ಸೇವೆ ಕಾಯಂಗೂ ಮುನ್ನ ದಿನಗೂಲಿ ಆಧಾರದ ಮೇಲೆ ಕಾರ್ಯನಿರ್ವಹಿಸಿದ್ದರೆ ಆ ಅವಧಿಗೂ ಗ್ರಾಚ್ಯುಟಿ ಪಾವತಿಸಬೇಕು: ಹೈಕೋರ್ಟ್‌

“ಗ್ರಾಚ್ಯುಟಿ ಪಾವತಿ ಕಾಯಿದೆ 1972ರ ಸರ್ಕಾರಿ ನೌಕರ ಮತ್ತು ಗುತ್ತಿಗೆ ನೌಕರರ ನಡುವೆ ಯಾವುದೇ ವ್ಯತ್ಯಾಸ ಮಾಡುವುದಿಲ್ಲ” ಎಂದು ನ್ಯಾಯಾಲಯ ಆದೇಶಿಸಿದೆ.
Justice M Nagaprasanna and Karnataka HC
Justice M Nagaprasanna and Karnataka HC

ಉದ್ಯೋಗಿಯೊಬ್ಬರಿಗೆ ಒಂಭತ್ತು ವರ್ಷಗಳ ಕಾಲ ಉಪದಾನ (ಗ್ರಾಚ್ಯುಟಿ) ಪಾವತಿಸಲು ರಾಜ್ಯ ಸರ್ಕಾರ ವಿಳಂಬ ಮಾಡಿರುವುದಕ್ಕೆ ಅತೃಪ್ತಿ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್‌ ಸರ್ಕಾರಿ ಸೇವೆ ಕಾಯಂಗೂ ಮುನ್ನ ಉದ್ಯೋಗಿ ದಿನಗೂಲಿ ಆಧಾರದ ಮೇಲೆ ಕಾರ್ಯನಿರ್ವಹಿಸಿದ್ದರೆ ಆ ಅವಧಿಗೂ ಗ್ರಾಚ್ಯುಟಿ ಪಾವತಿಸಬೇಕು ಎಂದು ಈಚೆಗೆ ಆದೇಶಿಸಿದೆ.

ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಡಿ ಗ್ರೂಪ್‌ ಉದ್ಯೋಗಿ ಬಸವೇಗೌಡ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ಪುರಸ್ಕರಿಸಿದೆ.

ಅರ್ಜಿದಾರರು ಒಟ್ಟಾರೆ ₹2,40,449 ಗ್ರಾಚ್ಯುಟಿ ಹಣಕ್ಕೆ ಅರ್ಹರಾಗಿದ್ದಾರೆ. ಇದಕ್ಕೆ ಸರ್ಕಾರದ ಅಧಿಸೂಚನೆಯ ಪ್ರಕಾರ 2013ರಿಂದ ಇಂದಿನವರೆಗೆ ಅನ್ವಯವಾಗುವ ಬಡ್ಡಿಯನ್ನು ಪಾವತಿಸಬೇಕು. ಅರ್ಜಿದಾರರಿಗೆ ಕಾನೂನು ವೆಚ್ಚಕ್ಕಾಗಿ ಹೆಚ್ಚುವರಿಯಾಗಿ ₹50,000 ಪಾವತಿಸಬೇಕು. ನಾಲ್ಕು ವಾರಗಳಲ್ಲಿ ಗ್ರ್ಯಾಚುಟಿ ಹಣ ಅರ್ಜಿದಾರರಿಗೆ ತಲುಪದಿದ್ದಲ್ಲಿ ದಿನಕ್ಕೆ ಹೆಚ್ಚುವರಿಯಾಗಿ ಅದು ತಲುಪುವರರೆಗೆ ಪಾವತಿಸಬೇಕು ಎಂದು ನ್ಯಾಯಾಲಯವು ಸರ್ಕಾರಕ್ಕೆ ಕಟ್ಟುನಿಟ್ಟಿನ ಆದೇಶ ಮಾಡಿದೆ.

“ಗ್ರಾಚ್ಯುಟಿ ಪಾವತಿ ಕಾಯಿದೆ 1972ಯು ಸರ್ಕಾರಿ ನೌಕರ ಮತ್ತು ಗುತ್ತಿಗೆ ನೌಕರರ ನಡುವೆ ಯಾವುದೇ ವ್ಯತ್ಯಾಸ ಮಾಡುವುದಿಲ್ಲ” ಎಂದು ನ್ಯಾಯಾಲಯ ಆದೇಶಿಸಿದೆ.

“ಸುಪ್ರೀಂ ಕೋರ್ಟ್ ಹಲವು ಪ್ರಕರಣಗಳಲ್ಲಿ ಗ್ರಾಚ್ಯುಟಿ ಪಾವತಿ ಕಾಯಿದೆಯ ಅನ್ವಯ ಉದ್ಯೋಗಿಗಳು ಗ್ರಾಚ್ಯುಟಿಗೆ ಅರ್ಹರು ಎಂದು ಹೇಳಿರುವಾಗ ರಾಜ್ಯ ಸರ್ಕಾರ ಗ್ರಾಚ್ಯುಟಿ ಅನ್ನು ನಿರಾಕರಿಸಲಾಗದು. ಗ್ರಾಚ್ಯುಟಿ ಹಣವನ್ನು ಸರ್ಕಾರ ಬರೀ ನಿರಾಕರಿಸಿಲ್ಲ. ಅದು ಒಂಭತ್ತು ವರ್ಷಗಳ ಕಾಲ ನಿರಾಕರಿಸಿದೆ. ಹೀಗಾಗಿ, ಬಡ್ಡಿ ಹಾಗೂ ದಾವೆಯ ವೆಚ್ಚ ಪಡೆಯಲು ಅರ್ಜಿದಾರರು ಸಮರ್ಥರಾಗಿದ್ದಾರೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಅರ್ಜಿದಾರರ ಪರ ವಕೀಲ ಅಡವೀಶಯ್ಯ “ಅರ್ಜಿದಾರರು ಸರ್ಕಾರಿ ಉದ್ಯೋಗಿಯಾಗಿದ್ದು, 42 ವರ್ಷ ಸೇವೆಯ ಬಳಿಕ ನಿವೃತ್ತರಾಗಿದ್ದಾರೆ. ಆರಂಭದಲ್ಲಿ ಅರ್ಜಿದಾರರು ದಿನಗೂಲಿಯಾಗಿ ನೇಮಕವಾಗಿದ್ದರು ಎಂಬ ಕಾರಣಕ್ಕೆ ಅವರಿಗೆ ಪೂರ್ಣ ಪ್ರಮಾಣದ ಗ್ರಾಚ್ಯುಟಿ ಪಾವತಿಸಿಲ್ಲ. ಈ ಮಧ್ಯೆ, ನಿಯಂತ್ರಣ ಪ್ರಾಧಿಕಾರವು ಅರ್ಜಿದಾರರ 42 ವರ್ಷ ಸೇವೆಗೂ ಗ್ರಾಚ್ಯುಟಿ ಪಾವತಿಸಬೇಕು ಎಂದು ಹೇಳಿದೆ” ಎಂದು ವಾದಿಸಿದ್ದರು.

ಹೆಚ್ಚುವರಿ ಸರ್ಕಾರಿ ವಕೀಲೆ ನವ್ಯಾ ಶೇಖರ್‌ ಅವರು “ಸರ್ಕಾರಿ ಸೇವೆಗೆ ಕಾಯಂ ಆದ ದಿನದಿಂದ ನಿವೃತ್ತಿ ಹೊಂದಿದ ದಿನದವರೆಗೆ ಅರ್ಜಿದಾರರಿಗೆ ಗ್ರ್ಯಾಚುಟಿ ಪಾವತಿಸಲಾಗಿದೆ. ದಿನಗೂಲಿ ಅವಧಿಗೆ ಗ್ರಾಚ್ಯುಟಿ ಪಾವತಿಸುವ ವಿಚಾರ ಸುಪ್ರೀಂ ಕೋರ್ಟ್‌ ಪರಿಗಣನೆಯಲ್ಲಿರುವುದರಿಂದ ಅದಕ್ಕೆ ಗ್ರ್ಯಾಚುಟಿ ಪಾವತಿಸಲಾಗಿಲ್ಲ. ಸುಪ್ರೀಂ ಕೋರ್ಟ್‌ ತೀರ್ಪು ಆಧರಿಸಿ ಬಾಕಿ ಗ್ರಾಚ್ಯುಟಿ ಪಾವತಿಸಲಾಗುವುದು” ಎಂದಿದ್ದರು.

ಪ್ರಕರಣದ ಹಿನ್ನೆಲೆ: ಅರ್ಜಿದಾರ ಬಸವೇಗೌಡ ಅವರು ಮಂಡ್ಯ ಜಿಲ್ಲೆಯ ಜಿ ಮಲ್ಲಿಗೆರೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಡಿ ದರ್ಜೆ ಉದ್ಯೋಗಿಯಾಗಿ ದಿನ ಗುತ್ತಿಗೆ ಆಧಾರದಲ್ಲಿ1971ರಲ್ಲಿ ನೇಮಕಗೊಂಡಿದ್ದರು. ಸರ್ಕಾರ ಅವರ ಸೇವೆಯನ್ನು 1990ರಲ್ಲಿ ಕಾಯಂಗೊಳಿಸಿತ್ತು. 2013ರಲ್ಲಿ ಅರ್ಜಿದಾರರು ಸೇವೆಯಿಂದ ನಿವೃತ್ತರಾಗಿದ್ದರು. ಆದರೆ, ಸರ್ಕಾರ ಅವರ ಸೇವೆ ಕಾಯಂ ಆದ ದಿನದಿಂದ ಅಂದರೆ 1990ರಿಂದ 2013ರ ನಡುವಿನ ಅವಧಿಗೆ ಲೆಕ್ಕ ಹಾಕಿ 1.92 ಲಕ್ಷ ಗ್ರಾಚ್ಯುಟಿ ಮಾತ್ರ ಪಾವತಿಸಿತ್ತು ಮತ್ತು ದಿನದ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡಿದ್ದ 19 ವರ್ಷಕ್ಕೆ ಗ್ರಾಚ್ಯುಟಿ ಪಾವತಿಸಲು ನಿರಾಕರಿಸಿತ್ತು.

ಆಗ ಅವರು ನಿಯಂತ್ರಣ ಪ್ರಾಧಿಕಾರಕ್ಕೆ (ಸಿಎಜಿ) ದೂರು ನೀಡಿದ್ದರು, ಸಿಎಜಿ 2015ರಲ್ಲಿ ಉದ್ಯೋಗಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಅವಧಿಯೂ ಸೇರಿ ಒಟ್ಟಾರೆ ₹2.44 ಲಕ್ಷ ಗ್ರಾಚ್ಯುಟಿ ಪಾವತಿಗೆ ಆದೇಶ ನೀಡಿತ್ತು. ಆದರೆ, ಸರ್ಕಾರ ಪಾವತಿಸದ ಹಿನ್ನೆಲೆಯಲ್ಲಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು.

Attachment
PDF
Basavegowda Vs State of Karnataka.pdf
Preview
Kannada Bar & Bench
kannada.barandbench.com