ನೋಂದಣಿಯಾಗಿರುವ ಸಂಘ, ಸೊಸೈಟಿಯ ಹೆಸರನ್ನೇ ಹೋಲುವ ಮತ್ತೊಂದರ ನೋಂದಣಿಗೆ ಅವಕಾಶವಿಲ್ಲ: ಹೈಕೋರ್ಟ್‌

ಕರ್ನಾಟಕ ಸಹಕಾರ ಸಂಘಗಳ ಕಾಯಿದೆಯ ಸೆಕ್ಷನ್ 7 ಪ್ರಕಾರ, ಮೊದಲೇ ನೋಂದಣಿಯಾಗಿರುವ ಸಂಸ್ಥೆಯ ಹೆಸರಿನಲ್ಲಿ ಅಥವಾ ಅದಕ್ಕೆ ಹೋಲಿಕೆಯಾಗುವಂತ ಹೆಸರಿನಲ್ಲಿ ಮತ್ತೊಂದು ಸಂಸ್ಥೆಯನ್ನು ನೋಂದಣಿ ಮಾಡಲು ಅವಕಾಶವಿಲ್ಲ ಎಂದಿರುವ ನ್ಯಾಯಾಲಯ.
Karnataka High Court
Karnataka High Court
Published on

ಒಮ್ಮೆ ಒಂದು ಹೆಸರಿನಲ್ಲಿ ಸೊಸೈಟಿ, ಸಂಘ ನೋಂದಣಿಯಾದರೆ, ಅದೇ ಹೆಸರಿನಲ್ಲಿ ಮತ್ತೊಂದು ಸೊಸೈಟಿ ನೋಂದಣಿ ಮಾಡಲು ಅವಕಾಶವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶಿಸಿದೆ.

ನೋಂದಣಿ ರದ್ದುಪಡಿಸಿದ್ದ ಸಹಕಾರ ಸಂಘಗಳ ಉಪ ನೋಂದಣಾಧಿಕಾರಿಯ ಆದೇಶ ಪ್ರಶ್ನಿಸಿ ಬೆಂಗಳೂರು ನಗರ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಮಹೇಶ್ ಹಾಗೂ ಸಮಿತಿಯ ಆರು ಸದಸ್ಯರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಪುರಸ್ಕರಿಸಿದೆ.

ಕರ್ನಾಟಕ ಸಹಕಾರ ಸಂಘಗಳ ಕಾಯಿದೆಯ ಸೆಕ್ಷನ್ 7 ಪ್ರಕಾರ, ಮೊದಲೇ ನೋಂದಣಿಯಾಗಿರುವ ಸಂಸ್ಥೆಯ ಹೆಸರಿನಲ್ಲಿ ಅಥವಾ ಅದಕ್ಕೆ ಹೋಲಿಕೆಯಾಗುವಂತ ಹೆಸರಿನಲ್ಲಿ ಮತ್ತೊಂದು ಸಂಸ್ಥೆಯನ್ನು ನೋಂದಣಿ ಮಾಡಲು ಅವಕಾಶವಿಲ್ಲ. ಪ್ರಕರಣದಲ್ಲಿ ಪ್ರತಿವಾದಿ ಸಂಘ ನೋಂದಣಿಗೂ ನಾಲ್ಕು ತಿಂಗಳ ಮೊದಲೇ ಅರ್ಜಿದಾರ ಸಂಘ ನೋಂದಣಿಯಾಗಿದೆ. ಇದರಿಂದ ಪ್ರತಿವಾದಿ ಸಂಘವನ್ನು ನೋಂದಣಿ ಮಾಡುವ ಮೂಲಕ ಸಹಕಾರ ಸಂಘಗಳ ಉಪ ನೋಂದಣಾಧಿಕಾರಿ ಲೋಪ ಎಸಗಿದ್ದಾರೆ ಎಂದಿರುವ ಹೈಕೋರ್ಟ್, ಪ್ರತಿವಾದಿ ಸಂಸ್ಥೆಯ ನೋಂದಣಿಯನ್ನು ರದ್ದುಪಡಿಸಿ ಆದೇಶಿಸಿದೆ.

ಬೆಂಗಳೂರು ನಗರ ಡಿಸ್ಟ್ರಿಕ್ಟ್‌ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಮತ್ತು ಬೆಂಗಳೂರು ನಗರ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್‌ಗಳ ನಡುವೆ ಇರುವ ವ್ಯತ್ಯಾಸವೆಂದರೆ ‘ಜಿಲ್ಲಾ ಮತ್ತು ಡಿಸ್ಟ್ರಿಕ್ಟ್’ ಎಂಬ ಪದಗಳು. ಈ ಎರಡೂ ಶಬ್ದಗಳು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಒಂದೇ ಆಗಿದೆ. ಇದೊಂದು ಹೊರತುಪಡಿಸಿ, ಸಂಘಗಳ ಹೆಸರಿನಲ್ಲಿ ಬೇರೆ ಯಾವುದೇ ಬದಲಾವಣೆಯಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಕರ್ನಾಟಕ ಸಹಕಾರ ಸಂಘಗಳ ಕಾಯಿದೆ ಸೆಕ್ಷನ್ 27ರ ಪ್ರಕಾರ ಸೊಸೈಟಿಯು ಕಾನೂನುಬಾಹಿರ ಚಟುವಟಿಕೆ ನಡೆಸುತ್ತಿದ್ದರೆ, ಅದರ ವಿರುದ್ಧ ವಿಚಾರಣೆ ನಡೆಸಬಹುದಾಗಿದೆ. ಆರೋಪ ಸಾಬೀತಾದರೆ ನೋಂದಣಿ ರದ್ದುಪಡಿಸಲು ಅವಕಾಶವಿದೆ. ಆದರೆ, ಈ ಪ್ರಕರಣದಲ್ಲಿ ಅರ್ಜಿದಾರ ಸಂಘವು ನೋಂದಣಿಯಾಗುವ ಮುನ್ನವೇ ಅಕ್ರಮ ನಡೆಸಿದೆ ಎಂಬ ಆರೋಪವಿದೆ. ಈ ಹಿನ್ನೆಲೆಯಲ್ಲಿ ನೋಂದಣಿಯಾಗುವ ಮೊದಲೇ ನಡೆಸಿದ ಅಕ್ರಮಗಳು ಅಪರಾಧವಾಗುತ್ತದೆ ಎಂಬುದಾಗಿ ಕಾಯಿದೆಯಲ್ಲಿ ಎಲ್ಲಿಯೂ ಹೇಳಿಲ್ಲ. ಅರ್ಜಿದಾರರ ಸಂಘದ ವಿರುದ್ಧದ ಆರೋಪವು ನೋಂದಣಿ ಪೂರ್ವವಾಗಿದೆ. ಹೀಗಾಗಿ, ಅದರ ನೋಂದಣಿ ರದ್ದುಪಡಿಸಿರುವ ಕ್ರಮ ಕಾನೂನುಬಾಹಿರವಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ಹಿನ್ನೆಲೆ: ಅರ್ಜಿದಾರ ಸಂಘವಾದ ಬೆಂಗಳೂರು ನಗರ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ 2020ರ ಫೆಬ್ರವರಿ 28ರಂದು ನೋಂದಣಿಯಾಗಿತ್ತು. ಅದಾದ ನಾಲ್ಕು ತಿಂಗಳ ನಂತರ 2020ರ ಜೂನ್‌ 16ರಂದು ಬೆಂಗಳೂರು ನಗರ ಡಿಸ್ಟ್ರಿಕ್ಟ್ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ನೋಂದಣಿಯಾಗಿತ್ತು. ನಂತರ ಅರ್ಜಿದಾರ ಸಂಘದ ವಿರುದ್ಧ ಪ್ರತಿವಾದಿ ಸಂಘವಾದ ಬೆಂಗಳೂರು ನಗರ ಡಿಸ್ಟ್ರಿಕ್ಟ್ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ 2020ರ ಅಕ್ಟೋಬರ್‌ 19ರಂದು ದೂರು ನೀಡಿರುತ್ತದೆ.

ವಿಚಾರಣಾಧಿಕಾರಿಯು ವರದಿ ನೀಡಿ, ಅರ್ಜಿದಾರ ಸಂಸ್ಥೆಯ ವಿರುದ್ಧದ ಆರೋಪಗಳು ಸಾಬೀತಾಗಿದೆ ಎಂದು ತಿಳಿಸಿದ್ದರು. ಅದನ್ನು ಆಧರಿಸಿ ಅರ್ಜಿದಾರ ಸಂಘದ ನೋಂದಣಿಯನ್ನು ರದ್ದುಪಡಿಸಿ ಸಹಕಾರ ಸಂಘಗಳ ಉಪ ನೋಂದಣಾಧಿಕಾರಿ ಆದೇಶಿಸಿದ್ದರು. ಈ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.

Kannada Bar & Bench
kannada.barandbench.com