

ಮೈಸೂರಿನ ಮಂಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ತಿಲಕ್‌ನಗರದಲ್ಲಿ ಆಗಸ್ಟ್ 14ರಂದು ಹಮ್ಮಿಕೊಳ್ಳಲು ಉದ್ದೇಶಿಸಿರುವ ಅಖಂಡ ಭಾರತ ಸಂಕಲ್ಪ ದಿನ ಮೆರವಣಿಗೆಯಲ್ಲಿ ಯಾವುದಾದರೂ ಅಹಿತಕರ ಘಟನೆ ನಡೆದರೆ ಹಿಂದೂ ಜಾಗರಣ ವೇದಿಕೆಯ ಸಂಘಟಕರನ್ನು ಸಂಪೂರ್ಣವಾಗಿ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಕರ್ನಾಟಕ ಹೈಕೋರ್ಟ್ ಮಂಗಳವಾರ ಮೌಖಿಕವಾಗಿ ಹೇಳಿದೆ.
ಸ್ವಾತಂತ್ರ್ಯೋತ್ಸವದ ನಿಮಿತ್ತ ಆಗಸ್ಟ್ 14ರಂದು ಸಂಜೆ ಹಿಂದೂ ಜಾಗರಣ ವೇದಿಕೆ ಹಮ್ಮಿಕೊಳ್ಳಲು ಉದ್ದೇಶಿಸಿರುವ ‘ಅಖಂಡ ಭಾರತ ಸಂಕಲ್ಪ ದಿನ’ ಕಾರ್ಯಕ್ರಮಕ್ಕೆ ಪೊಲೀಸರು ಅನುಮತಿ ನಿರಾಕರಿಸಿದ ಕ್ರಮ ಪ್ರಶ್ನಿಸಿ ಕಾರ್ಯಕ್ರಮದ ಆಯೋಜಕರಾದ ಹಿಂದೂ ಜಾಗರಣ ವೇದಿಕೆ ಮೈಸೂರು ನಗರ ಸಂಚಾಲಕ ಎ ವೈ ವಸಂತಕುಮಾರ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆಯ ವೇಳೆ ಪೀಠವು “ಏನಾದರೂ ಆದರೆ ಸಂಘಟಕರೇ ಜವಾಬ್ದಾರರು. ಯಾರು ಜವಾಬ್ದಾರಿ ತೆಗೆದುಕೊಳ್ಳುತ್ತಾರೆ ಅವರ ಹೆಸರುಗಳನ್ನು ನೀಡಿ. ಆ ಜವಾಬ್ದಾರಿಯನ್ನು ನಿಗದಿ ಮಾಡುತ್ತೇವೆ. ಆನಂತರ ಭಿನ್ನ ವಾದಕ್ಕೆ ಅವಕಾಶವಿಲ್ಲ. ಕಠಿಣ ಹೊಣೆಗಾರಿಕೆ ಇರಲಿದೆ” ಎಂದು ನ್ಯಾಯಾಲಯ ಹೇಳಿತು.
“ಸ್ವಾತಂತ್ರ್ಯ ದಿನಾಚರಣೆಯು ಯಾರಿಗೂ ಬಾದೆ ಉಂಟು ಮಾಡುವುದಿಲ್ಲ. ಏನಾದರೂ ದುರ್ಘಟನೆ ಸಂಭವಿಸಿದರೆ ಯಾರು ಜವಾಬ್ದಾರರಾಗುತ್ತಾರೆ ಎಂಬುದರ ಸಂಬಂಧ ಹೆಸರುಗಳನ್ನು ನೀಡಿ. ಏನಾದರೂ ಸಂಭವಿಸಿದರೆ ನೀವೆ ಸಂಪೂರ್ಣವಾಗಿ ಜವಾಬ್ದಾರರು” ಎಂದು ನ್ಯಾಯಾಲಯ ಹೇಳಿತು.
ಇದಕ್ಕೂ ಮುನ್ನ, ಅರ್ಜಿದಾರರ ಪರ ಹಿರಿಯ ವಕೀಲ ಎಂ ಅರುಣ್ ಶ್ಯಾಮ್ ಅವರು “ಪ್ರಸ್ತಾವಿತ ಮೆರವಣಿಗೆಯು ಶಾಂತಿಯುತವಾಗಿರಲಿದ್ದು, ಬೇರೆಬೇರೆ ಸ್ಥಳಗಳಲ್ಲಿ ನಡೆದಿದೆ. ಇದೊಂದು ಜಾತ್ಯತೀತ ಕಾರ್ಯಕ್ರಮವಾಗಿದ್ದು, ಯಾರ ಭಾವನೆಗೂ ಹಾನಿ ಮಾಡದು. ಎಚ್ಚರಿಕೆ ವಹಿಸುತ್ತೇವೆ ಮತ್ತು ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳುತ್ತೇವೆ, ಸಂಘಟಕರ ಹೆಸರನ್ನೂ ನೀಡುತ್ತೇವೆ. ಈ ಸಂಬಂಧ ಮುಚ್ಚಳಿಕೆ ನೀಡಲು ಸಿದ್ಧರಿದ್ದೇವೆ” ಎಂದರು.
“ಹಿಂದಿನ ವರ್ಷಗಳಲ್ಲಿ ಮೈಸೂರಿನಲ್ಲಿ ಶಾಂತಿಯುತವಾಗಿ ಮೆರವಣಿಗೆ ನಡೆಸಿದ್ದು, ಮೆರವಣಿಗೆಯು 2.5 ಕಿ ಮೀ ನಡೆಯಲಿದ್ದು, ಒಂದು ಗಂಟಯಲ್ಲಿ ಮುಗಿಯಲಿದೆ” ಎಂದರು.
ಹೆಚ್ಚುವರಿ ಅಡ್ವೊಕೇಟ್ ಜನರಲ್ ಭಾನುಪ್ರಕಾಶ್ ಅವರು “ನಿನ್ನೆಯಷ್ಟೆ ಅರ್ಜಿ ಸಲ್ಲಿಸಿದ್ದು, ಇಡೀ ಪ್ರಕರಣದ ಬಗ್ಗೆ ಸೂಚನೆ ಪಡೆಯಲು ಕಾಲಾವಕಾಶಬೇಕಿದೆ. ಮೆರವಣಿಗೆ ನಡೆಸಲು ಅವಕಾಶ ಕೋರಿರುವ ಸ್ಥಳವು ಕಾನೂನು ಮತ್ತು ಸುವ್ಯವಸ್ಥೆ ದೃಷ್ಟಿಯಿಂದ ಸೂಕ್ಷ್ಮ ಪ್ರದೇಶವಾಗಿದ್ದು, ಕಳೆದ ನಾಲ್ಕು ವರ್ಷಗಳಿಂದ ಆ ಪ್ರದೇಶದಲ್ಲಿ ಸಮಸ್ಯೆ ಇದೆ. ಅರ್ಜಿದಾರರ ವಿರುದ್ಧ ಹಲವು ಪ್ರಕರಣಗಳು ಬಾಕಿ ಇದ್ದು, ಪ್ರಸ್ತಾವಿತ ಜಾಗವು ಮೈಸೂರಿನಲ್ಲಿ ಅತೀಸೂಕ್ಷ್ಮವಾಗಿದೆ” ಎಂದರು.
ಇದನ್ನು ಆಲಿಸಿದ ಪೀಠವು ಮೈಸೂರು ಪೊಲೀಸ್ ಆಯುಕ್ತರು ಮತ್ತು ಮಂಡಿ ಠಾಣಾ ಇನ್‌ಸ್ಪೆಕ್ಟರ್‌ಗೆ ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.