ್ನು ಹೇಗೆ ನಡೆಸಲಾಗುತ್ತದೆ ಎಂಬ ಬಗ್ಗೆ, ಅದರಲ್ಲಿಯೂ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಲಿಸುವ ವಿಧಾನಗಳನ್ನು ಅವರು ವಿವರಿಸುತ್ತಾರೆ. ಜೊತೆಗೆ ತಮ್ಮ ವಿದ್ಯಾರ್ಥಿಗಳು ಹಿರಿಯ ಬೋಧಕರಿಗಿಂತಲೂ ಯುವ ಲೀಗಲೈಟ್ ತಂಡದೊಂದಿಗೆ ಹೆಚ್ಚು ಸಂಪರ್ಕ ಹೊಂದಿದ್ದಾರೆ ಎನ್ನುತ್ತಾರೆ ಅವರು.
ಕಾನೂನು ಪರೀಕ್ಷಾ ಕ್ಷೇತ್ರವನ್ನು ನವೀಕರಿಸಲು ಬಯಸುವ ಅವರು ಕಾನೂನು ಶಾಲೆಗಳಲ್ಲಿ ಕಾನೂನನ್ನು ಹೇಗೆ ಕಲಿಸಲಾಗುತ್ತಿದೆಯೇ ಅದರಲ್ಲಿ ಸುಧಾರಣೆ ತರಲು ಹೊರಟಿರುವುದಾಗಿ ತಿಳಿಸುತ್ತಾರೆ.
ವಿದ್ಯಾರ್ಥಿಗಳ ಅಗತ್ಯಕ್ಕೆ ತಕ್ಕಂತೆ ಶಿಕ್ಷಣವನ್ನು ಕಸ್ಟಮೈಸ್ ಮಾಡುವುದು, ಶುಷ್ಕ ಎನಿಸುವಂತಹ ಕಾನೂನು ಪುಸ್ತಕಗಳನ್ನು ವಿನೋದಾತ್ಮಕವಾಗಿ, ಆಸಕ್ತಿದಾಯಕವಾಗಿ ರೂಪಿಸುವುದು, ಐಡಿಐಎ ಜೊತೆ ಕೆಲಸ ಮಾಡುತ್ತ ಕಾನೂನು ಪರೀಕ್ಷಾ ಕ್ಷೇತ್ರ ಮತ್ತು ಕಾನೂನು ಶಿಕ್ಷಣವನ್ನು ಉನ್ನತೀಕರಿಸುವುದು, ಕಾನೂನು ವಿದ್ಯಾಭ್ಯಾಸ ಬಯಸುವ ದುರ್ಬಲ ವರ್ಗಗಳ ಮಕ್ಕಳಿಗೆ ಬಲ ತುಂಬುವುದು, ದೇಶದ ಕಾನೂನು ಕ್ಷೇತ್ರದಲ್ಲಿ ವಿವಿಧ ಸಮುದಾಯಗಳ ಪ್ರಾತನಿಧ್ಯ ಹೆಚ್ಚಿಸುವುದು ಇವೇ ಮುಂತಾದ ಕನಸುಗಳನ್ನು ಸಾಕಾರಗೊಳಿಸಲು ಅವರು ಮುಂದಡಿ ಇಡುತ್ತಿದ್ದಾರೆ.